Advertisement

ಚಡಚಣ ಮಾದರಿ ಪಟ್ಟಣ ಮಾಡುವುದೇ ಗುರಿ

01:13 PM Sep 17, 2018 | |

ಚಡಚಣ: ಸರಕಾರದ ವಿವಿಧ ಯೋಜನೆಯಡಿ ಬಿಡುಗಡೆಯಾದ ವಿಶೇಷ ಅನುದಾನದಲ್ಲಿ ಅಭಿವೃದ್ಧಿ
ಕಾರ್ಯ ಕೈಗೊಳ್ಳುವ ಮೂಲಕ ಚಡಚಣ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣವನ್ನಾಗಿ ಪರಿವರ್ತಿಸುವುದು
ನನ್ನ ಗುರಿಯಾಗಿದೆ ಎಂದು ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ ಹೇಳಿದರು.

Advertisement

ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ನಿರ್ಮಿಸಲಾಗುವ ಪ್ರವಾಸಿ ಮಂದಿರಕ್ಕೆ ರವಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ, ಶುದ್ಧ ಕುಡಿಯುವ ನೀರು, ಕಾಂಕ್ರೀಟ್‌ ರಸ್ತೆ, ಬೀದಿ ದೀಪ ಅಳವಡಿಸುವುದು ಸೇರಿದಂತೆ ಪಟ್ಟಣಕ್ಕೆ ಬೇಕಾಗುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು. ಪಟ್ಟಣವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ಮಹಾಲಕ್ಷ್ಮೀ ಕೆರೆ ಹತ್ತಿರ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ, ಸಮೀಪದ ಟಾಕಳಿ ಗ್ರಾಮದ ಭೀಮಾ ನದಿಯಿಂದ ಪಟ್ಟಣದ ಕೆರೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 60 ಕೋಟಿ ರೂ., ಬೋರಿ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಅಗಲೀಕರಣಕ್ಕೆ 12 ಕೋಟಿ ರೂ. ಹಾಗೂ ವಿಶೇಷ ಪ್ಯಾಕೇಜ
ಅಡಿ 15 ಕೋಟಿ ರೂ. ಮಂಜೂರಾಗಿದೆ ಎಂದರು.

ಪಟ್ಟಣದ ಕಡುಬಡವರಿಗಾಗಿ 500 ಮನೆ ಮಂಜೂರಾಗಿವೆ. ಈ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರಕಾರ ಪಟ್ಟಣಕ್ಕೆ ಸರಕಾರಿ ಪ್ರೌಢಶಾಲೆ, ಪಿಯು ಹಾಗೂ ಡಿಗ್ರಿ ಕಾಲೇಜು ಮಂಜೂರು ಮಾಡಿದೆ. ಪಟ್ಟಣ ತಾಲೂಕಾಗಿ ಘೋಷಣೆಯಾಗಿದ್ದು, ಸಾರಿಗೆ ಡಿಪೋ, ಅಗ್ನಿಶಾಮಕ ಠಾಣೆ, ಮಿನಿ ವಿಧಾನನಸೌಧ ಸೇರಿದಂತೆ ಮತ್ತಿತರ ಕಚೇರಿಗಳಿಗೆ ಅಗತ್ಯವಿರುವ ಜಾಗೆಯನ್ನು ಪಪಂ ಹಸ್ತಾಂತರಿಸಿದರೆ ಶೀಘ್ರವಾಗಿ ಕಾಮಗಾರಿ ಕೈಗೊಳ್ಳಲಾಗುವುದು. 

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ವಿಶೇಷ ಮುತುವರ್ಜಿ ವಹಿಸಿ ಪಟ್ಟಣಕ್ಕೆ ಈ ಎಲ್ಲ ಕಾಮಗಾರಿಗಳನ್ನು ಮಂಜೂರು ಮಾಡಿದ್ದು ಪಪಂ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಸಹಕರಿಸುವಂತೆ ಕೋರಿದರು. ನಾನು ಯಾವುದೇ ಕಾರಣಕ್ಕೂ ಜೆಡಿಎಸ್‌ ಪಕ್ಷ ತೊರೆಯುವುದಿಲ್ಲ. ನಾನು ಪಕ್ಷಾತರ ಮಾಡುತ್ತಿದ್ದೇನೆ ಎಂಬುದು ಮಾಧ್ಯಮಗಳ ಸೃಷ್ಟಿಯಾಗಿದ್ದು, ಜನರ ಸೇವೆಗೆ ಅವಕಾಶ ಮಾಡಿಕೊಟ್ಟ ಜೆಡಿಎಸ್‌ ಪಕ್ಷಕ್ಕೆ ನಾನು ಎಂದಿಗೂ ದ್ರೋಹ ಬಗೆಯುವುದಿಲ್ಲ ಎಂದ ಅವರು, ಆಪರೇಶನ್‌ ಕಮಲ ಎಂಬುದು ಬಿಜೆಪಿ ಕಾಣುತ್ತಿರುವ ಹಗಲು ಕನಸು ಎಂದು ವ್ಯಂಗ್ಯವಾಡಿದರು.

ಈ ವೇಳೆ ಪಪಂ ಅಧ್ಯಕ್ಷ ಬಾಬುಗೌಡ ಪಾಟೀಲ, ಜಿಪಂ ಸದಸ್ಯ ಶಿವಶರಣ ಭೈರಗೊಂಡ, ಜೆಡಿಎಸ್‌ ತಾಲೂಕಾಧ್ಯಕ್ಷ ಸದಾಶಿವ ಜಿತ್ತಿ, ಮುಖಂಡರಾದ ಸಿಕಂದರ ಸಾವಳಸಂಗ, ಮುರ್ತುಜಸಾಬ ನದಾಫ್‌, ಹನುಮಂತ ಹೂನಳ್ಳಿ, ವೈ.
ಎಸ್‌. ಮಕಾನದಾರ, ಭೀಮಾಶಂಕರ ವಾಳಿಖೀಂಡಿ, ದಾನಮ್ಮಗೌಡತಿ ಪಾಟೀಲ, ರಾಜಶೇಖರ ಕೋಳಿ, ಚಂದು ಶಿಂಧೆ, ಪ್ರವೀಣ ಕಲ್ಯಾಣಶೆಟ್ಟಿ, ರಾಮ ಮಾಲಾಪುರ, ಕಲ್ಮೇಶ ವಾಘಮೋರೆ, ಸಿದ್ದು ಸೋಲಾಪುರ, ಲೋಕೊಪಯೋಗಿ ಇಲಾಖೆ ಅಧಿಕಾರಿಗಳಾದ ಆರ್‌.ಆರ್‌. ಕತ್ತಿ, ಪಿ.ಎಸ್‌. ಹೊಟ್ಟಿ, ಎಸ್‌.ಎಂ. ಪಾಟೀಲ, ಪಪಂ ಮುಖ್ಯಾಧಿಕಾರಿ ಶಿವಾನಂದ ಪೂಜಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next