ಕುಂದಾಪುರ: ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸುವಲ್ಲಿ ಪೋಷಕರು ಮುಂದಾಗಬೇಕು. ಇದರಿಂದಾಗಿ ಮಕ್ಕಳು ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಮಕ್ಕಳಿಗೆ ಶಿಕ್ಷಣವನ್ನು ನೀಡುವ ಬಗ್ಗೆ ಪ್ರಥಮ ಆದ್ಯತೆ ನೀಡಿ. ಜೀವನದಲ್ಲಿ ಅದೇ ದೊಡ್ಡ ಭಾಗ್ಯ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಹೇಳಿದರು.
ಅವರು ಶನಿವಾರ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಸಭಾ ಭವನದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘ ಟನೆ ವತಿಯಿಂದ ಜಿಲ್ಲೆಯ ಎಲ್ಲ ಸಮಾಜದ 5,100 ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಉಡುಪಿ ಜಿಲ್ಲೆ ಪಿಯುಸಿ ಹಾಗೂ ಎಸೆಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪೋಷಕರು, ಜಿಲ್ಲಾಡಳಿತ ಅಭಿನಂದಾ ರ್ಹರು. ಪುಸ್ತಕ ಎಂದರೆ ಸರಸ್ವತಿ, ಈ ನಿಟ್ಟಿನಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಹೊಸನಗರ ಹಾಗೂ ಬೆಳಗ್ಗೆ ಉಡುಪಿಯಲ್ಲಿ ಸುಮಾರು 10,000 ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಸಂಘಟನೆಯ ಅಧ್ಯಕ್ಷ ಗಣೇಶ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಕುಂದಾಪುರ ಶಾಖೆ ಅಧ್ಯಕ್ಷ ಕೆ.ಕೆ. ಕಾಂಚನ್ ಮುಖ್ಯ ಅತಿಥಿಗಳಾಗಿದ್ದರು.
ಮೊಗವೀರ ಯುವ ಸಂಘಟನೆಯ ಕೋಟೇಶ್ವರ ವಲಯದ ಮಾಜಿ ಅಧ್ಯಕ್ಷ ಅಶೋಕ್ ತೆಕ್ಕಟ್ಟೆ ಸ್ವಾಗತಿಸಿ, ಸುಧಾಕರ ಕಾಂಚನ್ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ವಿಠಲವಾಡಿ ವಂದಿಸಿದರು.
ಸೇವೆಯ ಸದುಪಯೋಗಕ್ಕೆ ಡಾ| ಶಂಕರ್ ಕರೆ
ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಅವರು ಪ್ರಸ್ತಾವನೆಗೈದು, ಇಂದಿನ ವಿದ್ಯಾರ್ಥಿಗಳು ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಂಡು ಸಮಾಜದಲ್ಲಿ ಸತøಜೆಗಳಾಗಿ ಬೆಳೆದು ಮುಂದೆ ಅವರೂ ಕೂಡ ಸಮಾಜ ಸೇವೆ ಮಾಡಬೇಕು. ನಿರುದ್ಯೋಗ, ಬಡತನ ಹೋಗಿ ಸಮಾಜದಲ್ಲಿ ಸಮಾನತೆ ನೆಲೆಸಬೇಕೆಂಬ ಉದ್ದೇಶದಿಂದ ಟ್ರಸ್ಟ್ ಮೂಲಕ ಉಚಿತವಾಗಿ ಪುಸ್ತಕ ವಿತರಣೆ ಮತ್ತಿತರ ಕಾರ್ಯಗಳನ್ನು ಮಾಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.