ತಿಪಟೂರು: ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭವಾಗಲಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿ ಗಳು ಪ್ರಯತ್ನಪಟ್ಟರೆ ಖಂಡಿತಾ ಯಶಸ್ಸು ಲಭಿಸಲಿದೆ ಎಂದು ತಾಲೂಕಿನ ಯುಪಿಎಸ್‌ಸಿ ಟಾಪರ್ ಎಚ್. ಬಿ.ವಿವೇಕ್ ತಿಳಿಸಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ 3ದಿನಗಳ ಕಾಲ ಹಮ್ಮಿಕೊಂಡಿರುವ ಕಲ್ಪೋತ್ಸವ-2019 ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಆವರು ಮಾತನಾಡಿದರು.
ಸಲಹೆ ಸೂಚನೆ ನೀಡುತ್ತೇನೆ: ಮಧ್ಯಮ ಕುಟುಂಬ ದಿಂದ ಬಂದ ನನಗೆ ವಿದ್ಯಾಭ್ಯಾಸದ ಅವಧಿಯಲ್ಲಿ ಆರ್ಥಿಕವಾಗಿ ಸಾಕಷ್ಟು ತೊಂದರೆಗಳುಂಟಾದವು. ಅವುಗಳನ್ನೆಲ್ಲ ಧೈರ್ಯವಾಗಿ ಎದುರಿಸಿ ಕುಟುಂಬದ ಸಹಾಯದೊಂದಿಗೆ ಯುಪಿಎಸ್ ಪರೀಕ್ಷೆಯಲ್ಲಿ 257ನೇ ರ್‍ಯಾಂಕ್ ಪಡೆದುಕೊಂಡೆ. ಕಷ್ಟಗಳು ಬಂದಾಗ ಮಾತ್ರ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ತಿಳಿದುಕೊಳ್ಳಲಿದ್ದೇವೆ. ಸತತ ಪರಿಶ್ರಮ ಮತ್ತು ನಿರ್ದಿಷ್ಟ ಗುರಿ, ಸಾಧಿಸುವ ಛಲ ಇದ್ದರೆ ಯಾರೂ ಬೇಕಾದರೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬಹು ದಾಗಿದೆ ಎಂದ ಅವರು, ವಿದ್ಯಾರ್ಥಿಗಳು ಯುಪಿಎಸ್ ಪರೀಕ್ಷೆಗೆ ಹೇಗೆ ತಯಾರಾಗಬೇಕು. ಯಾವ ರೀತಿ ಪರೀಕ್ಷೆ ಎದುರಿಸಬೇಕೆಂಬ ಬಗ್ಗೆ ನನ್ನನ್ನು ಸಂಪರ್ಕಿಸಿ ಭೇಟಿ ಮಾಡಿದರೆ ಸಲಹೆ ಸೂಚನೆ ಕೊಡುವುದಾಗಿ ತಿಳಿಸಿದರು.
ಟಾಪರ್ ಆಗಬಹುದು: ನಗರದಲ್ಲಿ ಓದಿರುವರು ಮತ್ತು ಹಣವಿದ್ದವರು, ಇಂಗ್ಲಿಷ್‌ನಲ್ಲೂ ಆಳವಾದ ಜ್ಞಾನವಿದ್ದವರು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ತೆಗೆದು ಕೊಳ್ಳಬಹುದು ಎಂಬ ನಂಬಿಕೆ ಕೈಬಿಡಬೇಕು. ಬಡವರು, ಮಧ್ಯಮ ವರ್ಗದವರು ಇಂಥ ಪರೀಕ್ಷೆ ಗಳನ್ನು ತೆಗೆದುಕೊಂಡು ಟಾಪರ್ ಆಗಬಹುದು. ನನಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಬಹುದು. ಹಾಗಾಗಿ ಯಾವುದೇ ವಿಶೇಷ ತರಬೇತಿಗಳ ಅವಶ್ಯಕತೆ ಬೇಕಾಗಿಲ್ಲ. ಪ್ರತಿಭೆ, ಗುರಿಮುಟ್ಟುವ ಛಲ, ತಾಳ್ಮೆ, ಸಹನೆಗಳಿಂದ ಪರಿಶ್ರಮದಲ್ಲಿ ಓದುವ ಯಾರಾದರೂ ಪರೀಕ್ಷೆಗಳನ್ನು ತೆಗೆದುಕೊಂಡು ಟಾಪರ್ ಆಗಬಹುದು ಎಂದು ತಿಳಿಸಿದರು.
ಗುರಿ ಇರಬೇಕು: ತಾಲೂಕಿನ ಮತ್ತೋರ್ವ ಯುಪಿಎಸ್‌ಸಿ ಟಾಪರ್ ಡಾ. ನಾಗಾರ್ಜುನ ಬಿ. ಗೌಡ ಮಾತನಾಡಿ, ಜೀವನದಲ್ಲಿ ಗುರಿ ಇಲ್ಲದಿದ್ದರೆ ಸಾಧನೆ ಅಸಾಧ್ಯ. ಆಯ್ಕೆ ಮಾಡಿಕೊಂಡ ಗುರಿಯನ್ನು ಸಾಧಿಸುತ್ತೇನೆಂಬ ಹಠ ಮತ್ತು ಛಲ ಇದ್ದರೆ ಏನೇ ತೊಡಕುಗಳು ಬಂದರೂ ಸಾಧನೆ ಮಾಡಬಹುದು. ಸಾಧಿಸಿದ ಮೇಲೆ ಕೇವಲ ಕುಟುಂಬಕ್ಕೆ ಸೀಮಿತವಾಗದೆ ಸಮಾಜಕ್ಕೆ, ದೇಶಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕು. ಯುವಕರು ಹೆಚ್ಚಿನ ಸಂಬಳಕ್ಕಾಗಿ ಬೇರೆ ಬೇರೆ ದೇಶಗಳಿಗೆ ಕುಟುಂಬಗಳನ್ನು ತೊರೆದು ಹೋಗುತ್ತಿದ್ದಾರೆ. ಆದರೆ, ನಮ್ಮವರ ಪ್ರೀತಿ, ವಿಶ್ವಾಸದಿಂದ ದೂರವಾಗಿ ಎಷ್ಟೇ ಸಂಬಳ ಪಡೆದರೂ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. ಆದ್ದರಿಂದ ಯುವಕರು ಆದಷ್ಟು ನಮ್ಮ ದೇಶ ಬಿಟ್ಟು ಹೋಗದೆ, ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸಬೇಕು ಎಂದರು.
ಸಾಧನೆ ಮಾಡಿ: ಕೆವಿಎಸ್ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ಯುಪಿಎಸ್‌ಸಿ ಟಾಪರ್‌ಗಳಾದ ಎಚ್. ಬಿ.ವಿವೇಕ್ ಮತ್ತು ಡಾ. ನಾಗಾರ್ಜುನ ಬಿ.ಗೌಡ ನಮ್ಮ ತಾಲೂಕಿನವರೇ ಆಗಿದ್ದು, ಕಠಿಣ ಪರಿಶ್ರಮದಿಂದ ಓದಿ ಪಾಸು ಮಾಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ನೀವು ಸಹ ಅವರಂತೆ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಕೆವಿಎಸ್ ಖಜಾಂಚಿ ಟಿ.ಎಸ್.ಶಿವಪ್ರಸಾದ್ ಮಾತ ನಾಡಿ, ಯುವ ಪ್ರತಿಭೆಗಳು ನಿಮಗೆ ಆದರ್ಶವಾಗಿದ್ದು, ಅವರು ಕಷ್ಟಸುಖಗಳ ಹಾದಿಯಲ್ಲಿ ಬೆಳೆದು ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ. ತಿಪಟೂರಿ ನಲ್ಲಿಯೇ ಓದಿ ಬೆಳೆದ ಇವರುಗಳು ಸಮಾಜಕ್ಕೆ ಸೇವೆ ಸಲ್ಲಿಸಿ ಮತ್ತಷ್ಟು ಹೆಸರು ಗಳಿಸಲಿ ಎಂದು ಆಶಿಸಿದರು.
ಪ್ರತಿಭೆಗಾಗಿ ಕಲ್ಪೋತ್ಸವ: ಪ್ರಾಂಶುಪಾಲ ಡಾ. ನಂದೀಶಯ್ಯ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗವಾಗಿದ್ದು ಕೇವಲ ಓದಿಗೆ ಸೀಮಿತವಾಗದೆ ಕಲೆ, ಸಾಹಿತ್ಯ, ಕ್ರೀಡೆ ಇತರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಲೆ ಉಳಿಸಲು ಕಾಲೇಜಿ ನಲ್ಲಿ ಪ್ರತೀ ವರ್ಷವೂ ಅದ್ಧೂರಿಯಾಗಿ ಕಲ್ಪೋತ್ಸವ ನಡೆಸಿಕೊಂಡು ಬರುತ್ತಿದ್ದು, ಪ್ರತಿಭೆಯನ್ನು ಅಭಿವ್ಯಕ್ತ ಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸಮಾರಂಭದಲ್ಲಿ ಕೆವಿಎಸ್ ಕಾರ್ಯದರ್ಶಿ ಟಿ.ಯು. ಜಗದೀಶಮೂರ್ತಿ, ಸದಸ್ಯರಾದ ನಂಜುಂಡ ಸ್ವಾಮಿ, ಸ್ವರ್ಣಗೌರಿ, ಸುಮನ್ ಮತ್ತಿತರರಿದ್ದರು.