Advertisement

ಲ್ಯಾಬ್‌ನಲ್ಲಿ ಸಂಭವಿಸಿದ್ದು ಆಕಸ್ಮಿಕ ಸ್ಫೋಟ!

12:37 AM Mar 03, 2020 | Lakshmi GovindaRaj |

ಬೆಂಗಳೂರು: ಮೂರು ತಿಂಗಳ ಹಿಂದೆ ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆದ ರಾಸಾಯನಿಕ ವಸ್ತು ಸ್ಫೋಟ “ಆಕಸ್ಮಿಕ ಘಟನೆಯೇ ಹೊರತು ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿಯಿಂದ ನಡೆದಿಲ್ಲ. ಅಲ್ಲದೆ, ಸ್ಫೋಟಕ ವಸ್ತುವನ್ನು ತಿಂಗಳುಗಟ್ಟಲೆ ಶೇಖರಿಸಿದ್ದೇ ಸ್ಫೋಟಕ್ಕೆ ಕಾರಣ’ ಎಂದು ವಿಶೇಷ ತನಿಖಾ ತಂಡ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

Advertisement

ರಾಜ್ಯ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ ಎಸ್‌.ಪರಶಿವಮೂರ್ತಿ ನೇತೃತ್ವದ ಐವರು ಅಧಿಕಾರಿಗಳ ತಂಡ ಈ ಬಗ್ಗೆ ತನಿಖೆ ನಡೆ ಸಿತ್ತು. ಯಾವುದೇ ಸ್ಫೋಟ ಸಂಭವಿಸಿ ಅವಘಡವಾದರೂ ಪ್ರಥಮ ಮಾಹಿತಿ ವರದಿ (ಎಫ್ಐಆರ್‌) ದಾಖಲಿಸಬೇಕು ಎಂಬ ನಿಯಮವಿದ್ದರೂ ಈ ಪ್ರಕರಣದಲ್ಲಿ ಇದುವರೆಗೂ ದಾಖಲಾಗಿಲ್ಲ. ಈಗ ಸಲ್ಲಿಸಲಾಗಿರುವ ವರದಿಯಲ್ಲಿಯೂ ಈ ಬಗ್ಗೆ ಮಾಹಿತಿ ಕಲೆ ಹಾಕಿಲ್ಲ ಅಥವಾ ಎಫ್ಐಆರ್‌ ದಾಖಲಿಸುವ ಬಗ್ಗೆ ಸಲಹೆ ನೀಡಲಾಗಿಲ್ಲ.

ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸ್ಫೋಟಗೊಂಡ ರಾಸಾಯನಿಕ ವಸ್ತುವನ್ನು ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ಕಾಲ ಶೇಖರಿಸಲಾಗಿತ್ತು. ಇದು ನಿಯಮಬಾಹಿರ. ಅಲ್ಲದೆ, ಅಧ್ಯಯನ ನಡೆಸಲು ಟ್ರೈ ಅಸಿಟೋನ್‌ ಟ್ರೈ ಪೆರಾಕ್ಸಿಡ್‌ (ಟಿಎಟಿಪಿ) ಎಂಬ ರಾಸಾಯನಿಕ ವಸ್ತುವನ್ನು ಬೆರೆಸಲು ಮುಂದಾದಾಗ ಸ್ಫೋಟಗೊಂಡು ಅವ ಘಡ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಸಮಸ್ಯೆಗಳ ಬಗ್ಗೆ ಉಲ್ಲೇಖ: ಎಫ್ಎಸ್‌ಎಲ್‌ನಲ್ಲಿರುವ ಕೆಲವೊಂದು ಸಮಸ್ಯೆಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸಿಬ್ಬಂದಿ ಕೊರತೆ, ಮೂಲಭೂತ ಸೌಲಭ್ಯಗಳ ಅಗತ್ಯತೆ ಹಾಗೂ ತಾಂತ್ರಿಕ ಉಪಕರಣಗಳ ಬಳಕೆ ಕುರಿತಂತೆ ಸರ್ಕಾರ ಮತ್ತು ಇಲಾಖೆ ಮುಖ್ಯಸ್ಥರ ಗಮನಕ್ಕೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಮಿತಿಯಲ್ಲಿದ್ದ ಅಧಿಕಾರಿಗಳು: ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ ಎಸ್‌. ಪರಶಿವಮೂರ್ತಿ, ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್‌ ಸೆಪಟ್‌, ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ಅಭಿನವ್‌ ಖರೆ, ಎಫ್ಎಸ್‌ಎಲ್‌ನ ರಾಸಾಯನಿಕ ವಿಭಾಗದ ಮುಖ್ಯಸ್ಥೆ ವಾಣಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಏರೋಸ್ಪೇಸ್‌ ವಿಭಾಗದ ಪ್ರಧಾನ ವಿಜ್ಞಾನಿ ಹಾಗೂ ಪ್ರೊಪೆಲ್ಲೆಂಟ್‌ ಕೆಮಿಸ್ಟ್ರಿ ತಜ್ಞರೂ ಆಗಿರುವ ಚಾರ್ಲಿ ಉಮ್ಮನ್‌ ಅವರ ತಂಡ ರಚಿಸಲಾಗಿತ್ತು.

Advertisement

ಏನಿದು ಘಟನೆ?: 2018 ಅ.15ರಂದು ರಾಯಚೂರು ಹೊರವಲಯದ ಮಂಚಾಲಿ ಲೇಔಟ್‌ನಲ್ಲಿ ನಡೆದ ಸ್ಫೋಟದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ವೇಳೆ ಪತ್ತೆಯಾದ ಸ್ಫೋಟಕ ವಸ್ತುವನ್ನು ಬಾಂಬ್‌ ನಿಷ್ಕ್ರಿಯಗೊಳಿ ಸದೆ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದರು. ಬಳಿಕ ಈ ಸ್ಫೋಟಕ ವನ್ನು ಬೆಂಗಳೂರಿನ ಎಫ್ಎಸ್‌ಎಲ್‌ಗೆ ಕಳುಹಿಸಲಾಗಿತ್ತು. 2019ರ ನ.29ರಂದು ಸರದಿ ಪ್ರಕಾರ ಪರೀಕ್ಷೆಗೊಳಪಡಿಸಲು ಮುಂದಾದಾಗ ಅವಘಡ ಸಂಭವಿಸಿತ್ತು. ಸ್ಫೋಟದಲ್ಲಿ ಎಫ್ಎಸ್‌ಎಲ್‌ನ ಅಧಿಕಾರಿ ಗಳಾದ ಶ್ರೀನಾಥ್‌ ಮತ್ತು ನವ್ಯಾ ಅವರಿಗೆ ಗಂಭೀರ ಗಾಯಗಳಾಗಿತ್ತು. ನವ್ಯಾ ಅವರ ಕಣ್ಣುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.

ಸಮಿತಿಯ ಸಲಹೆಗಳು
-ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಇಂಥ ಘಟನೆಗಳು ಸಂಭವಿಸಬಾರದು.
-ರಾಸಾಯನಿಕ ವಸ್ತುಗಳನ್ನು ನಿಗದಿತ ದಿನಕ್ಕಿಂತ ಅಧಿಕ ಕಾಲ ಶೇಖರಿಸಬಾರದು.
-ಸರದಿ ಪ್ರಕಾರವೇ ಸಂಶೋಧನೆ ನಡೆಸಬೇಕಿದ್ದರೆ ಅದನ್ನು ಸುರಕ್ಷಿತ ಜಾಗದಲ್ಲಿ ಶೇಖರಿಸಿಡಬೇಕು.
-ಎಲ್ಲಾ ರೀತಿಯಲ್ಲೂ ಅಗತ್ಯ ಮುನ್ನೆಚ್ಚರಿಕಾ ಕ್ರಮ ಗಳನ್ನು ತೆಗೆದುಕೊಳ್ಳಬೇಕು.

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next