Advertisement

ಅಂದು 24, ಇಂದು ಬರೀ 17 ಗಂಟೆ!

11:40 AM Jun 28, 2018 | |

ಒಂದೆರಡು ತಿಂಗಳು ಶೂಟಿಂಗ್‌ ಮಾಡಿದರೂ ಇಂದು ತುಳು ಸಿನೆಮಾ ರೆಡಿಯಾಗುವುದಕ್ಕೆ ಕೆಲವು ತಿಂಗಳುಗಳೇ ಬೇಕಾಗುತ್ತದೆ. ಅಂತದ್ದರಲ್ಲಿ 24 ಗಂಟೆಯೊಳಗೆ 1 ತುಳು ಚಿತ್ರ ಮಾಡುವುದು ಸಾಧ್ಯವೇ? ಸಾಧ್ಯ ಎಂಬುದನ್ನು ‘ಸೆಪ್ಟೆಂಬರ್‌ 8’ ತುಳು ಚಿತ್ರ ಮಾಡಿ ತೋರಿಸಿತ್ತು. ವಿಶೇಷವೆಂದರೆ 24 ಗಂಟೆ ಕೂಡ ಬೇಡ ಅದರೊಳಗೆಯೇ ಸಿನೆಮಾ ಮಾಡಬಹುದು ಎಂಬುದನ್ನು ತೋರಿಸಿಕೊಡಲು ತುಳು ಸಿನೆಮಾ ರಂಗ ಈಗ ಸಜ್ಜಾಗಿದೆ.

Advertisement

ತುಳು ಚಿತ್ರರಂಗದ 26ನೇ ಸಿನೆಮಾವಾಗಿ ಮೂಡಿಬಂದ ‘ಸೆಪ್ಟೆಂಬರ್‌ 8’ ಚಿತ್ರ ಸ್ಯಾಂಡಲ್‌ವುಡ್‌- ಹಾಲಿವುಡ್‌ನ‌ವರನ್ನು ಕೂಡ ತುಳು ಚಿತ್ರರಂಗದತ್ತ ಕಣ್ಣರಳಿಸಿ ನೋಡುವಂತೆ ಮಾಡಿರುವುದು ಇತಿಹಾಸ. ಏಕೆಂದರೆ ಶ್ರೀ ರಾಜಲಕ್ಷ್ಮೀ ಫಿಲಂಸ್‌ ಮೂಲಕ ರಿಚರ್ಡ್‌ ಕ್ಯಾಸ್ಟಲಿನೋ ನಿರ್ಮಾಪಕರಾಗಿ 24 ಗಂಟೆಯ ಅವಧಿಯಲ್ಲಿ ಚಿತ್ರೀಕರಣ ಮಾಡಿ ನಿರ್ಮಿಸಿದ ದಾಖಲೆಯ ಚಿತ್ರವಿದು. ಆಧುನಿಕ ಸೌಲಭ್ಯಗಳು ವಿರಳವಾಗಿದ್ದ ಸಮಯದಲ್ಲಿ ತುಳು ಚಿತ್ರಗಳಿಗೆ ಆಗ ತಾನೇ ಭವಿಷ್ಯ ಸಿಗುವ ಸಂದರ್ಭದಲ್ಲಿ ಒಂದೇ ದಿನದಲ್ಲಿ ಚಿತ್ರೀಕರಣ ಮಾಡಿ ಮುಗಿಸುವುದೆಂದರೆ ಅದು ಸುಲಭದ ಮಾತಾಗಿರಲಿಲ್ಲ.

1993ರ ಸೆಪ್ಟೆಂಬರ್‌ 9ರಂದು ‘ಸೆಪ್ಟೆಂಬರ್‌ 8’ ತುಳು ಚಿತ್ರವನ್ನು ಪೂರ್ಣವಾಗಿ ಚಿತ್ರೀಕರಣ ನಡೆಸಲಾಗಿತ್ತು. ಸುಂದರನಾಥ ಸುವರ್ಣರ ಛಾಯಾಗ್ರಹಣದ ನಿರ್ದೇಶನದಲ್ಲಿ ರಿಚರ್ಡ್‌ ಅವರು ಕಥೆ ಬರೆದು, ಸ್ವತಃ ನಿರ್ದೇಶನ ಮಾಡಿದರು. ವಿಶೇಷ ಎಂದರೆ ಈ ಚಿತ್ರದಲ್ಲಿ ಹೆಚ್ಚಿನ ಕನ್ನಡ ಸಿನೆಮಾ ಕಲಾವಿದರು ನಟಿಸಿದ್ದರು.

ಸುನಿಲ್‌, ಶ್ರುತಿ, ಗೀತಾ, ಉಮಾಶ್ರೀ, ರೋಹಿದಾಸ್‌ ಕದ್ರಿ, ಸರೋಜಿನಿ ಶೆಟ್ಟಿ, ರಮೇಶ್‌ ಭಟ್‌ ಮುಂತಾದವರು ಮುಖ್ಯ ಪಾತ್ರದಲ್ಲಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಶಿವರಾಮ ಕಾರಂತರೂ ಅಭಿನಯಿಸಿದ್ದಾರೆ. 2 ಹಾಡುಗಳಿರುವ ಈ ಚಿತ್ರಕ್ಕೆ ಚರಣ್‌ ಕುಮಾರ್‌ ‘ರಾಗ್‌ದೇವ್‌’ ಹೆಸರಿನಲ್ಲಿ ಸಂಗೀತ ನೀಡಿದ್ದರು.

ಮಂಗಳೂರು, ಕದ್ರಿ, ಅತ್ತಾವರ, ಮೋತಿಮಹಲ್‌, ಬಾವುಟಗುಡ್ಡೆ, ಕದ್ರಿ ಮಾರ್ಕೆಟ್‌, ತಣ್ಣೀರುಬಾವಿ ಹಾಗೂ ಬೆಂಗಳೂರು ಈ ಎಲ್ಲ ಸ್ಥಳದಲ್ಲಿ ಏಕಕಾಲದಲ್ಲಿ 7 ಛಾಯಾಗ್ರಾಹಕರು  1 ದಿನದ ಅವಧಿಯಲ್ಲಿ ಚಿತ್ರೀಕರಿಸಿದ್ದರು. ಎಸ್‌.ಪಿ.ಬಿ., ಚಂದ್ರಿಕಾ ಗುರುರಾಜ್‌, ಕಸ್ತೂರಿ ಶಂಕರ್‌ ಹಾಗೂ ಮಂಜುಳಾ ಗುರು ರಾಜ್‌ ಹಿನ್ನೆಲೆ ಗಾಯಕರಾಗಿದ್ದರು. ರಾಮ ಕಿರೋಡಿಯನ್‌ ಹಾಗೂ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌ ಗೀತಾ ಸಾಹಿತ್ಯ ಬರೆದಿದ್ದರು. ವಸಂತ ವಿ.ಅಮೀನ್‌ ಸಂಭಾಷಣೆ ಬರೆದಿದ್ದರು. 

Advertisement

ಈ ಹಿಂದೆ ಅಣಜಿ ನಾಗರಾಜ್‌ ಅವರ ನಿರ್ಮಾಣ ದಲ್ಲಿ ‘ಸುಗ್ರೀವ’ ಎಂಬ ಕನ್ನಡ ಸಿನೆಮಾ 18 ಗಂಟೆಯೊಳಗೆ ಶೂಟಿಂಗ್‌ ಆಗಿ ಸಾರ್ವ ತ್ರಿಕ ದಾಖಲೆ ಬರೆದಿತ್ತು. ಇದಕ್ಕೂ ಮೊದಲು 48 ಗಂಟೆಯಲ್ಲಿ ದಿನೇಶ್‌ ಬಾಬು ನಿರ್ದೇಶನದಲ್ಲಿ ‘ಇದು ಸಾಧ್ಯ’ ಸಿನೆಮಾ ಶೂಟಿಂಗ್‌ ಕಂಡಿತ್ತು. ಇದೆಲ್ಲ ಅಂದಿನ ಕಥೆ. ಆದರೆ ಈಗ ತುಳು ಸಿನೆಮಾ ರಂಗ ಈಗ ಭರ್ಜರಿಯಾಗಿಯೇ ಫೀಲ್ಡ್‌ಗೆ ಇಳಿದಿದೆ. ಈಗಿನ ಸಿದ್ಧತೆ
ಕೇವಲ ಕೋಸ್ಟಲ್‌ ವುಡ್‌ ಮಾತ್ರವಲ್ಲ. ಸ್ಯಾಂಡಲ್‌ವುಡ್‌ ನಲ್ಲೂ ದಾಖಲೆಯಾಗಲಿವೆ. ಕೇವಲ 17 ಗಂಟೆಗಳ ಅವಧಿಯಲ್ಲಿ ಬಿಗ್‌ ಬಜೆಟ್‌ನಲ್ಲಿ ತುಳು ಸಿನೆಮಾ ನಿರ್ಮಿಸಲು ಖ್ಯಾತ ಉದ್ಯಮಿ ಕಡಂದಲೆ ಸುರೇಶ್‌ ಭಂಡಾರಿ ಮುಂದಾಗಿದ್ದಾರೆ.

ಇದು ತುಳು ಸಿನೆಮಾರಂಗದಲ್ಲಿ ಗಿನ್ನೆಸ್‌ ದಾಖಲೆಯನ್ನು ಬರೆಯುವ ನಿರೀಕ್ಷೆ ಇದೆ. ವಿಶೇಷವೆಂದರೆ, ಸ್ಯಾಂಡಲ್‌ ವುಡ್‌ನ‌ಲ್ಲೂ ಇಷ್ಟು ಕಡಿಮೆ ಅವಧಿಯಲ್ಲಿ ಸಿನೆಮಾ ನಿರ್ಮಾಣವಾಗಿಲ್ಲ. 17 ಗಂಟೆಯೊಳಗೆ ಶೂಟಿಂಗ್‌ ಆಗುವ ನೂತನ ಸಿನೆಮಾಕ್ಕೆ ಟೈಟಲ್‌ ಇನ್ನೂ ಫೈನಲ್‌ ಮಾಡಿಲ್ಲ. ತುಳು ಚಿತ್ರರಂಗದಲ್ಲಿ 10 ಯಶಸ್ವಿ ಚಿತ್ರಗಳನ್ನು ನೀಡಿರುವ 10 ನಿರ್ದೇಶಕರು ಏಕಕಾಲದಲ್ಲಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 10 ನಾಯಕ ನಟರು ಅಭಿನಯಿಸಲಿದ್ದು, ತುಳುಚಲನಚಿತ್ರ ರಂಗದಲ್ಲಿ ಪ್ರಥಮ ಮಲ್ಟಿಸ್ಟಾರ್‌ ಚಿತ್ರವೆನಿಸಲಿದೆ.

ನಾಗೇಶ್ವರ ಸಿನಿ ಕಂಬೈನ್ಸ್‌ ಲಾಂಛನದಲ್ಲಿ ಉದ್ಯಮಿ ಸುರೇಶ್‌ ಭಂಡಾರಿ ಅವರು ಈ ಹಿಂದೆ ‘ಅಂಬರ ಕ್ಯಾಟರರ್’ ತುಳು ಸಿನೆಮಾ ನಿರ್ಮಿಸಿದ್ದರು. ತುಳುವಿನಲ್ಲಿ ತೆರೆಕಂಡ ಅದ್ಧೂರಿ ಸಿನೆಮಾ ಎಂಬ ಎಂಬ ಹೆಗ್ಗಳಿಕೆ ಇದಕ್ಕಿದೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next