ಮಂಗಳೂರು: ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೇರಳ ಕಲ್ಲಿಕೋಟೆ ಪಾರೋಪಡಿ ಚೇವಾಯೂರು ನಿವಾಸಿ ಪಿ. ಮನೋಜ್ (52) ಎಂಬುವನನ್ನು ಉರ್ವಠಾಣೆ ಪೊಲೀಸರು ಕಲ್ಲಿಕೋಟೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣದ ವಿವರ: 1996ರ ಡಿಸೆಂಬರ್ 24ರ ರಾತ್ರಿ ದೇರೆಬೈಲ್ ನಿವಾಸಿ ವಿನ್ಸೆಂಟ್ ಪಿರೇರಾ ಎನ್ನುವವರಿಗೆ ಸೇರಿದ ಆಮ್ನಿ ಕಾರನ್ನು ಅದರ ಚಾಲಕ ದಾಮೋದರ್ ಎನ್ನುವವರು ತಮ್ಮ ಕೊಟ್ಟಾರದ ಮನೆಯ ಪಕ್ಕದ ರಸ್ತೆಯಲ್ಲಿ ಪಾರ್ಕ್ ಮಾಡಿದ್ದರು. 25ರಂದು ಬೆಳಗ್ಗೆ 5 ಗಂಟೆಎ ಕಾರು ಪಾರ್ಕ್ ಮಾಡಿದ ಸ್ಥಳದಲ್ಲಿ ಇರದೆ ಕಳ್ಳತನವಾಗಿತ್ತು. ಈ ಬಗ್ಗೆ ಉರ್ವ ಠಾಣೆಗೆ ದೂರು ನೀಡಲಾಗಿತ್ತು. ತನಿಖೆ ವೇಳೆ ಕಾರನ್ನು ಮನೋಜ್ ಎಂಬಾತ ಕಳವು ಮಾಡಿರುದಾಗಿ ತಿಳಿದು ಬಂದಿದ್ದು, ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ 27 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ಪೊಲೀಸ್ ಆಯುಕ್ತ ಕುಲಪದೀಪ್ ಕುಮಾರ್ ಜೈನ್ ಅವರ ಆದೇಶದಂತೆ ಉಪ ಆಯುಕ್ತರ ಸೂಚನೆಯಂತೆ ಕೇಂದ್ರ ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಉರ್ವ ಠಾಣೆ ಪೊಲೀಸ್ ನಿರೀಕ್ಷಕರಾದ ಭಾರತಿ ಮತ್ತು ಪಿಎಸ್‌ಐ ಹರೀಶ್, ಎಎಸ್‌ಐ ವಿನಯ್ ಕುಮಾರ್, ಉಲ್ಲಾಸ್ ಮೊಹಾಲೆ, ಸಿಬಂದಿಯವರಾದ ಪ್ರಜ್ವಲ್, ಸಫ್ರೀನಾ ಆವರು ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.