ಮುಂಬಯಿ: ಕನ್ನಡ ಸಂಘ ಸಾಂತಾಕ್ರೂಜ್ ಕಳೆದ 64 ವರ್ಷಗಳಿಂದ ಕನ್ನಡಪರ ಕಾರ್ಯಗಳನ್ನು ಮಾಡುತ್ತಾ ಸಾಂತಾಕ್ರೂಜ್ ಪರಿಸರದಲ್ಲಿ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬಂದಿದೆ. ಅನೇಕ ಮಹಾನೀಯರು ಸಂಸ್ಥೆಯ ಅಧ್ಯಕ್ಷತೆಯನ್ನು ವಹಿಸಿ ಹಾಗೂ ಪದಾಧಿಕಾರಿಗಳಾಗಿ ಸಂಘದ ಉನ್ನತಿಗಾಗಿ ಶ್ರಮಿಸಿದ್ದಾರೆ. ಕಳೆದ 21 ವರ್ಷಗಳಿಂದ ಈ ಸಂಘದ ನೇತೃತ್ವವನ್ನು ವಹಿಸುವ ಜವಾಬ್ದಾರಿ ದೊರಕಿದ್ದು ನನ್ನ ಸೌಭಾಗ್ಯ. ನಾನು ಅಧ್ಯಕ್ಷತೆಯನ್ನು ವಹಿಸಿದ ಬಳಿಕ ಎಲ್ಲರ ಸಹಕಾರ ಬೆಂಬಲ ಪ್ರೋತ್ಸಾಹದಿಂದ ಸಂಘಕ್ಕೆ ಸ್ವಂತ ಕಚೇರಿ ಸಹಿತ ಬೆಳ್ಳಿಹಬ್ಬ ಹಾಗೂ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್. ವಿ. ಅಮೀನ್ ತಿಳಿಸಿದರು.
ಡಿ. 18ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಕನ್ನಡ ಸಂಘ ಸಾಂತಾಕ್ರೂಜ್ ಇದರ 63 ಹಾಗೂ 64ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾಸಭೆಯಲ್ಲಿ ಸರ್ವಾನುಮತದಿಂದ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಸುಜಾತಾ ಆರ್. ಶೆಟ್ಟಿ ಅವರನ್ನು ಹೂಗುತ್ಛ ನೀಡಿ ಅಭಿನಂದಿಸಿದರು. ಸುಜಾತಾ ಶೆಟ್ಟಿಯವರು ಹಲವಾರು ವರ್ಷಗಳಿಂದ ಕನ್ನಡ ಸಂಘದಲ್ಲಿ ಸಕ್ರಿಯರಾಗಿದ್ದಾರೆ. ವಿವಿಧ ಹುದ್ದೆಗಳನ್ನು ಅಲಂಕರಿಸಿ ಕೆಲಸ ಮಾಡಿದ ಅನುಭವವೂ ಅವರಲ್ಲಿದ್ದು, ಸಂಘದ ಬೆಳವಣಿಗೆಯಲ್ಲಿ ಅವರ ಕೊಡುಗೆ ತುಂಬಾ ಇದೆ. ಅಧ್ಯಕ್ಷ ಪದವಿಗೆ ಸಮರ್ಥರಾಗಿರುವ ಅವರು ಮಹಿಳೆಯರು ಸಂಘದಲ್ಲಿ ಸಕ್ರಿಯರಾಗಿ ಕೆಲಸ ಮಾಡುವಂತಾಗಲು ಅನೇಕ ಕಾರ್ಯಯೋಜನೆಗಳನ್ನು ಕೈಗೊಂಡಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಸಂಘ ಉತ್ತಮ ರೀತಿಯಲ್ಲಿ ಬೆಳೆದು ಸಂಘದ ಧ್ಯೇಯೋದ್ದೇಶ ನೆರವೇರುವುದು ಎಂಬ ಭರವಸೆ ನನಗಿದೆ. ಅವರಿಗೆ ನಾವೆಲ್ಲರೂ ಸಂಪೂರ್ಣ ಪ್ರೋತ್ಸಾಹ ಸಹಕಾರ ನೀಡಬೇಕಾದ ಅಗತ್ಯವಿದೆ ಎಂದರು.
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಸುಜಾತಾ ಆರ್. ಶೆಟ್ಟಿ ಮಾತನಾಡಿ, ಹಿರಿಯ ಕನ್ನಡ ಸಂಘ ಸಾಂತಾಕ್ರೂಜ್ ಇದರ ಅಧ್ಯಕ್ಷೆಯಾಗಿ ಆಯ್ಕೆ ಮಾಡಿರುವುದಕ್ಕಾಗಿ ನಾನು ಸಂಘದ ಎಲ್ಲ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಹಾಗೂ ಪ್ರಸ್ತುತ ಅಧ್ಯಕ್ಷ ಎಲ್. ವಿ. ಅಮೀನ್ ಅವರಿಗೆ ಚಿರಋಣಿಯಾಗಿದ್ದೇನೆ. ನೀವು ನನ್ನ ಮೇಲೆ ಇಟ್ಟ ವಿಶ್ವಾಸ-ಗೌರವಕ್ಕೆ ನಾನು ಸದಾ ತಲೆಬಾಗುವೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹದಿಂದ ಸಂಘದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಬೆಂಬಲದಿಂದ ಸಂಘದ ಧ್ಯೇಯೋದ್ದೇಶವನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂಬ ವಿಶ್ವಾಸ ನನಗಿದೆ. ಇದಕ್ಕೆ ಎಲ್ಲ ಮಹಿಳೆಯರ ಹಾಗೂ ಸಂಘದ ಸದಸ್ಯರ ಹಾಗೂ ಹಿರಿಯರ ಸಂಪೂರ್ಣ ಸಹಕಾರದ ಅಗತ್ಯವಿದೆ ಎಂದರು.
ಲಕ್ಷ್ಮೀ ಎನ್. ಕೋಟ್ಯಾನ್ ಪ್ರಾರ್ಥನೆಯೊಂ ದಿಗೆ ಮಹಾಸಭೆಯನ್ನು ಉದ್ಘಾಟಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಸುಜಾತಾ ಶೆಟ್ಟಿ ಅವರು ಗತವರ್ಷದ ವಾರ್ಷಿಕ ವರದಿ ಯನ್ನು ಮಂಡಿಸಿದರು. ಜತೆ ಕೋಶಾಧಿಕಾರಿ ದಿನೇಶ್ ಅಮೀನ್ ಅವರು ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ಮಹಾಸಭೆಯಲ್ಲಿ 2021-2022ರ ಲೆಕ್ಕಪರಿಶೋಧಕರನ್ನು ನೇಮಿಸಲಾಯಿತು.
2021-2024ರ ಸಾಲಿನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಕಳೆದ 21 ವರ್ಷಗಳಿಂದ ಸಂಘದ ಅಧ್ಯಕ್ಷತೆ ವಹಿಸಿ ಇದೀಗ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಂಘದ ನಿರ್ಗಮನ ಅಧ್ಯಕ್ಷ ಎಲ್. ವಿ. ಅಮೀನ್ ಅವರನ್ನು ಸಂಘದ ಪರವಾಗಿ ಪದಾಧಿಕಾರಿಗಳು ಹೂಗುತ್ಛ ನೀಡಿ ಅಭಿನಂದಿಸಿದರು. ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ…, ಜತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್ ಉಪಸ್ಥಿತರಿದ್ದರು. ಚಂದ್ರಹಾಸ್ ಜೆ. ಕೋಟ್ಯಾನ್ ವಂದಿಸಿದರು.
–ಚಿತ್ರ-ವರದಿ : ಸುಭಾಷ್ ಶಿರಿಯ