Advertisement

ಭಾರತೀಯ ಶಿಕ್ಷಣ ಪರಂಪರೆಯನ್ನು ಉಳಿಸಲು ಆರಂಭವಾದ ಶಾಲೆಗೀಗ 103ರ ಸಂಭ್ರಮ

06:14 PM Nov 08, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1916 ಶಾಲೆ ಆರಂಭ
1924ರಲ್ಲಿ ಹಿರಿಯ ಪ್ರಾಥಮಿಕ ಶಾಲೆ

ಸುರತ್ಕಲ್‌: 1915ನೇ ಇಸವಿಯಲ್ಲಿ ಕ್ರೈಸ್ತ ಮಿಷನರಿಗಳು ತಮ್ಮದೇ ಶಿಕ್ಷಣವನ್ನು ಉತ್ತೇಜಿಸುತ್ತಿದ್ದರು. ಈ ಸಂದರ್ಭ ಸುರತ್ಕಲ್‌ ಗ್ರಾಮದಲ್ಲಿ ಊರ ಪ್ರಮುಖರು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ತಮ್ಮ ಶಿಕ್ಷಣಾಭಿವೃದ್ಧಿಯ ಉದ್ದೇಶವನ್ನು ಕಾರ್ಯಗತಗೊಳಿಸಲು ಯೋಜನೆ ಹಾಕಿದರು. ಇದರ ಫ‌ಲವಾಗಿ ಹಿಂದೂ ವಿದ್ಯಾದಾಯಿನಿ ಸಂಘವು ನ. 30, 1916ರಂದು ಸ್ಥಾಪನೆಗೊಂಡು ಹಿಂದೂ ವಿದ್ಯಾದಾಯಿನಿ ಪ್ರಾಥಮಿಕ ಶಾಲೆ ಆರಂಭಗೊಂಡಿತು. ಇದೀಗ 336 ವಿದ್ಯಾರ್ಥಿಗಳ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ.

ಮೊದಲ ತರಗತಿಯಲ್ಲಿ 64 ವಿದ್ಯಾರ್ಥಿಗಳು
ನೂರು ವರ್ಷಗಳ ಹಿಂದೆ ಸುರತ್ಕಲ್‌ ಪ್ರದೇಶದ ಸುತ್ತಮುತ್ತ ಶಾಲೆಗಳೇ ಇರಲಿಲ್ಲ. ವಿದ್ಯಾದಾಯಿನಿ ಶಾಲೆಯಲ್ಲಿ 1916-17ರಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ 64. ತರಗತಿಗಳು ಐದು ಇದ್ದವು. ಈ ಶಾಲೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋಪುರದಲ್ಲಿ ಒಂದು ತಿಂಗಳು ಕಾರ್ಯನಿರ್ವಹಿಸಿ ಅನಂತರ ಬೇರೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ದಿ| ಕೃಷ್ಣಯ್ಯ ಅವರು ಅಧ್ಯಕ್ಷರಾಗಿ, ದಿ| ಪಿ. ಶಾಮ ರಾವ್‌ ಉಪಾಧ್ಯಕ್ಷರಾಗಿ , ದಿ| ಎಚ್‌.ರಾಮರಾವ್‌ ಕಾರ್ಯದರ್ಶಿಗಳಾಗಿ ಪಣಂಬೂರು ಶ್ರೀನಿವಾಸ ರಾವ್‌ ಕೋಶಾ ಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಇವರ ಬೆಂಬಲವಾಗಿ ನೂರಾರು ಮಹನೀಯರು ನಿಂತು ಈ ಶಾಲೆಯನ್ನು ಬೆಳೆಸಿದ್ದಾರೆ.

ಸುರತ್ಕಲ್‌, ಹೊಸಬೆಟ್ಟು, ಕುಳಾಯಿ, ಬೈಕಂಪಾಡಿ ಸಹಿತ ಸುತ್ತಮುತ್ತಲಿನ ಮಕ್ಕಳು ಈ ಶಾಲೆಯಲ್ಲಿ ಓದು, ಬರಹ, ಲೆಕ್ಕ, ಸಂಸ್ಕೃತ, ಶಾರೀರಿಕ, ಮಾನಸಿಕ ವಿದ್ಯಾಭ್ಯಾಸ ಪಡೆಯಲು ಇಲ್ಲಿ ಅವಕಾಶವಿತ್ತು. 1918ರಲ್ಲಿ ವಿದ್ಯಾ ಇಲಾಖೆ ಮಂಜೂರಾತಿ ನೀಡಿತು. 1924ರಲ್ಲಿ 8 ತರಗತಿಗಳ ಹಿರಿಯ ಪ್ರಾಥಮಿಕ ಶಾಲೆಯಾಯಿತು. ವಿದ್ಯಾರ್ಥಿಗಳ ಸಂಖೆ ವರ್ಷದಿಂದ ವರ್ಷಕ್ಕೆ ಏರತೊಡಗಿದಂತೆಯೇ ಕಟ್ಟಡ ಚಿಕ್ಕದಾಗಿ ಬಹಳಷ್ಟು ಪರಿಶ್ರಮದ ಬಳಿಕ ವಿದ್ಯಾಭಿಮಾನಿಗಳಾದ ದಿ| ಪಿ.ಕೆ. ಶ್ರೀನಿವಾಸ ರಾವ್‌, ಮಹಾಲಕ್ಷ್ಮೀ ಮುಮ್ಯೂರು ದಾನ ಮಾಡಿದ ಜಾಗದಲ್ಲಿ ಶಾಲೆ ತಲೆ ಎತ್ತಿದೆ.

Advertisement

ಅಂದೇ ಸ್ಥಾಪಿಸಿದ್ದ ವೃತ್ತಿ ಶಿಕ್ಷಣ!
ವಿದ್ಯಾದಾಯಿನೀ ಸಂಸ್ಥೆ ಈ ಹಿಂದೆಯೇ ವೃತ್ತಿ ಶಿಕ್ಷಣದ ಮಹತ್ವ ಅರಿತಿತ್ತು. ನೂಲುವುದು, ನೇಯುವಿಕೆಗೆ ಬೇಕಾದ ಚರಕ, ಮಗ್ಗ ಒದಗಿಸಿ ವೃತ್ತಿಯ ಉಪಾಧ್ಯಾಯ ರನ್ನು ನೇಮಿಸಿತ್ತು. ಶಾಲೆಯ ಜಾಗದಲ್ಲಿ ಅಂದು ನೆಟ್ಟು ಬೆಳೆಸಿದ ಮಾವು,ಹಲಸು ಮತ್ತಿತರ ಮರಗಳು ಶತಮಾನವನ್ನು ಕಂಡಿವೆ. ಈ ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರು ಇಡ್ಯಾ ನಾರಾಯಣ ರಾವ್‌(1916-18), ಬಳಿಕ ಡಾ| ಎಚ್‌.ಲಕ್ಷ್ಮೀನಾರಾಯಣ ರಾವ್‌ (1918-20), ಸು ಧೀರ್ಘ‌ ಕಾಲ ಮುಖ್ಯ ಶಿಕ್ಷಕರಾಗಿ ದುಡಿದವರು ಎಚ್‌.ದಾಮೋದರ ರಾವ್‌(1920-57), ಹೀಗೆ ಒಟ್ಟು 16 ಮುಖ್ಯ ಶಿಕ್ಷಕರನ್ನು ಕಂಡಿದೆ. ಒಟ್ಟು 336 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.ಇದೀಗ ಮುಖ್ಯೋಪಾಧ್ಯಾಯರಾಗಿ ಶಾಂತಾ ಸೇವೆ ನಿರ್ವಹಿಸುತ್ತಿದ್ದಾರೆ.ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆ ದೇಶಕ್ಕೆ ಹಲವಾರು ಮಹನೀಯರನ್ನು ಸೇವೆಗೆ ಅರ್ಪಿಸಿದೆ.

ಬಾಂಬೆ ಹೈಕೋರ್ಟ್‌ನ ನಿವೃತ್ತ ಜಡ್ಜ್ ವಿಶ್ವನಾಥ್‌ ಶೆಟ್ಟಿ, ಉದ್ಯಮಿ ಕೆ.ನಾರಾಯಣ್‌, ಕಲಾ ಕ್ಷೇತ್ರದ ಅಗರಿ ರಘುರಾಮ ಭಾಗವತ ಸಹಿತ ಇಲ್ಲಿ ಕಲಿತ ಹಲವರು ರಾಜಕೀಯ, ಕಲೆ, ಸಂಸ್ಕೃತಿ, ಕಾನೂನು ಮೊದಲಾದ ರಂಗದಲ್ಲಿ ವಿವಿಧ ಸಾಧನೆಯನ್ನು ಮಾಡಿದ್ದಾರೆ.
ಮುಖ್ಯಮಂತ್ರಿ ಜಿಲ್ಲೆಗೆ 11ನೇ ಸ್ಥಾನ ಗಳಿಸಿ ಶಾಲೆಗೊಂದು ಘನತೆ ಬಂದಿತ್ತು.”

ಜೀವನ ಪದ್ದತಿಯ ಶಿಕ್ಷಣ
ವಿದ್ಯಾದಾಯಿನೀ ಶಾಲೆಯಲ್ಲಿ ಕೇವಲ ವಿದ್ಯೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಜೀವನ ಪದ್ದತಿಯ ಶಿಕ್ಷಣ ಇಲ್ಲಿ ಆರಂಭವಾಗಿತ್ತು. ನಾಟಕಾಭಿನಯ, ಕಾವ್ಯವಾಚನ,ಯಕ್ಷಗಾನ, ಭಜನೆ, ಕೈ ಬರಹದ ಪತ್ರಿಕೆ, ಗರಡಿ ಶಿಕ್ಷಣದಂತಹ ಬಹುಮುಖೀ ಚಟುವಟಿಕೆ ಇಲ್ಲಿ ಇತ್ತು. 1938ರಲ್ಲಿ ಬಡವರ್ಗಕ್ಕೆ ಮಧ್ಯಾಹ್ನ ಉಚಿತ ಭೋಜನದ ವ್ಯವಸ್ಥೆಯಿತ್ತು.ಇಂದು ಉತ್ತಮ ಶಿಕ್ಷಣದ ಜತೆಗೆ ಈ ಎಲ್ಲ ಚಟುವಟಿಕೆಗಳು ಇಂದಿಗೂ ಮುಂದುವರಿದಿದೆ.

ಶಿಕ್ಷಣವೆಂದರೆ ಕೇವಲ ಪಠ್ಯ ಪುಸ್ತಕವಲ್ಲ. ಮಕ್ಕಳ ದೈಹಿಕ ಮಾನಸಿಕ ಬೌದ್ಧಿಕ ವಿಕಾಸವಾಗಿದೆ.ವಿದ್ಯಾ ಸಂಸ್ಥೆಯು ನಿಂತ ನೀರಾಗದೆ ತೊರೆಯಾಗಿ ಝರಿಯಾಗಿ ಹರಿದು ಹಲವರ ಜೀವನದ ಸುಧೆಯಾಗಿದೆ.ಇಂತಹ ಸಂಸ್ಥೆ ಇನ್ನೂ ಬೆಳೆಯಲಿ ಎಂಬುದೇ ನನ್ನ ಆಶಯ.
ಶಾಂತಾ, ಪ್ರಭಾರ ಮುಖ್ಯಶಿಕ್ಷಕಿ

ನಾನು ಈ ಹಳೆಯ ವಿದ್ಯಾರ್ಥಿ ಯಾಗಿತ್ತು. ಇಂದು ವೈದ್ಯನಾಗಿ ಬೆಳೆಯಲು ಅವಕಾಶವಾಗಿದ್ದರೆ ಈ ಶಾಲೆಯ ಕೊಡುಗೆಯೂ ಇದೆ ಎಂಬುದನ್ನು ಮನತುಂಬಿ ಹೇಳುತ್ತೇನೆ.
ಡಾ| ಗುರುರಾಜ್‌, ಕಣ್ಣಿನ ತಜ್ಞ ವೈದ್ಯರು ಸುರತ್ಕಲ್‌

- ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next