Advertisement

ಅದು ಅವರ ಒತ್ತಡ ನಿವಾರಣಾ ಮಾರ್ಗ

10:12 PM Jan 05, 2020 | Team Udayavani |

ನನ್ನ ಹಿರಿಯರೊಬ್ಬರು 25 ವರ್ಷಗಳ ಹಿಂದೆ ಯಾವುದೋ ಪ್ರಶ್ನೆಯನ್ನು ಕೇಳಿದ್ದಕ್ಕೆ ನಮ್ಮದೇ ಸಮಸ್ಯೆಗೆ ನಮ್ಮದೇ ಪರಿಹಾರ ಎಂಬ ಉತ್ತರ ಕೊಟ್ಟಿದ್ದರು. ಆಗ ಅದು ವಿಚಿತ್ರವೆನಿಸಿತ್ತು.

Advertisement

ಅವರು ನಿತ್ಯವೂ ಸಂಜೆ ದೇವರ ಮನೆಗೆ ಹೋಗಿ ಏನೋ ಹೇಳುತ್ತಿದ್ದರು. ದೀಪದ ಬತ್ತಿಯ ತುದಿಯಲ್ಲಿ ಸಂಗ್ರಹವಾದ ಕಸ (ಉರಿದು ಕಪ್ಪಗಾದ ಹತ್ತಿಯ ಸುಟ್ಟ ಭಾಗ)ವನ್ನು ಶುಚಿಗೊಳಿಸಿ, ದೀಪದ ಬೆಳಕು ಮತ್ತಷ್ಟು ಪ್ರಜ್ವಲಗೊಳಿಸುತ್ತಾ, ಮಾತನಾಡುತ್ತಿದ್ದರು ಮೆಲುದನಿಯಲ್ಲಿ.

ಹಲವು ಬಾರಿ ಈ ಪ್ರಸಂಗವನ್ನು ಕಂಡಿದ್ದೆ. ನನಗೆ ನಿಜಕ್ಕೂ ಆಗ ಅರ್ಥವಾಗಿರಲಿಲ್ಲ. ಒಂದು ದಿನ, ನೀವು ನಿತ್ಯವೂ ಸಂಜೆ ದೇವರ ಮನೆಗೆ ಹೋಗಿ ಮಾಡುವುದೇನು? ನೀವು ಮಾತನಾಡುವುದು ದೇವರೊಂದಿಗೋ? ಎಂದು ಕೇಳಿದ್ದೆ. ಒಂದು ಬಗೆಯ ಮುಗುಳ್ನಗೆ ತೋರಿದ್ದರು. ಅದು ಹೌದೆಂದು ಅರ್ಥ ಮಾಡಿಕೊಂಡು, ನಿಮ್ಮ ಮಾತು ದೇವರಿಗೆ ಅರ್ಥವಾಗುತ್ತದೋ ಎಂದು ಕೇಳಿದ್ದೆ. ಅದಕ್ಕೂ ಮುಗುಳ್ನಗೆಯೇ ಉತ್ತರವಾಗಿತ್ತು.

ಅದಾದ ಬಳಿಕ ಕೆಲವು ದಿನ ಅವರನ್ನು ಸ್ವಲ್ಪ ಗಂಭೀರವಾಗಿ ಅಭ್ಯಾಸ ಮಾಡತೊಡಗಿದೆ. ದೇವರ ಮನೆಯಿಂದ ಹೊರ ಬರುವ ಮುಖದಲ್ಲಿ ಪ್ರಶಾಂತತೆ ಹೆಚ್ಚಿಗೆ ತೋರುತ್ತಿತ್ತು. ಇದೊಂದು ಬಗೆಯ ವಿಚಿತ್ರವೆನ್ನಿಸದೇ ಇರಲಿಲ್ಲ ಆ ದಿನಗಳಲ್ಲಿ. ಆಗೆಲ್ಲಾ ಬದುಕು-ಅಧ್ಯಾತ್ಮ ಎಂಬ ಪದಗಳ ಸಂಪೂರ್ಣ ಅರ್ಥವನ್ನು ಅನುಭವದ ಮೂಸೆಯಿಂದ ನೋಡದ ದಿನಗಳು. ಆದರೆ ಈ ಬದಲಾಗುವ ಮುಖದ ಚಹರೆ ಸ್ಪಷ್ಟವಾಗುತ್ತಿತ್ತು.

ಆದರೆ, ಕ್ರಮೇಣ ಅದನ್ನು ಅರ್ಥ ಮಾಡಿಕೊಳ್ಳಲು ಹೊರಟೆ. ನಿಧಾನ ವಾಗಿ ಒಂದು ಕಲ್ಲಿನ ಚಲನೆಯಿಂದ ಕೊಳದಲ್ಲಿ ಉಂಟಾದ ತರಂಗಗಳನ್ನು ಎಣಿಸುವಂತೆಯೇ ಅರಿಯುತ್ತಾ ಹೊರಟೆ. ಬಳಿಕ ಆ ಹಿರಿಯರ ಮಾತಿನ ಭಾಗಶಃ ಅರ್ಥ ತಿಳಿಯಿತು. ನನ್ನ ಭಾಗಶಃ ಅರ್ಥ ಸರಿಯಿದೆಯೋ, ಇಲ್ಲವೋ ಎಂದು ಪರಿಶೀಲಿಸಿ ಕೊಳ್ಳಬೇಕಿತ್ತು. ಅಂಥದೊಂದು ಸಂದರ್ಭಕ್ಕೆ ಕಾಯುತ್ತಿದ್ದೆ.

Advertisement

ಹೀಗೆಯೇ ಒಂದಿಷ್ಟು ವರ್ಷಗಳು ಉರುಳಿದವು. ಹದಿನೈದು ವರ್ಷಗಳ ಹಿಂದೆ ನಾನೂ ಕೆಲಸದ ಒತ್ತಡಕ್ಕೆ ಸಿಲುಕಿ ನಲುಗಿದ್ದೆ. ಕೆಲಸ ಸಾಕೆನಿಸಿ, ಅಧ್ಯಾತ್ಮವೇ ಒಳ್ಳೆಯದೆನಿಸತೊಡಗಿತ್ತು. ಆದರೆ, ಜವಾಬ್ದಾರಿಗಳು ಹೆಚ್ಚಿದ್ದವು. ಒಂದು ದಿನ ಅವರಲ್ಲಿ ಹೋಗಿ ನನ್ನ ಸಮಸ್ಯೆಯನ್ನು ಹೇಳಿಕೊಂಡೆ. ಅವರು ಒಂದೇ ಉತ್ತರ ಕೊಟ್ಟರು, “ನಾನು ಮಾಡುತ್ತಿದ್ದು ಅದನ್ನೇ’.

ಅವರು ನಿತ್ಯವೂ ಸಂಜೆ ದೇವರಮನೆ ಒಳಹೊಕ್ಕು ಮಾತನಾಡುತ್ತಿದ್ದ ಪ್ರಸಂಗ ಒತ್ತಡ ನಿವಾರಣಾ ತಂತ್ರ. ತನ್ನೊಳಗೆ ಇದ್ದುದ್ದೆಲ್ಲವನ್ನೂ ಮೌನದೊಳಗೆ (ದೇವರ ಮನೆಯಲ್ಲಿ ಅವರು ಮತ್ತು ದೇವರು ಇಬ್ಬರೇ) ವಿವರಿಸಿ, ತಮ್ಮ ಮನಸ್ಸನ್ನು ಹಗುರಗೊಳಿಸಿಕೊಳ್ಳುತ್ತಿದ್ದರು. ಎಲ್ಲವನ್ನೂ ವಿವರಿಸಿಬಿಟ್ಟಿದ್ದೇನೆ ದೇವರಿಗೆ/ಮೌನಕ್ಕೆ/ ಅತೀಂದ್ರೀಯ ಶಕ್ತಿಗೆ. ನನ್ನ ಹೊಣೆ ಮುಗಿಯಿತು ಎಂದುಕೊಳ್ಳುತ್ತಿದ್ದರೇನೋ. ಅದಕ್ಕೇ ಅವರು ದೇವರ ಮನೆಯಿಂದ ಹೊರ ಬರುವಾಗ ಹೆಚ್ಚು ನಳನಳಿಸುತ್ತಿದ್ದರು. ಈ ಅಭ್ಯಾಸ ನನಗೆ ಇಂದು ಒಂದು ಪರಿಹಾರವಾಗಿ ಕಂಡಿದೆ.

 ಆನಂದಕುಮಾರ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next