Advertisement

ಶಶಿಕಲಾ ಹಿಂದಿರುಗುವುದು ಎಐಎಡಿಎಂಕೆ ಕಾರ್ಯಕರ್ತರಿಗೂ ಬೇಕಿಲ್ಲ

01:52 AM Feb 09, 2021 | Team Udayavani |

ಎಪ್ರಿಲ್‌-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ತಮಿಳುನಾಡಿನ ರಾಜಕೀಯ ಪಕ್ಷಗಳೆಲ್ಲ ಭರದಿಂದ ತಯಾರಿ ನಡೆಸಿರುವ ವೇಳೆಯಲ್ಲೇ ವಿ.ಕೆ. ಶಶಿಕಲಾ ಬಂಧನದಿಂದ ಬಿಡುಗಡೆಯಾಗಿದ್ದಾರೆ. ಫೆ.7ರಂದು ತಮಿಳುನಾಡನ್ನು ಪ್ರವೇಶಿಸಿದ್ದಾರೆ. ಶಶಿಕಲಾರ ಪ್ರವೇಶ ಚುನಾವಣೆಯ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು? ಶಶಿಕಲಾರ ಅನುಪಸ್ಥಿತಿಯಲ್ಲಿ ಭಿನ್ನವಾಗಿಯೇ ಬೆಳೆದುನಿಂತಿರುವ ಎಐಎಡಿಎಂಕೆ ಅವರ ಆಗಮನದ ವಿಚಾರವನ್ನು ಹೇಗೆ ನೋಡುತ್ತಿದೆ? ಈ ಬಗ್ಗೆ ರೆಡಿಫ್ ಜಾಲತಾಣಕ್ಕೆ ಎಐಎಡಿಎಂಕೆ ನಾಯಕ ಡಾ| ಜಯವರ್ಧನ್‌ ಜಯಕುಮಾರ್‌ ನೀಡಿರುವ ಸಂದರ್ಶನ ಇಲ್ಲಿದೆ…

Advertisement

– ಶಶಿಕಲಾರ ಆಗಮನ ನಿಮ್ಮ ಪಕ್ಷದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ?
ಶಶಿಕಲಾ ಮತ್ತು ಅವರ ಸೋದರ ಸಂಬಂಧಿ ಟಿಟಿವಿ ದಿನಕರನ್‌ ಅವ ರನ್ನು ಪಕ್ಷದಿಂದ ಹೊರಗೇ ಇಡಲು ಎಐಎಡಿಎಂಕೆ ನಿರ್ಧರಿಸಿಯಾಗಿದೆ. ಶಶಿಕಲಾ ಮತ್ತು ದಿನಕರನ್‌ರ ಹಸ್ತ ಕ್ಷೇಪವಿಲ್ಲದೇ ನಮ್ಮ ಪಕ್ಷ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸು ತ್ತಿದೆ. ಶಶಿಕಲಾ ಆಗಮನ ನಮ್ಮ ಪಕ್ಷದ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ. ಕಾರ್ಯಕರ್ತರಿಗೂ ಆಕೆ ಪಕ್ಷಕ್ಕೆ ಹಿಂದಿರುಗುವುದು ಬೇಕಿಲ್ಲ. ಶಶಿಕಲಾಗೂ ಎಐಎಡಿಎಂಕೆ ಗೂ ಯಾವ ಸಂಬಂಧವೂ ಇಲ್ಲ ಎಂದು ನಮ್ಮ ಮುಖ್ಯಮಂತ್ರಿಗಳೂ ಸ್ಪಷ್ಟವಾಗಿ ಹೇಳಿದ್ದಾರೆ. ಎಷ್ಟಿದ್ದರೂ ಶಶಿಕಲಾರದ್ದೇ ಸ್ವಂತ ಪಕ್ಷ ಅಮ್ಮಾ ಮಕ್ಕಳ ಮುನ್ನೇತ್ರ ಕಾಚಿ ಇದೆಯಲ್ಲ?

– 2019ರ ಲೋಕಸಭಾ ಚುನಾವಣೆ ಯಲ್ಲಿ ಡಿಎಂಕೆ ಪಕ್ಷ 39ರಲ್ಲಿ 38 ಸ್ಥಾನಗ ಳನ್ನು ಗೆದ್ದಿತ್ತು. ವಿಧಾನಸಭಾ ಚುನಾವಣೆ ಯಲ್ಲಿ ಪರಿಸ್ಥಿತಿ ಹಾಗೆಯೇ ಆದರೆ?
ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಆಭರಣಗಳ ಮೇಲಿನ ಸಾಲ ಮನ್ನಾ ಮಾಡುತ್ತೇವೆ, ಕೃಷಿ ಸಾಲಮನ್ನಾ ಮಾಡುತ್ತೇವೆ ಎಂಬ ಹುಸಿ ಭರವಸೆಗಳನ್ನು ನೀಡಿ ಗೆದ್ದಿತು. ಕೇವಲ 9 ತಿಂಗಳಲ್ಲೇ ಜನರಿಗೆ ಡಿಎಂಕೆ ಸುಳ್ಳು ಭರವಸೆ ನೀಡಿತ್ತು ಎನ್ನುವುದು ಅರಿವಾಯಿತು. ಲೋಕಸಭಾ ಚುನಾವಣೆಯಾಗಿ 8 ತಿಂಗಳ ಅನಂತರ ನಾನು ಸ್ಥಳೀಯ ಸಂಸ್ಥೆ ಚುನಾವ ಣೆಯ ನಿಮಿತ್ತ ನಮ್ಮಕ್ಕಲ್‌ ಜಿಲ್ಲೆಗೆ ಹೋಗಿದ್ದೆ. ನಾನು ಅಲ್ಲಿನ ಚುನಾವಣ ನೇತೃತ್ವ ವಹಿಸಿದ್ದೆ. ನಾವು ಎಲ್ಲ ಸ್ಥಾನಗಳನ್ನೂ ಗೆದ್ದೆವು. ಇನ್ನು ನನ್ಗುನೇರಿ ಮತ್ತು ವಿಕ್ರಾವಂಡಿಯ ಉಪ ಚುನಾವಣೆಗಳಲ್ಲೂ ಜನರು ಎಐಎಡಿಎಂಕೆಯನ್ನು ಗೆಲ್ಲಿಸಿ ದರು. ವಿಧಾನಸಭಾ ಚುನಾವಣೆಯಲ್ಲೂ ನಮ್ಮದೇ ಗೆಲುವಾಗಲಿದೆ.

– ಬಿಜೆಪಿ ಜತೆಗಿನ ನಿಮ್ಮ ಮೈತ್ರಿಯಿಂದ ಲಾಭವಾಗಬಹುದು ಎನಿಸುತ್ತಿದೆಯೇ?
ಒಂದು ಮೈತ್ರಿಯಾಗಿ ಬಿಜೆಪಿ/ಎಐಡಿಎಂಕೆ ಪಕ್ಷಗಳು ಕಾವೇರಿ-ಗುಂಡಾರ್‌ ಮತ್ತು ಇತರೆ ಅಂತಾರಾಜ್ಯ ಯೋಜನೆಗಳನ್ನು ಬಯಸುತ್ತವೆ. ಇನ್ನು ಇದು ತಮಿಳುನಾಡಿಗೆ ಕೇಂದ್ರದ ಯೋಜನೆಗಳನ್ನು ತರಲು ಇರುವಂಥ ಜನಕೇಂದ್ರಿತ ಮೈತ್ರಿಯಿದು.

– ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ಎಐಎಡಿಎಂಕೆ ಅಲ್ಪಸಂಖ್ಯಾಕರ ಮತಗಳನ್ನು ಕಳೆದುಕೊಳ್ಳಲಿದೆ ಎಂದು ಅನೇಕರು ಹೇಳುತ್ತಾರೆ. ಏನಂತೀರಿ?
ನಮ್ಮ ಪಕ್ಷವು ಅಲ್ಪಸಂಖ್ಯಾಕರಿಗಾಗಿ ಅನೇಕ ಜನಕಲ್ಯಾಣ ಯೋಜನೆಗಳನ್ನು ತಂದಿದೆ. ನಮ್ಮ ಮಿತ್ರ ಪಕ್ಷ ಯಾವುದೇ ಇರಲಿ, ನಾವು ಯಾವಾಗಲೂ ಅಲ್ಪ ಸಂಖ್ಯಾತರ ಹಿತಾಸಕ್ತಿ ಹಾಗೂ ಹಕ್ಕುಗಳನ್ನು ಕಾಯುತ್ತಾ ಬಂದಿದ್ದೇವೆ. ಅಲ್ಪಸಂಖ್ಯಾಕರನ್ನು ಓಟ್‌ಬ್ಯಾಂಕ್‌ ಎಂದು ನೋಡುವುದು ಡಿಎಂಕೆ ಹೊರತು ನಾವಲ್ಲ.

Advertisement

– ಈ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಪಾತ್ರ ಎಷ್ಟು ಮಹತ್ವವಾದದ್ದು ಎಂದು ಭಾವಿಸುತ್ತೀರಿ?
ಮಿತ್ರ ಪಕ್ಷಗಳ ವಿಚಾರವನ್ನು ನಮ್ಮ ನಾಯಕರೇ ನಿರ್ಧರಿಸುತ್ತಾರೆ. ಡಿಎಂಕೆ ಅಧಿಕಾರಕ್ಕೆ ಬರದಂತೆ ನಾವು ಖಾತ್ರಿಪಡಿಸುತ್ತೇವೆ. ಅವರದ್ದು ಕುಟುಂಬ ಕೇಂದ್ರಿತ ಪಕ್ಷ. ಮೊದಲು ಅವರು ಫಿಲಂ ಇಂಡಸ್ಟ್ರಿಯನ್ನು ಆಳುತ್ತಿದ್ದರು, ಅನಂತರ ಅಧಿಕಾರಾವಧಿಯಲ್ಲಿ ಭೂ ಕಳ್ಳತನ ಆರಂಭಿಸಿದರು. ನಾವು ಜನರ ಭೂಮಿಯನ್ನು ವಾಪಸ್‌ ಕೊಡಿಸಿದ್ದೇವೆ.

– ತಮಿಳುನಾಡು ಚುನಾವಣೆಯಲ್ಲಿ ಒಂದೆಡೆ ಎಂ.ಕೆ. ಸ್ಟಾಲಿನ್‌ ಹಾಗೂ ಇನ್ನೊಂದೆಡೆ ಎಡಪ್ಪಾಡಿ ಪಳನಿಸ್ವಾಮಿ ತಮ್ಮ ಪಕ್ಷಗಳನ್ನು ಮುನ್ನಡೆಸುತ್ತಿದ್ದಾರೆ. ಇವರ ವರ್ಚಸ್ಸು ಚುನಾವಣೆಯಲ್ಲಿ ಯಾವ ರೀತಿ ಪ್ರಭಾವ ಬೀರಬಹುದು?
ನಮ್ಮ ಗುರುಗಳೆಂದರೆ ತಲೈವಾರ್‌ ಎಂಜಿಆರ್‌ ಮತ್ತು ತಲೈವಿ ಜಯಲಲಿತಾ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಸಾಗುತ್ತಿರುವ ಪಳನಿಸ್ವಾಮಿಯವರು ಆಡಳಿತವನ್ನು ಅಭಿ ವೃದ್ಧಿ ಯೋಜನೆಗಳತ್ತಲೇ ಕೇಂದ್ರೀಕರಿಸಿದ್ದಾರೆ. ಎಂ.ಕೆ. ಸ್ಟಾಲಿನ್‌ ಏನು ಮಾಡಿದ್ದಾರೆ? 2001-2006ರ ವರೆಗೆ ಚೆನ್ನೈನ ಮೇಯರ್‌ ಆಗಿದ್ದರು ಅವರು. 2002 ನೆರೆ ಸಮಯದಲ್ಲೂ ಅವರು ಕೆಲಸ ಮಾಡಲಿಲ್ಲ. ಮುಂದೆ ಅವರು ಉಪಮುಖ್ಯಮಂತ್ರಿ ಹಾಗೂ ಸಚಿವರೂ ಆದರು. ರಾಜ್ಯಕ್ಕೆ ಲಾಭವಾಗುವುದಿರಲಿ, ವಿದ್ಯುತ್‌ ಕೊರತೆ ಹಾಗೂ ಉದ್ಯಮ ವಲಯಕ್ಕೆ ಹಾನಿಯೇ ಹೆಚ್ಚಾಗಿ ಆಯಿತು.

ಎಐಎಡಿಎಂಕೆ ವರ್ಸಸ್‌ ಶಶಿಕಲಾ?
ಒಂದೆಡೆ ಎಐಎಡಿಎಂಕೆ ಪಕ್ಷ ತಮಗೂ ಶಶಿಕಲಾಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದರೆ ಇನ್ನೊಂದೆಡೆ, ಅಮ್ಮಾ ಮಕ್ಕಳ ಮುನ್ನೇತ್ರ ಕಾಚ್ಚಿ ನಾಯಕ ಟಿಟಿವಿ ದಿನಕರನ್‌ “”ವಿ.ಕೆ. ಶಶಿಕಲಾ ಎಐಎಡಿಎಂಕೆಯನ್ನು ಮತ್ತೆ ಹಿಂಪಡೆಯಲು ಕಾನೂನು ಸಮರ ಸಾರಲಿದ್ದಾರೆ, ಮುಂದಿನ ಎಐಎಡಿಎಂಕೆ ಸರಕಾರವನ್ನು ಅವರೇ ರಚಿಸುತ್ತಾರೆ” ಎನ್ನುತ್ತಿದ್ದಾರೆ. ಶಶಿಕಲಾ ಇನ್ನೂ ಆರು ವರ್ಷಗಳವರೆಗೆ ಚುನಾವಣೆಯನ್ನು ಎದುರಿಸು ವಂತಿಲ್ಲ. ಹೀಗಾಗಿ ಅವರು ತಮ್ಮ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಭಯವಂತೂ ಪಳನಿಸ್ವಾಮಿಯವರಿಗೆ ಇಲ್ಲ. ಆದರೆ ಶಶಿಕಲಾಗೆ ನಿಷ್ಠವಾಗಿರುವ ಅನೇಕ ನಾಯಕರು ಪಳನಿಸ್ವಾಮಿಯವರ ಕ್ಯಾಂಪ್‌ನಲ್ಲಿದ್ದಾರೆ. ಇವರೆಲ್ಲರ ಬೆಳವಣಿಗೆಯಲ್ಲೂ ಶಶಿಕಲಾ ಪಾತ್ರ ಬಹಳ ಇದೆ ಎನ್ನಲಾಗುತ್ತದೆ. ಖುದ್ದು ಪಳನಿಸ್ವಾಮಿಯವರನ್ನೂ ನಾಮನಿರ್ದೇಶನ ಮಾಡಿದ್ದೂ ಶಶಿಕಲಾ. ತಮ್ಮ ಕ್ಯಾಂಪ್‌ನಲ್ಲಿರುವವರ ಮೇಲೆ ಶಶಿಕಲಾ ಪ್ರಭಾವ ಬೀರಬಹುದೇ ಎನ್ನುವ ಬೇಗುದಿಯಂತೂ ಪಳನಿಯವರಿಗೆ ಇದೆ ಎನ್ನಲಾಗುತ್ತದೆ. ಆದರೆ ಮೂರೂವರೆ ವರ್ಷಗಳ ಆಡಳಿತದಲ್ಲಿ ಪಳನಿಸ್ವಾಮಿಯವರ ಕುರಿತೇ ಉಳಿದ ನಾಯಕರಿಗೆಲ್ಲ ಸ್ವಾಮಿ ನಿಷ್ಠೆ ಬೆಳೆದಿದೆ ಎನ್ನಲಾಗುತ್ತದೆ. ಶಶಿಕಲಾ ತಮಿಳುನಾಡಿಗೆ ಹಿಂದಿರುಗಿ ರುವುದರಿಂದ ಪಳನಿಸ್ವಾಮಿ ತಾತ್ಕಾಲಿಕವಾಗಿ ಸ್ವಲ್ಪ ಆತಂಕ ಗೊಂಡಿದ್ದಾರಷ್ಟೇ ಹೊರತು, ಪಕ್ಷದಲ್ಲಿ ಈಗ ಅವರೇ ನಂಬರ್‌ ಒನ್‌ ವ್ಯಕ್ತಿಯಾಗಿ ಉಳಿಯಲಿದ್ದಾರೆ, ಚುನಾವಣೆಯ ಮೇಲೂ ಈ ವಿದ್ಯಮಾನ ಪರಿಣಾಮ ಬೀರದು ಎನ್ನುತ್ತಾರೆ ಪರಿಣತರು. ಆದರೆ ಇತ್ತೀಚೆಗಷ್ಟೇ ಈ ಕುರಿತು ಟ್ವೀಟ್‌ ಮಾಡಿದ್ದ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ, “”ಶಶಿಕಲಾ ಇಲ್ಲದೇ ತಮಿಳುನಾಡಿನಲ್ಲಿ ರಾಜಕೀಯ ನಡೆಯುವುದು ಕಷ್ಟದ ಕೆಲಸ. ಆಕೆಗೆ ಅನುಭವ ಮತ್ತು ಪ್ರತಿಭೆ ಇದೆ. ಶಶಿಕಲಾಗೆ ಆಕೆಯ ಸಮುದಾಯದ ಬೆಂಬಲವಿದೆ” ಎಂದಿದ್ದರು.

ಶಶಿಕಲಾ ಹಿಂದುಳಿದ ಥೇವರ್‌ ಸಮುದಾಯಕ್ಕೆ ಸೇರಿದವರು, ಇನ್ನೊಂದೆಡೆ ಪಳನಿಸ್ವಾಮಿ, ಗೌಂಡರ್‌ ಸಮುದಾಯದವರು. ಸಾಂಪ್ರದಾಯಿಕವಾಗಿ ಥೇವರ್‌ ಸಮುದಾಯವೇ ಎಐಎಡಿಂಕೆಯ ಬಹುದೊಡ್ಡ ಮತದಾರ ವರ್ಗವಾಗಿತ್ತು. ಆದರೆ ಕಳೆದ ಮೂರೂವರೆ ವರ್ಷಗಳಲ್ಲಿ ಎಐಎಡಿಎಂಕೆಯಲ್ಲಿ ಗೌಂಡರ್‌ ಮತವರ್ಗದ ಬೆಂಬಲ ಅಧಿಕವಾಗಿದೆ. ಹೀಗಾಗಿ, ಪಳನಿಸ್ವಾಮಿ ಧೈರ್ಯದಲ್ಲೇ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next