Advertisement
ಕಳೆದ ಮೂರ್‍ನಾಲ್ಕು ದಿನಗಳಿಂದ ಎಲ್ ಆ್ಯಂಡ್ ಟಿ ಕಂಪೆನಿಯ ಎಂಜಿನಿಯರ್‌ಗಳ ಮಾರ್ಗದರ್ಶನದಲ್ಲಿ ಬೃಹತ್ ಕ್ರೇನ್‌ಗಳ ಸಹಾಯದಿಂದ ಶ್ರೀ ಮಧ್ವಾಚಾರ್ಯರ ಏಕಶಿಲಾ ಪ್ರತಿಮೆಯನ್ನು ಪಿಲ್ಲರ್‌ಗಳ ಮೇಲೆ ಎತ್ತಿ ನಿಲ್ಲಿಸುವ ಕಾರ್ಯ ನಡೆಯುತ್ತಿದ್ದು, ಸೋಮವಾರ ಸಂಜೆ ಅಂತಿಮ ಹಂತದಲ್ಲಿ ತಾಂತ್ರಿಕ ಅಡಚಣೆ ಎದುರಾಗಿದ್ದು, ಮಂಗಳವಾರ ಪ್ರತಿಮೆ ಪ್ರತಿಷ್ಠಾಪನೆಗೊಳ್ಳುವ ನಿರೀಕ್ಷೆಯಿದೆ. ಶ್ರೀ ಮಧ್ವಾಚಾರ್ಯರ ಏಕಶಿಲಾ ವಿಗ್ರಹವನ್ನು ಆಚಾರ್ಯರು ಅವತರಿಸಿದ ಪಾಜಕ ಸಮೀಪದಲ್ಲಿರುವ ಅದಮಾರು ಮಠದ ಆಡಳಿತಕ್ಕೊಳಪಟ್ಟಿರುವ ಕುಂಜಾರುಗಿರಿ ಬೆಟ್ಟದಲ್ಲಿ ಪ್ರತಿಷ್ಠಾಪಿಸಬೇಕು ಎನ್ನುವುದು ಪಲಿಮಾರು ಶ್ರೀಗಳ ಸಂಕಲ್ಪವಾಗಿತ್ತು.
32 ಅಡಿ ಎತ್ತರ (110 ಟನ್ ತೂಕ)ದ ವಿಗ್ರಹವನ್ನು 40 ಅಡಿ ಎತ್ತರದ (250 ಟನ್ ಭಾರ ಹೊರುವ ಸಾಮರ್ಥ್ಯ) ಪಿಲ್ಲರ್‌ಗಳ ಮೇಲೆ ಅಳವಡಿಸಲಾಗಿರುವ 8 ಅಡಿ ದಪ್ಪದ ಪದ್ಮ ಪೀಠದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಮೇ 8ರಿಂದ-10ರವರೆಗೆ ಪ್ರತಿಷ್ಠಾಪನಾ ಕಾರ್ಯ: ಪಲಿಮಾರು ಶ್ರೀ
ಆಚಾರ್ಯ ಮಧ್ವರ ಏಕಶಿಲಾ ವಿಗ್ರಹದ ಪ್ರತಿಷ್ಠಾ ಧಾರ್ಮಿಕ ವಿಧಿ ವಿಧಾನ ಮತ್ತು ಅಭಿಷೆೇಕ ಹಾಗೂ ಇತರ ಕಾರ್ಯಗಳು ಮುಂದಿನ ಮೇ 8ರಿಂದ 10ರ ವರೆಗೆ ನಡೆಯಲಿದೆ. ಬಳಿಕ ಇಲ್ಲಿ ನಿತ್ಯ ಪೂಜೆ ಸಹಿತ ಭಕ್ತರಿಗೆ ಧ್ಯಾನಕ್ಕೆ ಅಗತ್ಯವಾಗಿರುವ ಆಧ್ಯಾತ್ಮಿಕ ವಾತಾವರಣ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ವಿಗ್ರಹ ಪ್ರತಿಷ್ಠಾಪನೆಗೆ ಸಂಕಲ್ಪಿಸಿರುವ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
Related Articles
ಕುಂಜಾರುಗಿರಿ – ಪಾಜಕ ಕ್ಷೇತ್ರ ಆಚಾರ್ಯರು ಅವತಾರ ಮಾಡಿದ ಕ್ಷೇತ್ರ. ಬಾಲ್ಯದಲ್ಲಿ ತಿರುಗಾಡಿದ ಕ್ಷೇತ್ರ, ದುರ್ಗಾ ಬೆಟ್ಟದಲ್ಲೇ ಧ್ಯಾನಸ್ಥರಾಗಿದ್ದು, ಅದೇ ಕಾರಣದಿಂದ ಇಲ್ಲಿ ಮಧ್ವಾಚಾರ್ಯರ ವಿಗ್ರಹ ಪ್ರತಿಷ್ಠಾಪಿಸಲು ಸಂಕಲ್ಪಿಸಲಾಗಿದೆ ಎಂದು ಪಲಿಮಾರು ಶ್ರೀ ತಿಳಿಸಿದ್ದಾರೆ. ಕಿರಿಯ ಶ್ರೀ ಈಶಪ್ರಿಯ ತೀರ್ಥರು ಉಪಸ್ಥಿತರಿದ್ದರು.
Advertisement
ವಿಶೇಷ ಶಿಲೆಯಲ್ಲಿ ವಿಗ್ರಹಬೆಂಗಳೂರಿನ ದೇವನಹಳ್ಳಿಯಿಂದ ತರಿಸಲಾಗಿದ್ದ ಕೋಯ್ನಾ ಗ್ರೇ ಗ್ರಾನೈಟ್ ಶಿಲೆಯನ್ನು ಕೆ.ಎಂ. ಶೇಷಗಿರಿ ಅವರ ವಿನ್ಯಾಸ, ಪರಿಕಲ್ಪನೆ ಮತ್ತು ಮೇಲ್ವಿಚಾರಣೆಯಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಶಿಲ್ಪಿ ಅಶೋಕ್ ಗುಡಿಗಾರ್ ಬೆಂಗಳೂರು ಅವರ ಮಾರ್ಗದರ್ಶನದಲ್ಲಿ, ಶಿಲ್ಪಿ ಕುಮಾರ್ ಅವರ ನೇತೃತ್ವದ ಶಿಲ್ಪಿಗಳ ತಂಡ ಜಗದ್ಗುರು ಮಧ್ವಾಚಾರ್ಯರ ವಿಗ್ರಹವನ್ನಾಗಿ ಪರಿವರ್ತಿಸಿದ್ದರು. ಆರ್ಕಿಟೆಕ್ಟ್ ರಾಜೇಂದ್ರ ಮಯ್ಯ ಅವರ ಮಾರ್ಗದರ್ಶನದಲ್ಲಿ ಎಂಜಿನಿಯರ್ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಕಾಂಕ್ರೀಟ್ ಪಿಲ್ಲರ್ ಅಳವಡಿಕೆ ಸಹಿತ ನೆಲ ಸಮತಟ್ಟು ಮಾಡುವ ಕೆಲಸ ನಿರ್ವಹಿಸಿದ್ದರು. 32 ಪ್ರತಿಮಾ ಲಕ್ಷಣ
32 ಪ್ರತಿಮಾ ಲಕ್ಷಣ ಹೊಂದಿರುವ ಶ್ರೀ ಮಧ್ವಾಚಾರ್ಯರ ಶಿಲಾ ಪ್ರತಿಮೆ ಜಗತ್ತಿನಲ್ಲೇ – ದಕ್ಷಿಣ ಭಾರತದಲ್ಲೇ ಪ್ರಥಮದ್ದಾಗಿದೆ. ತಂತ್ರಸಾರ ಗ್ರಂಥದಲ್ಲಿ ಆಚಾರ್ಯ ಮಧ್ವರೇ ತಿಳಿಸಿರುವಂತೆ ಪ್ರತಿಮೆ ನಿರ್ಮಿಸಲಾಗಿದೆ. 32 ಅಡಿ ಎತ್ತರದ ಪ್ರತಿಮೆಯನ್ನು 32 ತಿಂಗಳ ಕಾಲ ಕೆತ್ತಲಾಗಿದೆ. ಗ್ರಂಥಸ್ಥವಾಗಿ ಕೆತ್ತಿರುವ ವಿಗ್ರಹದ ಮೂಲಕ ಚೋಳ ಶೈಲಿ, ಹೊಯ್ಸಳ ಶೈಲಿಯೂ ಸೇರಿದಂತೆ ದಕ್ಷಿಣ ಭಾರತದ ಅನೇಕ ಶೈಲಿಗಳನ್ನು ಪರಿಚಯಿಸಲಾಗಿದೆ ಎಂದು ವಿನ್ಯಾಸ, ಪರಿಕಲ್ಪನೆ ಮತ್ತು ಮೇಲ್ವಿಚಾರಕರಾಗಿರುವ ಕೆ.ಎಂ. ಶೇಷಗಿರಿ ಅವರು ತಿಳಿಸಿದರು. ►Special Photo Gallery►ಕುಂಜಾರುಗಿರಿಯಲ್ಲಿ ಎದ್ದುನಿಂತ ಆಚಾರ್ಯ ಮಧ್ವರ ಶಿಲಾಪ್ರತಿಮೆ: //bit.ly/2ocW1S5