ಕೆಯ್ಯೂರು: ಗುರುವಾರ ಬಿಎಸ್‌ಎಫ್ ಯೋಧರು ಶ್ರೀನಗರದಿಂದ ಜಮ್ಮುವಿಗೆ ತೆರಳಬೇಕಿತ್ತು. ಆದರೆ ಹಿಮದ ಕಾರಣಕ್ಕೆ ಬಸ್ ಓಡಾಟ ಅಸಾಧ್ಯವಾಗಿ ಪ್ರಯಾಣ ಮೊಟಕುಗೊಂಡಿತ್ತು. ಸಿಆರ್‌ಪಿಎಫ್ ಯೋಧರಿದ್ದ ಬಸ್‌ಗಳು ಸಂಚರಿಸುತ್ತಿದ್ದ ರಸ್ತೆಯಲ್ಲೇ ಉಗ್ರರ ದಾಳಿ ನಡೆಯಿತು…
ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ ಆವುಂತಿಪೋರಾದಿಂದ 40 ಕಿ.ಮೀ.ದೂರದಲ್ಲಿ ಕರ್ತವ್ಯ ನಿರತರಾಗಿರುವ ಬಿಎಸ್‌ಎಫ್ ಯೋಧ, ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಪಿದಪಟ್ಲ ನಿವಾಸಿ ಮಹೇಶ್ ಪಿ. “ಉದಯವಾಣಿ’ಯೊಂದಿಗೆ ಘಟನೆ ಬಗ್ಗೆ ವಿವರಿಸಿದ್ದು ಹೀಗೆ.
ನಾವಿರುವುದು ಶ್ರೀನಗರ ವ್ಯಾಪ್ತಿಯ ಪಂಥ್‌ಚೌಕಾದಲ್ಲಿ. ನ್ಪೋಟದ ತೀವ್ರತೆ ಎಷ್ಟಿತ್ತೆಂದರೆ ಭೂಮಿ ಕಂಪಿಸಿದ ಅನುಭವ ನಾವಿದ್ದಲ್ಲಿಯೂ ಆಗಿತ್ತು. ಏನಾಯಿತೋ ಎಂದು ಕೊಳ್ಳುವಷ್ಟರಲ್ಲಿ ದುರಂತ ನಡೆದಿರುವ ಸುದ್ದಿ ತಿಳಿಯಿತು ಎಂದರು ಮಹೇಶ್.
ಜಮ್ಮುವಿಗೆ ತೆರಳಲು ಅದು ಏಕೈಕ ಹೆದ್ದಾರಿ. ಎಲ್ಲರೂ ಅದೇ ರಸ್ತೆಯಲ್ಲಿಯೇ ಸಾಗಬೇಕು. ಉಗ್ರರ ದಾಳಿ ನಡೆದ ಸ್ಥಳಕ್ಕೆ ಬಿಎಸ್‌ಎಫ್ ಯೋಧರಾದ ನಾವು ಹೋಗಿಲ್ಲ. ಸಿಆರ್‌ಪಿಎಫ್ ಯೋಧರ ತಂಡ ಅಲ್ಲಿ ಕರ್ತವ್ಯದಲ್ಲಿದೆ. ಸುಧಾರಿತ ಸ್ಫೋಟಕವಾದ ಕಾರಣ ಎರಡೇ ಕೆ.ಜಿ. ಇದ್ದರೂ ಬಸ್ ಚಿಂದಿಯಾಗುತ್ತಿತ್ತು. ಆದರೆ ನೂರಾರು ಕೆಜಿ ಇದ್ದುದರಿಂದ ಊಹಿಸುವುದಕ್ಕೂ ಸಾಧ್ಯವಾಗದಷ್ಟು ಅನಾಹುತ ಸಂಭವಿಸಿದೆ ಎಂದಿದ್ದಾರೆ ಅವರು.
ಘಟನೆ ನಡೆದ ಕೂಡಲೇ ಎಲ್ಲರಿಗೂ ಕಟ್ಟೆಚ್ಚರದಿಂದ ಇರುವಂತೆ ಸೂಚನೆ ನೀಡಲಾಯಿತು. ಇದು ಉಗ್ರರ ಪೂರ್ವನಿಯೋಜಿತ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ. ಕೃತ್ಯದಲ್ಲಿ ಸ್ಥಳೀಯರು ಸೇರಿರುವ ಸಂಶಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮಹೇಶ್ ಹೇಳಿದ್ದಾರೆ.
ಮಹೇಶ್ 2003ರಲ್ಲಿ ಬಿಎಸ್‌ಎಫ್ ಯೋಧರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದರು. ಅಸ್ಸಾಂ, ಗುಜರಾತ್, ರಾಜಸ್ಥಾನ, ಜಮ್ಮು ಕಾಶ್ಮೀರ ಮೊದಲಾದೆಡೆ ಸೇವೆ ಸಲ್ಲಿಸಿ ಈಗ ಶ್ರೀನಗರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಯ್ಯೂರಿನ ಪಿದಪಟ್ಲದ ಜಿನ್ನಪ್ಪ ಪೂಜಾರಿ ಮತ್ತು ಬೇಬಿ ಜೆ. ಪೂಜಾರಿ ಅವರ ಪುತ್ರ. ಪತ್ನಿ ಸುಜಾತಾ ಮತ್ತು ಇಬ್ಬರು ಮಕ್ಕಳಿದ್ದಾರೆ.
– ಗೋಪಾಲಕೃಷ್ಣ ಸಂತೋಷ್‌ನಗರ