Advertisement

ಸಹೋದ್ಯೋಗಿಯ ಒಡವೆ ಕದ್ದವಳ ಬಂಧನ

12:06 PM Feb 10, 2018 | Team Udayavani |

ಬೆಂಗಳೂರು: ಪತಿ ವಿರುದ್ಧ ತಾನೇ ದಾಖಲಿಸಿದ್ದ ಪ್ರಕರಣವನ್ನು ಮುನ್ನಡೆಸಿಕೊಂಡು ಹೋಗಲು ಅಗತ್ಯವಿದ್ದ ಹಣ ಹೊಂದಿಸುವ ಸಲುವಾಗಿ ಸಹದ್ಯೋಗಿಯ ಚಿನ್ನಾಭರಣ ದೋಚಿದ್ದ ಮಲ್ಯ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಸುಂಕದಕಟ್ಟೆ ನಿವಾಸಿ, ಮಲ್ಯ ಆಸ್ಪತ್ರೆಯಲ್ಲಿ ಟೈಪಿಸ್ಟ್‌ ಆಗಿದ್ದ ಭವ್ಯ (34) ಬಂಧಿತೆ. ಆರೋಪಿಯಿಂದ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶಿವಮ್ಮ ಮತ್ತು ಮಂಗಳಮ್ಮ ಎಂಬುವರ ಚಿನ್ನಾಭರಣ ಕಳವು ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಜ.20ರಂದು ಸಂಜೆ ನಾಗರಭಾವಿ ನಿವಾಸಿ ಶಿವಮ್ಮ ಕೆಲಸ ಮಾಡುವಾಗ ಭವ್ಯ ಮಜ್ಜಿಗೆಯಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಾಳೆ. ಮಜ್ಜಿಗೆ ಕುಡಿದ ಬಳಿಕ ಶಿವಮ್ಮ ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ಶಿವಮ್ಮಗೆ ಸಹಾಯ ಮಾಡುವ ನೆಪದಲ್ಲಿ ರೆಸ್ಟ್‌ ರೂಮ್‌ಗೆ ಕರೆದೊಯ್ದು ಭವ್ಯ, ಶಿವಮ್ಮ ಮೈಮೇಲಿದ್ದ ಚಿನ್ನಾಭರಣ ಕಳವು ಮಾಡಿದ್ದಾಳೆ. ನಂತರ ಚಿನ್ನಾಭರಣ ಬ್ಯಾಗ್‌ನಲ್ಲಿ ಇಟ್ಟಿದ್ದೇನೆ ಎಂದು ತಾನೇ ಆಟೋದಲ್ಲಿ ಮನೆವರೆಗೆ ಬಿಟ್ಟು ಬಂದಿದ್ದಾಳೆ.

ಈ ಮಧ್ಯೆ ಶಿವಮ್ಮ ಭವ್ಯಳಿಗೆ ಕುತ್ತಿಗೆಯಿಂದ ಸರ ಬಿಚ್ಚುತ್ತಿರುವ ಬಗ್ಗೆ ಪ್ರಶ್ನಿಸಿದ್ದರು. ಆದರೂ ಆರೋಪಿ ಎಲ್ಲವೂ ಬ್ಯಾಗ್‌ನಲ್ಲಿದೆ ಎಂದು ಶಿವಮ್ಮರ ಬಾಯಿ ಮುಚ್ಚಿಸಿದ್ದಾರೆ. ಮರುದಿನ ಬೆಳಗ್ಗೆ ಚಿನ್ನಾಭರಣ ಇಲ್ಲದಿರುವುದನ್ನು ಗಮನಿಸಿದ ಶಿವಮ್ಮ ಆಸ್ಪತ್ರೆಗೆ ಬಂದು ಆರೋಪಿ ಭವ್ಯಳನ್ನು ವಿಚಾರಿಸಿದಾಗ ಗೊತ್ತಿಲ್ಲ ಎಂದು ವಾದಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷವು ಕಳವು: ಕಳೆದ ವರ್ಷ ಡಿ.2ರಂದು ಆಸ್ಪತ್ರೆಯ ಮತ್ತೂಬ್ಬ ಸಿಬ್ಬಂದಿ ಮಂಗಳಮ್ಮ ಎಂಬುವವರ 25 ಗ್ರಾಂ. ಸರ ಕಳವು ಮಾಡಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಮಂಗಳಮ್ಮ ಕೆಲಸಕ್ಕೆ ಬಂದಾಗ ಆಸ್ಪತ್ರೆಯ ಲಾಕರ್‌ನಲ್ಲಿ ಸರ ಇಟ್ಟು ಕರ್ತವ್ಯದಲ್ಲಿ ನಿರತರಾಗಿದ್ದರು.

Advertisement

ಮಧ್ಯಾಹ್ನ ಊಟ ಮಾಡುವಾಗ ಲಾಕರ್‌ ಗಮನಿಸಿದಾಗ ಸರ ಇರಲಿಲ್ಲ. ಈ ಸಂಬಂಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಶಿವಮ್ಮ ಮತ್ತು ಮಂಗಳಮ್ಮ ಇಬ್ಬರೂ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ನಡೆಸಲು ಕಳವು: ಕೆಲ ವರ್ಷಗಳ ಹಿಂದೆ ಆರೋಪಿ ಭವ್ಯ ವ್ಯಕ್ತಿಯೊಬ್ಬನ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಆತ ಲ್ಲದ ಮನಸ್ಸಿನಿಂದಲೇ ಭವ್ಯಳನ್ನು ಮದುವೆಯಾಗಿದ್ದ. ಆದರೆ, ಮದುವೆ ನಂತರ ಆಕೆಯೊಂದಿಗೆ ಸಂಸಾರ ಮಾಡಲು ನಿರಾಕರಿಸಿ, ಸರಿಯಾಗಿ ಮನೆಗೆ ಬರುತ್ತಿರಲಿಲ್ಲ.

ಇದರಿಂದ ಕೋಪಗೊಂಡ ಭವ್ಯ ಕೋರ್ಟ್‌ನಲ್ಲಿ ಪತಿ ವಿರುದ್ಧ ಅರ್ಜಿ ಸಲ್ಲಿಸಿದ್ದು, ತನ್ನೊಂದಿಗೆ ಸಂಸಾರ ಮಾಡುವಂತೆ ಸೂಚಿಸುವಂತೆ ಕೇಳಿಕೊಂಡಿದ್ದಳು. ಇದಕ್ಕಾಗಿ 40ರಿಂದ 50 ಸಾವಿರ ರೂ. ಹಣ ಖರ್ಚು ಮಾಡಿದ್ದಳು. ಇದೀಗ ಮತ್ತೆ ಹಣದ ಅಗತ್ಯವಿರುವುದರಿಂದ ಕಳ್ಳತನ ಮಾಡಿದ್ದಾಗಿ ಭವ್ಯ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಿಚಾರಣೆಗೆ ಗೈರಾಗಿದ್ದಳು: ತಮ್ಮ ಆಭರಣಗಳನ್ನು ಭವ್ಯಳೇ ಕಳವು ಮಾಡಿದ್ದಾಳೆ ಎಂದು ಶಿವಮ್ಮ ದೂರಿನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದಾಗ ತಮ್ಮನ ಮದುವೆ ಇದೆ.

ಕೆಲ ದಿನ ಬಿಟ್ಟು ಬರುತ್ತೇನೆ ಎಂದು ಹೇಳಿದ್ದ ಭವ್ಯ, ಕೊನೆಗೆ ವಿಚಾರಣೆಗೆ ಗೈರಾಗಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next