Advertisement

ಬಾಲ್ಯದ ಮಾಯದ ಆ ನಗು

10:04 PM Jul 01, 2019 | mahesh |

ಶಾಲೆಯ ದಿನಗಳಲ್ಲಿ ನಗುವಿಗೆ ನಿರ್ದಿಷ್ಟ ಕಾರಣಗಳು ಬೇಕೆಂದೇನೂ ಇಲ್ಲ. ಗೆಳತಿಯ ಜಡೆ ಹಿಂದೆ ಮುಂದೆ ಆಯಿತೆಂದೋ, ಓದುವಾಗ ತಡವರಿಸುವ ಗೆಳೆಯನ ನೋಡಿಯೋ ನಕ್ಕು ನಲಿದಿದ್ದಿದೆ. ಅಂಥ ಮಧುರ ನೆನಪುಗಳ ನಗೆಯ ಮತಾಪು ಇಲ್ಲಿ ಹೊತ್ತಿಕೊಂಡಿದೆ.

Advertisement

ನಮ್ಮೂರಿನಲ್ಲೊಂದು ಹೆಂಚಿನ ಕಾರ್ಖಾನೆ ಇತ್ತು. ಊರಿನ ಒಂದಷ್ಟು ಮಂದಿ ಕೂಲಿ ಮಾಡಲು ಅಲ್ಲಿಗೇ ಹೋಗುತ್ತಿದ್ದರು. ನಮ್ಮ ಮನೆ ರಸ್ತೆಯ ಆಚೆಗೆ ಐದಾರು ಹಾಲಕ್ಕಿ ಒಕ್ಕಲಿಗರ ಮನೆಗಳಿದ್ದವು. ನಮಗೆ ಅವರು ಆಪ್ತರು. ನಮ್ಮ ತೋಟ, ಗದ್ದೆ ಕೆಲಸಕ್ಕೆ ಹೆಣ್ಣಾಳು, ಗಂಡಾಳುಗಳು ಇವರೇ.

ಅಲ್ಲಿಂದ ಸ್ವಲ್ಪ ಕೆಳಗೆ, ಹೆಂಚಿನ ಕಾರ್ಖಾನೆಯ ಮೇಸ್ತ್ರಿಯ ಮನೆ. ಅದರ ಮುಂದಿನ ಬೀದಿಯಲ್ಲಿ ಮ್ಯಾನೇಜರ್‌ ಆಗಿದ್ದ ಕುಪ್ಪಯ್ಯನವರ ಮನೆ. ನನ್ನ ತಂದೆಗೂಅವರಿಗೂ ಬಹಳ ಸ್ನೇಹವಿತ್ತು.

ಆಗಾಗ ಹರಟೆಗೆ ಅವರು ನಮ್ಮ ಮನೆಗೆ ಬರುವುದು, ಇಲ್ಲವೇ ಇವರೇ ಹೋಗುವುದು ಇತ್ತು. ಕುಪ್ಪಯ್ಯ, ವಯಸ್ಸಿನಲ್ಲಿ ಕಿರಿಯರಾದರೂ ನನ್ನ ತಂದೆಗೂ ಅವರ ಸ್ನೇಹ ಬಹಳ ಅಚ್ಚುಮೆಚ್ಚು.

ಒಂದು ರಜೆಯ ಸಂದರ್ಭ. ನಾವೆಲ್ಲ ಊಟ ಮುಗಿಸಿ ಗದ್ದೆಗೆ ಓಡಿದ್ದೆವು. ಗದ್ದೆಯಲ್ಲಿ ಹುಡಿ ಹಾರಿಸಿ, ಕುಣಿದು, ಕುಪ್ಪಳಿಸುತ್ತ ಇದ್ದಾಗಲೇ ರಸ್ತೆದಾಟುತ್ತಿದ್ದ ಮೇಸಿŒ ಮನೆಯ ಆಕಳು ಟ್ರಕ್ಕಿಗೆ ಸಿಕ್ಕಿ ಅಸುನೀಗಿತು. ಈ ಅಪಘಾತ ಕಂಡ ನಮ್ಮಣ್ಣಂದಿರು ಟ್ರಕ್ಕನ್ನು ತಡೆದು, ಓಡೋಡಿ ಹೋಗಿ ಮೇಸ್ತ್ರಿ ಮನೆಗೆ ವಿಷಯ ಮುಟ್ಟಿಸಿದರು. ಮನೆಯ ಮಗನೇ ಮಡಿದನೇನೋ ಎನ್ನುವ ರೀತಿ ನೋವನ್ನು ವ್ಯಕ್ತಗೊಳಿಸುತ್ತ ಜೋರಾಗಿ ಚೀರುತ್ತ ಓಡೋಡಿ ಬಂದ ಆತನ ಹೆಂಡತಿ ಕರುವಿನ ಮೈಮೇಲೆ ಬಿದ್ದು ಹೊರಳಾಡಿ ಅಳತೊಡಗಿದಳು. ಗಂಡ‌ ಆಕೆಯನ್ನು ಸುಮ್ಮನಿರಿಸಲು ಪ್ರಯತ್ನ ಪಟ್ಟಷ್ಟೂ ರೋಧನ ಹೆಚ್ಚುತ್ತಿತ್ತು.

Advertisement

ಚಿಕ್ಕ ಹೆಣ್ಣು ಮಕ್ಕಳಾದ ನಾವೂ ಅದನ್ನು ನೋಡಿ ಅಳಲು ಶುರುಮಾಡಿದೆವು. ಆಗಲೇ ಟ್ರಕ್ಕಿನವ ಹೆದರಿ ಆ ಕಾಲಕ್ಕೆ ತನ್ನ ಹತ್ತಿರವಿದ್ದ ಐದುನೂರು ರೂಪಾಯಿಗಳನ್ನು ಕೈಗಿತ್ತು ಬಿಟ್ಟು ಬಿಡುವಂತೆ ಕೋರಿದ. ಯಾವಾಗ ಹಣದ ನೋಟು ಕೈಗೆ ಬಂತೋ, ಮೇಸಿŒಯ ಹೆಂಡತಿಯ ರೋಧನ ನಿಂತೇ ಹೋಯಿತು. ಟ್ರಕ್ಕು ಹೊರಟಿತು. ಸತ್ತಕರುವನ್ನು ಅಲ್ಲೇ ಬಿಟ್ಟು ಏನೂ ಆಗಿಯೇ ಇಲ್ಲ ಎನ್ನುವಂತೆ ಆಕೆ ಮನೆಗೆ ನಗುತ್ತ ಹೊರಟಾಗ ನಿಜಕ್ಕೂ ಜುಗುಪ್ಸೆಯಾಗಿದ್ದು ನಮಗೆ.

ಆ ನಂತರ ನಮ್ಮ ಮನೆಯಲ್ಲಿ ಆ ರೋಧನ ದೃಶ್ಯ ಹಾಸ್ಯದ ಸರಕಾಯಿತು. ನಮ್ಮಣ್ಣ ಮತ್ತೆ ಮತ್ತೆ ಆಕೆಯ ರಾಗವನ್ನು ಅನುಸರಿಸುತ್ತಾ ನಟಿಸುತ್ತಿದ್ದರೆ ಉಳಿದವರು ಬಿದ್ದು ಬಿದ್ದು ನಗುತ್ತಿದ್ದೆವು.

ಇನ್ನೊಮ್ಮೆ ಬೇಸಿಗೆ ರಜೆಯಲ್ಲಿ ಗದ್ದೆಗೆ ಹೋಗಿದ್ದೆವು. ಒಣ ಹುಲ್ಲಿಗೆ ಉಕ್ಕಲಿ ಹೊಡೆಯುವ ಕೆಲಸಕ್ಕೆ ಕಟ್ಟಿದ ಕಂಬ ಹಾಗೇ ಇತ್ತು. ಅದು ನಮಗೆ ಆಟವಾಡುವ ಸಾಧನವೂಆಗಿದ್ದರಿಂದ ಅದನ್ನು ಅಲ್ಲಿಯೇ ಬಿಟ್ಟಿದ್ದರು. ಮಧ್ಯದ ಕಂಭ ನಡುವಿಗೆ ಜೋಡಿಸಿದ ದೊಡ್ಡಕಂಬದ ಮೇಲೆ ಆಚೆ ಈಚೆಗೆ ತಲಾ ಇಬ್ಬರಂತೆ ಕುಳಿತು ಕುದುರೆ ಆಟ ಆಡುತ್ತಿದ್ದೆವು. ಅದಾಗಲೇ ದೊಡ್ಡಕ್ಕ ಗೊತ್ತಿಲ್ಲದೇ ಬಂದು ನಮ್ಮ ತುದಿಯಲ್ಲಿ ಏರಿದ್ದೇ ತಡ, ಎರಡನೇ ಅಕ್ಕ ಹಾಗೂ ಅಣ್ಣ ಕುಳಿತ ತುದಿ ಒಮ್ಮೇಲೆ ಮೇಲಕ್ಕೆದ್ದು, ದಢಕ್ಕನೆ ಮೇಲಿದ್ದವರು ಕೆಳಗೆ ಬಿದ್ದೇ ಬಿಟ್ಟರು. ಬಿದ್ದ ರಭಸಕ್ಕೆ, ಸುಂದರಿಯಾದ ಎರಡನೆ ಅಕ್ಕನ ಕೆನ್ನೆ ನೆಲಕ್ಕೆ ತಾಗಿ, ಕೆಂಪಾಗಿ, ನೋಯುತ್ತಲೂ ಪುಕ್ಕಲು ಸ್ವಭಾವದ ಆಕೆ ಗಾಬರಿಗೊಂಡು ತನ್ನ ಕೆನ್ನೆ ಹಿಡಿದು ಕೂಗಲಾರಂಭಿಸಿದಳು.

ಆ ಸಂದರ್ಭದಲ್ಲೂ ಹಾಸ್ಯ ಪ್ರವೃತ್ತಿಯ ಅಣ್ಣ, ಏನು ರೇಣು,ಹಾಲಿನ ಕೆನೆ ಬೇಕೆ? ಇರು ತರುವೆ ಎಂದು ಛೇಡಿಸಲಾರಂಭಿಸಿದ. ಜೋರಾಗಿ ಆಕೆ ಅಳುತ್ತಿದ್ದರೆ ನಾವೆಲ್ಲ ನಗುತ್ತಿದ್ದೆವು. ಈಗಲೂ ಒಟ್ಟಿಗೆ ಸೇರಿದಾಗಲೆಲ್ಲಾ ಈ ಘಟನೆಗಳ ನೆನಪು ತೆಗೆದು ನಕ್ಕು, ಮತ್ತೆ ಬಾಲ್ಯಕ್ಕೆ ಹೋಗಿ ಬರುವುದುಂಟು.

-ನಾಗರೇಖಾ ಗಾಂವಕರ

Advertisement

Udayavani is now on Telegram. Click here to join our channel and stay updated with the latest news.

Next