Advertisement

ಧರ್ಮದ ಹೆಸರಲ್ಲಿ ದಾರಿ ತಪ್ಪಿಸುತ್ತಿರುವ ಬಿಜೆಪಿಗೆ ಅದುವೇ ತಿರುಗುಬಾಣ: ಸಿದ್ದರಾಮಯ್ಯ

12:47 PM Apr 06, 2022 | Team Udayavani |

ಹುಬ್ಬಳ್ಳಿ: ಬಿಜೆಪಿಯವರು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಜನರ ಬಳಿ ಹೋಗಲು ಅವರ ಬಳಿ ಸಾಧನೆ ಇಲ್ಲ. ಹೀಗಾಗಿ ಅದನ್ನು ಮರೆಮಾಚುವುದಕ್ಕೆ ಧಾರ್ಮಿಕ ವಿಚಾರಕ್ಕೆ ಮುಂದಾಗಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮಸೀದಿಯಲ್ಲಿ ಮೈಕ್ ಬಳಸುವ ವಿಷಯ ತಂದಿದ್ದಾರೆ. ಮತಗಳ ಕ್ರೋಢೀಕರಣ ಮಾಡಬೇಕು ಅಂತ ಹೀಗೆ ಮಾಡುತ್ತಿದ್ದಾರೆ. ಧರ್ಮದ ಹೆಸರು, ಆಹಾರ ಪದ್ಧತಿ ಮೇಲೆ ದಾರಿ ತಪ್ಪಿಸುತ್ತಿದ್ದಾರೆ. ಈ ಹುನ್ನಾರ ಜನರಿಗೆ ಗೊತ್ತಾಗುತ್ತದೆ. ಪ್ರತಿಯೊಂದರ ಬೆಲೆ ಏರಿಕೆ ಆಗಿದ್ದು, ಅದರ ಬಗ್ಗೆ ಏಕೆ ಮಾತಾಡುತ್ತಿಲ್ಲ. ಧರ್ಮದ ಹೆಸರಲ್ಲಿ ಜನರ ದಾರಿ ತಪ್ಪಿಸುತ್ತಿದ್ದು, ಅದುವೇ ಅವರಿಗೆ ತಿರುಗುಬಾಣವಾಗಲಿದೆ ಎಂದರು.

ರಾಜ್ಯದ ಗೃಹ ಸಚಿವರಿಗೆ ಅನುಭವವೇ ಇಲ್ಲ. ಅವರಿಗೆ ಇಲಾಖೆ ನಿರ್ವಹಣೆ ಮಾಡುವುದಕ್ಕೆ ಬರಲ್ಲ. ಯಾರದ್ದೇ ಕೊಲೆಯಾದರೂ ನಾನು ಖಂಡಿಸುತ್ತೇನೆ. ಹಿಂದೂಗಳು ಸತ್ತರು ಜೀವ, ಮುಸ್ಲಿಮರು ಸತ್ತರು ಜೀವವೇ. ಹರ್ಷ ಕೊಂದವರನ್ನು ನೇಣಿಗೆ ಹಾಕಿ, ಜೀವಾವಧಿ ಶಿಕ್ಷೆ ಕೊಡಿಸಿ. ಅದೇ ರೀತಿ ಮುಸ್ಲಿಂ ಯುವಕರ ಹತ್ಯೆ ಮಾಡಿದವರಿಗೂ ಶಿಕ್ಷೆಯಾಗಲಿ. ಮೈಸೂರಲ್ಲಿ ಗ್ಯಾಂಗ್ ರೇಪ್ ಆದಾಗ ಗೃಹ ಸಚಿವರು ಯುವತಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಬೇಕಿತ್ತು ಅಂತ ಹೇಳಿಕೆ ಕೊಟ್ಟರು. ಅವರು ಗೃಹ ಮಂತ್ರಿ ಆಗುವುದಕ್ಕೆ ನಾಲಾಯಕ್. ಮುಖ್ಯಮಂತ್ರಿ ಸಹ ಅವರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದರು.

ಈಶ್ವರಪ್ಪ ಮತ್ತು ಭಗವಂತ ಖೂಬಾ, ನಿಷೇಧಾಜ್ಞೆ ಇದ್ದರೂ ಅದನ್ನು ಉಲ್ಲಂಘಿಸಿ ಮೆರವಣಿಗೆ ಮಾಡಿದ್ದರು. ಅವರನ್ನು ತಕ್ಷಣ ವಜಾ ಮಾಡಬೇಕಿತ್ತು ಎಂದರು.

ಇದನ್ನೂ ಓದಿ:ಮೆಕ್ಕಾ…ಮಕ್ಕೇಶ್ವರ್ ಮಹಾದೇವ ದೇವಸ್ಥಾನವಂತೆ; ಹಿಂದೂ ಮಹಾಸಭಾದ ಕ್ಯಾಲೆಂಡರ್ ನಲ್ಲೇನಿದೆ?

Advertisement

ಕೋವಿಡ್ ಇಡೀ ಜಗತ್ತಲೇ ಇದೆ. ರಾಜ್ಯದಲ್ಲಿ ಮಾತ್ರ ಅಲ್ಲ. ಕೈಗಾರಿಕಾ ಕಂಪನಿಗಳು ಹೂಡಿಕೆ ಮಾಡಲು ಕರ್ನಾಟಕಕ್ಕೆ ಬಾರದೆ ತಮಿಳುನಾಡಿಗೆ ಹೋಗುತ್ತಿವೆ. ರಾಜ್ಯದಲ್ಲಿ ಎಲ್ಲಾ ಉದ್ಯಮಗಳು ಮುಚ್ಚಿ ಹೋಗುತ್ತಿವೆ. ಹೂಡಿಕೆ ಸ್ನೇಹಿ ವಾತಾವರಣ ನಿರ್ಮಾಣವಾದಾಗ ಮಾತ್ರ ಕಂಪನಿಗಳು ಬರಲು ಸಾಧ್ಯ. ಉದ್ಯೋಗ ಸೃಷ್ಟಿಯಾಗಲು ಸಾಧ್ಯ ಎಂದರು.

ನಾವು ಸುಳ್ಳು ಹೇಳಲ್ಲ. ಸತ್ಯ ಹೇಳಿಕೊಂಡು ಜನರ ಮುಂದೆ ಹೋಗುತ್ತೇವೆ. ಬೋಗಸ್ ಧರ್ಮ ಪ್ರಚಾರ ಮಾಡುವವರ ಬಗ್ಗೆ ಜನರಿಗೆ ತಿಳಿಸುತ್ತೇವೆ. ಬಿಜೆಪಿ ಮನುವಾದಿ ಮೇಲೆ ನಂಬಿಕೆ ಇಟ್ಟಿದೆ. ನಾವು ಮನುಷ್ಯತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ರಾಹುಲ್ ಗಾಂಧಿಯವರಿಗೆ ನಾವು ರಾಜ್ಯದಲ್ಲಿ 150 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ನಾವು 150 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next