Advertisement
ಶುಕ್ರವಾರ ಬಿಡುಗಡೆಯಾಗಿರುವ ಈ ಪುಸ್ತಕದ ಬಗ್ಗೆ ಟ್ವೀಟ್ ಮಾಡಿರುವ ಅವರು, “ಪುಸ್ತಕದ ಲೇಖಕ ಮೈಕಲ್ ವೂಲ್ಫ್ ಒಬ್ಬ ಬೊಗಳೆ ದಾಸಯ್ಯ. ವೈಟ್‌ಹೌಸ್‌ನ ಒಳ ವಿಚಾರಗಳು ಆತನಿಗೆ ತಿಳಿದಿಲ್ಲ. ಕಪೋಲಕಲ್ಪಿತ ಕಹಾನಿಗಳನ್ನು ಈತ ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ. ನಾನಂತೂ ಈ ಪುಸ್ತಕ ವೈಟ್‌ಹೌಸ್ ಪ್ರವೇಶಿಸದಂತೆ ನಿಷೇಧಿಸಿದ್ದೇನೆ” ಎಂದಿದ್ದಾರೆ. ಪುಸ್ತಕದಲ್ಲಿ ಅಧ್ಯಕ್ಷಗಿರಿಗೆ ಟ್ರಂಪ್ ನಾಲಾಯಕ್ಕು ಎಂಬಂತೆ ಬಣ್ಣಿಸಲಾಗಿದೆ. ಸಂಜೆಯಾಗುತ್ತಲೇ ನಿದ್ರೆಗೆ ಜಾರುತ್ತಾರೆ. ಯಾವಾಗಲೂ ಚೀಸ್ ಸ್ಯಾಂಡ್‌ವಿಚ್‌ಗಳಲ್ಲೇ ಮುಳುಗಿರುತ್ತಾರೆ ಎಂಬಿತ್ಯಾದಿ ಟೀಕೆಗಳಿವೆ. ಜತೆಗೆ, ಎಚ್1ಬಿ ವೀಸಾ ಕುರಿತೂ ಉಲ್ಲೇಖವಿದೆ.
ಎಚ್-1ಬಿ ವೀಸಾ ವಿಸ್ತರಣೆ ರದ್ದಿನಿಂದ ಭಾರತದ ಜತೆಗಿನ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆ ಉಂಟಾದೀತು. ಜತೆಗೆ ದೇಶದಲ್ಲಿನ ಪ್ರತಿಭೆಗಳ ಪಲಾಯನ ಆದೀತು ಎಂದು ಅಮೆರಿಕದ ಸಂಸದೆ, ಡೆಮಾಕ್ರಾಟಿಕ್ ಪಕ್ಷದ ಸಂಸದೆ ತುಳಸಿ ಗಬ್ಟಾರ್ಡ್ ಎಚ್ಚರಿಕೆ ನೀಡಿದ್ದಾರೆ. ವೀಸಾ ನಿಯಮ ಬಿಗಿಗೊಳಿಸುವುದರಿಂದ 7.7 ಲಕ್ಷ ಭಾರತೀಯರು ಸ್ವದೇಶಕ್ಕೆ ಮರಳಬೇಕಾದ ಅಪಾಯವಿದೆ. “ಟ್ರಂಪ್ ಅವರ ಇಂಥ ಪ್ರಸ್ತಾಪದಿಂದ ವೀಸಾ ಹೊಂದಿದವರ ಕುಟುಂಬದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿವೆ. ಪ್ರತಿಭೆಗಳ ನಷ್ಟ ಉಂಟಾಗಲಿದೆ. 21ನೇ ಶತಮಾನದ ಪೈಪೋಟಿಯಲ್ಲಿ ಅಮೆರಿಕ ಹಿಂದುಳಿಯಲಿದೆ” ಎಂದು ಅವರು ಎಚ್ಚರಿಸಿದ್ದಾರೆ.