Advertisement

ಮೀಸಲಾತಿ ಹೆಚ್ಚಳ ಘೋಷಣೆ ಕಾಂಗ್ರೆಸ್‌ನಲ್ಲಿಯೇ ಅಪಸ್ವರ !

03:45 AM Mar 28, 2017 | |

ಬೆಂಗಳೂರು:ದಲಿತ ಸಂಘಟನೆಗಳು ಆಯೋಜಿಸಿದ್ದ ಕೃತಜ್ಞತಾ ಸಮರ್ಪಣಾ ಸಮಾವೇಶದಲ್ಲಿ ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಘೋಷಣೆಗೆ ಕಾಂಗ್ರೆಸ್‌ನಲ್ಲಿಯೇ ಆಕ್ಷೇಪ ವ್ಯಕ್ತವಾಗಿದೆ.

Advertisement

ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು 72 ಕ್ಕೆ ಹೆಚ್ಚಳ ಮಾಡುವ ಘೋಷಣೆಯ ಬಗ್ಗೆ ಮೇಲ್ವರ್ಗದ ಕಾಂಗ್ರೆಸ್‌ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ಮೀಸಲಾತಿ ವಿರೋಧಿ ಚಳವಳಿ ಹೆಚ್ಚುತ್ತಿರು ಸಂದರ್ಭದಲ್ಲಿ ರಾಜ್ಯ ಸರ್ಕಾರ ದಲಿತರ ಓಲೈಸಿಕೊಳ್ಳಲು ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿಯೂ ಶೇಕಡಾ 72 ರಷ್ಟು ಮೀಸಲಾತಿ ನೀಡುವುದಾಗಿ ಹೇಳಿರುವುದು, ಮೇಲ್ವರ್ಗದ ಜನರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸ್ಪರ್ದಿಸುವ ಕ್ಷೇತ್ರಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಜನಸಂಖ್ಯೆ ಆಧಾರದಲ್ಲಿ ದಲಿತರಿಗೆ ಬಜೆಟ್‌ನಲ್ಲಿ ಸಾಕಷ್ಟು ಹಣ ಮೀಸಲಿಡಲಾಗಿದೆ. ಅದನ್ನು ಸರಿಯಾಗಿ ಬಳಕೆ ಮಾಡದಿರುವ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ದಲಿತ ಸಮುದಾಯಗಳ ಓಲೈಕೆಗೆ ಘೋಷಣೆಗಳನ್ನು ಮಾಡುವ ಬದಲು ಅವರಿಗಾಗಿ ಮೀಸಲಿಟ್ಟ ಹಣವನ್ನೂ ಖರ್ಚು ಮಾಡದೇ ಈಗ ಮತ್ತೆ ಮೀಸಲಾತಿ ಹೆಚ್ಚಳದ ಪ್ರಸ್ತಾಪ ಮಾಡಿರುವುದು ಮುಂದಿನ ಚುನಾವಣೆ ವೇಳೆ  ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಶಾಸಕರ ಆತಂಕವಾಗಿದೆ ಎನ್ನಲಾಗಿದೆ.

ಆದರೆ, ಮುಖ್ಯಮಂತ್ರಿಯ ಹೇಳಿಕೆಯ ಹಿಂದಿನ ಲೆಕ್ಕಾಚಾರವೇ ಬೇರೆ ಇದೆ ಎನ್ನಲಾಗುತ್ತಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ನಡೆಯುತ್ತಿರುವುದರಿಂದ ಎರಡೂ ಕ್ಷೇತ್ರಗಳಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರ ದಲಿತರ ಪರವಾಗಿದೆ ಎನ್ನುವ ಸಂದೇಶ ರವಾನೆ ಮಾಡಲು, ಈ ರೀತಿಯ ಸಮಾವೇಶ ನಡೆಸಲು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಹಾಗೂ ದಲಿತ ಸಂಘಟನೆಗಳ ಮುಖಂಡರಿಗೆ ಸೂಚಿಸಿದ್ದರು.

Advertisement

ಭಾನುವಾರ ನಡೆದ ಸಮಾವೇಶದಲ್ಲಿ ಕಾಂಗ್ರೆಸ್‌ನ ಎಲ್ಲ ದಲಿತ ಶಾಸಕರು ಹಾಗೂ ಮುಖಂಡರು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂಬ ಸೂಚನೆಯನ್ನೂ ನೀಡಲಾಗಿತ್ತು .ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅದರಲ್ಲೂ ವಿಶೇಷವಾಗಿ ಹೆಚ್ಚು ಪ್ರತಿಷ್ಠೆಯಾಗಿರುವ ಕ್ಷೇತ್ರ ನಂಜನಗೂಡು, ಮುಖ್ಯಮಂತ್ರಿ ಸಂಪುಟದಿಂದ ತಮ್ಮನ್ನು ಕಿತ್ತು ಹಾಕಿದ್ದಾರೆ ಎಂಬ ಆಕ್ರೋಶದಿಂದ ಶ್ರೀನಿವಾಸ್‌ಪ್ರಸಾದ್‌ ಬಿಜೆಪಿ ಸೇರಿ, ಚುನಾವಣೆ ಎದುರಿಸುತ್ತಿದ್ದಾರೆ. ಅಲ್ಲದೇ, ಈ ಚುನಾವಣೆ ತಮ್ಮ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಹೋರಾಟ ಅಂತಲೂ ಘೋಷಣೆ ಮಾಡಿದ್ದಾರೆ. ಆ ಕ್ಷೇತ್ರದಲ್ಲಿ  ದಲಿತ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಹಿಡಿದಿಟ್ಟುಕೊಳ್ಳುವುದು ಕಾಂಗ್ರೆಸ್‌ಗೆ ಕಷ್ಟವಾಗುತ್ತಿದೆ. ಹೀಗಾಗಿ, ಶ್ರೀನಿವಾಸ್‌ ಪ್ರಸಾದ್‌ಗೆ ದಲಿತ ಮತಗಳು ಹೆಚ್ಚಾಗಿ ಬೀಳದಂತೆ ನೋಡಿಕೊಳ್ಳಲು ಮೀಸಲಾತಿ ಹೆಚ್ಚಳದ ಬಾಣ ಪ್ರಯೋಗಿಸಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ದೇಶದಲ್ಲಿ ಮೀಸಲಾತಿ ಪ್ರಮಾಣ ಪ್ರತಿಶತ  ಶೇಕಡಾ 50 ರಷ್ಟು ದಾಟದಂತೆ ನೋಡಿಕೊಳ್ಳಬೇಕೆಂದು ಈಗಾಗಲೇ ಸುಪ್ರೀಂ ಕೋರ್ಟ್‌ ಹೇಳಿದೆ. ತಮಿಳು ನಾಡು ಸರ್ಕಾರ ನೀಡಿರುವ ಶೇಕಡಾ 69% ಮೀಸಲಾತಿಗೂ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಅಲ್ಲದೇ. ಉತ್ತರ ಭಾತರದ ಹರಿಯಾಣ, ರಾಜಸ್ಥಾನ, ಗುಜರಾತ್‌ ರಾಜ್ಯಗಳಲ್ಲಿಯೂ ಮೇಲ್ಜಾತಿಯವರು ಮೀಸಲಾತಿ ಕೇಳುತ್ತಿದ್ದು, ಅಲ್ಲಿಯೂ ಶೇಕಡಾ 50 ಕ್ಕಿಂತ ಮೀಸಲಾತಿ ಹೆಚ್ಚಳ ಮಾಡಿಲ್ಲ. ಅದೆಲ್ಲವೂ ಗೊತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿಯ ಹೇಳಿಕೆ ನೀಡಿರುವುದರ ಹಿಂದೆ ಚುನಾವಣಾ ತಂತ್ರ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀಸಲಾತಿ ಹೆಚ್ಚಳ ಮಾಡುವ ಘೋಷಣೆ ಮಾಡಿರುವುದು ಕೇವಲ ಚುನಾವಣೆ ಗಿಮಿಕ್‌. ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಅನೇಕ ರಾಜ್ಯಗಳಲ್ಲಿ ಈ ರೀತಿಯ ಬೇಡಿಕೆ ಇದೆ. ಆದರೆ, ಸುಪ್ರಿಂ ಕೋರ್ಟ್‌ ಶೇಕಡಾ 50 ರಷ್ಟು ಮೀರದಂತೆ ಮೀಸಲಾತಿ ನೀಡಬೇಕೆಂದು ಹೇಳಿರುವುದರಿಂದ ಉಪ ಚುನಾವಣೆ ಗೆಲ್ಲಲು ಮುಖ್ಯಮಂತ್ರಿ ಮಾಡಿರುವ ತಂತ್ರ ಅಷ್ಟೆ.
– ಸುರೇಶ್‌ ಕುಮಾರ್‌; ಬಿಜೆಪಿ ವಕ್ತಾರ

ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವುದರಿಂದ ಕೇವಲ ದಲಿತರಿಗಷ್ಟೇ ಅಲ್ಲ. ಮೇಲ್ವರ್ಗದ ಬಡವರಿಗೂ ಅನುಕೂಲ ಆಗುತ್ತದೆ. ವಿರೋಧ ಮಾಡುವವರು ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಇದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಇದು ಚುನಾವಣಾ ಗಿಮಿಕ್‌ ಅಲ್ಲಾ. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಬೇಕು ಎಂಬುದು ನಮ್ಮ ಉದ್ದೇಶ. ಕಾಂಗ್ರೆಸ್‌ ಶಾಸಕರಿಗೂ ಸಿಎಲ್‌ಪಿ ಸಭೆಯಲ್ಲಿ ಪೂರ್ಣ ಮಾಹಿತಿ ಕೊಡುತ್ತೇವೆ. ಯಾವ ರೀತಿ ಜಾರಿಗೆ ತರಬೇಕೆನ್ನುವ ಕುರಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ.
– ಆಂಜನೇಯ, ಸಮಾಜ ಕಲ್ಯಾಣ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next