Advertisement

GOAT; ಗೇಟ್‌ ತೆರೆದ ಬೆಂಗಳೂರು; ಹೆಚ್ಚು ಶೋ, ದುಬಾರಿ ಟಿಕೆಟ್‌, ಕನ್ನಡ ಚಿತ್ರಗಳ ಕಡೆಗಣನೆ

10:57 AM Sep 05, 2024 | Team Udayavani |

ತಮಿಳಿನ ದಳಪತಿ ವಿಜಯ್‌ ನಟನೆಯ “ದ ಗ್ರೆಟೆಸ್ಟ್‌ ಆಫ್ ಆಲ್‌ ಟೈಮ್‌’ (GOAT) ಸಿನಿಮಾ ಇಂದು ದೇಶಾದ್ಯಂತ ತೆರೆಕಾಣುತ್ತಿದೆ. ಇದು ತಮಿಳಿನ ಸಿನಿಮಾವಾದರೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರದರ್ಶನಗಳು ಮೀಸಲಾಗಿವೆ. ಈ ಮೂಲಕ ರಾಜಧಾನಿಯಲ್ಲಿರುವ ಮಲ್ಟಿಪ್ಲೆಕ್ಸ್‌ಗಳು ಮತ್ತೆ ಅನ್ಯಭಾಷೆಯ ಚಿತ್ರಗಳಿಗೆ ಮಣೆ ಹಾಕುವ ಧೋರಣೆಯನ್ನು ಎತ್ತಿ ಹಿಡಿದಿವೆ. ಚೆನ್ನೈ, ಹೈದರಾಬಾದ್‌ ಗೆ ಹೋಲಿಸಿದರೆ, ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರದರ್ಶನಗಳು ಮೀಸಲಾಗಿರುವುದಲ್ಲದೇ, ಟಿಕೆಟ್‌ ದರವೂ ದುಪ್ಪಟ್ಟಾಗಿದೆ. ಈ ಮೂಲಕ ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಇದೊಂದು ಹಿನ್ನಡೆಯಾದಂತಾಗಿದೆ.

Advertisement

ಬೆಂಗಳೂರಿನಲ್ಲೇ ಸಾವಿರ ಶೋಗಳು

ಮೂಲ ತಮಿಳಿನ ಗೋಟ್‌ ಚಿತ್ರ ತೆಲಗು, ಹಿಂದಿ ಭಾಷೆಗಳಿಗೆ ಡಬ್‌ ಆಗಿ ತೆರೆ ಕಾಣುತ್ತಿದೆ. ಚಿತ್ರದ ಬಿಡುಗಡೆ ಮುನ್ನವೇ ಮುಂಗಡ ಬುಕ್ಕಿಂಗ್‌ ಸಹ ತೆರೆಯಲಾಗಿತ್ತು. ಬುಕ್‌ ಮೈ ಶೋನ ಅಂಕಿ ಅಂಶಗಳ ಪ್ರಕಾರ ಚಿತ್ರದ ಬಿಡುಗಡೆಯ ಮೊದಲ ದಿನ ಬೆಂಗಳೂರಿನಲ್ಲಿ 1108 ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಜತೆಗೆ ತೆಲುಗು ಅವತರಣಿಕೆಯ 74 ಶೋಗಳನ್ನು ಮಲ್ಟಿಪ್ಲೆಕ್ಸ್‌ಗಳು ಮೀಸಲಿಟ್ಟಿವೆ. ತಮಿಳಿನ ಗೋಟ್‌ ಸಿನಿಮಾ ಚೆನ್ನೈನಲ್ಲಿ 800 ಪ್ರದರ್ಶನಗಳನ್ನು ಮಾತ್ರ ಕಾಣುತ್ತಿದ್ದು, ಇದಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ 300 ಶೋಗಳು ಹೆಚ್ಚಾಗಿವೆ.

 

Advertisement

ಇನ್ನೂ ಹೈದರಾಬಾದ್‌ನಲ್ಲಿ ಬೆಂಗಳೂರಿನ ಅರ್ಧದಷ್ಟೂ ಇಲ್ಲ. ತಮಿಳು ಹಾಗೂ ತೆಲುಗು ಎರಡೂ ಸೇರಿ ಅಲ್ಲಿ ಕೇವಲ 400 ಪ್ರದರ್ಶನಗಳು ಮಾತ್ರ ಲಭ್ಯವಿವೆ. ಚೆನ್ನೈನಲ್ಲಿ ಗೋಟ್‌ ಸಿನಿಮಾದ ಯಾವುದೇ ವಿಶೇಷ ಹಾಗೂ ನಸುಕಿನ ಪ್ರದರ್ಶನಗಳನ್ನು ಹೊಂದಿಲ್ಲ. ಆದರೆ, ಬೆಂಗಳೂರಿನಲ್ಲಿ ಮಾತ್ರ ಕೆಲವೆಡೆ ನಸುಕಿನ 4 ಗಂಟೆ, ಹಲವು ಕಡೆ ಬೆಳಗ್ಗೆ 6 ಗಂಟೆ ಶೋ ನಡೆಸಲಾಗುತ್ತಿದೆ.

ಕನ್ನಡ ಸಿನಿಮಾ ಕಡೆಗಣನೆ

ಮೊದಲಿನಿಂದಲೂ ಕನ್ನಡಕ್ಕೆ ಹೋಲಿಸಿದರೆ ಅನ್ಯ ಭಾಷೆಗಳತ್ತ ಮಲ್ಟಿಪ್ಲೆಕ್ಸ್‌ಗಳ ಒಲವು ಹೆಚ್ಚು. ಈಗ ಮತ್ತೆ ಮುಂದುವರೆದಿದೆ. ಸದ್ಯ ಕನ್ನಡದ ಒಂದಿಷ್ಟು ಚಿತ್ರಗಳು ಮಲ್ಟಿಪ್ಲೆಕ್ಸ್‌ಗಳಲ್ಲಿ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದ್ದರೂ, ಅವುಗಳ ಶೋ ಸಂಖ್ಯೆಯನ್ನು ಇಳಿಸಿ, ಅಲ್ಲಿಗೆ ಗೋಟ್‌ ಸಿನಿಮಾ ಪ್ರದರ್ಶಿಸುತ್ತಿವೆ. ಭೀಮ, ಕೃಷ್ಣಂ ಪ್ರಣಯ ಸಖಿ, ಲಾಫಿಂಗ್‌ ಬುದ್ಧ, ಪೆಪೆ ಹೀಗೆ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಚಿತ್ರಗಳನ್ನೂ ತೆಗೆದು ಪರಭಾಷೆಗಳಿಗೆ ಹೆಚ್ಚಿನ ಪ್ರದರ್ಶನಗಳನ್ನು ಒದಗಿಸುತ್ತಿವೆ ಮಲ್ಟಿಪ್ಲೆಕ್ಸ್‌ಗಳು.

ದುಬಾರಿ ಟಿಕೆಟ್‌ ಬೆಲೆ

ಇನ್ನು ಟಿಕೆಟ್‌ ದರ ಹೋಲಿಸಿದರೆ ಚೆನ್ನೈಗಿಂತ ಬೆಂಗಳೂರಿನಲ್ಲೇ ಚಿತ್ರದ ಬಹು ದುಬಾರಿಯಾಗಿದೆ. ಚೆನ್ನೈನಲ್ಲಿ ಚಿತ್ರದ ಕನಿಷ್ಟ ಟಿಕೆಟ್‌ ದರ ಕೇವಲ 60 ರೂ. ಮಾತ್ರ. ಆದರೆ, ಬೆಂಗಳೂರಿನಲ್ಲಿ ಕನಿಷ್ಟ ದರ 200-250 ರೂ. ಇದೆ. ಇನ್ನು ಐಮ್ಯಾಕ್ಸ್‌ನಲ್ಲಿ ಆರಂಭದ ಬೆಲೆಯೇ ಬರೊಬ್ಬರಿ 900 ರೂ. ಹಾಗೂ ಗರಿಷ್ಠ 1600 ರೂ. ವರೆಗೂ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಈಗಷ್ಟೇ ಚೇತರಿಸಿ ಕೊಳ್ಳುತ್ತಿರುವ ಕನ್ನಡ ಸಿನಿರಂಗದ ಮೇಲೆ ಪರಭಾಷೆಯ ಚಿತ್ರಗಳು ಮತ್ತೆ ಸವಾರಿ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next