Advertisement

ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಕಸರತ್ತು

12:04 PM May 29, 2019 | Suhan S |

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯ ಫ‌ಲಿತಾಂಶ ಪ್ರಕಟಗೊಂಡ ಬಳಿಕ ಆಪರೇಷನ್‌ ಕಮಲದ ಭೀತಿಯಿಂದ ಅತೃಪ್ತ ಶಾಸಕರನ್ನು ಸಚಿವರನ್ನಾಗಿ ಮಾಡಿ ಸಮಾಧಾನಪಡಿಸಲು ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ದೋಸ್ತಿ ಪಕ್ಷಗಳು ಸಂಪುಟ ವಿಸ್ತರಣೆ ಕರ ಸತ್ತು ನಡೆಸುತ್ತಿರುವ ಬೆನ್ನಲ್ಲೇ, ಜಿಲ್ಲೆಯ ಸಚಿವ ಸ್ಥಾನದ ಆಕಾಂಕ್ಷಿತ ಶಾಸಕರು ಅವಕಾಶಕ್ಕಾಗಿ ಮೈಕೊಡವಿ ನಿಂತಿದ್ದಾರೆ. ಬುಧವಾರ ನಡೆಯಲಿರುವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

Advertisement

ಜಿಲ್ಲೆಯ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌, ಶಿಡ್ಲಘಟ್ಟದ ವಿ.ಮುನಿಯಪ್ಪ ದೋಸ್ತಿ ಸರ್ಕಾರದಲ್ಲಿ ಸಚಿವರಾಗಬೇಕೆಂದು ಪ್ರಬಲ ಪೈಪೋಟಿ ನಡೆಸುತ್ತಿದ್ದು, ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಮತ್ತೂಬ್ಬರು ಸಚಿವರಾಗುವ ಅವಕಾಶ ಸಿಗುತ್ತಾ? ಒಂದು ವೇಳೆ ಜಿಲ್ಲೆಯವರಾದ ಕೃಷಿ ಸಚಿವ ಎನ್‌.ಹೆಚ್.ಶಿವಶಂಕರರೆಡ್ಡಿಗೆ ಸಂಪುಟದಿಂದ ಗೇಟ್ಪಾಸ್‌ ಕೊಟ್ಟರೆ ತೆರವುವಾಗುವ ಜಿಲ್ಲಾ ಕೋಟಾದಡಿ ಯಾರಿಗೆ ಸಚಿವ ಸ್ಥಾನ ಒಲಿದು ಬರಲಿದೆ ಎನ್ನುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಆಪರೇಷನ್‌ ಕಮಲ ಭೀತಿ: ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗನಿಂದಲೂ ಜಿಲ್ಲೆಯ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದು ಬರುತ್ತಿದ್ದರು. ಆದರೆ ದೋಸ್ತಿ ಸರ್ಕಾರದಲ್ಲಿ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಗೌರಿ ಬಿದನೂರು ಕ್ಷೇತ್ರದಲ್ಲಿ ಬರೋಬ್ಬರಿ ಐದು ಬಾರಿ ಶಾಸಕರಾಗಿರುವ ಎನ್‌.ಎಚ್.ಶಿವಶಂಕರೆಡ್ಡಿಗೆ ಮಹತ್ವದ ಕೃಷಿ ಖಾತೆ ನೀಡಲಾಯಿತು. ಹೀಗಾಗಿ ಜಿಲ್ಲೆಯ ಒಬ್ಬರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ಸಿಕ್ಕಿದ್ದರಿಂದ ವಿ.ಮುನಿಯಪ್ಪ, ಸುಧಾಕರ್‌ಗೆ ಅವಕಾಶ ಕೈ ತಪ್ಪಿದಂತಾಯಿತು. ಆದರೂ ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ ಕೆಲ ಕಾಂಗ್ರೆಸ್‌ ಪಕ್ಷದ ಅತೃಪ್ತ ಶಾಸಕರು ಸಚಿವ ಸ್ಥಾನ ಸಿಗದಿದ್ದಕ್ಕೆ ಆಪರೇಷನ್‌ ಕಮಲಕ್ಕೆ ಒಳಗಾಗುತ್ತಾರೆಂಬ ಭೀತಿ ದೋಸ್ತಿಗಳಿಗೆ ಆತಂಕವುಂಟು ಮಾಡಿದೆ.

ಯಾರು ಸಚಿವರಾಗ್ತಾರೆ?: ಕಳೆದ ಲೋಕಸಭಾ ಚುನಾವಣೆ ಫ‌ಲಿತಾಂಶದ ಬಳಿಕ ದೋಸ್ತಿಗೆ ಹೀನಾಯ ಸೋಲಾಗಿ ಬಿಜೆಪಿ ನಿರೀಕ್ಷೆಗೂ ಮೀರಿ 25ಸೀಟುಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಮತ್ತೆ ರಾಜ್ಯದಲ್ಲಿ ಆಪರೇಷನ್‌ ಕಮಲದ ಕರಿನೆರಳು ಆವರಿಸಿದೆ. ಇದರಿಂದ ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ಸರ್ಕಾರ ಮೂರನೇ ಬಾರಿಗೆ ಸಂಪುಟ ವಿಸ್ತರಣೆಗೆ ಕೈ ಹಾಕಿದೆ. ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌ ಹಾಗೂ ಹಿರಿಯ ಕಾಂಗ್ರೆಸ್‌ ಶಾಸಕ ಶಿಡ್ಲಘಟ್ಟದ ವಿ.ಮುನಿಯಪ್ಪಗೆ ಸಂಪುಟದಲ್ಲಿ ಅವಕಾಶ ಸಿಗುತ್ತದೆಯೇ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.

ವಿ.ಮುನಿಯಪ್ಪ ಸಿಎಂ ಭೇಟಿ: ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದ್ದಂತೆ ಬುಧವಾರ ಶಿಡ್ಲಘಟ್ಟದ ಕಾಂಗ್ರೆಸ್‌ ಶಾಸಕ ವಿ.ಮುನಿಯಪ್ಪ ಅಸ್ಟ್ರೇಲಿಯಾ ಪ್ರವಾಸ ಮುಗಿಸಿ ಬಂದ ಡಿ.ಕೆ.ಶಿವಕುಮಾರ್‌ ಹಾಗೂ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಸಂಪುಟ ವಿಸ್ತರಣೆ ವೇಳೆ ತಮಗೆ ಅವಕಾಶ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಆರು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ನನಗೆ ಮಂತ್ರಿ ಸ್ಥಾನ ನೀಡಬೇಕು. ನಾನು ಹಿರಿಯ ಶಾಸಕನಾಗಿದ್ದೇನೆ. ಈ ಹಿಂದೆ ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ವಿ.ಮುನಿಯಪ್ಪ ತಿಳಿಸಿದ್ದಾರೆ. ಆದರೆ ಈಗಾಗಲೇ ವಿ.ಮುನಿಯಪ್ಪಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಮಾನ ನೀಡಿರುವುದರಿಂದ ಮತ್ತೆ ಸಂಪುಟದಲ್ಲಿ ಅವಕಾಶ ನೀಡುವುದು ದೂರದ ಮಾತು ಎಂದು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ಅತೃಪ್ತರಾಗಿ ಸಚಿವರಾದ ಎಂಟಿಬಿ: ಸದ್ಯ ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದ ವ್ಯಾಪ್ತಿ ಪೈಕಿ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಡಾ.ಕೆ.ಸುಧಾಕರ್‌ ಜೊತೆಗೂಡಿ ಭಿನ್ನಮತೀಯ ಚಟುವಟಿಕೆಗಳನ್ನು ನಡೆಸಿದ ಹೋಸಕೋಟೆ ಕ್ಷೇತ್ರದ ಶಾಸಕ ಎಂ.ಬಿ.ಟಿ.ನಾಗರಾಜ್‌ಗೆ ವಸತಿ ಖಾತೆ ನೀಡಲಾಗಿದೆ. ಅದೇ ರೀತಿ ಜಿಲ್ಲೆಯ ಬಾಗೇಪಲ್ಲಿ ಶಾಸಕ ಸುಬ್ಟಾರೆಡ್ಡಿಗೂ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ ಅತ್ತ ಸಚಿವ ಸ್ಥಾನವೂ ಇಲ್ಲದೇ ಇತ್ತ ನಿಗಮ ಮಂಡಳಿಯಲ್ಲಿ ಅವಕಾಶವಿಲ್ಲದೇ ದೋಸ್ತಿ ಸರ್ಕಾರದ ವಿರುದ್ಧ ಕತ್ತಿ ಮಸೆಯುತ್ತಿರುವ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌ ಸದ್ಯ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡು ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ನಾಯಕ ಮಾಜಿ ಸಿಎಂ ಎಸ್‌.ಎಂ.ಕೃಷ್ಣರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಇದರ ಬೆನ್ನಲ್ಲೇ ದೋಸ್ತಿ ಪಕ್ಷಗಳು ಸಂಪುಟ ವಿಸ್ತರಣೆಗೆ ಕೈ ಹಾಕಿರುವುದರಿಂದ ಅತೃಪ್ತರ ಬಣದಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌ಗೆ ಮಂತ್ರಿ ಯೋಗ ಒಲಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

● ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next