ಬೆಂಗಳೂರು: ರೋಟರಿ ಕ್ಲಬ್ ಲಾಲ್‌ಬಾಗ್ ಸಂಸ್ಥೆ ಇದೇ 22ರಿಂದ ಜೂನ್ 5ರ ವರೆಗೆ 45 ದಿನಗಳ ಕಾಲ ಪಂಚಭೂತಗಳ (ಆಕಾಶ, ಭೂಮಿ, ವಾಯು, ಜಲ ಮತ್ತು ಆಗ್ನಿ) ಬಗ್ಗೆ ಜಾಗೃತಿ ಮೂಡಿಸಲು “ಅವನಿ ಉತ್ಸವ’ ಆಯೋಜಿಸಿದೆ.
ಶನಿವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗಕರ್ಮಿ ಪ್ರಕಾಶ್ ಬೆಳವಾಡಿ, ಏ.22ರಂದು ಬೆಳಗ್ಗೆ 10 ಗಂಟೆಗೆ ದೊಮ್ಮಲೂರಿನ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಉತ್ಸವ ನಡೆಯಲಿದೆ. ನಟ ಮತ್ತು ಅವನಿ ರಾಯಭಾರಿ ಯಶ್ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು,
-ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಏ.23ರಿಂದ 28ರವರೆಗೆ ಬೆಂಗಳೂರಿನ ಕೆರೆಗಳು ಮತ್ತು ಭವಿಷ್ಯದಲ್ಲಿ ನಗರಕ್ಕೆ ಬೇಕಾದ ಯೋಜನೆಗಳು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ವಿಚಾರ ಸಂಕಿರಣಗಳು ನಡೆಯಲಿವೆ ಎಂದರು.
ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನೃತ್ಯ ಮತ್ತು ಹಾಸ್ಯ ನಾಟಕಗಳ ಪ್ರದರ್ಶನ ಇರಲಿದೆ. ಮಕ್ಕಳ ಚಲನಚಿತ್ರೋತ್ಸವ, ಸಾಕ್ಷ್ಯ ಚಿತ್ರಗಳನ್ನು ತೋರಿಸಲಾಗುತ್ತದೆ. ವಿಪ್ರೋ ಸಂಸ್ಥೆಯ ಸಹಾಯದಿಂದ ನಾಲ್ಕು ಸಾವಿರ ಸಂಚಾರ ಪೊಲೀಸರಿಗೆ ಉಚಿತ ಮಾಸ್ಕ್ ವಿತರಿಸಲಿದ್ದೇವೆ ಎಂದು ಪ್ರಕಾಶ್ ಬೆಳವಾಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಸರ ನಾಶದ ಬಗ್ಗೆ ಜಾಗೃತಿ ಮತ್ತು ಪರಿಸರ ಉಳಿಸಿಕೊಳ್ಳಲು ಇರುವ ಮಾರ್ಗಗಳ ಬಗ್ಗೆ ಸಂದೇಶ ಸಾರಲು 27 ಕಲಾವಿದರು ಕಲಾ ಪ್ರದರ್ಶನ ನೀಡಲಿದ್ದಾರೆ. ಪ್ರದರ್ಶನದಲ್ಲಿ ಮಾರಾಟವಾದ ಕಲಾಕೃತಿಗಳಿಂದ ಬರುವ ಹಣವನ್ನು ಪರಿಸರ ಸುಧಾರಣಾ ಯೋಜನೆಗೆ ಬಳಸಲಾಗುವುದು ಎಂದರು.
ವಿಶ್ವ ಪರಿಸರ ದಿನಾಚರಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜೂ.1ರಿಂದ 5ರವರೆಗೆ ಕ್ರಮವಾಗಿ ಲಾಲ್‌ಬಾಗ್, ಸ್ಯಾಂಕಿ ಟ್ಯಾಂಕ್, ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ, ರಾಜಾಜಿನಗರ ಮತ್ತು ವಿಧಾನಸೌಧದಿಂದ ಮೆಟ್ರೋ ರಂಗೋಲಿ ಕೇಂದ್ರದ ವರೆಗೆ ಬೈಸಿಕಲ್ ಜಾಥಾ ನಡೆಯಲಿದೆ ಎಂದು ಬೆಳವಾಡಿ ಮಾಹಿತಿ ನೀಡಿದರು.