Advertisement
ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಶಿಕ್ಷಕ, ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ಪರವಾಗಿ ಕೊಡಗಿನಲ್ಲಿ ಶಿಕ್ಷಕರೊಬ್ಬರಿಗೆ ಹಣ ಹಂಚುತ್ತಿದ್ದ ಪ್ರಾಂಶುಪಾಲ ಧರ್ಮಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಮೈತ್ರಿ ಸರ್ಕಾರವು ಶಿಕ್ಷಕ ಕ್ಷೇತ್ರದ ಚುನಾವಣೆಯನ್ನು ಭ್ರಷ್ಟಗೊಳಿಸಲು ಯತ್ನಿಸಿರುವುದು ಸಾಬೀತಾಗಿದೆ ಎಂದು ಹೇಳಿದರು.
Related Articles
Advertisement
ಹಿಂದಿನ ಕಾಂಗ್ರೆಸ್ ಸರ್ಕಾರ ಜಾತಿ ಆಧಾರಿತವಾಗಿ ಆಯ್ದ ವರ್ಗದ ವಿದ್ಯಾರ್ಥಿಗಳಿಗೆ ಪ್ರವಾಸ ವ್ಯವಸ್ಥೆ ಕಲ್ಪಿಸಿತ್ತು. ಇದೀಗ ಉಚಿತ ಬಸ್‌ಪಾಸ್‌ನಲ್ಲೂ ಜಾತಿ ತರಲಾಗಿದೆ. ಕೂಡಲೇ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಳೆದ 20 ದಿನಗಳಿಂದ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈವರೆಗೆ ಅವರ ಕುಟುಂಬದವರಿಗೆ ಸರ್ಕಾರ ಸ್ಪಂದಿಸಿಲ್ಲ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಜನ, ಜಾನುವಾರು ಪ್ರಾಣಹಾನಿ, ಆಸ್ತಿಪಾಸ್ತಿಗೆ ನಷ್ಟವಾಗಿ ಜನ ತೀವ್ರ ತೊಂದರೆ ಅನುಭವಿಸಿದರು.
ಸಿಡಿಲು ಬಡಿದು ಪಂಚಾಯ್ತಿ ಸದಸ್ಯರೊಬ್ಬರು ನಿಧನರಾದರು. ಆದರೂ, ನೊಂದವರಿಗೆ ಸಾಂತ್ವನ ಹೇಳಲಿಲ್ಲ. ಅಧಿಕಾರಿಗಳು ಸಹ ಸ್ಪಂದಿಸಲಿಲ್ಲ. ಇದು ಸರ್ಕಾರದ ತಾರತಮ್ಯದ ಆಡಳಿತ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಭಾರತಿ ಶೆಟ್ಟಿ, ಸಹ ವಕ್ತಾರ ಎ.ಎಚ್.ಆನಂದ್ ಇತರರು ಉಪಸ್ಥಿತರಿದ್ದರು.
ಬಿಜೆಪಿ ತಲೆಗೆ ಕಟ್ಟುವ ಯತ್ನ: ಉಡುಪಿಯಲ್ಲಿ ಇತ್ತೀಚೆಗೆ ನಡೆದ ದನದ ವ್ಯಾಪಾರಿ ಸಾವಿನ ಪ್ರಕರಣವನ್ನು ಬಿಜೆಪಿಯ ತಲೆಗೆ ಕಟ್ಟುವ ಪ್ರಯತ್ನ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯು ಸಮಾಜದ ವಾತಾವರಣ ಕಲುಷಿತಗೊಳಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿ ಎಂದು ಕಾಯುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಹಟ್ಟಿಗಳಲ್ಲಿನ ದನಗಳನ್ನು ಕದ್ದು ಸಾಗಿಸಲಾಗುತ್ತಿದೆ. ಇದು ವಸ್ತುಸ್ಥಿತಿ ತೋರಿಸುತ್ತದೆ ಎಂದು ಹೇಳಿದರು.
ಉಡುಪಿಯಲ್ಲಿ ಇತ್ತೀಚೆಗೆ ಸ್ಕಾರ್ಪಿಯೋ ವಾಹನದಲ್ಲಿ 14 ದನಗಳನ್ನು ತುಂಬಿ ಸಾಗಿಸಲಾಗುತ್ತಿತ್ತು. ಆಗ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಗಾಬರಿಯಿಂದ ವಾಹನವನ್ನು ಹಿಮ್ಮುಖವಾಗಿ ಚಲಿಸುವಾಗ ಅಪಘಾತ ಸಂಭವಿಸಿತ್ತು. ಒಳಗಿದ್ದ ಮೂರು ಮಂದಿ ಪರಾರಿಯಾದರು. ಹುಸೈನಬ್ಬ ಸೆರೆ ಸಿಕ್ಕರು. ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದರು.
ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಹಾಗಿದ್ದರೂ ಸಾವಿನ ಪ್ರಕರಣವನ್ನು ಬಿಜೆಪಿಯ ತಲೆಗೆ ಕಟ್ಟುವ ಕೆಲಸ ನಡೆಯುತ್ತಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಅನುಸರಿಸಿದ ಹಾದಿಯಲ್ಲೇ ಕುಮಾರಸ್ವಾಮಿಯವರು ಸಾಗುತ್ತಿದ್ದಾರೆ. ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಹಾಗೆಯೇ ದನಗಳ ಕಳವು ತಡೆಗೆ ಕೈಗೊಂಡಿರುವ ಕ್ರಮವೇನು ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.