ವಾಷಿಂಗ್ಟನ್: ಅಮೆರಿಕ ಮತ್ತು ಜಗತ್ತಿನಾದ್ಯಂತ ಕೋವಿಡ್ ತನ್ನ ಬಿಗಿಪಟ್ಟನ್ನು ಇನ್ನಷ್ಟು ಬಲಪಡಿಸುತ್ತಿರುವಂತೆಯೇ ಅಮೆರಿಕ ಆರ್ಥಿಕತೆಗೆ ಮಹಾಕುಸಿತದ ಆತಂಕ ಕಾಡಿದೆ. ಅಮೆರಿಕದ ಆದಾಯ ಕಳೆದೆರಡು ತಿಂಗಳಲ್ಲಿ ತೀವ್ರ ಕುಸಿತವಾಗಿದ್ದು, ಇದರಿಂದ ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು ಎಂದು ಹೇಳಲಾಗಿದೆ. ಕಳೆದ ಗುರುವಾರದಿಂದ ಬಳಿಕ ಅಮೆರಿಕ ಷೇರು ಮಾರುಕಟ್ಟೆ ತೀವ್ರ ಇಳಿಕೆ ಕಂಡಿದ್ದು, ಈ ವರೆಗಿನ ಅತಿ ಕೆಟ್ಟ ವ್ಯವಹಾರದ ದಿನಗಳು ಎಂದು ಕರೆಯಲಾಗಿದೆ. ಇದೇ ಸಂದರ್ಭ ಜಗತ್ತಿನ ಪ್ರಮುಖ ಷೇರು ಮಾರುಕಟ್ಟೆಗಳಾದ ಜಪಾನ್, ಹಾಂಗ್‌ಕಾಂಗ್, ಚೀನದ ಷೇರು ಮಾರುಕಟ್ಟೆಗಳೂ ಕುಸಿತ ಕಂಡಿದ್ದವು.
ಇಂಧನ, ಪ್ರಮುಖ ಕೈಗಾರಿಕೆಗಳ, ಮನೋರಂಜನೆ ಕ್ಷೇತ್ರಗಳ ಷೇರುಗಳು ತೀವ್ರ ಇಳಿಕೆ ಕಂಡಿವೆ. ಏತನ್ಮಧ್ಯೆ ಅಮೆರಿಕದಲ್ಲಿ ನಿರುದ್ಯೋಗಿಗಳ ನೆರವಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಒಂದು ವಾರದಲ್ಲಿ ಸುಮಾರು 15 ಲಕ್ಷ ಮಂದಿ ನೆರವಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಮೆರಿಕದ ಕಾರ್ಮಿಕ ವಿಭಾಗ ಹೇಳಿದೆ.
ಈ ವರ್ಷಾಂತ್ಯದೊಳಗೆ ಅಮೆರಿಕದ ನಿರುದ್ಯೋಗ ಪ್ರಮಾಣ ಶೇ.9ರಷ್ಟು ಇರಬಹುದು ಎಂದು ಅಮೆರಿಕದ ಶಾಸನಸಭೆಯ ಪ್ರತಿನಿಧಿಗಳು ಹೇಳಿದ್ದಾರೆ.
ಅಮೆರಿಕದ ಹಲವು ರಾಜ್ಯಗಳು ಆರ್ಥಿಕ ಚಟುವಟಿಕೆಗೆ ಲಾಕ್‌ಡೌನ್ ಸಡಿಲಗೊಳಿಸಿದ್ದರೂ ಸಂಪೂರ್ಣವಾಗಿ ಇನ್ನೂ ತೆರೆದುಕೊಂಡಿಲ್ಲ. ಸ್ಥಳೀಯವಾಗಿ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಜನರು ವ್ಯವಹಾರಕ್ಕೆ, ಖರೀದಿಗೆ, ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಮಾಲ್‌ಗಳು, ರೆಸ್ಟೋರೆಂಟ್‌ಗಳು, ಮನೋರಂಜನ ತಾಣಗಳಲ್ಲಿ ವ್ಯವಹಾರ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮತ್ತೆ ಹೇರವುದನ್ನು ಕಾಣ ಬಯಸುವುದಿಲ್ಲ ಎಂದು ಅಮೆರಿಕ ಆರ್ಥಿಕ ಕಾರ್ಯದರ್ಶಿ ಸ್ಟೀವನ್ ಮು°ಚಿನ್ ಅವರು ಹೇಳಿದ್ದಾರೆ. ಆದರೆ ಹೊರಗೆ ಬಂದರೆ ಅನಾರೋಗ್ಯವಾಗುತ್ತದೆ ಎಂಬ ಹೆದರಿಕೆ ಜನರಿಗೆ ಹೆಚ್ಚಾಗಿ ಇದ್ದರೆ ಅವರು ಹೆಚ್ಚಾಗಿ ಮನೆಯಲ್ಲೇ ಇರುವುದು ಒಳ್ಳೆಯದು ಎಂದು ಅಮೆರಿಕದ ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆಸ್ಪತ್ರೆ ಬಿಲ್ ನೋಡಿ ಆಘಾತ!
ಅಮೆರಿಕದ 70 ವರ್ಷ ವಯಸ್ಸಿನ ಮೈಕೆಲ್ ಫ್ಲೋರ್ ಎಂಬ ವೃದ್ಧರೊಬ್ಬರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಅಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ತೀರಾ ಗಂಭೀರ ಸ್ಥಿತಿಯಲ್ಲಿದ್ದ ಅವರು 62 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದರು. ಬಳಿಕ ಚೇತರಿಸಿಕೊಂಡ ಅವರು ಆಸ್ಪತ್ರೆಯಿಂದ ಡಿಸಾcರ್ಜ್ ಆಗುವಾಗ 181 ಪುಟಗಳಿದ್ದ ಬಿಲ್‌ನಲ್ಲಿ 1.1 ಮಿಲಿಯನ್ ಡಾಲರ್ ಎಂದು ನಮೂದಿಸಿರುವುದನ್ನು ಕಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದರು.