Advertisement
“ಕಳೆದ ವರ್ಷ ನಾನು ಮತ್ತು ಗಂಡ ಬೆಂಗಳೂರಿನಿಂದ ಹೊರಟು ಭೂತಾನ್, ಸಿಕ್ಕಿಂ, ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರದ ಕಡೆ 45 ದಿನಗಳ ಬೈಕ್ ಟ್ರಿಪ್ ಮಾಡಿದ್ವಿ. ಸಾಮಾನ್ಯವಾಗಿ ಆ ರಾಜ್ಯಗಳ ಬಗ್ಗೆ ಜನರಲ್ಲಿ ಒಂದು ಅನುಮಾನ ಇದೆ. ಅಲ್ಲಿ ಜನ ಸರಿ ಇಲ್ಲ ಅಂತೆ, ಕಳ್ಳರು ಜಾಸ್ತಿ, ಪ್ರವಾಸಕ್ಕೆ ಆ ಸ್ಥಳಗಳು ಸೇಫ್ ಅಲ್ಲ ಅಂತೆಲ್ಲಾ ಹೇಳ್ತಾರೆ. ಆದರೆ, ವಾಸ್ತವ ಹಾಗಿಲ್ಲ ಅಂತ ಆ ಜರ್ನಿಯಲ್ಲಿ ಗೊತ್ತಾಯ್ತು. ನಮಗೆ ಸಿಕ್ಕಿದವರೆಲ್ಲ ಒಳ್ಳೆಯವರೇ. ಅಗತ್ಯ ಬಿದ್ದಾಗ ಸಹಾಯವನ್ನೂ ಮಾಡಿದರು. ಟ್ರಿಪ್ ಮುಗಿಸಿ ಬಂದ ಮೇಲೂ ತುಂಬಾ ಜನ, “ಅಲ್ಲಿಗ್ಯಾಕೆ ಹೋಗಿದ್ರಿ? ಅಲ್ಲೆಲ್ಲಾ ಸೇಫ್ ಇರಲ್ಲ ಅಲ್ವ?’ ಅಂತ ಕೇಳಿದರು. ಆಗ ನನಗೆ, ಜನರ ಈ ಕಲ್ಪನೆಯನ್ನು ಸುಳ್ಳು ಮಾಡಬೇಕು ಅನ್ನಿಸಿತು. ಒಬ್ಬರೇ ಓಡಾಡೋದು, ಪ್ರವಾಸ ಹೋಗೋದು ಕಷ್ಟ ಹಾಗೂ ಅಪಾಯಕರ ಅಲ್ಲ ಅನ್ನೋದನ್ನು ಸಾಧಿಸಿ ತೋರಿಸೋಕೆ ನಿರ್ಧರಿಸಿದೆವು.
ಸೆ.3ರಂದು ಬೆಳಗ್ಗೆ 3.30ಕ್ಕೆ ಕನ್ಯಾಕುಮಾರಿಯಿಂದ ಬೈಕ್‌ನಲ್ಲಿ ಪ್ರಯಾಣ ಆರಂಭಿಸಿದೆವು. ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ದೆಹಲಿ, ಹರಿಯಾಣ, ಚಂಡೀಘರ್, ಪಂಜಾಬ್, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರ್ ಹೀಗೆ ಒಟ್ಟು 13 ರಾಜ್ಯಗಳನ್ನು 5 ದಿನಗಳಲ್ಲಿ ಹಾದು ಹೋಗಿದ್ದೇವೆ. ನಾವಿಬ್ರೂ ದಕ್ಷಿಣ ಭಾರತೀಯರಾಗಿದ್ರಿಂದ ಅನ್ನ ಬಿಟ್ಟು ಊಟ ಮಾಡಿದವರಲ್ಲ. ಹೈದರಾಬಾದ್‌ವರೆಗೂ ಅನ್ನ ಸಿಗುತ್ತೆ. ಮುಂದೆ ಕಷ್ಟ ಅಂತ ಗೊತ್ತಿತ್ತು. ದಾರಿ ಬದಿಯ ಡಾಬಾಗಳಲ್ಲಿ, ಹೋಟೆಲ್‌ಗಳಲ್ಲಿ ರೋಟಿ ಮಾತ್ರ ಸಿಗೋದು. ನಾವೇನು ಮಾಡಿದ್ವಿ ಅಂದ್ರೆ, ಟ್ರಿಪ್‌ಗ್ೂ ಮುಂಚಿನ 2 ತಿಂಗಳು ದಿನಾ ಮಧ್ಯಾಹ್ನ 2 ರೋಟಿ ಮತ್ತು ದಾಲ್ ತಿನ್ನೋಕೆ ಶುರು ಮಾಡಿದ್ವಿ. ಹಾಗೆ ಮಾಡಿ ಮಾಡಿ ನಮ್ಮ ದೇಹ ಮಧ್ಯಾಹ್ನದ ರೋಟಿಗೆ ಅಡ್ಜಸ್ಟ್ ಆಗಿಬಿಡು¤. ರಾತ್ರಿ ಹೋಟೆಲ್‌ನಲ್ಲಿ ಉಳಿದುಕೊಳ್ತಾ ಇದ್ದಿದ್ದರಿಂದ ಏನೂ ತೊಂದರೆಯಿರಲಿಲ್ಲ. ಜೊತೆಗೆ ಸ್ವಲ್ಪ ನ್ಯೂಟ್ರಿಷನಲ್ ಬಾರ್ಗಳನ್ನ ಇಟ್ಟುಕೊಂಡಿರುತ್ತಿದ್ವಿ. ತುಂಬಾ ಹಸಿವಾದಾಗ ತಿನ್ನೋದಕ್ಕೆ ಅಂತ. ರೈಡ್‌ಗೂ ಮುಂಚೆ 2-3 ತಿಂಗಳು ಕಠಿಣ ವ್ಯಾಯಾಮ, ಯೋಗ, ಧ್ಯಾನ ಮಾಡಿ ದೇಹ, ಮನಸ್ಸನ್ನ ಕಷ್ಟಗಳಿಗೆ ರೆಡಿ ಮಾಡಿಬಿಟ್ಟಿದ್ವಿ.
Related Articles
ಮೊದಲ ದಿನ 18 ಗಂಟೆಗಳಲ್ಲಿ 1,350 ಕಿಮೀ ರೈಡ್ ಮಾಡಿ, ರಾತ್ರಿ 9.30ಕ್ಕೆ ಹೈದರಾಬಾದ್ ತಲುಪಿದೆವು. ಮಾರನೆದಿನ ಬರೀ 500 ಕಿಮೀ ಅಷ್ಟೆ ಮುಂದಕ್ಕೆ ಹೋಗೋಕಾಯ್ತು. ಹೈದರಾಬಾದ್‌ನಿಂದ ಬೆಳಗ್ಗೆ 10.30 ಹೊರಟು ಸಂಜೆ 7ಕ್ಕೆಲ್ಲ ನಾಗ್ಪುರ ತಲುಪಿದೆವು. ಮುಂದೆ ಅರಣ್ಯ ಪ್ರದೇಶವಾದ್ದರಿಂದ ಅಲ್ಲೇ ತಂಗಿದೆವು. ಮೂರನೆ ದಿನ ಆಗ್ರಾದಲ್ಲಿ, ನಾಲ್ಕನೆ ದಿನ ಮನಾಲಿಯಲ್ಲಿ ಉಳಿದುಕೊಂಡೆವು. ಅವತ್ತು ಬೈಕ್ ಕೈ ಕೊಟ್ಟು ಸುಮಾರು 6 ಗಂಟೆ ರಿಪೇರಿ ಹಿಡಿಯಿತು. ಮಲಗುವಾಗ ಬೆಳಗಿನ ಜಾವ 3 ಗಂಟೆ ಆಗಿತ್ತು. ಹಾಗಾಗಿ ಬೇಗ ಎದ್ದು ಹೊರಡೋಕೆ ಆಗಲಿಲ್ಲ. ಇಲ್ಲದಿದ್ದರೆ ಅವತ್ತೇ ಲೇಹ್ ತಲುಪಿಬಿಡುತ್ತಿದ್ದೆವು. ಆದರೆ ಆಗ್ಲಿಲ್ಲ. ಅವತ್ತು ಸರ್ಚು ಎಂಬಲ್ಲಿ ತಂಗಿದೆವು. ಅಲ್ಲಿಂದ ಲೇಹ್‌ಗೆ 6 ಗಂಟೆ ಪ್ರಯಾಣ. ಮಾರನೆಯ ದಿನ ಮಧ್ಯಾಹ್ನ 1 ಗಂಟೆಗೆ ನಾವು ಲೇಹ್ ತಲುಪಿಯೇಬಿಟ್ಟೆವು. ಈ ಪಯಣದಲ್ಲಿ ನಮಗೆ ಕಂಡ ಮುಖಗಳು, ಆದ ಅನುಭವ ಅನೇಕ.
Advertisement
ತಂದೆಯಂತೆ ಕಂಡ ಸರ್ದಾರ್ಜಿಹೈದರಾಬಾದ್ ಬಳಿಯ ಆದಿಲಾಬಾದ್ ಬಳಿ ಒಬ್ಬರು ಸರ್ದಾರ್ ಜಿ ಡಾಬಾ ಇದೆ. ಅವರು ಮೂಲತಃ ಪಂಜಾಬ್‌ನವರು. ನಮ್ಮನ್ನು ತುಂಬಾ ಮುಜುಗರದಿಂದಲೇ ಬಂದು ಮಾತಾಡಿಸಿದರು. “ನನಗೂ ಇಬ್ಬರು ಹೆಣ್ಣು ಮಕ್ಕಳು. ಇಬ್ಬರೂ ಪಂಜಾಬ್‌ನಲ್ಲಿದ್ದಾರೆ. ನೋಡದೆ ತುಂಬಾ ವರ್ಷಗಳಾದವು. ಇವತ್ತು ನಿಮ್ಮನ್ನ ನೋಡಿ ಅವರದ್ದೇ ನೆನಪಾಯ್ತು. ಅವರು ಕೂಡ ನಿಮ್ಮ ಥರಾನೇ ಧೈರ್ಯಶಾಲಿಗಳಾಗಬೇಕು. ಯಾವೆªà ಹೆದರಿಕೆ ಇಲೆª ಎಲ್ಲಾ ಕಡೆ ಓಡಾಡಬೇಕು ಅಂತ ಆಸೆ. ಆಲ್ ದ ಬೆಸ್ಟ್ ನಿಮಗೆ’ ಅಂತ ವಿಶ್ ಮಾಡಿದರು. ಅವರ ಬಳಿ ಒಂದು ಹಳೇ ಫೋನ್ ಇತ್ತು, ಒಂದು ಫೋಟೊ ತಗೋಬೋದಾ ನಿಮ್ಮ ಜೊತೆ. ಮಕ್ಕಳಿಗೆ ಕಳಿಸ್ತೀನಿ ಈ ಫೋಟೊನ ಅಂತ ಹುಡುಗನೊಬ್ಬನಿಗೆ ಹೇಳಿ ನಾಚಿಕೆಯಿಂದ ಫೋಟೊ ಕೂಡ ತೆಗೆಸಿಕೊಂಡರು. ಮುಂದಿನ ಬಾರಿ ಇದೇ ದಾರೀಲಿ ಬಂದಾಗ ತಪ್ಪದೇ ಮತ್ತೆ ಬನ್ನಿ ಅಂತ ಒತ್ತಾಯಿಸಿದರು. ಅಲ್ಲಿ ಊಟ ಮುಗಿಸಿ ಹೊರಟಾಗ, ಒತ್ತಾಯ ಮಾಡಿ ಟೀ ಕೂಡ ಕುಡಿಸಿದರು. ಮೆನುವಿನಲ್ಲಿ ಟೀ ಇರಲೇ ಇಲ್ಲ!
ಮುಖ-ತಲೆ ಕವರ್ ಆಗೋ ಹೆಲ್ಮೆಟ್, ಗ್ಲೌಸ್, ಶೂಸ್, ಗ್ಲಾಸ್ ಹಾಕಿದ ನಮ್ಮನ್ನ ನೋಡಿದ್ರೆ ಹುಡುಗೀರು ಅಂತ ಗೊತ್ತಾಗ್ತಾನೇ ಇರ್ಲಿಲ್ಲ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಬಾರ್ಡರ್‌ನ ರಸ್ತೆ ಬದಿ ಒಂದು ಚಿಕ್ಕ ಹೋಟೆಲ್ ರೀತಿಯದ್ದು ಇತ್ತು. ನಾವು ಬೈಕ್ ನಿಲ್ಲಿಸಿ ದೂರದಿಂದಲೇ, ಟೀ ಇದ್ಯಾ ಅಂತ ಕೈ ಮಾಡಿ ಕೇಳಿದ್ವಿ. 14-15 ವರ್ಷದ ಹುಡುಗ, ಹೂಂ ಇದೆ ಬನ್ನಿ ಅಂದ. ನಾವು ಸರಿ ಅಂತ, ಹೆಲ್ಮೆಟ್, ಗ್ಲೌಸ್ ಎಲ್ಲಾ ಬಿಚ್ಚಿ ಹೋಟೆಲ್ ಕಡೆ ಹೋದೆವು. ಆಮೇಲೆ ಟೀ ಕೇಳಿದಾಗ, “ನೀವು ಕೇಳಿದ್ದು ನೀರು ಅಂತ ಅಂದುಕೊಂಡೆ. ಇಲ್ಲಿ ಟೀ ಮಾಡೋದೇ ಇಲ್ಲ’ ಅಂದುಬಿಟ್ಟ. ಸರಿ ಇನ್ನೇನು ಮಾಡೋದು ನೀರೇ ಕೊಡಿ ಪರವಾಗಿಲ್ಲ ಅಂದ್ವಿ. ಹುಡುಗಿಯರು ಅಂತ ಗೊತ್ತಾದಾಗ, “ಅಯ್ಯೋ, ಎಲ್ಲಿಂದ ಬರ್ತಾ ಇದೀರ? ಸ್ವಲ ತಡೀರಿ ನಿಮ್ಗೆ ಟೀ ಮಾಡಿ ಕೊಡ್ತೀನಿ’ ಅಂತ ಲೂನಾದಲ್ಲಿ ಎಲ್ಲಿಗೋ ಹೋಗಿ ಹಾಲು ತಗೊಂಡು ಬಂದು ಟೀ ಮಾಡಿಕೊಟ್ಟ. ತುಂಬಾ ಚಿಕ್ಕ ಹುಡುಗ ಅವನು. ನಾವು ಹೆಲ್ಮೆಟ್ ಹಾಕಿದ್ದನ್ನು ನೋಡಿ “ಇಲ್ಲೆಲ್ಲ ಯಾರೂ ಹೆಲ್ಮೆಟ್ ಹಾಕೋದೇ ಇಲ್ಲ. ಜನಕ್ಕೆ ಜೀವದ ಬೆಲೆಯೇ ಗೊತ್ತಿಲ್ಲ. ನಾನೂ ಹತ್ತನೇ ಕ್ಲಾಸ್ ತನಕ ಓದಿದ್ದೇನೆ. ಲೈಫಲ್ಲಿ ತುಂಬಾ ಕನಸುಗಳಿವೆ. ಆದ್ರೆ, ಈಗ ಅಪ್ಪನಿಗೆ ವಯಸ್ಸಾಯ್ತು ಅದಕ್ಕೆ ಅಂಗಡಿ ನೋಡಿಕೊಳ್ತಿದೀನಿ. ಮುಂದೊಂದು ದಿನ ನಾನೂ ಬೇರೆ ಕಡೆ ಹೋಗ್ತಿನಿ, ತುಂಬಾ ದೊಡ್ಡ ಮನುಷ್ಯ ಆಗ್ತಿನಿ’ ಅಂತೆಲ್ಲಾ ಕನಸುಗಳನ್ನು ಹಂಚಿಕೊಂಡ! ಟಯರ್ ಪಂಕ್ಚರ್ ಆಯ್ತು
ಮಧ್ಯದಲ್ಲಿ ಒಂದೆರಡು ಕಡೆ ಬೈಕ್ ಕೈ ಕೊಟ್ಟಿತು. ಒಂದೆರಡು ಕಡೆ ಬೈಕ್ ರಿಪೇರಿಗೆಂದೇ ಸಿಟಿ ಒಳಗೆ ಬರಬೇಕಾಯ್ತು. ಮನಾಲಿಯಲ್ಲಿ ಟಯರ್ ಚೇಂಜ್ ಮಾಡಬೇಕಾಗಿ ಬಂದಿತ್ತು. ಅವತ್ತು ಒಂಬತ್ತು ಗಂಟೆಗೆ ಮನಾಲಿ ತಲುಪಿದೆವು. ಬೇಗ ರಿಪೇರಿ ಮುಗಿಸಿ ಮಲಗೋ ಪ್ಲಾನ್ ಇತ್ತು. ಆದರೆ ಆ ಮೆಕಾನಿಕ್‌ಗೆ ಈ ರೀತಿಯ ಬೈಕ್ ರಿಪೇರಿ ಮಾಡಿ ಗೊತ್ತಿರಲಿಲ್ಲ. ಬೆಳಗಿನ ಜಾವ ಮೂರರವರೆಗೆ ರಿಪೇರಿ ನಡೆಯಿತು. ಹೈವೇ ಪಕ್ಕದಲ್ಲೇ ಚಳಿಯಲ್ಲಿ ಕುಳಿತು ಕೆಲಸ ಆಗೋ ತನಕ ಕಾದೆವು. ಮೊದಲ ದಿನ, ಕನ್ಯಾಕುಮಾರಿಯಿಂದ ಬೆಂಗಳೂರಿಗೆ ಬಂದಾಗ ಟಯರ್ ಪಂಕ್ಚರ್ ಆಗಿ ಬೈಕ್‌ಅನ್ನು ಅರ್ಧ ಕಿಲೋಮೀಟರ್ ಇಬ್ಬರೇ ತಳ್ಳಿಕೊಂಡು ಹೋಗಿದ್ದೆವು!
– – –
ತುಂಬಾ ಖುಷಿ ಇದೆ
ಅಂತೂ ನಾವು ಅಂದುಕೊಂಡಿದ್ದನ್ನು ಯಶಸ್ವಿಯಾಗಿ ಪೂರೈಸಿದ ಖುಷಿ ನಮಗಿದೆ. ಎಲ್ಲ ಕಡೆಯೂ ಜನರು ಒಳ್ಳೆಯವರೇ ಇದ್ದಾರೆ. ನಿಮ್ಮ ಜಾಗ್ರತೆಯಲ್ಲಿ ನೀವಿದ್ದರೆ ಏನೂ ತೊಂದರೆಯಾಗುವುದಿಲ್ಲ. ಕೆಲವು ಸಾಧಾರಣ ಸುರಕ್ಷಾ ಕ್ರಮಗಳನ್ನು ಪಾಲಿಸಿದರೆ ಎಲ್ಲ ಹೆಣ್ಮಕ್ಕಳೂ ಬೈಕ್ ರೈಡ್ ಮಾಡಬಹುದು. ರೆಕಾರ್ಡ್ ಬಗ್ಗೆ ಗೊತ್ತಿರಲಿಲ್ಲ:
ನಮ್ಮ ಟ್ರಿಪ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಲಿದೆ. ಈಗಾಗಲೇ ದಾಖಲೆಗಳನ್ನು ಲಿಮ್ಕಾದವರಿಗೆ ಕಳಿಸಿದ್ದೇವೆ. ಮುಂದಿನ ಫೆಬ್ರವರಿಯಲ್ಲಿ ಅದು ಪಬ್ಲಿಷ್ ಆಗುತ್ತೆ. ಈ ಮೊದಲು ಇಬ್ಬರು ಹುಡುಗಿಯರು 155- 160 ಗಂಟೆಗಳಲ್ಲಿ ಈ ಸಾಹಸ ಮಾಡಿದ್ದರಂತೆ. ಆದರೆ, ನಾವು ರೆಕಾರ್ಡ್‌ಗಾಗಿ ಮಾಡಿದವರಲ್ಲ. ಹಾಗೊಂದು ರೆಕಾರ್ಡ್ ಮಾಡಿದ್ದಾರೆ ಅಂತಾನೂ ನಮಗೆ ಗೊತ್ತಿರಲಿಲ್ಲ. ನಮ್ಮ ಗುರಿ ಇದ್ದದ್ದು, ಹುಡುಗಿಯರು ಸಹ ಯಾರ ಸಹಾಯವಿಲ್ಲದೆ, ತುಂಬಾ ಸುರಕ್ಷಿತವಾಗಿ ಬೈಕ್‌ನಲ್ಲಿ ಒಬ್ಬೊಬ್ಬರೇ ಓಡಾಡಬಹುದು ಅಂತ ತೋರಿಸುವುದಷ್ಟೇ ಆಗಿತ್ತು. ನಿರೂಪಣೆ : ಪ್ರಿಯಾಂಕಾ ಎನ್