ನವದೆಹಲಿ: ಬಹುನಿರೀಕ್ಷಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ಶನಿವಾರ ಪ್ರಕಟಿಸಲಿದೆ. ಈ ಪೀಠದಲ್ಲಿ ಸಿಜೆಐ ಗೋಗೊಯಿ, ಜಸ್ಟೀಸ್ ಎಸ್ ಎ ಬೋಬ್ಡೆ, ಜಸ್ಟೀಸ್ ಡಿವೈ ಚಂದ್ರಚೂಡ್, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಅಬ್ದುಲ್ ನಝೀರ್ ಸೇರಿದ್ದು ಇವರ ಕಿರು ಪರಿಚಯ ಇಲ್ಲಿದೆ…
ಸಿಜೆಐ ಗೋಗೊಯಿ:
ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿರುವ ರಂಜನ್ ಗೋಗೋಯ್ ಜನಿಸಿದ್ದು 18 ನವೆಂಬರ್ 1954ರಂದು. ಅಸ್ಸಾಂನ ದಿಬುರ್ ಗಢ್ ಇವರ ಜನ್ಮ ಸ್ಥಳ. ಇವರ ತಂದೆ ಕೇಶವ್ ಚಂದ್ರ ಗೋಗೋಯ್ ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದರು. ಎರಡು ತಿಂಗಳ ಕಾಲ ಅಸ್ಸಾಂ ನ ಮುಖ್ಯಮಂತ್ರಿಯೂ ಆಗಿದ್ದರು.
ಇದನ್ನೂ ಓದಿ: Live Updates: ಅಯೋಧ್ಯಾ ಭೂ ವಿವಾದದ ಐತಿಹಾಸಿಕ ಸುಪ್ರೀಂ ತೀರ್ಪಿಗೆ ಕ್ಷಣಗಣನೆ
ಜಸ್ಟೀಸ್ ಎಸ್ ಎ ಬೋಬ್ಡೆ:
ಜಸ್ಟೀಸ್ ಶಾರದ್ ಅರವಿಂದ್ ಬೋಬ್ಡೆ ಸುಪ್ರೀಂಕೋರ್ಟ್ ನ ಮುಂದಿನ ನೂತನ ಸಿಜೆಐ. ಇವರು 2000ನೇ ಇಸವಿಯಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ಹೆಚ್ಚುವರಿ ಜಡ್ಜ್ ಆಗಿ ಸೇರ್ಪಡೆಗೊಂಡಿದ್ದರು. ಎರಡು ವರ್ಷಗಳ ನಂತರ ಮಧ್ಯಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 63 ವರ್ಷದ ಬೋಬ್ಡೆ ಮುಂಬೈಯಲ್ಲಿ ಜನಿಸಿದ್ದರು. ಅಯೋಧ್ಯೆ ಪ್ರಕರಣದ ವಿಶ್ವದ ಪ್ರಮುಖ ಪ್ರಕರಣಗಳಲ್ಲಿ ಒಮದಾಗಿದೆ ಎಂದು ಇತ್ತೀಚೆಗೆ ಎನ್ ಡಿಟಿವಿಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು.
ಜಸ್ಟೀಸ್ ಡಿವೈ ಚಂದ್ರಚೂಡ್:
ಸುಪ್ರೀಂಕೋರ್ಟ್ ನಲ್ಲಿ ದೀರ್ಘಾವಧಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ವೈವಿ ಚಂದ್ರಚೂಡ್ ಅವರ ಪುತ್ರ ಡಿವೈ ಚಂದ್ರಚೂಡ್. 2016ರಲ್ಲಿ ಚಂದ್ರಚೂಡ್ ಅವರನ್ನು ಪ್ರಣಬ್ ಮುಖರ್ಜಿ ಸುಪ್ರೀಂಕೋರ್ಟ್ ನ ಜಡ್ಜ್ ಆಗಿ ನೇಮಕ ಮಾಡಿದ್ದರು. ಈ ಮೊದಲು ಬಾಂಬೆ ಹೈಕೋರ್ಟ್ ಹಾಗೂ ಅಲಹಾಬಾದ್ ಹೈಕೋರ್ಟ್ ನಲ್ಲಿ ಸೇವೆ ಸಲ್ಲಿಸಿದ್ದರು. ಚಂದ್ರಚೂಡ್ ಅವರು ಮುಂಬೈ ಲಾ ಯೂನಿರ್ವಸಿಟಿ ಹಾಗೂ ಅಮೆರಿಕದ ಓಕ್ಲಾಹೋಮಾ ಯೂನಿರ್ವಸಿಟಿಯಲ್ಲಿ ಅತಿಥಿ ಪ್ರೊಫೆಸರ್ ಆಗಿದ್ದಾರೆ.
ಜಸ್ಟೀಸ್ ಅಶೋಕ್ ಭೂಷಣ್:
ಜಸ್ಟೀಸ್ ಅಶೋಕ್ ಭೂಷಣ್ ಅವರು 1979ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಅಲಹಾಬಾದ್ ಹೈಕೋರ್ಟ್ ನಲ್ಲಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದರು. 2001ರಲ್ಲಿ ಜಡ್ಜ್ ಆಗಿ ನೇಮಕಗೊಂಡಿದ್ದರು. 2014ರಲ್ಲಿ ಕೇರಳ ಹೈಕೋರ್ಟ್ ಗೆ ವರ್ಗಾವಣೆಗೊಂಡಿದ್ದರು. ಕೆಲವು ತಿಂಗಳ ಕಾಲ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 2015ರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 2016ರ ಮೇ ತಿಂಗಳಿನಲ್ಲಿ ಭೂಷಣ್ ಅವರು ಸುಪ್ರೀಂಕೋರ್ಟ್ ಜಸ್ಟೀಸ್ ಆಗಿ ನಿಯುಕ್ತಿಗೊಂಡಿದ್ದರು.
ಜಸ್ಟೀಸ್ ಅಬ್ದುಲ್ ನಝೀರ್:
1983ರಲ್ಲಿ ಜಸ್ಟೀಸ್ ಅಬ್ದುಲ್ ನಝೀರ್ ಅವರು ವಕೀಲರಾಗಿ ವೃತ್ತಿ ಆರಂಭಿಸಿದ್ದರು. ಬಳಿಕ ಸುಮಾರು 20 ವರ್ಷಗಳ ಕಾಲ ಕರ್ನಾಟಕ ಹೈಕೋರ್ಟ್ ನಲ್ಲಿ ವಕೀಲರಾಗಿದ್ದರು. 2003ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾಗಿದ್ದರು. 2017ರಲ್ಲಿ ನಝೀರ್ ಅವರು ಸುಪ್ರೀಂಕೋರ್ಟ್ ಜಸ್ಟೀಸ್ ಆಗಿ ಆಯ್ಕೆಯಾಗಿದ್ದರು.