ಸುರತ್ಕಲ್: ಅಗತ್ತಿ ಲಕ್ಷದ್ವೀಪದಿಂದ ಸುಮಾರು 165 ನಾಟಿಕಲ್ ಮೈಲು ದೂರದಲ್ಲಿ ಭಾರತೀಯ ಜಲ ಸೀಮೆಯ ಒಳಗಡೆ ಪ್ರವೇಶಿಸಿ ಮೀನುಗಾರಿಕೆಯಲ್ಲಿ ತೊಡಗಿದ್ದ ಇರಾನಿನ ಅವಿ ಮತ್ತು ಇಶಾನ್ ಎಂಬ ಎರಡು ಮೀನುಗಾರಿಕೆ ಬೋಟುಗಳ ಸಹಿತ 15 ಮೀನುಗಾರರನ್ನು ಕೋಸ್ಟ್ ಗಾರ್ಡ್ ಬಂಧಿಸಿದೆ.
ಅಬೂಬಕರ್ ಅನ್ಸಾರಿ ಮೀಯಾವ, ಮೂಸಾ ದೆಹದಾನಿ, ಅಜಂ ಅನ್ಸಾರಿ, ಶಿದ್ ಬಾಚೂ, ಅಬ್ದುಲ್ ಮಜೀದ್, ಮಜೀದ್ ರೆಹಮಾನಿ ದಾವೂದ್, ಮಹಮ್ಮದ್ ಇಸಾಕ್, ಕರೀಂ ಬಕ್ಸ್ ದೂರ್‌ಜಾದೆ, ಮಹಮ್ಮದ್ ಬಲೂಚ್, ಬಮನ್, ಅಬ್ದುಲ್ ಗನಿ ಬಾಪೂರ್, ನಸೀರ್ ಭದ್ರುಜ್, ಅನ್ವರ್ ಬಲೂಚ್, ನಭೀ ಬಕ್ಸ್, ಯೂಸೂಫ್ ಜಹಾನಿ ಬಂ ತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಭಾರತೀಯ ಕೋಸ್ಟ್‌ಗಾರ್ಡ್‌ನ ವಿಕ್ರಮ್ ನೌಕೆ ಭಾರತೀಯ ಜಲಸೀಮೆಯಲ್ಲಿ ಗಸ್ತು ನಡೆಸುತ್ತಿದ್ದಾಗ ಅ.21ರಂದು ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಈ ಮೀನುಗಾರಿಕೆ ಬೋಟುಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿತ್ತು. ಆದರೆ ಬೋಟುಗಳನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದು, ಇದರಿಂದ ಸಂಶಯಗೊಂಡು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಯಾವುದೇ ದಾಖಲೆಗಳಿರಲಿಲ್ಲ.
ಮಾತ್ರವಲ್ಲದೆ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ. ತತ್‌ಕ್ಷಣ ಬೋಟುಗಳನ್ನು ವಶಕ್ಕೆ ಪಡೆದು ನವಮಂಗಳೂರು ಬಂದರಿಗೆ ಕರೆತರುತ್ತಿರುವ ಬರುವ ಸಂದರ್ಭ ಅವಿ ಬೋಟ್ ತಾಂತ್ರಿಕ ತೊಂದರೆಯಿಂದ ಅಗತಿ ಲಕ್ಷದ್ವೀಪದ ಬಳಿ ಸಮುದ್ರದಲ್ಲಿ ಮುಳುಗಡೆ ಆಯಿತು. ಅದರಲ್ಲಿದ್ದ ಸಿಬಂದಿಯನ್ನು ಇಶಾನ್ ಬೋಟಿನಲ್ಲಿ ನವಮಂಗಳೂರು ಬಂದರಿಗೆ ಕರೆತರಲಾಯಿತು.
ಬಂಧಿತರು ಇರಾನಿ ಪ್ರಜೆಗಳಾಗಿದ್ದು, ಅವರ ವಿರುದ್ಧ ಭಾರತೀಯ ಜಲಸೀಮೆಯೊಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಪರವಾನಿಗೆ ಇಲ್ಲದೆ ಮೀನುಗಾರಿಕೆಯಲ್ಲಿ ತೊಡಗಿದ್ದು ಮತ್ತು ನೌಕಾಪಡೆಯ ಅ ಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದು ಮತ್ತು ಭಾರತೀಯ ಜಲಸಂಪತ್ತನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿ ಅಪರಾಧವೆಸಗಿದ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೂಪರಿಂಡೆಂಟ್ ಆಫ್ ಪೊಲೀಸ್ ಮಾರ್ಗದರ್ಶನದಲ್ಲಿ ಮಂಗಳೂರು ಡಿವೈಎಸ್‌ಪಿ ತನಿಖೆ ನಡೆಸುತ್ತಿದ್ದಾರೆ.