ಬೆಂಗಳೂರು: ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಸರ್ಕಾರ ಉರುಳಿಸಲು ಪ್ರಯತ್ನ ಮಾಡಿದ್ದರು. ಅವರ ಪ್ರಯತ್ನ ಬಯಲಾಯಿತು. ರಾಜ್ಯ ಸರ್ಕಾರಕ್ಕೆ ಯಾವುದೇ ಧಕ್ಕೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದಾಗಿನಿಂದ ಉರುಳಿಸಲು ಪ್ರಯತ್ನ ನಡೆಸಲಾಗುತ್ತಿದೆ. ಕೋಮುವಾದಿಗಳು ನಮ್ಮ ಮೊದಲ ವೈರಿಗಳು. ರಾಜಕೀಯವಾಗಿ ಅವರು ನಮ್ಮ ವಿರೋಧಿಗಳು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಉಪ ಚುನಾವಣೆಯಲ್ಲಿ ಯಶಸ್ವಿಯಾಗಿದ್ದೇವೆ . ಈ ಚುನಾವಣೆಯಲ್ಲಿ ಕನಿಷ್ಟ, 20 ಸ್ಥಾನ ಗೆಲ್ಲುತ್ತೇವೆ.
ನಾಮಪತ್ರ ಸಲ್ಲಿಕೆ ಸಮಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇದ್ದವು. ಎಲ್ಲವನ್ನೂ ಬಗೆ ಹರಿಸಿದ್ದೇವೆ. ತುಮಕೂರು ಸಂಸದ ಮುದ್ದಹನುಮೇಗೌಡ ಅವರನ್ನು ನಾವೇ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಮೈಸೂರಿನಲ್ಲಿ ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್ ಎಲ್ಲರೂ ಜಂಟಿ ಪ್ರಚಾರಕ್ಕೆ ಬರುತ್ತಾರೆ. ನಾನು ದೇವೇಗೌಡರು ಒಟ್ಟಿಗೆ ಹೋದರೆ ಎಲ್ಲ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಯಲಿದೆ. ಮಂಡ್ಯದಲ್ಲಿಯೂ ಇಬ್ಬರೂ ಜಂಟಿ ಪ್ರಚಾರ ನಡೆಸುತ್ತೇವೆ ಎಂದು ಹೇಳಿದರು.
ಆದಾಯ ತೆರಿಗೆ ಇಲಾಖೆ ಚುನಾವಣೆ ಸಂದರ್ಭದಲ್ಲಿ ಹಾಗೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರುಗಳ ಮನೆಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿರುವುದು ಸರಿಯಲ್ಲ. ಯಡಿಯೂರಪ್ಪ ಡೈರಿಯ ಬಗ್ಗೆ ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರು ತಾವಾಗಿಯೇ ಸ್ಪಷ್ಟೀಕರಣ ಕೊಡುವುದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದರು.
ಇದೇ ವೇಳೆ, ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡ ಅವರು, ಜನರೇ ಕುಟುಂಬ ರಾಜಕಾರಣ ಒಪ್ಪಿಕೊಳ್ಳುತ್ತಿರುವುದರಿಂದ ನಾವು ಏನೂ ಮಾಡಲು ಆಗುವುದಿಲ್ಲ. ಬಿಜೆಪಿಯವರು ಕಲಬುಗರಿಯಲ್ಲಿ ಖರ್ಗೆಯವರನ್ನು ಸೋಲಿಸಲು ಅವರ ಪಕ್ಷದಲ್ಲಿ ಅಭ್ಯರ್ಥಿಗಳು ಸಿಗದ ಕಾರಣ ನಮ್ಮ ಪಕ್ಷದಿಂದ ಕರೆದುಕೊಂಡು ಹೋಗಿದ್ದಾರೆ. ರಾಜ್ಯದಲ್ಲಿ ಅಮಿತ್ ಶಾ ಹೆಚ್ಚು ಪ್ರಚಾರ ಮಾಡಿದರೆ, ಮೈತ್ರಿ ಪಕ್ಷಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.