Advertisement

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

10:08 AM Apr 09, 2023 | Team Udayavani |

ನವದೆಹಲಿ: ದೇಶದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದೆರಡು ದಿನಗಳಲ್ಲಿ 6 ಕ್ಕೂ ಹೆಚ್ಚಿನ ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಈ ವಾರದ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಪರಿಶೀಲನಾ ಸಭೆಯನ್ನು ನಡೆಸಿ, ಆರೋಗ್ಯ ಸೌಲಭ್ಯಗಳ ಸನ್ನದ್ಧತೆಯನ್ನು ಪರಿಶೀಲಿಸಲು ಮತ್ತು ಜಾಗರೂಕರಾಗಿರಲು ರಾಜ್ಯಗಳಿಗೆ ಹೇಳಿದ್ದಾರೆ.

Advertisement

ದೇಶದಲ್ಲಿ ಕೊರೊನಾ ಸೋಂಕು ಪ್ರಮಾಣ ಏರಿಕೆಯಾಗುತ್ತಿರುವಂತೆಯೇ ಹೊಸತಾಗಿ ಇರುವ ರೂಪಾಂತರಿಯೊಂದು ಬೆಳಕಿಗೆ ಬಂದಿದೆ. ಅದನ್ನು ಎಕ್ಸ್‌ಬಿಬಿ.1.16.1 ಎಂದು ಗುರುತಿಸಲಾಗಿದೆ. ಇದುವರೆಗೆ ದೇಶದಲ್ಲಿ 113 ಪ್ರಕರಣಗಳು ದೃಢಪಟ್ಟಿವೆ. ಹೊಸತಾಗಿ ದೃಢಪಟ್ಟಿರುವ ಈ ರೂಪಾಂತರಿಯು ಒಮಿಕ್ರಾನ್‌ ತಳಿಯ ಉಪ ರೂಪಾಂತರಿಯಾಗಿದೆ. ಹದಿನೈದು ತಿಂಗಳ ಅವಧಿಯಲ್ಲಿ ಒಮಿಕ್ರಾನ್‌ನ 400 ಉಪತಳಿಗಳು ಇರುವುದು ಖಚಿತಪಟ್ಟಿವೆ. ಈ ಪೈಕಿ ಶೇ.90 ಎಕ್ಸ್‌ಬಿಬಿಯ ರೂಪಾಂತರಿಯವೇ ಆಗಿದೆ.

ಕೋವಿಡ್‌ ಹೆಚ್ಚಾಗುತ್ತಿದ್ದಂತೆ ಒಂದೊಂದು ರಾಜ್ಯದಲ್ಲಿ ನಿಧಾನವಾಗಿ ಮುಂಜಾಗ್ರತ ಕ್ರಮವಾಗಿ ಮಾಸ್ಕ್‌ ಕಡ್ಡಾಯ, ಕೋವಿಡ್‌ ಪರೀಕ್ಷೆ ಕಡ್ಡಾಯದಂಥ ನಿಯಮಗಳು ಬರುತ್ತಿದೆ.

ಹರ್ಯಾಣ: ಹರ್ಯಾಣದಲ್ಲಿ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌  ಧರಿಸುವುದು ಕಡ್ಡಾಯವಾಗಿದೆ. ಶುಕ್ರವಾರ ಹರ್ಯಾಣದಲ್ಲಿ 407 ಮಂದಿಗೆ ಸೋಂಕು ತಗುಲಿದೆ.

ರಾಜ್ಯದ ಆರೋಗ್ಯ ಇಲಾಖೆಯು ಕೋವಿಡ್ ನಿಯಮಗಳನ್ನು ಸೂಕ್ತವಾಗಿ ಪಾಲಿಸಲು ಸಾರ್ವಜನಿಕರಿಗೆ ಹೇಳಿದೆ. ರಾಜ್ಯದ ಎಲ್ಲ ಭಾಗಗಳಲ್ಲಿ ನಿಯಮವನ್ನು ಅನುಷ್ಠಾನಗೊಳಿಸುವಂತೆ ಜಿಲ್ಲಾಡಳಿತ ಮತ್ತು ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ.

Advertisement

ಕೇರಳ: ಕೇರಳದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕೋವಿಡ್‌ ಸೋಂಕು ತುಸು ಹೆಚ್ಚೇ ಇದೆ. ಶನಿವಾರ ರಾಜ್ಯದಲ್ಲಿ 1,801 ಜನರಿಗೆ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ಮಾಸ್ಕ್‌ ಕಡ್ಡಾಯಯ ಬಗ್ಗೆ ಆದೇಶ ಹೊರಡಿಸಿದ್ದಾರೆ. ಗರ್ಭಿಣಿಯರು, ವೃದ್ಧರು ಮತ್ತು ವಯೋಸಹಜ ಕಾಯಿಲೆ ( ಜೀವನ ಶೈಲಿ ಕಾಯಿಲೆ) ಇರುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ಹೇಳಿದ್ದಾರೆ.

ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಿದ ನಂತರ ಸಚಿವರು ಮಾತನಾಡಿ, ಕೋವಿಡ್ ಸಂಬಂಧಿತ ಸಾವುಗಳು ಹೆಚ್ಚಾಗಿ 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮತ್ತು ಮಧುಮೇಹದಂತಹ ಜೀವನಶೈಲಿ ಕಾಯಿಲೆ ಇರುವವರಲ್ಲಿ ವರದಿಯಾಗುತ್ತಿವೆ. ಹೀಗಾಗಿ ಗರ್ಭಿಣಿಯರು, ವೃದ್ಧರು ಮತ್ತು ವಯೋಸಹಜ ಕಾಯಿಲೆ ಇರುವವರು ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ ಎಂದಿದ್ದಾರೆ.

ಪುದುಚೇರಿ:

ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪುದುಚೇರಿ ರಾಜ್ಯ ಸರ್ಕಾರ ಶುಕ್ರವಾರ ಸಾರ್ವಜನಿಕ ಸ್ಥಳಗಳಾದ ಬೀಚ್ ರಸ್ತೆ, ಉದ್ಯಾನವನಗಳು ಮತ್ತು ಚಿತ್ರಮಂದಿರಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವೆಂದು ಆದೇಶ ಹೊರಡಿಸಿದೆ.

ಆಸ್ಪತ್ರೆಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮದ್ಯದ ಅಂಗಡಿಗಳು, ಮನರಂಜನಾ ಕ್ಷೇತ್ರಗಳು, ಸರ್ಕಾರಿ ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಇಷ್ಟು ಮಾತ್ರವಲ್ಲದೇ ಕೊರೊನಾ ಸೋಂಕುಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಉತ್ತರಪ್ರದೇಶದ ಮೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುವ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಸೋಂಕು ಪರೀಕ್ಷೆ ಕಡ್ಡಾಯ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next