ಗದಗ: ನಗರದ ಹೃದಯ ಭಾಗದಲ್ಲಿರುವ ವಕಾರ ಸಾಲುಗಳ ತೆರವು ಕಾರ್ಯದ ಎರಡನೇ ದಿನವಾದ ರವಿವಾರವೂ ಮುಂದುವರಿಯಿತು.
ಗದಗ- ಬೆಟಗೇರಿ ನಗರಸಭೆ ಲೀಜ್ ಅವಧಿ ಮುಕ್ತಾಯಗೊಂಡಿರುವ 54 ಎಕರೆ ಪ್ರದೇಶದ ವಕಾರ ಸಾಲುಗಳ ತೆರವು ಕಾರ್ಯ ರವಿವಾರವೂ ಮುಂದುವರಿಯಿತು. ವಿವಿಧ ಕಾರಣಗಳಿಂದ ಶನಿವಾರ ಅಪೂರ್ಣಗೊಂಡಿದ್ದ ಕಟ್ಟಡಗಳು ಹಾಗೂ ವಕಾರ ಸಾಲಿನ ಮಧ್ಯ ಭಾಗದಲ್ಲಿರುವ ಮನೆ, ಹಳೇ ಕಾಲದ ಬೃಹತ್ ಗೋದಾಮುಗಳನ್ನು ನೆಲಸಮಗೊಳಿಸಲಾಯಿತು.
ರವಿವಾರ ಬೆಳಗ್ಗೆ 6:00ಕ್ಕೆ ಆರಂಭವಾದ ತೆರವು ಕಾರ್ಯ, ದಿನವಿಡೀ ನಡೆಯಿತು. ಸುಮಾರು 30 ಜೆಸಿಬಿಗಳು ಹಾಗೂ ಐದು ಹಿಟ್ಯಾಚಿ ಸೇರಿದಂತೆ ಹತ್ತಾರು ಟ್ರಾಕ್ಟರ್‌ಗಳು, ನೂರಾರು ಸಿಬ್ಬಂದಿ ಮೂಲಕ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಒಂದೆಡೆ ಜೆಸಿಬಿಗಳು ಭಾಗಶಃ ಹಾಗೂ ಅಳಿದುಳಿದ ಕಟ್ಟಡಗಳನ್ನು ನೆಲಕ್ಕುರುಳಿಸುತ್ತಿದ್ದರೆ, ಮತ್ತೂಂದೆಡೆ ಮಹಿಳೆಯರು ಮತ್ತು ಮಕ್ಕಳು ಕಬ್ಬಿಣದ ಸಲಾಕೆ, ಕಟ್ಟಿಗೆ ತುಂಡುಗಳು, ಟಿನ್ ಹಾಗೂ ಕಟ್ಟಡಗಳ ಅವಶೇಷಗಳನ್ನು ಆಯ್ದುಕೊಳ್ಳಲು ನಾಮುಂದು- ತಾಮುಂದು ಎಂಬಂತೆ ಮುಗಿಬಿದ್ದಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜನರನ್ನು ಚೆದುರಿಸಲು ಪೊಲೀಸರು ಪರದಾಡುವಂತಾಯಿತು.
ರವಿವಾರ ನಡೆದ ಕಟ್ಟಡಗಳ ತೆರವು ಕಾರ್ಯಾಚರಣೆಯಲ್ಲಿ ಶಾಲಾ- ಕಾಲೇಜಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಕಟ್ಟಡಗಳ ಅವಶೇಷಗಳಲ್ಲಿರುವ ಕಬ್ಬಿಣದ ಸರಳುಗಳನ್ನು ಆಯ್ದುಕೊಂಡರೆ, ಇನ್ನೂ ಕೆಲವರು ಪೋಷಕರು ಒಂದೆಡೆ ಜಮಾಯಿಸಿದ್ದ ಕಿಟಕಿ, ಟಿನ್‌ಶೀಟ್‌ಗಳು ಸೇರಿದಂತೆ ಅವಶೇಷಗಳ ಕಾವಲಿದ್ದರು.
Advertisement
ಬೆಳಗ್ಗೆಯೇ ತೆರವು ಕಾರ್ಯ ಆರಂಭಿಸಿದ ನಗರಸಭೆ ಜೆಸಿಬಿಗಳು, ಅಳಿದುಳಿದ ಕಟ್ಟಡಗಳನ್ನೂ ನೆಲಸಮಗೊಳಿಸಿದರು. ನೆಲಕ್ಕುರುಳಿದ ಕಟ್ಟಡಗಳ ಕಬ್ಬಿಣ, ಕಿಟಕಿ ಹಾಗೂ ಕಬ್ಬಿಣದ ಶೀಟುಗಳಿಗೆ ಮುಗಿಬಿದ್ದರೆ, ನಗರಸಭೆ ಮಾಜಿ ಸದಸ್ಯರೊಬ್ಬರ ಸಹೋದರರು ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆಯಿತು.
Related Articles
Advertisement
ಅಧಿಕಾರಿ ಮೇಲೆ ಹಲ್ಲೆಗೆ ಯತ್ನ: ನಗರದ ಕೆ.ಎಚ್. ಪಾಟೀಲ ವೃತ್ತದ ಸಮೀಪದ ವೀರೇಶ್ವರ ಲೈಬ್ರರಿ ಪಕ್ಕದ ವಕಾರ ಸಾಲು ತೆರವು ಕಾರ್ಯಕ್ಕೆ ನಗರಸಭೆ ಮಾಜಿ ಸದಸ್ಯರೊಬ್ಬರ ಸಹೋದರರು ಅಡ್ಡಿಪಡಿಸಿ ಯೋಜನಾ ನಿರ್ದೇಶಕ ರುದ್ರೇಶ ಅವರ ಮೇಲೆ ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಕೇಳಿ ಬಂದಿವೆ.
ಶನಿವಾರ ಬೆಳಗ್ಗೆಯಿಂದ ತರೆವು ಕಾರ್ಯ ಆರಂಭಗೊಂಡಿದ್ದರೂ ನಗರಸಭೆ ಮಾಜಿ ಸದಸ್ಯ ಸಿರಾಜ್ ಬಳ್ಳಾರಿ ಅವರಿಗೆ ಸೇರಿದೆ ಎನ್ನಲಾದ ವಕಾರ ಸಾಲು ಖಾಲಿ ಮಾಡಿರಲಿಲ್ಲ. ರವಿವಾರ ಬೆಳಗ್ಗೆ 9:00ಗಂಟೆಯಾದರೂ, ವಕಾರ ಸಾಲಿನಲ್ಲಿ ಕೆಲ ಸಾಮಾನುಗಳನ್ನು ಉಳಿಸಿದ್ದರು. ಈ ವಿಚಾರವಾಗಿ ಸಲೀಂ ಬಳ್ಳಾರಿ ಹಾಗೂ ಪೌರಕಾರ್ಮಿಕರ ಮಧ್ಯೆ ಮಾತಿಗೆಮಾತು ಬೆಳೆದಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಪಿಡಿ ರುದ್ರೇಶ ಅವರನ್ನು ತಳ್ಳಾಡಿರುವ ಸಲೀಂ, ಪೌರಕಾರ್ಮಿಕರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಕೇಳಿ ಬಂದಿದೆ.
ಇದರಿಂದ ಆಕ್ರೋಶಗೊಂಡ ಇತರೆ ಪೌರಕಾರ್ಮಿಕರು, ಸಲೀಂ ಅವರನ್ನು ಬೆನ್ನತ್ತಿದರಾದರು. ಆದರೆ, ಮೇಲಾಧಿಕಾರಿಗಳ ಸೂಚನೆಯಂತೆ ವಾಪಸ್ಸಾದರು. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
• ಕಟ್ಟಡ ಅವಶೇಷ ಆಯ್ದುಕೊಳ್ಳಲು ಪೈಪೋಟಿ
• ಜನರ ಚೆದುರಿಸಲು ಪೊಲೀಸರು ಪರದಾಟ
ತೆರವು ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚುಗೆ:
ನಗರಸಭೆಯಿಂದ ಪಡೆದ 99 ವರ್ಷಗಳ ಲೀಜ್ ಅವಧಿ ಮುಕ್ತಾಯವಾದರೂ, ವಕಾರ ಸಾಲು ಖಾಲಿ ಮಾಡದ ಹಿನ್ನೆಲೆಯಲ್ಲಿ ನಗರಸಭೆ ಕೈಗೆತ್ತಿಕೊಂಡಿರುವ ತೆರವು ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಈ ವಕಾರಸಾಲುಗಳನ್ನು ಹತ್ತಿ, ಶೇಂಗಾ ವ್ಯಾಪಾರ ಮಾಡುವ ಸಲುವಾಗಿ 1889ರಲ್ಲಿ ಮುಂದಿನ 99 ವರ್ಷಗಳ ಅವಧಿಗೆ ಲೀಸ್ ನೀಡಲಾಗಿತ್ತು. ಈ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ. ವಕಾರ ಸಾಲು ಖಾಲಿ ಮಾಡಲು ಹಿಂದೇಟು ಹಾಕುತ್ತಿದ್ದ ಸ್ಥಳೀಯ ಲೀಜ್ ದಾರರು ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿಗಳ ಕೋರ್ಟ್‌ನ ಆದೇಶಗಳು ನಗರಸಭೆ ಪರವಾಗಿ ಬಂದಿದ್ದರೂ, ಸ್ಥಳೀಯ ವರ್ತಕರು ಖಾಲಿ ಮಾಡಲು ಹಿಂದೇಟು ಹಾಕುತ್ತಿದ್ದರು. ವಿವಿಧ ಕಾರಣಗಳಿಂದ ನಗರಸಭೆ ಕೌನ್ಸಿಲ್ ಕೂಡ ಆಸಕ್ತಿ ತೋರುತ್ತಿರಲಿಲ್ಲ. ಆದರೆ, ನಗರದ ಹೃದಯ ಭಾಗದಲ್ಲಿರುವ ಕೋಟ್ಯಂತರ ರೂ. ಮೌಲ್ಯದ ನಗರಸಭೆ ಸ್ಥಿರಾಸ್ತಿಯನ್ನು ರಕ್ಷಿಸಲು ಜಿಲ್ಲಾಡಳಿತ ದಿಟ್ಟತನದಿಂದ ಕೈಗೆತ್ತಿಕೊಂಡಿರುವ ತೆರವು ಕಾರ್ಯಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.