ಹುಣಸೂರು: ಯೋಜನೆಯಲ್ಲಿ ಸಣ್ಣಪುಟ್ಟ ಲೋಪಗಳು ಸಹಜ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿ ಜನರಿಗೆ ನೆರವಾಗಬೇಕೆ ಹೊರತು ನಿತ್ಯ ಟೀಕೆ, ಆರೋಪ ಮಾಡುವವರಿಗೆ ಜೀನಹಳ್ಳಿ ಕೆರೆಗೆ ನೀರು ತುಂಬಿಸಿರುವುದೇ ಸಾಕ್ಷಿಯಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು. ತುಂತುರು ಮಳೆಯ ನಡುವೆಯೇ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿರುವ ಹುಣಸೂರು ತಾಲೂಕಿನ ಜೀನಹಳ್ಳಿ ಕೆರೆಗೆ ವರ ಮಹಾ ಲಕ್ಷ್ಮೀ ಹಬ್ಬದಂದು ಬಾಗಿನ ಅರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ 22 ವರ್ಷಗಳಿಂದ ಬತ್ತಿಹೋಗಿದ್ದ 49.5 ಎಕರೆ ವಿಸ್ತೀರ್ಣದ ಜೀನಹಳ್ಳಿ ಕೆರೆಗೆ 340 ಗಂಟೆ ನೀರು ಹರಿಸಿ ತುಂಬಿಸಲಾಗಿದೆ. ಅಲ್ಲದೆ ಮೂಕನಹಳ್ಳಿ ಯೋಜನೆಯಡಿ ಬೀಜಗನಹಳ್ಳಿ ದೊಡ್ಡಕೆರೆ, ಮೂಕನಹಳ್ಳಿ ಪುಟ್ಟನಕಟ್ಟೆ ತುಂಬಿ ಕೋಡಿ ಬಿದ್ದು ಬಳ್ಳೆಕಟ್ಟೆಗೆ ಹರಿಯುತ್ತಿದೆ. ಜೀನಹಳ್ಳಿ ಕೆರೆಯಿಂದ ಬಿಳಿಕೆರೆ- ಹಳೇಬೀಡು ಕೆರೆಗೆ ನೀರು ಹರಿಸುವುದು ದೂರವಾಗುವುದರಿಂದಾಗಿ ಹತ್ತಿರದ ಮಾರ್ಗದ ಮೂಲಕ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಟೀಕಾಕಾರರಿಗೆ ಅಭಿವೃದ್ಧಿಯೇ ಉತ್ತರ: ತಾಲೂಕಿನ ಮೂರು ಕಡೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆ ಬಗ್ಗೆ ಕೆಲವರು ಸಣ್ಣಪುಟ್ಟ ತಾಂತ್ರಿಕ ತೊಂದರೆಯನ್ನೇ ಮುಂದಿಟ್ಟುಕೊಂಡು ನೀರು ತುಂಬಿಸಲಾಗಲ್ಲ, ಈ ಯೋಜನೆ ಫೇಲ್ ಎಂದು ಬೊಬ್ಬೆ ಹೊಡೆಯುತ್ತಿದ್ದವರಿಗೆ ಈ ಕೆರೆಗಳಿಗೆ ನೀರು ತುಂಬಿರುವುದೇ ತಕ್ಕ ಉತ್ತರ ಎಂದು ಹೇಳಿ, ಈ ಭಾಗದ ಜನರು ಸಂತೃಪ್ತರಾದರಷ್ಟೇ ನಮಗೆ ಸಮಾಧಾನ, ಇದು ಮಾನವ ನಿರ್ಮಿತವಾದ ಯೋಜನೆಯಾಗಿದ್ದು, ಸಣ್ಣಪುಟ್ಟ ದೋಷಗಳು ಸಹಜ, ಈ ಬಗ್ಗೆ ಜನ ಮೆಚ್ಚಿದರೆ ಸಾಕು, ಟೀಕಾಕಾರರಿಗೆ ತಮ್ಮದೇನಿದ್ದರೂ ಅಭಿವೃದ್ಧಿ ಮೂಲಕವೇ ಉತ್ತರ ನೀಡುವುದಾಗಿ ತಿಳಿಸಿದರು.
ಮತ್ತಷ್ಟು ಯೋಜನೆ ಅನುಷ್ಠವಾಗಲಿದೆ: ಲಕ್ಷಣತೀರ್ಥ ನದಿಯಿಂದ ಕೊಳಗಟ್ಟ, ಬೋಳನಹಳ್ಳಿ, ಮೈದನಹಳ್ಳಿ ಹಾಗೂ ಹನಗೋಡು ಭಾಗದ ದೊಡ್ಡಹೆಜೂjರು, ನಾಗಾಪುರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಂದಿದ್ದರೆ, ತಾವು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಒತ್ತಾಯದ ಮೇರೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಆರ್‌ಎಸ್ ಹಿನ್ನೀರಿನ ಆನಂದೂರು ಕೊಪ್ಪಲು ಬಳಿ 19 ಕೋಟಿ ರೂ ವೆಚ್ಚದಡಿ ಮೈಸೂರು ತಾಲೂಕಿನ 16 ಕೆರೆ ಸೇರಿದಂತೆ ತಾಲೂಕಿನ ಚನ್ನಿಕೆರೆ, ದಬ್ಬನಕಟ್ಟೆ, ಶೆಟ್ಟರಕಟ್ಟೆ, ಹೊಸಹಾರೋಹಳ್ಳಿಕೆರೆ, ಹುಚ್ಚಪ್ಪನಕಟ್ಟೆ, ಸಾಬರಕಟ್ಟೆ, ಹಳ್ಳದಕಲ್ಲಹಳ್ಳಿಕಟ್ಟೆ, ಗೌರಿಕೆರೆ, ಗೆರಸನಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ. ಈಗಾಗಲೆ ಹಾರಂಗಿ ಯೋಜನೆಯ ನಾಲೆಗಳ ಆಧುನೀಕರಣ ಕಾಮಗಾರಿ ನಡೆಯುತ್ತಿದೆ ಎಂದರು.
ಜನ ಮೆಚ್ಚುವ ಕೆಲಸಕ್ಕೆ ಸಹಕಾರ: ಬಿಳಿಕೆರೆ ತಾಪಂ ಸದಸ್ಯ ರಾಜೇಶ್ ಮಾತನಾಡಿ, ಈ ಭಾಗದ ಕೆರೆಗಳು ತುಂಬಿ ಅನೇಕ ವರ್ಷಗಳೇ ಆಗಿತ್ತು. ಇದೀಗ ಶಾಸಕರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದು ಜನ ಮೆಚ್ಚುವ ಕೆಲಸ ಮಾಡಿದ್ದಾರೆಂದು ಶ್ಲಾ ಸಿದರು. ತಾಪಂ ಮಾಜಿ ಸದಸ್ಯ ಸೋಮಶೇಖರ್ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಹಿಡಿದು ಬಿಳಿಕೆರೆ, ಕಟ್ಟೆಮಳಲವಾಡಿ, ಗಾವಡಗೆರೆ, ಹನಗೋಡು ನಂತಹ ಪ್ರಮುಖ ಗ್ರಾಮಗಳ ಅಭಿವೃದ್ಧಿ ಮಾಡಿಸಿದ್ದಾರಲ್ಲದೆ ನಗರದಲ್ಲಿ ತೂಗು ಸೇತುವೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿಸಿರುವ ಶಾಸಕರು ಅಭಿವೃದ್ಧಿಯ ಹರಿಕಾರ ಎಂದರು.
ಬಾಗಿನಸಮರ್ಪಣೆ: ಉಕ್ಕಿನಕಂತೆ ಮಾದಹಳ್ಳಿಮಠದ ಸಾಂಬಸದಾಶಿವಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶಾಸಕರೊಂದಿಗೆ ಜಿಪಂ ಸದಸ್ಯರಾದ ಗೌರಮ್ಮ, ಡಾ.ಪುಷ್ಪ, ತಾಪಂ ಸದಸ್ಯ ರಾಜೇಶ್, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಹಾಗೂ ಗ್ರಾಮದ ಮಹಿಳೆಯರೊಡಗೂಡಿ ತುಂಬಿದ ಕೆರೆಗೆ ಬಾಗಿನ ಅರ್ಪಿಸಿದರು.
ತಾಪಂ ಇಒ ಕೃಷ್ಣಕುಮಾರ್, ಸಣ್ಣನೀರಾವರಿ ಇಲಾಖೆಯ ಸೂಪರಿಂಡೆಂಟ್ ಎಂಜಿನಿಯರ್ ಕೃಷ್ಣ, ಇಇ ಚನ್ನಕೇಶವ, ಎಇಇ ಶ್ರೀನಿವಾಸಲು, ಎಇಇ ಕೃಷ್ಣಮೂರ್ತಿ, ಪಿಡಿಒ ಶ್ರೀನಿವಾಸ್, ಗ್ರಾಮದ ಯಜಮಾನರಾದ ಮಾದೇಗೌಡ, ರಾಮಕೃಷ್ಣ, ಬಿಳಿಕೆರೆ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಮುಖಂಡರಾದ ತಿಮ್ಮನಾಯ್ಕ, ಸಿದ್ದನಾಯ್ಕ, ಕುಮಾರ್, ಸ್ವಾಮಿ, ರಾಘು, ಬಸವರಾಜು, ಪ್ರಸನ್ನ, ಕಾರ್ಗಳ್ಳಿಗೌಡ ಸೇರಿದಂತೆ ಸುತ್ತ ಮುತ್ತಲ ಗ್ರಾಮಸ್ಥರು ಇದ್ದರು.