Advertisement

ಆರ್ಥಿಕ ವಂಚಕರ ಆಸ್ತಿ ಸ್ವಾಧೀನಕ್ಕೆ ಅಧ್ಯಾದೇಶ

06:00 AM Apr 22, 2018 | Team Udayavani |

ಹೊಸದಿಲ್ಲಿ: ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್‌ ಮೋದಿ, ವಿಜಯ ಮಲ್ಯರಂಥವರಿಗೆ ಸೇರಿದ ಆಸ್ತಿಯನ್ನು ಸರಕಾರವು ಸುಲಭವಾಗಿ ಸ್ವಾಧೀನಪಡಿಸಿಕೊಳ್ಳಲು ಅನುಕೂಲ ಕಲ್ಪಿಸುವ “ದೇಶಬಿಟ್ಟು ಪರಾರಿಯಾದ ಆರ್ಥಿಕ ಅಪರಾಧಿಗಳ ವಿರುದ್ಧದ ಅಧ್ಯಾದೇಶ 2018’ಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

Advertisement

ಈ ಮಸೂದೆಯು ಲೋಕಸಭೆಯಲ್ಲಿ ಮಾ. 12ರಂದೇ ಮಂಡನೆಯಾಗಿತ್ತಾದರೂ ವಿಪಕ್ಷಗಳು ಹಾಗೂ ಆಡಳಿತ ಪಕ್ಷಗಳ ಜಟಾಪಟಿಯಿಂದಾಗಿ ಕಲಾಪ ನಡೆಯದ ಕಾರಣ ಮಸೂದೆ ಚರ್ಚೆಗೊಳಪಟ್ಟಿರಲಿಲ್ಲ. ಈಗ ಈ ಬಗ್ಗೆ ಅಧ್ಯಾದೇಶ ತರಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಪ್ರಸ್ತಾವನೆಗೆ ಸಂಪುಟದ ಒಪ್ಪಿಗೆ ಸಿಕ್ಕಿದ ಬಳಿಕ ಅದನ್ನು ರಾಷ್ಟ್ರಪತಿ ಒಪ್ಪಿಗೆಗಾಗಿ ರವಾನಿಸಲಾಗಿದೆ. 

ಯಾರಿಗೆ ಇದು ಅನ್ವಯ?: ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆದು ಈ ಅಧ್ಯಾದೇಶ ಜಾರಿಯಾದಲ್ಲಿ  ಇದು ಭಾರತದಲ್ಲಿ ಆರ್ಥಿಕ ಅವ್ಯವಹಾರ ಮಾಡಿ ವಿದೇಶದಲ್ಲಿ ನೆಲೆಸಿ, ಭಾರತಕ್ಕೆ ಬರಲು ಹಿಂದೇಟು ಹಾಕುವವರಿಗೆ ಅನ್ವಯವಾಗುತ್ತದೆ. ಇದಲ್ಲದೆ ವಿತ್ತೀಯ ಅಪರಾಧಗಳ ವಿಚಾರದಲ್ಲಿ ಬಂಧನದ ಆದೇಶ ಎದುರಿಸುತ್ತಿರುವವರಿಗೆ, ಬ್ಯಾಂಕುಗಳಿಂದ ಸಾಲದ ರೂಪದಲ್ಲಿ 100 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿದವರಿಗೂ ಇದು ಅನ್ವಯವಾಗುತ್ತದೆ.

ಇದರಿಂದೇನಾಗುತ್ತೆ?: ಈ ಅಧ್ಯಾದೇಶದಡಿ, ವಿದೇಶದಲ್ಲಿರುವ ಆರೋಪಿಗಳ ಆರೋಪ ಸಾಬೀತಾಗುವ ಮುನ್ನವೇ ಅವರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ವಿಶೇಷ ಅಧಿಕಾರವನ್ನು ಸರಕಾರ ಹೊಂದಲಿದೆ. ಅಲ್ಲದೆ, ಅವರ ಸಾಲಗಾರರಿಗೆ ಆಸ್ತಿಯನ್ನು ಮಾರಿ ಸಾಲ ತೀರಿಸುವ ಬಾಧ್ಯತೆ ಸರಕಾರಕ್ಕೆ ಇರುವುದಿಲ್ಲ.

ಅನುಕೂಲವೇನು?: ದೇಶ ಬಿಟ್ಟು ಓಡಿಹೋಗಿರುವವರ ಆಸ್ತಿ ವಶಪಡಿಸಿ ಕೊಳ್ಳುವುದರಿಂದ ಅನಿವಾರ್ಯವಾಗಿ ಅವರು ದೇಶಕ್ಕೆ ವಾಪಸ್‌ ಬರಬೇಕಾಗ‌ಬಹುದು. ಬ್ಯಾಂಕ್‌ಗಳು, ಆರ್ಥಿಕ ಸಂಸ್ಥೆಗಳು ಸಾಲ ವಸೂ ಲಾತಿ ವಿಚಾರದಲ್ಲಿ ಪ್ರಗತಿ ಸಾಧಿಸಬಹುದು.

Advertisement

ಪರಿಣಾಮವೇನು?: ದೇಶಬಿಟ್ಟು ಹೋದವರ ಪತ್ತೆಗಾಗಿಯೇ ವಿಶೇಷ ವೇದಿಕೆ ನಿರ್ಮಾಣ. ತಪ್ಪಿತಸ್ಥರ ವಿರುದ್ಧ ತನಿಖೆ ಪೂರ್ಣಗೊಳಿಸಿ, ಇಂಥವರು ಎಲ್ಲೇ ಇದ್ದರೂ ಇಲ್ಲಿಗೆ ಕರೆತಂದು ನ್ಯಾಯಾಲಯದ ಮುಂದೆ ನಿಲ್ಲಿಸುವುದು ಸುಲಭವಾಗುತ್ತದೆ.

ಅಧ್ಯಾದೇಶದ  ಜಾರಿ ಹೇಗೆ?: ಸಾಲ ಮಾಡಿ ತಪ್ಪಿಸಿಕೊಂಡು ಹೋದವನು ವಾಪಸ್‌ ದೇಶಕ್ಕೆ ಬಾರದೇ ಹೋದರೆ ಅಂಥವನನ್ನು 
ದೇಶಭ್ರಷ್ಟ ಆರ್ಥಿಕ ವಂಚಕ ಎಂದು ಕರೆಯಲು ಕೋರ್ಟ್‌ಗೆ ಅನುವು ಮಾಡಿಕೊಡಲಾಗುತ್ತದೆ.

ಇತರ ಅಂಶಗಳು
1. ಸಾಲ ಮಾಡಿ ಪರಾರಿಯಾದವನಿಗೆ ದೇಶಭ್ರಷ್ಟ ಆರ್ಥಿಕ ವಂಚಕ ಎಂದು ಕರೆಯುವುದು
2. ಪರಾರಿಯಾದವನ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವುದು, ಅಪರಾಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸುವುದು
3. ವ್ಯಕ್ತಿಯೊಬ್ಬನಿಗೆ ದೇಶಭ್ರಷ್ಟ ಆರ್ಥಿಕ ವಂಚಕ ಕೇಸು ಎದುರಿಸಬೇಕಾದೀತು ಎಂಬ ನೋಟಿಸ್‌ ನೀಡುವುದು
4. ಅಪರಾಧ ಪ್ರಕ್ರಿಯೆ ವೇಳೆಯಲ್ಲೇ ವಂಚಕನ ಆಸ್ತಿ ವಶಪಡಿಸಿಕೊಳ್ಳುವುದು
5. ದೇಶಭ್ರಷ್ಟ ಆರ್ಥಿಕ ವಂಚಕ ತನ್ನ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣ
6. ಜಪ್ತಿ ಮಾಡಿಕೊಂಡ ಆಸ್ತಿಯ ವಿಲೇವಾರಿಗಾಗಿ ಆಡಳಿತಾಧಿಕಾರಿಯ ನೇಮಕ ಮಾಡುವುದು.

Advertisement

Udayavani is now on Telegram. Click here to join our channel and stay updated with the latest news.

Next