Advertisement

ಮಿಜಾರು ಬಂಗಬೆಟ್ಟು ಶಾಲೆಗೀಗ 112ನೇ ವರ್ಷದ ಸಂಭ್ರಮ

10:15 AM Nov 17, 2019 | Team Udayavani |

1907 ಶಾಲೆ ಆರಂಭ
ಪ್ರಸಕ್ತ ಸಾಲಿನಿಂದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಗಿ ಪರಿವರ್ತನೆ

Advertisement

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ಹಾದುಹೋಗುವ ಈಗಿನ ತೆಂಕಮಿಜಾರು ಗ್ರಾ.ಪಂ. ವ್ಯಾಪ್ತಿಯ ಬಡಗಮಿಜಾರು ಗ್ರಾಮದಲ್ಲಿ 1907ರಲ್ಲಿ ಬಂಗಬೆಟ್ಟುಗುತ್ತು ಮನೆಯ ಪಟೇಲ್‌ ದಿ| ತಿಮ್ಮಯ್ಯ ಶೆಟ್ಟಿ ಅವರು ದಾನವಾಗಿತ್ತ 43 ಸೆಂಟ್ಸ್‌ ಜಾಗದಲ್ಲಿ ಆರಂಭಗೊಂಡಿತು. “ಬಂಗಬೆಟ್ಟು ಶಾಲೆ ‘ ಎಂದೇ ಹೆಸರಾದ ಮಿಜಾರಿನ ಸ.ಹಿ.ಪ್ರಾ. ಕನ್ನಡ-ಆಂಗ್ಲ ಮಾಧ್ಯಮ ಶಾಲೆಯೂ ಈ ವರ್ಷದಿಂದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಗಿ ಪರಿವರ್ತನೆಗೊಂಡಿದೆ.

ನಿಸ್ವಾರ್ಥ ಸೇವೆ
1907ರಲ್ಲಿ ಮಿಜಾರು ಬೆಳೆಚ್ಚಾರು ಮತ್ತು ಮೂಡುಬಿದಿರೆ ಹೊರತುಪಡಿಸಿದರೆ ಈ ನಡುವೆ ಯಾವ ಶಾಲೆಗಳು ಇರದಿದ್ದಾಗ ಊರವರು ಮುತುವರ್ಜಿಯಲ್ಲಿ ಸರಕಾರದ ಮೂಲಕ ಬಂಗಬೆಟ್ಟು ಶಾಲೆ ತೆರೆದುಕೊಂಡಿತ್ತು. ಈಗ ವ್ಯಾಪ್ತಿಯಲ್ಲಿ ಈಗ 3 ಸರಕಾರಿ, 2 ಖಾಸಗಿ ಪ್ರಾಥಮಿಕ ಶಾಲೆಗಳಿವೆ.

ಕೊರಗ ಶೆಟ್ಟಿ ಅವರು ಪ್ರಾರಂಭದ ವರ್ಷಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಲ್ಲಿಸಿದವರು. 1941-42ರ ಸುಮಾರು 42 ಮಂದಿ, 1992ರ ಸುಮಾರಿಗೆ 529 ಮಕ್ಕಳಿದ್ದರು. ಒಮ್ಮೊಮ್ಮೆ ಈ ಸಂಖ್ಯೆ 600ರ ಗಡಿದಾಟಿದ್ದೂ ಇದೆ. 2014ರಿಂದ ನಾರಾಯಣ ಎಂ. ಮುಖ್ಯೋಪಾಧ್ಯಾಯರಾಗಿದ್ದು ಸದ್ಯ 10 ಮಂದಿ ಶಿಕ್ಷಕರು, 232 ವಿದ್ಯಾರ್ಥಿಗಳಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದ ಪುತ್ತಿಗೆ ನರಸಿಂಹ ರಾವ್‌, ಬಾಸೆಲ್‌ ಪಿರೇರಾ, ವೀರಶೇಖರ, ಹೂವಯ್ಯ ಶೆಟ್ಟಿಗಾರ್‌, ವಾಸುದೇವ ರಾವ್‌, ಬಂಗಬೆಟ್ಟು ಸೀತಾರಾಮ ಶೆಟ್ಟಿ, ಇರುವೈಲ್‌ ಸದಾಶಿವ ಶೆಟ್ಟಿ, ಗುಣಪಾಲ ಬಲ್ಲಾಳ್‌, ಯಕ್ಷಗಾನ ಕಲಾವಿದ ಎಂ. ಕೃಷ್ಣ ಶೆಟ್ಟಿ, ಲಿಲ್ಲಿ ಸೆರಾವೋ, ಶೋಭಾ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

Advertisement

ರಾ. ಹೆದ್ದಾರಿಯ ಪೂರ್ವಭಾಗದಲ್ಲಿ ಕೊರಗ ಶೆಟ್ಟಿ ಅವರ ಕಾಲದಲ್ಲೇ 2.95 ಎಕ್ರೆ ಸರಕಾರಿ ಜಾಗ ಲಭಿಸಿದ್ದು ಅದರಲ್ಲಿ ಆಟದ ಮೈದಾನವಿದೆ. 1962ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರುವವರೆಗೆ ಎರಡೇ ಕೊಠಡಿಗಳಲ್ಲಿ ನಡೆಯುತ್ತಿದ್ದ ಈ ಶಾಲೆಯು ದಿ| ಎಂ.ಎ. ಶೇಕಬ್ಬ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಮತ್ತೆ ಮೂರು ಕೊಠಡಿಗಳನ್ನು ಹೊಂದಿತು. ಬಂಗಬೆಟ್ಟುಗುತ್ತು ಶೇಖರ ಶೆಟ್ಟಿ ಅವರು ಆವರಣ ಗೋಡೆ ನಿರ್ಮಿಸಿಕೊಟ್ಟಿದ್ದಾರೆ. ಶಾಲಾ ಹಳೆವಿದ್ಯಾರ್ಥಿ ದೇಲಂತಬೆಟ್ಟು ಕೆ.ಸಿ. ಶೆಟ್ಟಿ ಅವರಿಂದ ರಂಗಮಂದಿರ ಕೊಡುಗೆಯಾಗಿ ಬಂದಿದೆ. ಎಂ.ಜಿ. ಮಹಮ್ಮದ್‌. , ಎಂ.ಎ.ಎಸ್‌. ಅಬೂಬಕ್ಕರ್‌ ಸಹಿತ ಎಸ್‌ಕೆಡಿಆರ್‌ಡಿಪಿ ಮೊದಲಾದ ಸಂಘಟನೆಗಳು ಈ ಶಾಲಾಭಿವೃದ್ಧಿಗೆ ನೆರವಾಗಿವೆ.

ಸ್ವಚ್ಛ ವಿದ್ಯಾಲಯ ಪುರಸ್ಕಾರ
ಕೇಂದ್ರ ಸರಕಾರವು 2017ರಲ್ಲಿ ಸ್ವಚ್ಛ ಭಾರತ್‌-ಸ್ವತ್ಛ ವಿದ್ಯಾಲಯ ಯೋಜನೆಯನ್ವಯ ನೀಡಿದ ಸ್ವಚ್ಛ ವಿದ್ಯಾಲಯ ಪುರಸ್ಕಾರದಲ್ಲಿ ದೊರೆತ 1 ಲಕ್ಷದ ರೂ. ಬಹುಮಾನ ಮೊತ್ತವನ್ನು 4000 ಲೀ. ನ ಟ್ಯಾಂಕ್‌ ಸಹಿತ ಶುದ್ಧ ಕುಡಿಯುವ ನೀರು ಪೂರೈಕೆಗೆ ಬಳಕೆ ಮಾಡಲಾಗಿದೆ. ಸ್ಥಳೀಯ ಯುವಶಕ್ತಿ ಯುವಕ ಮಂಡಲ, ತುಡರ್‌ ಚಾರಿಟೆಬಲ್‌ ಟ್ರಸ್ಟ್‌ ಮತ್ತು ತುಳುನಾಡ ಯುವಕ ಮಂಡಲದಿಂದ 1 ಲಕ್ಷಕ್ಕೂ ರೂ. ಅಧಿಕ ವೆಚ್ಚದಲ್ಲಿ ಶೌಚಾಲಯವನ್ನು ನವೀಕರಿಸಲಾಗಿದೆ.

ಸುಸಜ್ಜಿತ ಸೌಲಭ್ಯಗಳು
ಶಾಲೆಯಲ್ಲಿ ನಲಿಕಲಿ ತರಗತಿ, ಸುಸಜ್ಜಿತ ಪ್ರಯೋಗಾಲಯ, ಗ್ರಂಥ ಭಂಡಾರ, ಎಲ್ಲ ಮಕ್ಕಳಿಗೂ ಕಂಪ್ಯೂಟರ್‌ ಶಿಕ್ಷಣ, ವಿಶಾಲ ಕ್ರೀಡಾಂಗಣದಲ್ಲಿ ಕ್ರೀಡಾ ತರಬೇತಿ, ಯಕ್ಷಗಾನ, ಸ್ಕೌಟ್ಸ್‌, ಗೈಡ್ಸ್‌ ದಳಗಳು ಸಕ್ರಿಯವಾಗಿವೆ. ಶೈಕ್ಷಣಿಕ ಪ್ರವಾಸ, ಪ್ರತಿಭಾ ವಾರ್ಷಿಕೋತ್ಸವ ಏರ್ಪಡಿಸಲಾಗುತ್ತಿದೆ. ಶಾಲಾವರಣದಲ್ಲಿ ವಿದ್ಯಾರ್ಥಿಗಳಿಂದ ಹೂದೋಟ, ವಲಯ ರೈತಸಂಘದವರ ಸಹಕಾರದಲ್ಲಿ ವಿವಿಧ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಇಂಡಿಯನ್‌ ಏರ್‌ಲೈನ್ಸ್‌ ಸ್ಟೇಶನ್‌ ಮ್ಯಾನೇಜರ್‌ ಆಗಿದ್ದ ತೋಡಾರು ಆನಂದ ಶೆಟ್ಟಿ, ಉದ್ಯಮಿ ಕೆ.ಸಿ. ಶೆಟ್ಟಿ, ಅರುಣ್‌ ಕುಮಾರ್‌ ಶೆಟ್ಟಿ, ಮಿಜಾರು ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಉದಯ ಶೆಟ್ಟಿ, ಸಾರಿಗೆ ಉದ್ಯಮಿ ಡಿ. ಉಸ್ಮಾನ್‌, ದಿವಾಕರ ಶೆಟ್ಟಿ ಅವರು ಶಾಲೆಯ ಹಳೆ ವಿದ್ಯಾರ್ಥಿಗಳು.

ಕರ್ನಾಟಕ ಪಬ್ಲಿಕ್‌ ಸ್ಕೂಲ್‌
ರಾಜ್ಯದ ನೂರು ಕಡೆ ಈ ಸಾಲಿನಲ್ಲಿ ಪ್ರಾರಂಭವಾದ 100 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗ‌ಳಲ್ಲಿ “ಬಂಗಬೆಟ್ಟು ಶಾಲೆ’ಯೂ ಒಂದು. ಅದರಂತೆ, ಎಲ್‌ಕೆಜಿಯಿಂದ ಪಿಯುಸಿ ತನಕ ಎಲ್ಲ ವಿಭಾಗಗಳೂ ಒಂದೇ ಆವರಣದಲ್ಲಿರುವಂತೆ ರೂಪಿತವಾಗುವ ನಿರೀಕ್ಷೆ ಇದೆ. ತರಗತಿಗೊಂದು ಶಿಕ್ಷಕರ ನೇಮಕ ಸೇರಿದಂತೆ ಖಾಸಗಿ ಶಾಲೆಗಳಲ್ಲಿರುವ ಎಲ್ಲ ಸೌಕರ್ಯಗಳೂ ಇಲ್ಲಿ ಲಭಿಸಲಿವೆ.

ಪೂರ್ವ ಪ್ರಾಥ ಮಿಕದಿಂದ ಪ.ಪೂ. ವರೆಗಿನ ಒಂದೇ ಆವರಣದಲ್ಲಿ ಶಿಕ್ಷಣ ಲಭ್ಯವಾಗುವುದು ಮತ್ತೂಂದು ರೀತಿಯಲ್ಲಿ ಬಹುದೊಡ್ಡ ಉಪಯೋಗ. ಈಗ ಕೆ.ಪಿ.ಎಸ್‌. ಆಗಿರುವುದರಿಂದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ.
– ಎಂ. ನಾರಾಯಣ, ಮುಖ್ಯೋಪಾಧ್ಯಾರು.

ಶಾಲೆಯಲ್ಲಿ ಉತ್ತಮ ಶಿಕ್ಷಣದಿಂದಾಗಿ ಒಳ್ಳೆಯ ಫಲಿತಾಂಶ ವ್ಯಕ್ತವಾಗುತ್ತಿದೆ. ಈ ಶಾಲೆಯ ಶಿಕ್ಷಕರ ಉನ್ನತ ಪರಂಪರೆಯನ್ನು ಈಗಿನವರೂ ಮುಂದುವರಿಸಿಕೊಂಡು ಹೋಗುತ್ತಿದೆ.
-ದಿವಾಕರ ಶೆಟ್ಟಿ ತೋಡಾರು,ಅಧ್ಯಕ್ಷರು, ಹಳೆವಿದ್ಯಾರ್ಥಿ ಸಂಘ

- ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next