ಈ ಬಾರಿಯ ಬಜೆಟ್ ತೆರಿಗೆ ವಿಷಯದಲ್ಲಿ ಮಧ್ಯಮ ವರ್ಗಕ್ಕೆ ಅನುಕೂಲಕರವಾಗಿದೆ. ತೆರಿಗೆ ಪಾವತಿದಾರ ವಿವಾದವಿಲ್ಲದೆ ಕರ ಪಾವತಿಸಲು ಅನುಕೂಲ ಮಾಡಿಕೊಡಲಾಗಿದೆ. ಕರ ಪಾವತಿ, ಸ್ವೀಕೃತಿ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೇ ಮಾಡುವ ವ್ಯವಸ್ಥೆಗೆ ಸರ್ಕಾರ ಬದ್ಧವಾಗಿದೆ. ಸಂಪತ್ತು ಸೃಜನೆ, ಶೂನ್ಯ ತೆರಿಗೆ ಭಯೋತ್ಪಾದನೆ ಸೇರಿದಂತೆ ಸರ್ಕಾರ ವಿವಿಧ ಉದ್ದೇಶಗಳು ಮುನ್ನೆಲೆಯಲ್ಲಿಯೇ ಜನರಿಗೆ ಗೋಚರಿಸುತ್ತವೆ. ಲಾಭಾಂಶ ವಿತರಣಾ ತೆರಿಗೆಯನ್ನು ತೆಗೆದುಹಾಕಿರುವ ಕಾರಣ ಹೂಡಿಕೆದಾರರು ಭಾರತದಲ್ಲಿ ಮತ್ತಷ್ಟು ಹೂಡಿಕೆ ಮಾಡಿ ತಮ್ಮ ವ್ಯಾಪರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.
ವೈಯುಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಹಲವಾರು ರಿಯಾಯಿತಿಗಳನ್ನು ಘೋಷಿಸಿದ್ದು, 5 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸದೇ ಇರುವುದು ಮಧ್ಯಮ ವರ್ಗಕ್ಕೆ ಅನುಕೂಲಕರವಾಗಿದೆ. ಹೇಗೆಂದರೆ ಪ್ರಸಕ್ತ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ತೆರಿಗೆ ಹಂತಗಳ ಪ್ರಕಾರ 2.5 ಲಕ್ಷ ರೂ.ವರೆಗಿನ ವೈಯುಕ್ತಿಕ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಜೊತೆಗೆ 2.5ರಿಂದ 5 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ ಇದ್ದರೂ, 12,500 ರೂ. ರಿಯಾಯಿತಿ ಸಿಗುವುದರಿಂದ ತೆರಿಗೆ ಇಲ್ಲ ಎಂದೇ ಹೇಳಬಹುದು. 5 ರಿಂದ 10 ಲಕ್ಷ ಆದಾಯಕ್ಕೆ ಚಾಲ್ತಿ ತೆರಿಗೆ ಹಂತದಲ್ಲಿ ಶೇ.20ರಷ್ಟು ತೆರಿಗೆ ಇದ್ದರೆ, ಈಗ ಪ್ರಸ್ತಾವಿತ ತೆರಿಗೆ ಹಂತದಲ್ಲಿ ಶೇ.10ರಷ್ಟಿದೆ. 15 ಲಕ್ಷ ರೂ. ಆದಾಯಕ್ಕೆ 1.95 ಲಕ್ಷ ರೂ. ಉಳಿತಾಯ ಸಿಗುತ್ತಿದ್ದರೆ, ಈಗ 2.73 ಲಕ್ಷ ರಿಯಾಯಿತಿ ಸಿಗುತ್ತಿದ್ದು, ಹೊಸ ಬಜೆಟ್‌ನ ತೆರಿಗೆ ಪ್ರಸ್ತಾವನೆಯಂತೆ 78 ಸಾವಿರ ಉಳಿತಾಯ ಮಾಡಬಹುದು.
ಕುಸಿಯುತ್ತಿರುವ ಆರ್ಥಿಕ ವಲಯಕ್ಕೆ ಪುನಶ್ಚೇತನ ನೀಡಲು ಹಲವಾರು ಕ್ರಮಗಳನ್ನು ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ಸಾಲ ಶೇ.52.2ರಿಂದ ಶೇ. 48.7ರಷ್ಟು ಕಡಿಮೆಯಾಗಿದೆ. ಈ ವರ್ಷದ ಬಜೆಟ್‌ನ್ನು “ಭರವಸೆಯ ಭಾರತ, ಆರ್ಥಿಕ ಅಭಿವೃದ್ಧಿ ಮತ್ತು ಕಾಳಜಿಯ ಸಮಾಜ’ ಈ 3 ಅಂಶಗಳ ಮೇಲೆ ನಿಂತಿದೆ.
ತೆರಿಗೆ ವಿವಾದಗಳಿಗೆ ಸಂಬಂಧಿಸಿದಂತೆ ಈ ವರ್ಷ ಅಂದರೆ 2020ರ ಮಾರ್ಚ್ ಒಳಗೆ ಈ ತೆರಿಗೆ ವಿವಾದಗಳಿಗೆ ಸಂಬಂಧಿಸಿದಂತೆ ಯಾವುದೇ ದಂಡವಿಲ್ಲದೆ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ. 2020-21ನೇ ಸಾಲಿನಲ್ಲಿ 22.66 ಲಕ್ಷ ಕೋಟಿ ರೂ. ಆದಾಯ ಸಂಗ್ರಹ ಗುರಿ ಹೊಂದಲಾಗಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ. ಇದೇ ಸಾಲಿನಲ್ಲಿ ಈ ವರ್ಷದ ಅಂತ್ಯದ ವೇಳೆ ಜಿಡಿಪಿ ಬೆಳವಣಿಗೆ ದರ ಶೇ.10ರಷ್ಟು ಏರಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಸೇವೆಗಳ ಮೇಲಿನ ಪಾವತಿಯ ಟಿಡಿಎಸ್ ದರವನ್ನು ಶೇ.10 ಇದ್ದದ್ದು ಶೇ.2ಕ್ಕೆ ಇಳಿಸಲಾಗಿದೆ.
“ಲಾಭಾಂಶ ವಿತರಣಾ ತೆರಿಗೆ’ (ಡಿಡಿಟಿ) ತೆಗೆದು ಹಾಕಿರುವುದು ಭಾರತವನ್ನು ಹೂಡಿಕೆದಾರರ ನೆಚ್ಚಿನ ತಾಣವನ್ನಾಗಿ ಮಾಡಲಾಗಿದೆ. ತೆರಿಗೆ ಲೆಕ್ಕಪರಿಶೋಧನೆ ವಹಿವಾಟು ಮಿತಿಯನ್ನು 1 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳಿಗೆ ಹೆಚ್ಚಿಸಿರುವುದು ಒಳ್ಳೆಯ ಹೆಜ್ಜೆಯಾಗಿದೆ. “ಸಂಪತ್ತು ಸೃಜನೆ ಮತ್ತು ಶೂನ್ಯ ತೆರಿಗೆ ಭಯೋತ್ಪಾದನೆ’ ಸರ್ಕಾರದ ಉದ್ದೇಶವಾಗಿದೆ.
ಕಳೆದ ವರ್ಷದಲ್ಲಿ ಇದ್ದ ತೆರಿಗೆಯ “ಇ-ಮೌಲ್ಯಮಾಪನ’ ವ್ಯವಸ್ಥೆಯನ್ನು ಈಗ “ಇ-ಮೇಲ್ಮನವಿ’ ಪದ್ದತಿಗೆ ವಿಸ್ತರಿಸಲಾಗಿದೆ. ನೇರ ತೆರಿಗೆ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು “ವಿವಾದ್ ಸೆ ವಿಶ್ವಾಸ್’ ಯೋಜನೆಯ ಪ್ರಸ್ತಾವನೆ ಸ್ವಾಗತಾರ್ಹ. 2020 ಮಾ.31ರೊಳಗೆ ತೆರಿಗೆ ಪಾವತಿಸುವವರಿಗೆ ಯಾವುದೇ ದಂಡ ಇರುವುದಿಲ್ಲ. ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯಡಿ ನೀಡಲಾಗುತ್ತಿದ್ದ ಸುಮಾರು 100 ವಿನಾಯಿತಿಗಳ ಪೈಕಿ àಗ 70ಕ್ಕೂ ಹೆಚ್ಚು ರಿಯಾಯತಿಗಳನ್ನು ತೆಗೆದು ಹಾಕುವ ಮೂಲಕ ವ್ಯವಸ್ಥೆಯನ್ನು ಸರಳೀಕರಿಸಲಾಗಿದೆ.
ಹೂಡಿಕೆ, ಉಳಿತಾಯಗಳ ಮೇಲಿನ ತೆರಿಗೆ ವಿನಾಯಿತಿ ಚಿಂತನೆ ಪ್ರಸ್ತುತ ಭಾರತದ ಪರಿಸ್ಥಿತಿಗೆ ಸಮಂಜಸವಲ್ಲ. ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಧನಾತ್ಮಕ, ಪ್ರಗತಿದಾಯಕ ಕ್ರಮಗಳನ್ನು ಕೈಗೊಳ್ಳಲಾಗಿದೆ.