ವ್ಲಾಡಿವೋಸ್ಟಾಕ್/ಮಾಸ್ಕೋ: ಯಾವುದೇ ದೇಶದ ಆಂತರಿಕ ವ್ಯವಹಾರದಲ್ಲಿ ಇತರ ದೇಶವು ಮೂಗು ತೂರಿಸುವುದನ್ನು ಭಾರತ ಮತ್ತು ರಷ್ಯಾ ಒಪ್ಪುವುದಿಲ್ಲ- ಹೀಗೆಂದು ರಷ್ಯಾ ಹಾಗೂ ಭಾರತ ಜಂಟಿಯಾಗಿ ಬುಧವಾರ ಘೋಷಿಸಿದ್ದು, ಪಾಕಿಸ್ತಾನವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದೆ.
ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವ್ಲಾಡಿವೊಸ್ಟೋಕ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಬುಧವಾರ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದು, ನಂತರ ನಡೆಸಿದ ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖೀಸಿ ಈ ಹೇಳಿಕೆ ನೀಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿರುವುದು ಸಂಪೂರ್ಣ ಆಂತರಿಕ ವಿಷಯ ಎಂದು ಭಾರತವು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸಿದೆ. ಹೀಗಾಗಿ ಪಾಕಿಸ್ತಾನ ಈ ವಾಸ್ತವವನ್ನು ಒಪ್ಪಿಕೊಳ್ಳಬೇಕು ಎಂದು ಭಾರತವು ಪಾಕ್‌ಗೆ ಸೂಚಿಸಿದೆ. ಈ ನಿಟ್ಟಿನಲ್ಲಿ ಭಾರತಕ್ಕೆ ರಷ್ಯಾ ಬೆಂಬಲ ನೀಡಿದೆ.
ಇದೇ ವೇಳೆ, ಚೆನ್ನೈನಿಂದ ವ್ಲಾಡಿವೋಸ್ಟೋಕ್‌ಗೆ ಸರಕು ಸಾಗಣೆಗೆ ಜಲ ಸಾರಿಗೆ ಆರಂಭದ ಕುರಿತ ಪ್ರಸ್ತಾವನೆಗೆ ಎರಡೂ ದೇಶಗಳು ಸಹಿ ಹಾಕಿವೆ. ಅಲ್ಲದೆ, ಗಗನಯಾನ ಯೋಜನೆ ಸಂಬಂಧ ಎರಡೂ ದೇಶಗಳು ಸಹಕಾರಕ್ಕಾಗಿ ಸಹಿ ಹಾಕಿವೆ. ಇದರ ಹೊರತಾಗಿ ರಕ್ಷಣೆ, ವೈಮಾನಿಕ, ಸಾಗರೋತ್ತರ ಸಂಪರ್ಕ, ಇಂಧನ, ನೈಸರ್ಗಿಕ ಇಂಧನ, ಪೆಟ್ರೋಲಿಯಂ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಒಟ್ಟು 15 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಮಾಡಿವೆ. ಜ್ವೆಜ್ದಾ ಹಡಗು ತಯಾರಿಕೆ ಸಂಕೀರ್ಣಕ್ಕೆ ಭೇಟಿ ಮೋದಿ ಹಾಗೂ ಪುಟಿನ್ ಜ್ವೆಜ್ದಾ ಹಡಗು ತಯಾರಿಕೆ ಸಂಕೀರ್ಣಕ್ಕೆ ಭೇಟಿ ನೀಡಿದ್ದು, ಇಲ್ಲಿನ ಅತ್ಯಾಧುನಿಕ ತಂತ್ರಜ್ಞಾನವನ್ನು ವೀಕ್ಷಿಸಿದರು.
ಮಾಸ್ಕೋಗೆ ಆಹ್ವಾನ: 2020 ಮೇನಲ್ಲಿ ಮಾಸ್ಕೋದಲ್ಲಿ ನಡೆಯಲಿರುವ 75ನೇ ವಿಜಯೋತ್ಸವಕ್ಕೆ ಪ್ರಧಾನಿ ಮೋದಿಯನ್ನು ಪುಟಿನ್ ಆಹ್ವಾನಿಸಿದ್ದಾರೆ. ನಾಜಿಗಳ ವಿರುದ್ಧ ರಷ್ಯನ್ನರು ನಡೆಸಿದ ಹೋರಾಟದಲ್ಲಿ ಜಯಗಳಿಸಿದ ಸಂಭ್ರಮವನ್ನು ಆಚರಣೆ ಮಾಡಲಾಗುತ್ತದೆ.
ಗಾಂಧಿ ಅಂಚೆ ಚೀಟಿ
ಮಹಾತ್ಮ ಗಾಂಧಿ 150ನೇ ಜಯಂತಿಯಂದು ವಿಶೇಷ ಅಂಚೆ ಚೀಟಿಯನ್ನು ರಷ್ಯಾ ಬಿಡುಗಡೆ ಮಾಡಲಿದೆ ಎಂದು ಪುಟಿನ್ ಉಲ್ಲೇಖೀಸಿದ್ದಾರೆ. ನಂತರ ಈ ಬಗ್ಗೆ ಪ್ರಕಟಣೆ ಹೊರಡಿಸಿ ಮಾಸ್ಕೋಗೆ ಭಾರತದ ರಾಯಭಾರಿ ಡಿ.ಬಿ.ವೆಂಕಟೇಶ್ ವರ್ಮಾ, ಗಾಂಧಿ ನೆನಪಿಗಾಗಿ ಈ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದಿದ್ದಾರೆ.