Advertisement

ವಿಮಾನ ನಿಲ್ದಾಣ ಕಾರ್ಮಿಕರ ಮುಷ್ಕರ 2ನೇ ದಿನಕೆ

01:37 PM Aug 24, 2017 | |

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಎಲ್‌ಎ ಸರ್ವೀಸ್‌ ಪ್ರೊವೈಡಿಂಗ್‌ ಯೂನಿಯನ್‌ ವತಿಯಿಂದ ವಿಮಾನ ನಿಲ್ದಾಣದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಾಲೂಕಿನ ಕನ್ನಮಂಗಲ ಗೇಟಿನಲ್ಲಿ ಕಾರ್ಮಿಕರು ಎರಡನೇ ದಿನವೂ ಶಾಂತಿಯುತ
ಮುಷ್ಕರ ಮುಂದುವರಿಸಿದ್ದಾರೆ. ವಿವಿಧ ಬೇಡಿಕೆ: ಸಂಘವನ್ನು ಮಾನ್ಯತೆ ಮಾಡಬೇಕು. ಅಮಾನತಿನ ಹೆಸರಿನಲ್ಲಿ ಸಂಸ್ಥೆ ಹೊರಗೆ ಇರುವ ಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ಉಳಿದ ಎಲ್ಲಾ ಕಾರ್ಮಿಕರಿಗೆ ಎಂದಿನಂತೆ ಕೆಲಸ ನೀಡಬೇಕು.ಆಡಳಿತ ಮಂಡಳಿಯವರು ಏಕಪಕ್ಷೀಯವಾಗಿ ಕಡಿಮೆ ವೇತನ ಹೆಚ್ಚಿಸಿರುವುದನ್ನು ಹಿಂಪಡೆದು ಕಾರ್ಮಿಕ ಮುಖಂಡರ ಜೊತೆ ಚರ್ಚಿಸಿ ನ್ಯಾಯಾಯುತವಾದ ವೇತನ ಹೆಚ್ಚಿಸಬೇಕು. ಆಡಳಿತ ಮಂಡಳಿಯವರು ಸಂಘ ವಿರೋಧಿ ನೀತಿ ಬಿಡಬೇಕು. ಕಾರ್ಮಿಕರಿಗೆ ಎಲ್ಲಾ ರೀತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು. ಕೆಎಲ್‌ಎ ಸರ್ವೀಸ್‌ ಪ್ರೋ ಯೂನಿಯನ್‌ ಅಧ್ಯಕ್ಷ ಶಿವಕುಮಾರ್‌ ಮಾತನಾಡಿ, ಕಾರ್ಮಿಕರ ಹಿತಾಸಕ್ತಿ ಮತ್ತು ಭದ್ರತೆ ಜೊತೆಗೆ ಹಕ್ಕು ಪಡೆಯಲು ಕಳೆದ ಎರಡೂವರೆ ವರ್ಷದಿಂದ ಸಂಘ ಅಸ್ತಿತ್ವಕ್ಕೆ ತರಲಾಗಿದೆ. ಕಂಪನಿ ಮಾನ್ಯತೆ ಕೊಡುವುದಿಲ್ಲವೆಂದು ಹಠ ಹಿಡಿದಿದೆ. ಇಲ್ಲದಿದ್ದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು. ವಿನಾ ಕಾರಣ ತೊಂದರೆ: ಈಗಾಗಲೇ ಕಂಪನಿಯಿಂದ 22 ಜನರನ್ನು ತೆಗೆದು ಹಾಕಿದ್ದಾರೆ. 45 ಜನರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ. ಕಂಪನಿ ನೀಡುತ್ತಿರುವ ಕಡಿಮೆ ಸಂಬಳದಲ್ಲಿ ಜೀವನ ಸಾಗಿಸಲು ಕಷ್ಟಕರವಾಗುತ್ತಿದೆ. ಇತ್ತೀಚೆಗೆ ಬೆಲೆ ಏರಿಕೆ ಹೆಚ್ಚಾಗಿರುವುದರಿಂದ ಅವರು ನೀಡಿರುವ ಸಂಬಳ ಸಾಲುವುದಿಲ್ಲ. ಕನಿಷ್ಠ 18 ಸಾವಿರ ರೂ. ವೇತನ ನಿಗದಿಪಡಿಸಬೇಕು. ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಈಗಾಗಲೇ ಮೂರು ದಿನಗಳ ಶಾಂತಿಯುತ ಮುಷ್ಕರ ಹಮ್ಮಿಕೊಂಡಿದ್ದೇವೆ. ಇದುವರೆಗೂ ಕಂಪನಿ ಯಾವುದೇ ಅಧಿಕಾರಿಗಳು ಬಾರದೆ ಕಾರ್ಮಿಕರಿಗೆ ನಿರ್ಲಕ್ಷೀಸುತ್ತಿದ್ದಾರೆ. ಕಾರ್ಮಿಕರಿಗೆ ಹೆಚ್ಚಿನ ನ್ಯಾಯವಾಗುತ್ತಿದೆ. ಯಾವುದೇ ಕಾರ್ಮಿಕರು ತಮ್ಮ ಬೇಡಿಕೆಗಳು ಈಡೇರುವ ತನಕ ಕೆಲಸಕ್ಕೆ ಹೋಗುವುದಿಲ್ಲ ಎಂದು ಪಣತೊಟ್ಟಿದ್ದಾರೆ. ಕಾರ್ಮಿಕರು ತೀವ್ರವಾಗಿ ವಿರೋಧಿಸುವಾಗ ಪೊಲೀಸರು ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಿದರೂ ಆದರೆ, ಕಂಪನಿ ಪರ ನಿಂತು ಕಾರ್ಮಿಕರ ಮೇಲೆ ಲಾಠಿ ಪ್ರಹಾರ ನಡೆಸುತ್ತಿದೆ. ಎಲ್ಲಾ ಕಾರ್ಮಿಕರು ಒಗ್ಗಟ್ಟಿನಿಂದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು. ಮೊಕದ್ದಮೆ ಕೂಡಲೇ ವಾಪಸು ಪಡೆಯಿರಿ: ತಾಲೂಕು ಮಾನವ ಹಕ್ಕುಗಳ ಜಾಗೃತಿ ಸೇನೆ ಯುವ ಘಟಕದ ಅಧ್ಯಕ್ಷ ಬಿ.ಎಂ.ಭಾರ್ಗವ್‌ ಮಾತನಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ ಇಂಡಿಯಾ ಸ್ಯಾಟ್ಸ್‌ ಕಾರ್ಮಿಕರಿಗೆ ಅವರ ಬೇಡಿಕೆಗಳನ್ನು ಕೂಡಲೇ ಕಂಪನಿ ಈಡೇರಿಸಬೇಕು. ನಮ್ಮ ಸಂಘವು ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೇ ಸಂಸ್ಥೆ ವಂಚಿಸುತ್ತಿದೆ. ಕಾರ್ಮಿಕರ ಮೇಲೆ ಹಾಕಿರುವ ಮೊಕದ್ದಮೆ ಕೂಡಲೇ ವಾಪಸು ಪಡೆಯಬೇಕು.
ಕೆಲಸದಿಂದ ತೆಗೆದಿರುವವರನ್ನು ಕೂಡಲೇ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಮಾನವ ಹಕ್ಕುಗಳ ಜಾಗೃತಿ ಸೇನೆ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವಿ‌ನ್‌ ಕುಮಾರ್‌, ಗೌರವಾಧ್ಯಕ್ಷ ರಾಜೇಶ್‌, ತಾಲೂಕು ಅಧ್ಯಕ್ಷ ಮಿಥುನ್‌, ಗೌರವಾಧ್ಯಕ್ಷ ನರಸಿಂಹಮೂರ್ತಿ, ಕೆಎಲ್‌ಎ ಸರ್ವಿಸ್‌ ಪ್ರೊವೈಡಿಂಗ್‌ ಯೂನಿಯನ್‌ ಉಪಾಧ್ಯಕ್ಷ ಆನಂದ್‌, ಸಂಘಟನಾ ಕಾರ್ಯದರ್ಶಿ ಎಂ.ಎನ್‌.ಸತೀಶ್‌, ಮುರಳಿ ಶಶಿಕುಮಾರ್‌, ಕಾರ್ಯದರ್ಶಿ ಮೋಹನ್‌ ಕುಮಾರ್‌, ಖಜಾಂಚಿ ಸತೀಶ್‌, ಸಹಕಾರ್ಯದರ್ಶಿ ಪುಟ್ಟಪ್ಪ, ಶಿವಶಂಕರ್‌, ದೇವರಾಜ್‌ ಮತ್ತಿತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next