ಸಿಂಧನೂರು: ನಗರದ ತಾಲೂಕು ಕ್ರೀಡಾಂಗಣದಲ್ಲಿ ಜ.5ರಿಂದ 7ರ ವರೆಗೆ ರಾಜ್ಯಮಟ್ಟದ ಪಶು ಹಾಗೂ ಮತ್ಸ್ಯಮೇಳ ಕಾರ್ಯಕ್ರಮ ನಡೆಯಲಿದೆ. ಹೈ.ಕ. ಭಾಗದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಕ್ರಮ ನಡೆಯುತ್ತಿದ್ದು, ಸಿಂಧನೂರಿನಲ್ಲಿ ಹಬ್ಬದ ವಾತಾವರಣ ಕಂಡುಬರುತ್ತಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಪಶುಸಂಗೋಪನಾ ಖಾತೆ ವೆಂಕಟಗೌಡ ನಾಡಗೌಡ ತಿಳಿಸಿದ್ದಾರೆ.
ಕಳೆದ 15 ದಿನಗಳಿಂದ ಪಶು ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ವತಿಯಿಂದ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಮೇಳದಲ್ಲಿ 175 ಮಳಿಗೆ ಸ್ಥಾಪಿಸಲಾಗಿದೆ. ಎರಡು ಬೃಹತ್ ವೇದಿಕೆ ನಿರ್ಮಾಣವಾಗಿವೆ.
ಪಶು ಇಲಾಖೆ ವತಿಯಿಂದ 118 ರಾಸುಗಳ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 93 ಮಳಿಗೆಗಳನ್ನು ವಿವಿಧ ಇಲಾಖೆಗಳಿಗೆ ಮೀಸಲಿಡಲಾಗಿದೆ. ಇದರಲ್ಲಿ 50 ಸರ್ಕಾರಿ ಇಲಾಖೆಗಳಿಗೆ ಮೀಸಲಾಗಿವೆ. 43 ಮಳಿಗೆಗಳು ಖಾಸಗಿಯವರಿಗೆ ನೀಡಲಾಗಿದೆ. ಎಮ್ಮೆಗಳು, ಶ್ವಾನಗಳು, ಟಗರು, ಆಕಳು, ಅಂಗೂಲ್ ತಳಿ, ಮೊಲ, ಹೋರಿಗಳು, ಹಂದಿಗಳು, ಕುರಿ, ಮೇಕೆ, ಕಂಬಳದ ಕೋಣಗಳು ಹಾಗೂ ಕುಕ್ಕುಟಗಳು ಇನ್ನಿತರ ತಳಿಗಳು ಪ್ರದರ್ಶನವಾಗಲಿವೆ.
ಮೀನುಗಾರಿಕೆ ಇಲಾಖೆಯಿಂದ 30 ಮಳಿಗೆ ಹಾಕಲಾಗಿದೆ. ಇದರಲ್ಲಿ 80 ತಳಿಗಳ ಪ್ರದರ್ಶನ ನಡೆಯಲಿದೆ. ಮೀನುಗಾರಿಕೆ ಇಲಾಖೆಯಿಂದ ವಿಭಿನ್ನ ರೀತಿಯ ಪ್ರದರ್ಶನ ನಡೆಯುವ ಸಾಧ್ಯತೆಯಿದೆ. ಪಂಜರು ಮೀನು ಕೃಷಿ ಪದ್ಧತಿ, ಮಿಶ್ರ ಮೀನು ಸಾಗಾಣಿಕೆ, ಸಮಗ್ರ ಕೃಷಿ ಪದ್ಧತಿ ಹಾಗೂ ನೀರು ಮಿತ ಬಳಕೆ ಕೃಷಿ ಪದ್ಧತಿಯಲ್ಲಿ ಪ್ರದರ್ಶನ ನಡೆಯಲಿದೆ.
ಜಾನುವಾರುಗಳಿಗೆ ಪ್ರತ್ಯೇಕವಾಗಿ ಸೊಪ್ಪು, ಒಣ ಮೇವು, ಹಸಿ ಮೇವು ಇನ್ನಿತರ ಕಾಳು, 20 ಕುಡಿಯುವ ನೀರಿನ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಈಗಾಗಲೇ ವಿವಿಧ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಂದ ರೈತರು ಪ್ರದರ್ಶನಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಮೀನು ಹಾಗೂ ಪಶು ಇಲಾಖೆಯಿಂದ ಒಟ್ಟು 300ಕ್ಕೂ ಹೆಚ್ಚು ನೊಂದಣಿಯಾಗಿದೆ. ಬಂದೋಬಸ್ತ್ಗಾಗಿ 400 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಎಸ್‌ಪಿ 1, ಡಿವೈಎಸ್‌ಪಿ 4, ಸಿಪಿಐ 3, ಪಿಎಸ್‌ಐ 28 ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಮೀನುಗಾರಿಕೆ ಇಲಾಖೆಯಿಂದ ವಿಶಿಷ್ಟ ರೀತಿಯಲ್ಲಿ ವಸ್ತುಪ್ರದರ್ಶನಗೊಳ್ಳುತ್ತದೆ. ಸಿದ್ದತೆ ಈಗಾಗಲೇ ಮುಗಿದಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ರಾಮಕೃಷ್ಣ ತಿಳಿಸಿದ್ದಾರೆ.