Advertisement

ಉತ್ತರಿಸಬೇಕಾದ್ದು ಮಸ್ತಕ, ಪುಸ್ತಕವಲ್ಲ!

08:49 AM Jul 30, 2018 | Harsha Rao |

ಹೇಗೂ ಕೊಡುವ ಪುಸ್ತಕ ನೋಡಿ ಪರೀಕ್ಷೆ ಬರೆಯುತ್ತಾರಲ್ಲ ಎಂದು ಪರೀಕ್ಷಕರು ಕಠಿಣ ಪ್ರಶ್ನೆಗಳನ್ನು ಕೇಳಬಹುದು. ಈಗಾಗಲೇ ಬಗೆ ಬಗೆ ಮೊಬೈಲ್‌, ಸ್ಮಾರ್ಟ್‌ ಫೋನ್‌ ಮುಂತಾದವುಗಳನ್ನು ವ್ಯಸನವಾಗಿಸಿಕೊಂಡಿರುವ ಬಹುತೇಕ ಮಕ್ಕಳು ಅಯ್ಯೋ ಪುಸ್ತಕವೇ ಕೊಡ್ತಾರಲ್ಲ ಪರೀಕ್ಷೆಯಲ್ಲಿ ಅಂತ ಓದಿನಲ್ಲಿ ಮತ್ತೂ ಆಸಕ್ತಿ ಕಳೆದುಕೊಳ್ಳಬಹುದಲ್ಲವೇ?

Advertisement

ತೆರೆದ ಪುಸ್ತಕ ಪರೀûಾ ವ್ಯವಸ್ಥೆಯ ಸಾಧಕ ಬಾಧಕಗಳ ಬಗ್ಗೆ ಈ ಪತ್ರಿಕೆಯಲ್ಲಿ ಅನೇಕ ಅಂಕಣಗಳು ಗಮನಾರ್ಹವಾಗಿ ಮೂಡಿ ಬರುತ್ತಿವೆ. ವಿದ್ಯಾರ್ಥಿಗಳು ತಾವು ತರುವ ಅಥವಾ ವಿದ್ಯಾಲಯ ಒದಗಿಸುವ ಪಠ್ಯ ಪುಸ್ತಕ, ನೋಟ್ಸ್‌, ಪರಾಮರ್ಶನ ಗ್ರಂಥ ಹಾಗೂ ಇತರೆ ಸಾಮಗ್ರಿಗಳನ್ನು ಬಳಸಿ ಪ್ರಶ್ನೆಗಳಿಗೆ ಉತ್ತರಿಸುವುದು ಉದ್ದೇಶಿ ಸಿರುವ ಪರೀûಾ ವ್ಯವಸ್ಥೆಯೆನ್ನೋಣ. ಪ್ರತಿಯೊಬ್ಬ ಪರೀûಾ ರ್ಥಿಯೂ ಇಷ್ಟೊಂದನ್ನು ಹರಡಿಕೊಂಡು ಕೂರಲು ಡೆಸ್ಕಿನ ಮೇಲೆ ಸ್ಥಳಾವಕಾಶವಾದರೂ ಹೇಗೆ? ಜೊತೆಗೆ ವಿದ್ಯಾರ್ಥಿಗಳು ಏನೇನು ತರುತ್ತಾರೆ ಎನ್ನುವುದರ ಮೇಲೆ ನಿಗಾಯಿಡಬೇಕಾಗುವ ಕಾರಣ ಶಿಕ್ಷಕರ ಹೊಣೆಗಾರಿಕೆಯೂ ಹೆಚ್ಚುತ್ತದೆ. ಇನ್ನು ಶಾಲಾ ಕಾಲೇಜು ಗಳೇ ಸಾಮಗ್ರಿಗಳನ್ನು ನೀಡಬೇಕಾದರೆ ಆಯಾ ಗ್ರಂಥಾಲಯದಲ್ಲಿ ಭಾರೀ ಪ್ರಮಾಣದಲ್ಲೇ ಪುಸ್ತಕಗಳಿರಬೇಕಾದೀತು. 

ತರಗತಿಯಲ್ಲಿ ನೋಟ್ಸ್‌ ಬರೆದುಕೊಳ್ಳಲು ಅನಾಸಕ್ತಿ ತಳೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯೇನಿಲ್ಲ. ಅಲ್ಲದೆ ಬರೆದುಕೊಂಡ ನೋಟ್ಸ್‌ನ ಗುಣಮಟ್ಟ ಉತ್ತಮವಾಗಿಲ್ಲದಿದ್ದರೆ ಸಹಜವಾಗಿಯೇ ಅವರ ಉತ್ತರಗಳೂ ನೀರಸವಾಗುತ್ತವೆ. ಮೇಲಾಗಿ ಪರೀಕ್ಷೆಗೆ ಹಾಜರಾಗುವವರ ಬಳಿ ಒಳ್ಳೆಯ ಪರಾಮರ್ಶನ ಸಾಮಗ್ರಿಗಳು ಇಲ್ಲದಿದ್ದರೆ ಅವರ ಪಾಡೇನು? ಮನುಷ್ಯನನ್ನೂ ಒಳಗೊಂಡಂತೆ ಯಾವುದೇ ಜೀವಿಯ ನೆನಪಿನ ಶಕ್ತಿಯನ್ನು ಕಡೆಗಣಿಸುವಂತಿಲ್ಲ. ಅದು ಪ್ರಕೃತಿದತ್ತವಾದ ಯಾವುದಕ್ಕೂ ಸಾಟಿಯಿಲ್ಲದ ಚೈತನ್ಯ. ಅಂಕಿ, ಅಂಶಗಳನ್ನು ಜ್ಞಾಪಕದಲ್ಲಿರಿಸಿ ಕೊಳ್ಳುವುದೇ ಅವಮಾನ, ಅನಾಗರಿಕತೆ ಎನ್ನುವಂತಾಗಿದೆ. ನಮ್ಮ ಶರೀರವೇ ಒಂದು ಗಡಿಯಾರವಾಗಿರುವಾಗ ನಮ್ಮನ್ನು ನಿಗದಿತ ವೇಳೆಗೆ ಎಚ್ಚರಿಸಲು ಮೊಬೈಲನ್ನು ಆಶ್ರಯಿಸುತ್ತೇವೆ. ಇಂದಿಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೋಳಿ, ಕಾಗೆಯ ಕೂಗು ಸಮಯ ಸೂಚಕಗಳು. ಒಂದು ಸಣ್ಣ ಚೀಟಿಯನ್ನೂ ತರಗತಿಗೆ ತರದೆ ಒಂದೂವರೆ, ಎರಡು ತಾಸು ನಿರರ್ಗಳವಾಗಿ ಪಾಠ ಮಾಡುವ ಅಧ್ಯಾಪಕರುಂಟು. ಯಾವುದೇ ವಿಷಯದ ಅರ್ಥ, ಆಳ, ಹಿನ್ನೆಲೆ ಗ್ರಹಿಸಿದರೆ ಅದು ಕಂಠಪಾಠಕ್ಕೂ ಮೀರಿ ತಾನೇ ತಾನಾಗಿ ನೆನಪಿನ ಖಜಾನೆಗೆ ಜಮೆಯಾಗುತ್ತದೆ. ಇಂಥ ಸಿದ್ಧಿಯನ್ನು ಗುರಿಯಾಗಿ ಸಿಕೊಳ್ಳದೆ ಪರೀಕ್ಷೆಗಳನ್ನು “ನೋಡಿ ಬರೆಯುವ’ ಸರಾಗಕ್ಕೊಯ್ಯ ಬಾರದು. “ಪುಸ್ತಕದ ಬದನೆ ಕಾಯಿ’ ಪುಸ್ತಕದಲ್ಲಿರುವುದು ಕೇವಲ ಸೀಮಿತವೆನ್ನುವುದನ್ನು ಧ್ವನಿಸುವ ಜಾಣ್ನುಡಿ.

ಈಗಾಗಲೇ ನಾವೆಷ್ಟರಮಟ್ಟಿಗೆ ಪುಸ್ತಕ, ಪರಿಕರಗಳ ಅವಲಂಬಿ ತರೆಂದರೆ ಸಣ್ಣ ಪುಟ್ಟ ಲೆಕ್ಕಾಚಾರಕ್ಕೆಲ್ಲ ಕ್ಯಾಲ್ಕುಲೇಟರ್‌ ಗುಂಡಿಯನ್ನು ಅದುಮಿರುತ್ತೇವೆ! ವರ್ಷದಲ್ಲಿ ಜನವರಿಯಿಂದ ಡಿಸೆಂಬರ್‌ ತನಕ ತಿಂಗಳಲ್ಲಿ ಎಷ್ಟು ದಿನಗಳಿವೆ ಎನ್ನುವುದನ್ನು (ಲೀಪ್‌ ಇಯರ್‌ ಸೇರಿದಂತೆ) ಕೈಬೆರಳುಗಳ ವಿನ್ಯಾಸದಿಂದಲೇ ತಿಳಿಯುವ ರೂಢಿ ಈಗ ಕಥೆಯೆನ್ನಿಸಿದೆ. ಪರಾಮರ್ಶನ ಎಂದರೆ ಏನು ಎಂದೇ ಅರಿಯದ ಮಕ್ಕಳಿಗೆೆ ಪುಸ್ತಕ ನೀಡಿ ಪರೀಕ್ಷೆ ಬರೆಸಿದರೆ ಅವರಿಗೆ ಒಂದರ್ಥದಲ್ಲಿ ನಕಲನ್ನು ಉತ್ತೇಜಿಸಿ ದಂತಲ್ಲವೇ? ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ತಡಕಾಡು ವುದರಲ್ಲೇ ಅವರ ಬಹುಪಾಲು ಸಮಯ ವ್ಯರ್ಥವಾಗುತ್ತದೆ. ಪರೀûಾರ್ಥಿಗಳು ಪರಸ್ಪರ ಮಾತು, ಚರ್ಚೆಗೆ ತೊಡಗಿ ಕೊಠಡಿಯಲ್ಲಿ ಗೌಜು, ಗದ್ದಲವಾದೀತು. ಏತನ್ಮಧ್ಯೆ ಜ್ಞಾನವು ವಿವೇಕವಾಗಿ ರೂಪಾಂತರಗೊಳ್ಳಬೇಕೆಂಬ ಆಶಯ ಕಿಂಚಿತ್ತೂ ದಕ್ಕದೆ ಹೋಗುತ್ತದೆ. ನಾವು ಶಾಲಾ ಹುಡುಗರಾಗಿದ್ದಾಗಿನ ಕಿಲಾಡಿತನ ನೆನಪಾಗುತ್ತದೆ. ಆಂಗ್ಲಭಾಷಾ ಪರೀಕ್ಷೆಯಲ್ಲಿ ಒಂದು ವಾಕ್ಯವೃಂದ(ಪ್ಯಾರಾಗ್ರಾಫ್) ಕೊಟ್ಟು ಅದರ ಮೂರನೇಯ ಒಂದರಷ್ಟು ಸಂಕ್ಷೇಪಿಸಿ ಬರೆಯಲು ಹೇಳುತ್ತಿದ್ದರು. ಅದರಲ್ಲಿ ಎಷ್ಟು ಪದಗಳಿವೆ ಎಣಿಸಿ ಅದನ್ನು ಮೂರರಿಂದ ಭಾಗಿಸಿದರೆ ಬರುವ ಫ‌ಲದಷ್ಟು ಪದಗಳನ್ನು ಇಳಿಸುತ್ತಿದ್ದೆವು! 

ಪುಸ್ತಕ ನೋಡಿ ಬರೆಯುವುದು ಪರಿಣಾಮಕಾರಿಯೆಂದರೂ ಪಠ್ಯ ಪುಸ್ತಕಗಳಲ್ಲೇ ಒಂದಲ್ಲೊಂದು ತಪ್ಪುಗಳಿರುತ್ತವಲ್ಲ! ಯಾವ ಅಂಶಗಳು ಪಠ್ಯದಲ್ಲಿ ಇರಬೇಕು, ಇರಬಾರದು ಎನ್ನುವುದೇ ಗಂಭೀರ ವಾದ ವಿವಾದಗಳಿಗೆ ಗ್ರಾಸವಾಗಿದೆ. 

Advertisement

ಪರೀಕ್ಷೆಯಲ್ಲಿ ಅಕ್ರಮವೆಸಗುವುದರಿಂದಾಗುವ ಸಾಮಾಜಿಕ ದುಷ್ಪರಿಣಾಮಗಳನ್ನು ಮಕ್ಕಳಿಗೆ ಮನದಟ್ಟಾಗಿಸಬೇಕೇ ಹೊರತು ಹೀಗೆ ಪ್ರಭುತ್ವ ಸರಾಗದ ಹಾದಿ ಹಿಡಿಯಬಾರದು. ಹೊಸ ವ್ಯವಸ್ಥೆ ಆಶಾದಾಯಕ ಉದ್ದೇಶಗಳನ್ನು ಹೊಂದಿರಬೇಕು. ಬದಲಾವಣೆಗಾಗಿ ಬದಲಾವಣೆ ಎಂತಾಗಬಾರದು. 

ತೆರೆದ ಪುಸ್ತಕ ಪರೀûಾ ವ್ಯವಸ್ಥಗೆ ಪ್ರಶ್ನೆಪತ್ರಿಕೆಗಳ ವಿನ್ಯಾಸವೇ ಬೇರೆ ಇರಬೇ ಕಾಗುತ್ತದೆ. ಪರೀಕ್ಷಕರಲ್ಲಿ ಸೃಜನಾತ್ಮಕತೆ, ನಾವೀನ್ಯ ಅಗತ್ಯ. ಅಲ್ಲದೆ ಉತ್ತರ ಪತ್ರಿಕೆಗಳ ಮೌಲ್ಯ ಮಾಪನದಲ್ಲಿ ಸ್ವತಂತ್ರ ಆಲೋಚನೆಯುಳ್ಳ ಪರೀûಾರ್ಥಿಗಳನ್ನು ಗುರುತಿಸಿ ಅಂಥ ವರಿಗೆ ಸೂಕ್ತವಾಗಿ ಹೆಚ್ಚಿನದೇ ಅಂಕಗಳನ್ನು ನೀಡಬೇಕಾಗುತ್ತದೆ. ನಿಜಕ್ಕೂ ಇದು ಸವಾಲಿನ ಕೆಲಸ. ಅಲ್ಲಿ ವಾಖ್ಯೆಗಳು, ಪ್ರಮೇಯಗಳು, ವಿಮಶಾìತ್ಮಕ ಸಂಗತಿಗಳಿಗೆ ವಿಶೇಷ ಆದ್ಯತೆ ಯಿರಬೇಕಾಗುತ್ತದೆ. 16-17 ವರ್ಷ ವಯೋಮಾನದ ಮಕ್ಕಳು ಪ್ರಶ್ನೆಗಳನ್ನು ಎಷ್ಟರಮಟ್ಟಿಗೆ ಎದುರಿಸಬಲ್ಲರು? ಇದೇನು? ಪುಸ್ತಕ ನೋಡಿ ಬರೆೆಯುವುದು ಮೋಸ ಮಾಡಿದಂತಲ್ಲವೇ? ಈ ಪುರುಷಾರ್ಥಕ್ಕಿಂತ ಪರೀಕ್ಷೆಯೆ ಬೇಡ ಎಂದು ಪೋಷಕರು ತಳಮಳಿಸುವುದರಲ್ಲಿ ಅರ್ಥವಿದೆ.

ತೆರೆದ ಪುಸ್ತಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತಮಗೆ ಏನು ಗೊತ್ತಿದೆ/ಗೊತ್ತಿಲ್ಲ ಎನ್ನುವುದೇ ತಿಳಿಯುವುದಿಲ್ಲ. ಹೇಗೂ ಕೊಡುವ ಪುಸ್ತಕ ನೋಡಿ ಪರೀಕ್ಷೆ ಬರೆಯುತ್ತಾರಲ್ಲ ಎಂದು ಪರೀಕ್ಷಕರು ಕಠಿಣ ಪ್ರಶ್ನೆಗಳನ್ನು ಕೇಳಬಹುದು. ಈಗಾಗಲೇ ಬಗೆ ಬಗೆ ಮೊಬೈಲ್‌, ಸ್ಮಾರ್ಟ್‌ ಫೋನ್‌ ಮುಂತಾದವುಗಳನ್ನು ವ್ಯಸನವಾಗಿಸಿಕೊಂಡಿರುವ ಬಹುತೇಕ ಮಕ್ಕಳು ಅಯ್ಯೋ ಪುಸ್ತಕವೇ ಕೊಡ್ತಾರಲ್ಲ ಪರೀಕ್ಷೆಯಲ್ಲಿ ಅಂತ ಓದಿನಲ್ಲಿ ಮತ್ತೂ ಆಸಕ್ತಿ ಕಳೆದುಕೊಳ್ಳಬಹುದಲ್ಲವೇ? ಪರೀಕ್ಷೆ ಎಂದರೆ ಮಸ್ತಕದಿಂದ ಉತ್ತರ ಪತ್ರಿಕೆಗೆ ಸಲ್ಲುವ‌ ಅರಿವಿನ ಅನುಭಾವದ ದ್ರವ್ಯ. ಪುಸ್ತಕದ ಮೇಲೆ ಕಣ್ಣಾಡಿಸಿ ಹಾಳೆಗೆ ಪದ, ಒಕ್ಕಣೆ, ಸೂತ್ರಗಳನ್ನು ರವಾನಿಸುವ ಯಾಂತ್ರಿಕ ಪ್ರಕ್ರಿಯೆಯಲ್ಲ. ಅಡಿಗೆ ಪುಸ್ತಕ ಏನೆಲ್ಲ ವಿವರ, ಮಾಹಿತಿಗಳಿಂದ ಕೂಡಿದ್ದರೂ ಅದನ್ನು ನೋಡುತ್ತ ಪಾಕ ಇಳಿಸಲಾಗದು. ಬೇಕಾಗುವ ಪದಾರ್ಥಗಳು, ಅವುಗಳ ಅಳತೆ, ಒಲೆಯ ಉರಿಯೊಂದಿಗೆ ಸ್ವತಃ ಅನುಸಂಧಾ ನಿಸಿಯೇ ಯಶಸ್ವಿಯಾಗಿ ತಿಂಡಿ, ತಿನಿಸು ತಯಾರಿಕೆ. ಬೈಸಿಕಲ್ಲಿನ ಸವಾರಿಯೆಂದರೆ ಪೆಡಲ್‌ ತುಳಿದು ಮುಂದೆ ಸಾಗುತ್ತಲೇ 
ಕ್ಷಣ ಕ್ಷಣಕ್ಕೂ ಸಮತೋಲನ ತಪ್ಪದಂತೆ ಎಚ್ಚರವಹಿಸುವ ಕಲೆ. ಪುಸ್ತಕ ತೆರೆದಿಟ್ಟು ಈ ಕೌಶಲ ಕರಗತವಾಗಿಸಿಕೊಳ್ಳಲು ಸಾಧ್ಯವೇ? ವೈದ್ಯರು ಶಸ್ತ್ರಕ್ರಿಯೆ ನಡೆಸುವಾಗ ಅವರ ಪಾಲಿಗೆ ಅವರು ಪಡೆದಿರುವ ಅರಿವು, ಅನುಭವ, ಕೌಶಲ ನೆರವಾಗುವುದೇ ಹೊರತು ಪಕ್ಕದಲ್ಲಿ ತೆರೆದಿಟ್ಟ ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಯಾವುದೇ ಉತ್ಕೃಷ್ಟ ಗ್ರಂಥವಲ್ಲ.

– ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next