Advertisement

ಬೆಳ್ಳಂದೂರು ಕೆರೆಯ ರೀತಿ ಬದಲಾದ ಮಂದಾರ ತ್ಯಾಜ್ಯದ ಪ್ರದೇಶ!

10:21 AM Oct 30, 2019 | sudhir |

ಮಹಾನಗರ: ಬೆಂಗಳೂರಿನ ಬೆಳ್ಳಂದೂರು ಕೆರೆ ನೊರೆಯಿಂದ ತುಂಬಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೇ, ಈಗ ಇಂತಹುದೇ ಪರಿಸ್ಥಿತಿ ಮಂಗಳೂರಿನ ಮಂದಾರದಲ್ಲಿ ಸೃಷ್ಟಿಯಾಗಿದೆ!

Advertisement

ಹಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ತ್ಯಾಜ್ಯ ನೀರು ಹರಿದು ಸ್ಥಳೀಯ ತೋಡಿನ ಮೂಲಕ ನದಿ ಸೇರುತ್ತಿದೆ. ಇದು ನೀರಿನಲ್ಲಿ ನೊರೆಯಾಗಿ ವ್ಯಾಪಿಸಿದೆ. ತ್ಯಾಜ್ಯದಿಂದ ಹೊರಬರುವ ನೊರೆ ನೀರು ಹತ್ತಿರದ ತೋಡು, ತೋಟದ ಮಧ್ಯೆ ಹರಿಯುತ್ತಿದ್ದು, ವಾಸನೆ ಅಧಿಕವಾಗಿದೆ. ಇದರಿಂದ ನೊರೆ ನೀರು ಸೃಷ್ಟಿಯಾಗಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ವಿಷಜಂತುಗಳ ಹಾವಳಿ
ಸೊಳ್ಳೆ, ವಿಷಜಂತುಗಳು ಕೂಡ ಈಗ ಮಂದಾರ ವ್ಯಾಪ್ತಿಯಲ್ಲಿ ತುಂಬಿಕೊಂಡಿದ್ದು, ಆರೋಗ್ಯ ಇಲಾಖೆಯವರು ಮಾತ್ರ ಕಾಟಾಚಾರಕ್ಕೆ ಎಂಬಂತೆ ಬಂದು ಹೋಗುತ್ತಿದ್ದಾರೆ ವಿನಹ ಸ್ಥಳೀಯರ ಸಮಸ್ಯೆ ಸವಾಲುಗಳ ಬಗ್ಗೆ ಯಾವುದೇ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ನೋವು ತೋಡಿಕೊಳ್ಳುತ್ತಿದ್ದಾರೆ.

ಪಚ್ಚನಾಡಿ ತ್ಯಾಜ್ಯ ರಾಶಿಯು ಜರಿದು ಮಂದಾರದ ಜನವಸತಿ ಪ್ರದೇಶದತ್ತ ಬಂದು ಸಾವಿರಾರು ತೆಂಗು-ಕಂಗು-ಅಡಿಕೆ ಮರಗಳು ತ್ಯಾಜ್ಯದ ರಾಶಿಯಲ್ಲಿ ಬಂಧಿಯಾಗುವ ಜತೆಗೆ, ನಾಗ ಕ್ಷೇತ್ರ ಸೇರಿದಂತೆ ದೈವ ಸಾನ್ನಿಧ್ಯಗಳು ಕೂಡ ತ್ಯಾಜ್ಯದೊಳಗೆ ಹುದುಗಿಹೋಗಿವೆ.

ಜತೆಗೆ ಒಂದೆರಡು ಮನೆಗಳನ್ನು ತ್ಯಾಜ್ಯರಾಶಿಯು ಆಪೋಶನ ತೆಗೆದುಕೊಂಡಿದ್ದು, ಇನ್ನಷ್ಟು ಮನೆಗಳು ಆತಂಕದಲ್ಲಿವೆ. ಸ್ಥಳೀಯ ಹಲವು ಕುಟುಂಬದವರನ್ನು ಈಗಾಗಲೇ ತೆರವು ಮಾಡಲಾಗಿದ್ದು, ಗೃಹ ಮಂಡಳಿಯ ಕಟ್ಟಡದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.ಆಡಳಿತ ನಡೆಸುವ ಮಹಾನಗರ ಪಾಲಿಕೆ ಅವರ ಗೋಳನ್ನು ಕೇಳುತ್ತಲೇ ಇಲ್ಲ ಎಂಬ ದೂರು ವ್ಯಕ್ತವಾಗಿದೆ.

Advertisement

ಜನಪ್ರತಿನಿಧಿಗಳು- ಅಧಿಕಾರಿಗಳ ಮೌನ!
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ವೀರಪ್ಪ ಮೊಲಿ, ಹಾಲಿ ಆರೋಗ್ಯ ಸಚಿವ ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಯು.ಟಿ. ಖಾದರ್‌, ಡಾ| ಭರತ್‌ ಶೆಟ್ಟಿ ವೈ., ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾೖಕ್‌, ವಿ.ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಮೊದಿನ್‌ ಬಾವಾ ಮತ್ತಿತರರು ಮಂದಾರ ತ್ಯಾಜ್ಯ ತುಂಬಿದ ಪ್ರದೇಶಕ್ಕೆ ಭೇಟಿ ನೀಡಿದ್ದರೂ ಇನ್ನೂ ಕೂಡ ಇಲ್ಲಿನ ನಿರ್ವಸಿತರಿಗೆ ಪರಿಹಾರವೇ ದೊರಕಿಲ್ಲ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಥಳಕ್ಕೆ ಇನ್ನೂ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next