ಸಂಜೆ ನಾಲ್ಕು ಗಂಟೆಯಾದರೂ ಹುಡುಗನ ಕಡೆಯವರು ಬರದೇ ಇದ್ದಾಗ, ಮನೆಯಲ್ಲಿ ನೆರೆದವರು ತಲೆಗೊಂದು ಮಾತನಾಡತೊಡಗಿದರು. ಲವ್ ಮಾಡಿದರೆ ಹೀಗೇ ಆಗುವುದು. ಹುಡುಗ ನಂಬಿಸಿ ಮೋಸ ಮಾಡಿದ್ದಾನೆ. ಇನ್ನು ಅವನು ಬರುವ ಲಕ್ಷಣಗಳು ಕಾಣುತ್ತಿಲ್ಲ ಎಂದರು.
ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಮದುವೆಯಾದರೆ ಇಬ್ಬರ ಮನೆಯವರನ್ನೂ ಒಪ್ಪಿಸಿಯೇ ಆಗುವುದೆಂದು ನಿರ್ಧರಿಸಿದ್ದೆವು. ಇಬ್ಬರ ಕಡೆಯವರನ್ನು ಒಪ್ಪಿಸಿಯೂ ಆಯಿತು. ಪ್ರೇಮ ವಿವಾಹವಾದರೂ, ಮದುವೆಯ ಎಲ್ಲಾ ಶಾಸ್ತ್ರಗಳೂ ನಡೆಯಬೇಕೆಂದು ಹಿರಿಯರ ಆಸೆಯಾಗಿತ್ತು. ಅದೇ ರೀತಿ, ಮೊದಲು ವಧು ಪರೀಕ್ಷೆಯ ಶಾಸ್ತ್ರ ಇಂಥ ದಿನ, ಇಷ್ಟು ಗಂಟೆಗೆ ಎಂದು ನಿರ್ಧಾರವಾಯ್ತು.
ಆ ದಿನ ಬೆಳಗ್ಗೆಯಿಂದಲೇ ನಮ್ಮ ಮನೆಯಲ್ಲಿ ಹುಡುಗನ ಕುಟುಂಬದವರನ್ನು ಸ್ವಾಗತಿಸಲು ತಯಾರಿ ನಡೆದಿತ್ತು. 11 ಗಂಟೆಯ ಸುಮಾರಿಗೆ ಬರುತ್ತೇವೆಂದು ಅವರು ಹೇಳಿದ್ದರು. ನಮ್ಮ ಸಂಬಂಧಿಕರು, ನೆರೆ-ಹೊರೆಯವರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನೆಯಲ್ಲಿ ಸೇರಿದ್ದರು. ಗಂಟೆ 12 ಕಳೆದು, ಮಧ್ಯಾಹ್ಯ 2 ಗಂಟೆಯಾದರೂ ಹುಡುಗನ ಕಡೆಯವರ ಪತ್ತೆ ಇಲ್ಲ. ಆಗ ಮೊಬೈಲ್ ಕೂಡಾ ಇರಲಿಲ್ಲ. ನಮ್ಮ ಹಾಗೂ ಅವರ ಮನೆಯಲ್ಲಿ ಲ್ಯಾಂಡ್ ಫೋನ್ ಕೂಡ ಇರಲಿಲ್ಲ. ಹೀಗಾಗಿ, ಎಲ್ಲರಲ್ಲೂ ಒಂದು ರೀತಿಯ ದುಗುಡ ಆರಂಭವಾಗಿತ್ತು.
ಸಂಜೆ ನಾಲ್ಕು ಗಂಟೆಯಾದರೂ ಹುಡುಗನ ಕಡೆಯವರು ಬರದೇ ಇದ್ದಾಗ, ಮನೆಯಲ್ಲಿ ನೆರೆದವರು ತಲೆಗೊಂದು ಮಾತನಾಡತೊಡಗಿದರು. ಲವ್ ಮಾಡಿದರೆ ಹೀಗೇ ಆಗುವುದು. ಹುಡುಗ ನಂಬಿಸಿ ಮೋಸ ಮಾಡಿದ್ದಾನೆ. ಇನ್ನು ಅವನು ಬರುವ ಲಕ್ಷಣಗಳು ಕಾಣುತ್ತಿಲ್ಲ ಎಂದರು. ನನಗೆ ಅಳುವುದೊಂದೇ ಬಾಕಿ. ಆದರೆ, ಹುಡುಗನ ಬಗ್ಗೆ ನನಗೆ ವಿಶ್ವಾಸವಿತ್ತು. ಅದನ್ನು ಅವರಿಗೆಲ್ಲ ತಿಳಿಸಿ ಹೇಳುವುದು ಹೇಗೆ? ನಮ್ಮ ಮನೆಯವರು ಅವಮಾನದಿಂದ ಕುಗ್ಗಿ ಹೋಗಿದ್ದರು. “ನಿನಗೇಕೆ ಬೇಕಿತ್ತು ಪ್ರೇಮ-ಗೀಮ’ ಅಂತ ಬೈಯತೊಡಗಿದರು. ಬಂದವರೆಲ್ಲ ತಮ್ಮ ತಮ್ಮ ಮನೆಗೆ ಹೊರಟು ನಿಂತು “ಆದದ್ದು ಆಯಿತು. ಮನೆಯಲ್ಲಿ ಬೇರೆ ಹುಡುಗನನ್ನು ಹುಡುಕುತ್ತಾರೆ. ಅವನನ್ನು ಮರೆತು ಬಿಡು’ ಎಂದು ಬುದ್ಧಿವಾದ ಹೇಳಿ ಹೊರಟು ಹೋದರು.
ಎಲ್ಲರೂ ಅತ್ತ ಹೊರಟು ಹೋದ ಮೇಲೆ, ಸಂಜೆ 5 ಗಂಟೆ ನಂತರ ಹುಡುಗ ಹಾಗೂ ಅವರ ಕಡೆಯವರೆಲ್ಲ ಬಂದಿಳಿದರು. ನಾನು ಕೋಪದಿಂದ ಹೊರಗೆ ಬರಲೇ ಇಲ್ಲ. ಬೆಳಗ್ಗೆ ಮಾಡಿಕೊಂಡಿದ್ದ ಅಲಂಕಾರವನ್ನೆಲ್ಲ ತೆಗೆದು ಹಾಕಿ ಮಂಕಾಗಿ ಕುಳಿತುಬಿಟ್ಟಿದ್ದೆ. ತಡವಾಗಿ ಬಂದುದಕ್ಕೆ ಅವರು ಕೊಟ್ಟ ಕಾರಣ ಕೇಳಿ, ನನ್ನ ಕೋಪ ಇನ್ನೂ ಜಾಸ್ತಿಯಾಗಿತ್ತು. ಅವತ್ತು ಏನಾಗಿತ್ತೆಂದರೆ, ಅವರ ಕಡೆಯ ಹಿರಿಯರನ್ನು ಕರೆ ತರಲು 20 ಕಿ.ಮೀ ದೂರದ ಊರಿಗೆ ಹುಡುಗ ಹೋಗಿದ್ದ. ತುಂಬಾ ವರ್ಷಗಳ ನಂತರ ಬಂದ ಇವರಿಗಾಗಿ ವಿಶೇಷ ಅಡುಗೆ ಮಾಡಿ ಬಡಿಸಿ, ಅವರು ಅಲ್ಲಿಂದ ಹೊರಡುವಷ್ಟರಲ್ಲಿ ಮೂರು ಗಂಟೆಯಾಗಿದೆ. ಅಲ್ಲಿಂದ ಬರುವಾಗ ಬಸ್ ಕೂಡಾ ಪಂಕ್ಚರ್! ಬೇರೊಂದು ವಾಹನದಲ್ಲಿ ಬಂದು ನಮ್ಮ ಮನೆ ಸೇರುವಾಗ ಸಂಜೆ ಐದು ಗಂಟೆ ದಾಟಿತ್ತು.
ಹೀಗೆ, ಗಾಬರಿ, ದುಗುಡದಲ್ಲಿ ನನ್ನ ವಧು ಪರೀಕ್ಷೆಯ ಶಾಸ್ತ್ರ ಮುಗಿದಿತ್ತು. ಅವತ್ತು ಸಿಟ್ಟಿನಲ್ಲಿ ನಾನು ನನ್ನ ಹುಡುಗನನ್ನು ಕಣ್ಣೆತ್ತಿಯೂ ನೋಡಲಿಲ್ಲ. ಕೊನೆಗೆ ಬೀಳ್ಕೊಡುವಾಗ ಅವರನ್ನು ಮಾತನಾಡಿಸಲೂ ಇಲ್ಲ. ಅವರು ಅಲ್ಲಿಂದ ತೆರಳಿ ನಾಲ್ಕಾರು ಪತ್ರಗಳನ್ನು ಬರೆದು ಕ್ಷಮೆ ಕೇಳಿದಾಗ ನನ್ನ ಮನಸ್ಸು ಕರಗಿತ್ತು. ನಂತರ ಒಂದು ತಿಂಗಳಲ್ಲಿ ಎಲ್ಲರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯೂ ಮುಗಿದಿತ್ತು.
(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ uv.avalu@gmail.comಗೆ ಬರೆದು ಕಳಿಸಿ.)
-ಗೌರಿ ಚಂದ್ರಕೇಸರಿ