Advertisement

ಅಮೃತ್‌ ಮಹಲ್‌ ಕಾವಲಿಗೆ ಬೇಕು ಕಾಯಕಲ್ಪ

06:19 PM Apr 19, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ 13 ಅಮೃತ್‌ ಮಹಲ್‌ ಕಾವಲುಗಳಿದ್ದು, 14,339.37 ಎಕರೆ ಜಮೀನಿದೆ. ಇದರಲ್ಲಿ 4,514 ಎಕರೆ ಜಮೀನು ಒತ್ತುವರಿಯಾಗಿದೆ. ಇದರಲ್ಲಿ 248.08 ಎಕರೆ ಒತ್ತುವರಿ ತೆರವುಗೊಳಿಸಿದ್ದು, 4,266.02 ಎಕರೆ ಜಮೀನು ತೆರವು ಗೊಳಿಸಬೇಕಿದೆ.

Advertisement

ಅಮೃತ್‌ ಮಹಲ್‌ ಕಾವಲು ಒತ್ತುವರಿ ತೆರವಿಗೆ ಸರ್ಕಾರ 2018, ಜ.2 ರಂದು ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಅಮೃತ್‌ ಮಹಲ್‌ ತಳಿ ಸಂವರ್ಧನಾ ಕೇಂದ್ರದ ಉಪ ನಿರ್ದೇಶಕರು, ತಹಶೀಲ್ದಾರ್‌ ಮತ್ತು ಅರಣ್ಯಾಧಿಕಾರಿ ಸಮಿತಿಯಲ್ಲಿದ್ದಾರೆ.

ಸಮಿತಿ ಕಾಲ- ಕಾಲಕ್ಕೆ ಸಭೆ ನಡೆಸುತ್ತಿದ್ದು ಈ ವರ್ಷ ಜ.14ರಂದು ಉಪ ವಿಭಾಗ ಮಟ್ಟದ ಸಭೆ ನಡೆಸಲಾಗಿದೆ. ಅಯ್ಯನಕೆರೆ ಕಾವಲು, ಸಾವೇ ಮರಡಿ ಕಾವಲು, ಬಾಸೂರು ಕಾವಲು, ಬಿಳುವಾಲ ಕಾವಲು ಸರ್ವೇ ಕಾರ್ಯ ಪೂರ್ಣಗೊಳಿಸಿದ್ದು, ಈ ಕಾವಲುಗಳಲ್ಲಿ ಜಮೀನು ಒತ್ತುವರಿ ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ.ಒತ್ತುವರಿ ಸಂಬಂಧ ಪ್ರಕರಣ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಬಾಸೂರು ಅಮೃತ್‌ ಮಹಲ್‌ ಕಾವಲಿನಲ್ಲಿ ಫೆ.1ರಂದು 23 ಎಕರೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗಿದೆ. ನ್ಯಾಯಾಲಯಕ್ಕೆ ಒತ್ತುವರಿ ತೆರವಿಗೆ ಸಂಬಂಧಿ ಸಿದ ಪ್ರಮಾಣ ಪತ್ರ ಸಲ್ಲಿಸ ಲಾಗಿದೆ ಎಂದು ಸಂಬಂಧಪಟ್ಟ ಇಲಾಖೆ ಹೆಸರು ಹೇಳಲಿಚ್ಛಿಸದ ಅಧಿಕಾರಿ ತಿಳಿಸಿದ್ದಾರೆ.

ಕಡೂರು ತಾಲೂಕು ಎಮ್ಮೆದೊಡ್ಡಿ ಕಾವಲು ಒತ್ತುವರಿಗೆ ಸಂಬಂಧಿಸಿದಂತೆ ಹಿಂದೆ ಸರ್ವೇ ನಡೆಸಿದ ಹಳೆಯ ಸ್ಕೆಚ್‌ ಲಭ್ಯವಿದ್ದು, ಇಲಾಖೆ ವಶದಲ್ಲಿರುವ 11 ಎಕರೆ ಪ್ರದೇಶದಲ್ಲಿ ಗೋ ಸದನ ನಡೆಸಲು ಈಗಾಗಲೇ ಉದ್ದೇಶಿಸಲಾಗಿದೆ.

Advertisement

ಅಮೃತ್‌ ಮಹಲ್‌ ಕಾವಲ್‌ ಪ್ರದೇಶದಲ್ಲಿ ಅಳತೆ ಕಾರ್ಯ ಕೈಗೊಂಡು ಒತ್ತುವರಿಯನ್ನು ಗುರುತಿಸಿ ತೆರವುಗೊಳಿಸಬೇಕಾಗಿದ್ದು, ಗುರುತಿಸಿರುವ ಕಾವಲಿಗೆ ಬೇಲಿ ಹಾಕಿ ಸಂರಕ್ಷಿಸಲು ಸಂಬಂಧಪಟ್ಟ ಇಲಾಖೆ ಮುಂದಾಗಿದೆ.ಅಮೃತ್‌ ಮಹಲ್‌ ಕಾವಲ್‌ ಪ್ರಾಣಿಪಕ್ಷಿಗಳ ಆವಾಸಸ್ಥಾನವಾಗಿದೆ. ಕೆಲವು ಕಡೆಗಳಲ್ಲಿ ಗೋವುಗಳಿಗೆ ಮೇವು ಬೆಳೆಯಲಾಗುತ್ತಿದೆ.

ಈ ಹಿಂದೆ ಅಮೃತ್‌ ಮಹಲ್‌ ಕಾವಲಿನಲ್ಲಿ ರಸ್ತೆ ನಿರ್ಮಿಸಲು ಮುಂದಾದಾಗ ಪರಿಸರಾಸಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾವಲು ನೋಡಿಕೊಳ್ಳುವವರು ಮತ್ತು ಗೋವುಗಳನ್ನು ಮೇಯಿಸುವ ನೌಕರರು ಆಹಾರ ಧಾನ್ಯ ಬೆಳೆದುಕೊಳ್ಳಲು 2 ಎಕರೆ ಸಾಗುವಳಿಗೆ ಅವಕಾಶ ಕಲ್ಪಿಸಿದ್ದು ಕೆಲವರು 5 ಎಕರೆವರೆಗೂ ಸಾಗುವಳಿ ಮಾಡಿ ಆರ್ಥಿಕ ಬೆಳೆಗಳನ್ನು ಬೆಳೆಯುತ್ತಿದ್ದು ಇದಕ್ಕೆಲ್ಲ ತಡೆಯೊಡ್ಡಿ ಕಾವಲ್‌ ಜಮೀನು ಉಳಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next