Advertisement

ಆ್ಯಪ್‌ ಆಧಾರಿತ ಕ್ಯಾಬ್‌ಗಳಿಗೆ ವಿರೋಧ

11:53 AM Jan 23, 2017 | |

ಬೆಂಗಳೂರು: ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ನೀಡುತ್ತಿರುವ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅಖೀಲ ಭಾರತ ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ಫೆ.15ರಂದು ರಾಜ್ಯಮಟ್ಟದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

Advertisement

ಅಖೀಲ ಭಾರತ ಸಾರಿಗೆ ನೌಕರರ ಒಕ್ಕೂಟ, ಬೆಂಗಳೂರು ಏರ್‌ಪೋರ್ಟ್‌ ಕೆಎಸ್‌ಟಿಡಿಸಿ ಪ್ರಿ-ಪೇಯ್ಡ ಟ್ಯಾಕ್ಸಿ ಡ್ರೈವರ್ ವೆಲ್‌ಫೇರ್‌ ಅಸೋಸಿಯೇಷನ್‌, ಆಟೋರಿಕ್ಷಾ ಚಾಲಕರ ಯೂನಿಯನ್‌ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಾನಿಷ್ಕ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

ಆ್ಯಪ್‌ ಆಧಾರಿತ ಕ್ಯಾಬ್‌ ಸಂಸ್ಥೆಗಳು ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿವೆ. ಇವುಗಳ ವ್ಯಾಪ್ತಿ ನಿಧಾನವಾಗಿ ರಾಜ್ಯದ ಇತರ ನಗರಗಳಿಗೂ ವಿಸ್ತರಿಸುತ್ತಿದೆ. ಇದರಿಂದ ಕಾನೂನು ಚೌಕಟ್ಟಿನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಟ್ಯಾಕ್ಸಿ, ಕ್ಯಾಬ್‌ಗಳು ತೊಂದರೆ ಅನುಭವಿಸುತ್ತಿವೆ. ಆದ್ದರಿಂದ ಕೂಡಲೇ ಆ್ಯಪ್‌ ಆಧಾರಿತ ವಾಹನಗಳಿಗೆ ಸಾರಿಗೆ ಇಲಾಖೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಫೆ.15ರಂದು ರಾಜ್ಯ ಸಾರಿಗೆ ಇಲಾಖೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. 

ಅಖೀಲ ಭಾರತ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಸಮಿತಿ ಸದಸ್ಯ ಕೆ. ಪ್ರಕಾಶ್‌ ಮಾತನಾಡಿ, “”ಬಂಡವಾಳಶಾಹಿ ವ್ಯವಸ್ಥೆ ಸಾರಿಗೆ ವ್ಯವಸ್ಥೆಯನ್ನೂ ನುಂಗಿಹಾಕುತ್ತಿದೆ. ಸರ್ಕಾರ ಟೋಲ್‌ ಮತ್ತು ತೆರಿಗೆ ಕಡಿಮೆ ಮಾಡಲಿ. ಆ್ಯಪ್‌ ಆಧಾರಿತ ಟ್ಯಾಕ್ಸಿಗಳಂತೆ ನಾವೂ ಕಡಿಮೆ ದರದಲ್ಲಿ ಸೇವೆ ನೀಡುತ್ತೇವೆ. ಅದುಬಿಟ್ಟು, ನಿಯಮಬಾಹಿರವಾಗಿ ಕಾರ್ಯಾಚರಣೆಗೆ ಅವಕಾಶ ನೀಡುವ ಮೂಲಕ ನ್ಯಾಯಯುತವಾಗಿ ದುಡಿಯು ವವರ ಮೇಲೆ ಸರ್ಕಾರ ಬರೆ ಎಳೆಯುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. 

“”ವಾಹನಗಳ ಮೇಲಿನ ಆರ್‌ಟಿಒ ಶುಲ್ಕಗಳನ್ನು ಕೇಂದ್ರ ಸರ್ಕಾರ ಏಕಾಏಕಿ ಹತ್ತಾರುಪಟ್ಟು ಹೆಚ್ಚಿಸಿರುವುದು, ರಸ್ತೆ ಸಾರಿಗೆ ಸುರಕ್ಷತಾ ಮಸೂದೆಗೆ 6ನೇ ತಿದ್ದುಪಡಿಗೆ ಸಿದ್ಧತೆ ನಡೆಸಿರುವುದನ್ನು ಖಂಡಿಸಲಾಗುವುದು,” ಎಂದು ಪ್ರಕಾಶ್‌ ಇದೇ ವೇಳೆ ತಿಳಿಸಿದರು. 

Advertisement

ರಾಜೀವ್‌ಗಾಂಧಿ ಆಟೋ ಚಾಲಕರ ಸಂಘದ ಕಾರ್ಯದರ್ಶಿ ಬಿ. ಚಂದ್ರಶೇಖರ್‌ ಮಾತನಾಡಿ, “”ನಗರಕ್ಕೆ ಸೀಮಿತವಾಗಿದ್ದ ಓಲಾ, ಉಬರ್‌ನಂತಹ ಟ್ಯಾಕ್ಸಿಗಳು ಹುಬ್ಬಳ್ಳಿ, ಮೈಸೂರಿನಂತಹ ರಾಜ್ಯದ ಇತರ ನಗರಗಳಿಗೂ ಕಾರ್ಯಾಚರಣೆ ಶುರುಮಾಡಿವೆ. ಆದರೆ, ಸಾರಿಗೆ ಅಧಿಕಾರಿಗಳು ಕಡಿವಾಣ ಹಾಕುವಲ್ಲಿ ವಿಫ‌ಲರಾಗುತ್ತಿ ದ್ದಾರೆ,” ಎಂದು ಬೇಸರ ವ್ಯಕ್ತಪಡಿಸಿದರು. ಪದಾಧಿಕಾರಿಗಳಾದ ರುದ್ರಮೂರ್ತಿ, ಬಿ.ವಿ. ರಾಘವೇಂದ್ರ, ಮಂಜುನಾಥ್‌ ಮತ್ತಿತರರು ಭಾಗವಹಿಸಿದ್ದರು.

ಟ್ಯಾಕ್ಸಿ ಚಾಲಕರಿಗೆ ಎಚ್‌ಡಿಕೆ ಬೆಂಬಲ
ಬೆಂಗಳೂರು:
ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಚಾಲಕರಿಗೆ ಆಯಾ ಕಂಪೆನಿಗಳು ನೀಡುತ್ತಿರುವ ಕಿರುಕುಳ ಸೇರಿದಂತೆ ಟ್ಯಾಕ್ಸಿ ಚಾಲಕರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಸಾರಿಗೆ ಸಚಿವರ ಜತೆ ಮಾತುಕತೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ನಗರದ ಪುರಭವನದ ಎದುರು ಭಾನುವಾರ ಕಿರಣ್‌ಗೌಡ ನೇತೃತ್ವದ ಕರುನಾಡ ಟ್ಯಾಕ್ಸಿ ಚಾಲಕರ ಮತ್ತು ಮಾಲಿಕರ ಸಂಘ ಹಾಗೂ ತನ್ವೀರ್‌ ಪಾಷಾ ನೇತೃತ್ವದ ಒಟಿಯು ಚಾಲಕರು ಮತ್ತು ಮಾಲಿಕರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸೋಮವಾರವೇ ಚಾಲಕರ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತಂತೆ ಸಾರಿಗೆ ಸಚಿವರ ಜತೆ ಸಭೆ ನಡೆಸಲಾಗುವುದು. ಆಡಳಿತ ಸಂಸ್ಥೆಗಳ ಸ್ಪರ್ಧೆಯಿಂದಾಗಿ ಚಾಲಕರು ಬೀದಿಗೆ ಬರುವ ಸ್ಥಿತಿ ಉಂಟಾಗಿದೆ. ಎಲ್ಲ ಸಂದರ್ಭದಲ್ಲೂ ಚಾಲಕರ ಪರವಾಗಿ ನಿಂತು, ನಿಮ್ಮ ಧ್ವನಿಯಾಗುತ್ತೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ಪ್ರಮುಖವಾಗಿ ಓಲಾಹಾಗೂ ಉಬರ್‌ ಸಂಸ್ಥೆಗಳು ಪರಸ್ಪರ ಸ್ಪರ್ಧೆಗಿಳಿದಿವೆ. ಇದರ ನಡುವೆ ಆ ಸಂಸ್ಥೆಗಳಡಿ ಟ್ಯಾಕ್ಸಿಗಳನ್ನು ಓಡಿಸುವ ಚಾಲಕರು ಅನ್ಯಾಯಕ್ಕೊಳಗಾಗುತ್ತಿದ್ದಾರೆ. ಸಂಸ್ಥೆಗಳು ಕಮಿಷನ್‌ ದರವನ್ನೂ ಹೆಚ್ಚಳ ಮಾಡಿದ್ದು, ಕೊಡುಗೆಗಳ ಹೆಸರಲ್ಲಿ ಚಾಲಕರನ್ನು ದೋಚುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next