Advertisement

ಅರಬ್ಬೀ ತೀರದ ಜಾದೂ ಆಮೆ

04:36 PM May 17, 2018 | Harsha Rao |

ಅರಬ್ಬೀ ಸಮುದ್ರ ತೀರದಲ್ಲಿ ಒಬ್ಬ ಬಡ ಬೆಸ್ತನಿದ್ದ. ಒಂದು ಸಂಜೆ ಸಮುದ್ರದ ಅಲೆಯನ್ನು ನೋಡುತ್ತಾ ದೋಣಿಯಲ್ಲೇ ಹಾಯಾಗಿ ಮಲಗಿದ್ದ. ಆಲೆಗಳ ಮಧ್ಯೆ ಒಂದು ಪುಟ್ಟ ಆಮೆ ಮರಿಯೊಂದು ತನ್ನ ಗೆಳೆಯರೊಂದಿಗೆ ಆಟವಾಡುತ್ತಿತ್ತು. ಅದೇ ಸಮಯಕ್ಕೆ ಬೆಸ್ತನ ಎದುರಾಳಿಯೊಬ್ಬ ಆಮೆಯನ್ನು ನೋಡಿ ಅದನ್ನು ಹಿಡಿಯಲು ಹೊಂಚು ಹಾಕಿದನು. ಬೆಸ್ತನಿಗೆ ಅದು ತಿಳಿದು ಹೋಯಿತು. ಅವನು ತಕ್ಷಣ ಕಾರ್ಯಪ್ರವೃತ್ತನಾಗಿ ಬಲೆ ಬೀಸಿ ತಾನೇ ಮೊದಲು ಆಮೆ ಮರಿಯನ್ನು ಹಿಡಿದು ರಕ್ಷಿಸಿದನು. ನಂತರ ಆಮೆ ಮರಿಯನ್ನು ಸುರಕ್ಷಿತ ಜಾಗದಲ್ಲಿ ಬಿಟ್ಟು ಬೆಸ್ತ ತನ್ನ ಮನೆಗೆ ಹೊರಟು ಹೋದನು. 

Advertisement

ಮರುದಿನ ಬೆಸ್ತ ಸಮುದ್ರದಡಕ್ಕೆ ಬಂದಾಗ ದೊಡ್ಡ ಆಮೆಯೊಂದು ಅವನಿಗಾಗಿ ಕಾಯುತ್ತಿತ್ತು. ಬೆಸ್ತನನ್ನು ಕಂಡ ಕೂಡಲೆ “ಎಲೇ ಬೆಸ್ತ. ನೀನು ನೆನ್ನೆ ರಕ್ಷಿಸಿದ್ದು ನನ್ನ ಮಗನನ್ನು. ಅದಕ್ಕಾಗಿ ನಿನಗೆ ನನ್ನ ಕೃತಜ್ಞತೆ. ಅದಕ್ಕೆ ಪ್ರತಿಯಾಗಿ ಈ ಉಡುಗೊರೆ ಸ್ವೀಕರಿಸು’ ಎಂದು ಪೆಟ್ಟಿಗೆಯೊಂದನ್ನು ಮುಂದಿಟ್ಟಿತು. ಬೆಸ್ತ ಸಂತೋಷದಿಂದ ಉಡುಗೊರೆಯನ್ನು ಸ್ವೀಕರಿಸಿದನು.

ಮನೆಗೆ ಹೋಗಿ ಪೆಟ್ಟಿಗೆ ತೆರೆದು ನೋಡಿದಾಗ ಅದರಲ್ಲಿ ಆಮೆ ಚಿಪ್ಪಿತ್ತು. ಅದನ್ನು ಏನು ಮಾಡುವುದೆಂದು ಅವನಿಗೆ ತಿಳಿಯಲೇ ಇಲ್ಲ. ಆಮೆಯ ಮೇಲಿನ ಗೌರವದಿಂದಾಗಿ ಅದನ್ನು ಮಾರದೆ ಮನೆಯಲ್ಲೇ ಇರಿಸಿಕೊಂಡನು. ಒಂದು ರಾತ್ರಿ ಅವನಿಗೆ ಕನಸು ಬಿತ್ತು. ಕನಸಿನಲ್ಲಿ ಆಮೆಯ ಚಿಪ್ಪನ್ನು ತಿಂಗಳುಗಳ ಕಾಲ ಇರಿಸಿಕೊಂಡ ಮನೆ ಸುಭಿಕ್ಷವಾಗುತ್ತದೆ, ಹಣ, ಆಸ್ತಿ ಎಲ್ಲವೂ ಆ ಮನೆಯವರನ್ನು ಹುಡುಕಿಕೊಂಡು ಬರುತ್ತದೆ ಎಂದು ಕನಸು ಹೇಳಿತು. 
ಇದಾದ ಕೆಲ ದಿನಗಳಲ್ಲೇ ಕನಸು ನಿಜವೆಂದು ಬೆಸ್ತನಿಗೆ ತಿಳಿದುಹೋಯಿತು. ಏಕೆಂದರೆ ಕೆಲ ದಿನಗಳಲ್ಲೇ ಅವನ . ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿತು. ನಂತರ ಬೆಸ್ತನ ಬದುಕು ಬದಲಾಯಿತು. ಊರಿನಲ್ಲಿ ವಿಶೇಷ ಸ್ಥಾನಮಾನ, ಮರ್ಯಾದೆ ಸಿಗತೊಡಗಿತು. ಊರಿನಲ್ಲಿ ಬೆಸ್ತನ ಎದುರಾಳಿಯೊಬ್ಬನಿದ್ದನು. ಅವನಿಗೆ ಬೆಸ್ತನ ಶ್ರೀಮಂತಿಕೆ ಕಂಡು ಅಸೂಯೆಯಾಯಿತು. ಗೂಡಾಚಾರಿಕೆ ನಡೆಸಿದ ನಂತರ ಅವನಿಗೆ ಆಮೆ ಚಿಪ್ಪಿನ ರಹಸ್ಯ ತಿಳಿದು ಹೋಯಿತು. 

ಎದುರಾಳಿ ಹೊಟ್ಟೆಕಿಚ್ಚಿನಿಂದ ರಾಜನ ಬಳಿ ತೆರಳಿ ಆಮೆ ಚಿಪ್ಪಿನ ವಿಷಯ ಹೇಳಿದನು. ರಾಜನಿಗೆ ಅಂಥ ಬೆಲೆಬಾಳುವ ವಸ್ತು ತನ್ನ ಬಳಿ ಇರಬೇಕೆಂದು ಸೇವಕರಿಗೆ ಆಮೆ ಚಿಪ್ಪನ್ನು ತರುವಂತೆ ಆಜ್ಞಾಪಿಸಿದ. ಬೆಸ್ತ ಬೇಡವೆಂದು ಕೇಳಿಕೊಂಡರೂ ಕೇಳಲಿಲ್ಲ. ಆಮೆ ಚಿಪ್ಪನ್ನು ತನ್ನ ಕೋಣೆಯಲ್ಲಿಯೇ ಇಟ್ಟುಕೊಂಡನು ರಾಜ. ಕೆಲ ತಿಂಗಳುಗಳಲ್ಲಿ ತನ್ನ ಆಸೆಗಳೆಲ್ಲವೂ ಈಡೇರುವುದೆಂದು ಅವನು ತಿಳಿದಿದ್ದನು. ಆದರೆ ಅಲ್ಲಿ ಆಗಿದ್ದೇ ಬೇರೆ. ರಾಜನ ಕೂದಲೆಲ್ಲಾ ಬಿಳಿಯಾಯಿತು. ಬಹಳ ಬೇಗ ವೃದ್ದಾಪ್ಯ ಅವನನ್ನು  ಆವರಿಸಿಕೊಂಡಿತು. ಕೋಲು ಹಿಡಿದು ನಡೆಯುವಂತಾದನು. 

ತಾನು ಮುದಿತನದಿಂದ ಸಾಯುತ್ತೇನೆ ಎಂದು ರಾಜನಿಗೆ ಭಯವಾಯಿತು. ಸಾವಿನಿಂದ ಬಚಾವಾಗಲು ಸಮುದ್ರದ ದೊಡ್ಡ ಆಮೆಯನ್ನು ಭೇಟಿ ಮಾಡಿ ತನ್ನನ್ನು ಶಾಪಮುಕ್ತನನ್ನಾಗಿ ಮಾಡೆಂದು ಆಮೆಯನ್ನು ಅಂಗಲಾಚಿದನು. ಆಮೆ “ಬೆಸ್ತನ ಮನೆಗೆ ಹೇಗಿ ನಿನ್ನ ತಪ್ಪನ್ನು ಕ್ಷಮಿಸೆಂದು ಕೇಳು. ಅವನು ಕ್ಷಮಿಸಿದರೆ ನಿನ್ನ ಮೇಲಿನ ಶಾಪ ಬಿಟ್ಟುಹೋಗುವುದು’ ಎಂದಿತು. ರಾಜ ಹಾಗೆಯೇ ಮಾಡಿದನು. ಅವನ ಶಾಪ ವಿಮೋಚನೆಯಾಯಿತು. ಬೆಸ್ತ ಮತ್ತು ಮನೆಯವರು ಯಾವ ತೊಂದರೆಯೂ ಇಲ್ಲದೆ ಸುಖದಿಂದ ಬದುಕಿದರು.

Advertisement

– ಶಾಲಿನಿ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next