ಬಾಗಲಕೋಟೆ: 17ನೇ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಏ. 21ರಂದು ಸಂಜೆ 6ಕ್ಕೆ ಕೊನೆಗೊಳ್ಳಲಿದೆ. ಮತ್ತೆರಡು ದಿನ ಅಭ್ಯರ್ಥಿಗಳು ಐದು ಜನರಿಗಿಂತ ಕಡಿಮೆ ಸಂಖ್ಯೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆಗೆ ಅವಕಾಶವಿದೆಯಾದರೂ ಕತ್ತಲೆಯ ರಾತ್ರಿಯ ಕರಾಮತ್ತು ಬಹುತೇಕ ಕಡೆ ನಡೆಯುತ್ತದೆ ಎನ್ನಲಾಗಿದೆ.
ಹೌದು, ಕಳೆದ ಮಾ.28ರಿಂದ ಲೋಕಸಭೆ ಚುನಾವಣೆ ಅಧಿಸೂಚನೆ ಜಾರಿಯಾಗಿದ್ದು, ಅಂದಿನಿಂದಲೇ ಬಹುತೇಕ ಅಭ್ಯರ್ಥಿಗಳು ಪ್ರಚಾರ ಶುರು ಮಾಡಿದ್ದಾರೆ. ಎಷ್ಟೇ ದೊಡ್ಡ ನಾಯಕರು, ಸ್ಟಾರ್ ಪ್ರಚಾರಕರು ಬಂದು, ಪ್ರಚಾರ ಮಾಡಿ ಹೋದರೂ, ಕೊನೆಯ ಎರಡು ದಿನದ ಕತ್ತಲೆ ರಾತ್ರಿಗಳಲ್ಲಿ ಕರಾಮತ್ತು ನಡೆದರೆ, ಫಲಿತಾಂಶ ಉಲ್ಟಾ ಹೊಡೆಯಲಿದೆ ಎಂಬ ಲೆಕ್ಕಾಚಾರ ಬಹುತೇಕ ರಾಜಕಾರಣಿಗಳಲ್ಲಿದೆ. ಹೀಗಾಗಿ ಇಷ್ಟು ದಿನಗಳ ಬಹಿರಂಗ ಪ್ರಚಾರಕ್ಕೂ, ಇನ್ನೆರಡು ದಿನ ನಡೆಯುವ ವಿವಿಧ ಹಂತದ ಚಟುವಟಿಕೆಗೂ ಸಮಾನ ಫಲವಿದೆ ಎಂಬುದು ರಾಜಕೀಯ ಪಕ್ಷಗಳ ಅಂಬೋಣ.
ಓರ್ವ ಚುನಾವಣಾ ವೀಕ್ಷಕರು, ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವೀಕ್ಷಕರು, ಚುನಾವಣಾಧಿಕಾರಿಗಳು ಸೇರಿದಂತೆ ಆಯೋಗದಿಂದ ಚುನಾವಣೆ ಪ್ರಕ್ರಿಯೆಗೆ ನೇಮಕವಾದ ಅಧಿಕಾರಿಗಳು- ಸಿಬ್ಬಂದಿ ಎಲ್ಲೆಡೆ ಎಚ್ಚರ ವಹಿಸುತ್ತಿದ್ದಾರೆ. ಆಯೋಗದ ಕಣ್ತಪ್ಪಿಸಿಯೂ ನಡೆಯುವ ಚಟುವಟಿಕೆಗಳ ಕುರಿತು ಸಾರ್ವಜನಿಕರೂ ಗೌಪ್ಯವಾಗಿ ಮಾಹಿತಿ ನೀಡಲು ಜಿಲ್ಲಾಡಳಿತ ಈಗಾಗಲೇ ಕೇಳಿಕೊಂಡಿದೆ.
ಐಟಿ ಶಾಕ್: ಲೋಕಸಭೆ ಚುನಾವಣೆಗೆ ಇನ್ನೇನು ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಒಂದು ದಿನ ಮುಂಚೆ ಶನಿವಾರ ನಗರದಲ್ಲಿ ಐಟಿ ದಾಳಿ ನಡೆದಿದ್ದು, ಇದು ರಾಜಕೀಯ ಪಕ್ಷಗಳಿಗೆ ಶಾಕ್ ಕೂಡ ನೀಡಿದೆ. ಪ್ರಮುಖವಾಗಿ ಐಟಿ ಇಲಾಖೆಯಿಂದ ಕಾಂಗ್ರೆಸ್ ಪಕ್ಷ ಒಂದಷ್ಟು ಬೆದರಿದೆ ಕೂಡ.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಇಬ್ಬರು ನೌಕರರ ಮನೆಯ ಮೇಲೆ ಐಟಿ ದಾಳಿ ನಡೆಸಿದ್ದು, ಇದು ನೇರವಾಗಿ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದಲ್ಲದಿದ್ದರೂ, ಆ ನೌಕರರು, ಸಚಿವರೊಬ್ಬರ ಆಪ್ತರು ಎಂದು ಹೇಳಲಾಗಿದೆ. ಈ ದಾಳಿಯಿಂದ ಬಹುತೇಕ ರಾಜಕಾರಣಿಗಳು, ಅಧಿಕಾರಿಗಳು, ಸಿಬ್ಬಂದಿ ಹುಷಾರಾಗಿ ವರ್ತಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಹೀಗಾಗಿ ಚುನಾವಣೆ ಆಯೋಗವೂ, ಎರಡು ದಿನಗಳು ನಡೆಯುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲು ಸಜ್ಜಾಗಿದೆ. ಏ. 21ರಂದು ಸಂಜೆ 6 ಗಂಟೆಯಿಂದ ಕಡ್ಡಾಯವಾಗಿ ಬಹಿರಂಗ ಪ್ರಚಾರ ಅಂತ್ಯಗೊಳಿಸಲು ಎಲ್ಲ ರಾಜಕೀಯ ಪಕ್ಷಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ಜತೆಗೆ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸದಂತೆಯೂ ಎಚ್ಚರಿಕೆ ನೀಡಲಾಗಿದೆ. ಇದರ ಹೊರತಾಗಿಯೂ ನಡೆಯುವ ವಿದ್ಯಮಾನಗಳ ಮೇಲೆ ನಿಗಾ ವಹಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
Related Articles
Advertisement
ಹಣ-ಹೆಂಡಕ್ಕೆ ಮತ ಮಾರಾಟ ಬೇಡ: ಮತದಾನ ಎಂಬುದು ಸಂವಿಧಾನಬದ್ಧವಾಗಿ ಸಿಕ್ಕ ಹಕ್ಕು. ದೇಶದಲ್ಲಿ ಸುಭದ್ರ ಸರ್ಕಾರ ರಚನೆಗೆ ಮತದಾರರಿಗೆ ಇರುವ ದೊಡ್ಡ ಅಸ್ತ್ರ ಮತದಾನವೊಂದೆ. ಹೀಗಾಗಿ ಮುಂದಿನ ಐದು ವರ್ಷಗಳ ಅವಧಿಗೆ ಉತ್ತಮ, ಅಭಿವೃದ್ಧಿಪರ ಹಾಗೂ ಜನಪರವಾಗಿ ಇರುವ ಯಾವುದೇ ಪಕ್ಷದ ಅಭ್ಯರ್ಥಿಗಳಿದ್ದರೂ, ಅವರಿಗೆ ಮಾತ್ರ ಮತ ಕೊಡಿ ಎಂದು ಪ್ರಜ್ಞಾವಂತರು ಕೇಳಿಕೊಳ್ಳುತ್ತಿದ್ದಾರೆ.
ಮತದಾನ ಬಹಿಷ್ಕಾರಕ್ಕೂ ಸಿದ್ಧತೆ: ಮತ ಪಡೆದು ಗೆಲ್ಲಲಲು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಯಾಸಪಡುತ್ತಿದ್ದರೆ, ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಜಾಗೃತಿಯ ಕಾಳಜಿ ವಹಿಸಿದೆ. ಇದೆಲ್ಲದರ ಮಧ್ಯೆ ನಮ್ಮ ಸಮಸ್ಯೆಗೆ ಈ ವರೆಗೆ ಯಾರೂ ಸ್ಪಂದಿಸಿಲ್ಲ. ಹೀಗಾಗಿ ನಾವು ಮತದಾನ ಬಹಿಷ್ಕರಿಸುತ್ತೇವೆ ಎಂಬ ಬಹಿರಂಗ ವಾದವನ್ನು ಕೆಲ ಹಳ್ಳಿಗಳ ಜನರು ಮಾಡಿದ್ದಾರೆ. ಆದರೆ, ಮತದಾನ ಬಹಿಷ್ಕಾರವೊಂದೇ ಪರಿಹಾರವಲ್ಲ. ಯೋಗ್ಯ ಅಭ್ಯರ್ಥಿಗಳಿಲ್ಲದಿದ್ದರೆ ನೋಟಾ ಕೂಡಾ ಅವಕಾಶವಿದೆ ಎಂಬ ಜಾಗೃತಿಯನ್ನು ಕೆಲವು ಪ್ರಜ್ಞಾವಂತರು ಮಾಡಿದ್ದಾರೆ.
ಕೊನೆಯ ದಿನ ಬಹಿರಂಗ ಪ್ರಯತ್ನ: ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಏ.21ರಂದು ಕಾಂಗ್ರೆಸ್-ಬಿಜೆಪಿ ಮತದಾರರ ಮನವೊಲಿಸುವ ಕೊನೆಯ ಬಹಿರಂಗ ಪ್ರಯತ್ನಕ್ಕೆ ಮುಂದಾಗಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಅಂದು ಬೆಳಗ್ಗೆ 12ಕ್ಕೆ ಹುನಗುಂದ, ಮಧ್ಯಾಹ್ನ 1:30ಕ್ಕೆ ತೇರದಾಳ, ಮ.3ಕ್ಕೆ ಮುಧೋಳ ಹಾಗೂ ಮ. 4:30 ಕೆರೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರವಾಗಿ ಬಹಿರಂಗ ಸಭೆ-ಸಮಾವೇಶಗಳ ಮೂಲಕ ಪ್ರಚಾರ ಮಾಡಲಿದ್ದಾರೆ.
ಇನ್ನು ಬಿಜೆಪಿಯ ಹಾಲಿ ಸಂಸದರೂ ಆಗಿರುವ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರವಾಗಿ ಲೋಕಸಭೆ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಪ್ರಚಾರ ಮಾಡುತ್ತಿದ್ದಾರೆ. ಸ್ಟಾರ್ ಪ್ರಚಾರಕರಾಗಿರುವ ಮಾಳವಿಕಾ ಅವಿನಾಶ ಕೂಡ, ಕ್ಷೇತ್ರದ ವಿವಿಧೆಡೆ ಸಂಚರಿಸಿ, ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸುತ್ತಿದ್ದಾರೆ.
ಒಟ್ಟಾರೆ, ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ, ಮತದಾರರ ಮನ ಬದಲಾವಣೆಗೂ ತಂತ್ರ-ಪ್ರತಿತಂತ್ರಗಳು ನಡೆಯುವ ಸಾಧ್ಯತೆ ಇವೆ. ಹೀಗಾಗಿ ಅಂತಹ ತಂತ್ರಗಳಿಗೆ ಬಲಿಯಾಗದೇ ಯೋಗ್ಯರಿಗಾಗಿ ಹಕ್ಕು ಚಲಾಯಿಸಬೇಕೆಂಬುದು ಪ್ರಜ್ಞಾವಂತರ ಆಶಯ.
ಪ್ರಧಾನಿ ನರೇಂದ್ರ ಮೋದಿ ಈ ಶತಮಾನದ ಸುಳ್ಳುಗಾರ: ಪುಷ್ಪಾ
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಈ ಶತಮಾನದ ಸುಳ್ಳುಗಾರರು. ಅವರಿಗೆ ಸುಳ್ಳು ಹೇಳುವುದರಲ್ಲಿ ಗಿನ್ನೆಸ್ ಪ್ರಶಸ್ತಿ ಕೊಡಬಹುದು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಟೀಕಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಈ ದೇಶದ ಜನರಿಗೆ ಭಾವನಾತ್ಮಕವಾಗಿ ಸುಳ್ಳು ಹೇಳಿ ಜನರನ್ನು ಮರಳು ಮಾಡುತ್ತಿದ್ದಾರೆ. ಜನರು ಪದೇ ಪದೇ ಸುಳ್ಳು ಕೇಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಈಗ ರಾಜಕೀಯ ತಿರುವು ಬಯಸುತ್ತಿದ್ದಾರೆ ಎಂದರು.
ಕನ್ನಡದ ಮೇಲೆ ಹಿಂದಿ ಹೇರಿಕೆ: ಕೇಂದ್ರದ ಬಿಜೆಪಿ ಸರ್ಕಾರದಿಂದ ಕನ್ನಡದ ಮೇಲೂ ಹಿಂದಿ ಹೇರಿಕೆಯಾಗುತ್ತಿದೆ. ಲಾಭದಲ್ಲಿದ್ದ ವಿಜಯಾ ಬ್ಯಾಂಕ್ ಮುಚ್ಚಿ, ನಷ್ಟದಲ್ಲಿ ಇರುವ ಬ್ಯಾಂಕ್ ಬರೋಡಾದೊಂದಿಗೆ ವಿಲೀನ ಮಾಡಿದ್ದಾರೆ. ಆ ಮೂಲಕ ಕನ್ನಡ ನೆಲದ ಐತಿಹಾಸಿದ ಬ್ಯಾಂಕ್‌ನ್ನು ಮುಚ್ಚಿಸಿದ್ದಾರೆ. ಬಿಎಸ್‌ಎನ್‌ಎಲ್, ಆರ್‌ಬಿಐ ದಾಳು ಮಾಡಿದ್ದಾರೆ ಎಂದು ಆರೋಪಿಸಿದರು.
ಮೋದಿ ನೋಡಿ ಮತ ಕೊಡಬೇಕಾ?: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಮೋದಿ ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಮತದಾರರ ಸೇವೆ ಮಾಡುವವರು ಸಂಸದರು. ಜನರ ಸ್ಪಂದಿಸಬೇಕಾದವರು ಸ್ಥಳೀಯ ಅಭ್ಯರ್ಥಿ. ಅವರನ್ನು ಬಿಟ್ಟು, ಮೋದಿ ನೋಡಿ ಮತ ಕೊಡಿ ಎಂದು ಅಭ್ಯರ್ಥಿಗಳೂ ಸಹಿತ ಬಿಜೆಪಿಯವರು ಪ್ರಚಾರ ನಡೆಸಿದ್ದಾರೆ. ಹಾಗಾದರೆ, ಬಿಜೆಪಿಯ ಸಂಸದರು ತಮ್ಮ ಸಾಧನೆ ಹೇಳಲು ಸಾಧ್ಯವೇಕಿಲ್ಲ. ಹೇಳುವಂತಹ ಸಾಧನೆಯೂ ಮಾಡಿಲ್ಲ ಎಂದು ಹೇಳಿದರು.
ಸೈನಿಕರ ಹೆಸರಿನಲ್ಲಿ ರಾಜಕೀಯ: ನಮ್ಮ ದೇಶದಲ್ಲಿ ಈ ವರೆಗೆ ನಾಲ್ಲು ಯುದ್ಧ ನಡೆದಿವೆ. ಪ್ರತಿ ಬಾರಿಯೂ ನಮ್ಮ ಸೈನಿಕರು ಗಡಿಯಲ್ಲಿ ಹೋರಾಡಿ, ದೇಶಕ್ಕೆ ಗೆಲುವು ನೀಡಿದ್ದಾರೆ. ಆಗ ಒಮ್ಮೆಯೂ ಸೈನಿಕರ ಹೆಸರಿನಲ್ಲಿ ಯಾರೂ ರಾಜಕೀಯ ಮಾಡಿರಲಿಲ್ಲ. ಆದರೆ, ಬಿಜೆಪಿ ಕೇವಲ ಒಂದು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾಗಿ ಹೇಳಿಕೊಂಡು, ರಾಜಕೀಯಕ್ಕಾಗಿ ಸೈನಿಕರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸ್ತ್ರೀ ವಿರೋಧಿಗಳು: ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಿದ್ದು ಕಾಂಗ್ರೆಸ್. ಇದಕ್ಕೆ ಬಿಜೆಪಿ ಪ್ರಬಲ ವಿರೋಧ ಮಾಡಿತ್ತು. ಈ ಕಾರಣದಿಂದಾಗಿಯೇ ಇಂದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಜನಪ್ರತಿನಿಧಿಗಳು ಬರಲು ಸಾಧ್ಯವಾಗಿದೆ. ಮಹಿಳೆಯರು ಪ್ರಾಮಾಣಿಕವಾಗಿ ಕೆಲಸ ಮಾಡುವವರು. ಹೀಗಾಗಿ ಸ್ತ್ರೀಯರ ವಿರೋಧಿಗಳಾದ ಬಿಜೆಪಿಗೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಈಟಿ, ಪ್ರಮುಖರಾದ ಕಲ್ಪನಾ ಮೇಟಿ, ಶಾಂಭವಿ, ದೀಪಾ ಉಪಸ್ಥಿತರಿದ್ದರು.
ಶ್ರೀಶೈಲ ಕೆ. ಬಿರಾದಾರ