Advertisement

ದೇಹಿ ಅಂದವಳನು ದೂರವೇ ನಿಲ್ಲಿಸಿದೆ…

01:12 PM May 13, 2020 | mahesh |

ಮೊನ್ನೆ ಸಲೀಮುನ್ನಿಸಾ ಇದ್ದಕ್ಕಿದ್ದಂತೆ ಫೋನು ಮಾಡಿದಾಗ, ಆಶ್ಚರ್ಯ ಆಯ್ತು. ಸ್ಟಾಫ್ರೂಮ್‌ ಅನ್ನು ನೀಟಾಗಿ ಗುಡಿಸಿ, ಪಳಪಳ ಹೊಳೆಯುವಂತೆ ಟೇಬಲ್‌ ಒರೆಸಿ, “ಕಾಫಿ, ಟೀ ಏನಾದ್ರು ತರಬೇಕಾ?’ ಅಂತ ಕೇಳುತ್ತಿದ್ದ ಆಕೆ, ಎಲ್ಲರಿಗೂ ಬೇಕಾದ ಆಯಾ. ನಾಲ್ಕು ತಿಂಗಳ ಹಿಂದೆ ಕೆಲಸದಿಂದ ನಿವೃತ್ತಿ ಆದಾಗ, ಆಕೆಗೆ ನನ್ನ ಫೋನ್‌ ನಂಬರ್‌ ಕೊಟ್ಟು ಬಂದಿದ್ದೆ. ಮೊನ್ನೆ ಕರೆ ಮಾಡಿದ್ದ ಆಕೆ- “ಮೇಡಂ, ತುಂಬಾ ಕಷ್ಟದಲ್ಲಿದೀನಿ. ಕಾಯಿಲೆ ಬಿದ್ದಿರುವ ಅಮ್ಮನನ್ನ ನೋಡಲಿಕ್ಕೆ ಅಂತ ಮಾರ್ಚ್‌ ನಲ್ಲಿ ಊರಿಗೆ ಹೋದಾಗ ಲಾಕ್‌ಡೌನ್‌ ಆಗಿ, ವಾಪಸ್‌ ಬರಲು ಆಗದೆ, ಕೊನೆಗೆ ತರಕಾರಿ ಲಾರಿಯೊಳಗೆ ಹೇಗೊ ತೂರ್ಕೊಂಡು ಮನೆಗೆ ಬಂದೆ. ಕಾಲೇಜು ಕೂಡಾ ಮುಚ್ಚಿರುವುದರಿಂದ, “ರಿ ಓಪನ್‌ ಆದಾಗ ಬನ್ನಿ’ ಅಂದುಬಿಟ್ಟರು. ಸಂಬಳಾನೂ ಬಂದಿಲ್ಲ. ಮಕ್ಕಳ ಗೋಳು ನೋಡಕ್ಕಾಗ್ತಿಲ್ಲ’ ಅಂತ ದುಃಖ ತೋಡಿಕೊಂಡಳು. ಅದನ್ನು ಕೇಳಿ, ಬಹಳ ಬೇಸರವಾಯ್ತು. ಆ ಧ್ವನಿ, ಕೇವಲ ಸಲೀಮುನ್ನೀಸಾ ಒಬ್ಬಳದ್ದಾಗಿರಲಿಲ್ಲ.

Advertisement

ದೇಶದ ಅಸಂಖ್ಯಾತ ಅಸಂಘಟಿತ ಕಾರ್ಮಿಕರ, ಅದರಲ್ಲೂ ಮಹಿಳಾ ಕಾರ್ಮಿಕರ ದ್ವನಿಯಂತೆನಿಸಿತು. ಎಲ್ಲರ ಕಷ್ಟ ನೀಗಿಸಲು ನನಗೆ ಸಾಧ್ಯವಾಗದೆ ಇರಬಹುದು. ಆದರೆ, ಈಕೆಯ ಕಷ್ಟಕ್ಕೆ ನೆರವಾಗುವುದು ನನ್ನ ಕರ್ತವ್ಯ ಅಂತ ಭಾವಿಸಿ, “ನಾಳೆ ಮನೆಗೆ ಬಾ’ ಅಂದೆ. ಅಡ್ರೆಸ್‌ ಕೊಟ್ಟೆ. ಅವಳ ಮನೆ ಇರುವ ಜಾಗ, ನಮ್ಮ ಮನೆಗೆ ಹತ್ತಿರದಲ್ಲೇ ಇತು ಅವತ್ತು ರಾತ್ರಿಯೆಲ್ಲ ಏನೋ ಆತಂಕ, ತಳಮಳ. ಆಕೆ ಮನೆಗೆ ಬರುವುದು ಸೇಫಾ? ಮನೆಗೆ ಕರೆದು ತಪ್ಪು ಮಾಡ್ತಾ ಇದೀನಾ? ಅವಳು ವಾಸಿಸೋದು ಇಕ್ಕಟ್ಟಾದ, ಕಿಕ್ಕಿರಿದ ಓಣಿಗಳಿಂದ ಕೂಡಿದ ಜಾಗದಲ್ಲಿ. ಎಲ್ಲಾ ತಿಳಿದಿರುವ, ಸ್ವಲ್ಪ ದೊಡ್ಡ ಮನೆಗಳಲ್ಲಿ ಇರುವ ನಮಗೇ ಸಾಮಾಜಿಕ ಅಂತರ ಕಾಪಾಡಿಕೊಳ್ಳೋಕೆ ಕಷ್ಟ ಅನ್ನಿಸ್ತಾ ಇದೆ.

ಇನ್ನು, ಚಿಕ್ಕ ಚಿಕ್ಕ ಗೂಡುಗಳಲ್ಲಿ, ದಿನವಿಡೀ ಎಲ್ಲರೂ ಮನೆಯಲ್ಲೇ ಇರಬೇಕಾದ ಪರಿಸ್ಥಿತಿಯಲ್ಲಿ, ಸಲೀಮುನ್ನೀಸಾ ಹೇಗೆ ಸೋಷಿಯಲ್‌ ಡಿಸ್ಟನ್ಸ್ ಫಾಲೋ ಮಾಡ್ತಾಳೆ? ಅದೂ ಅಲ್ಲದೆ, ಲಾರಿಯಲ್ಲಿ ಕುಳಿತು ಊರಿಂದ ಬಂದೆ ಅಂತ ಬೇರೆ ಹೇಳ್ತಿದ್ದಾಳೆ. ಈಗ ಇವಳನ್ನು ಮನೆಗೆ ಕರೆದಿದ್ದು ಸರಿಯಾ… ಅಂತೆಲ್ಲ ಪ್ರಶ್ನೆಗಳು ಮೂಡಿ, ನಿದ್ದೆಯಲ್ಲೆಲ್ಲಾ ಕೋವಿಡ್ ನಮ್ಮ ಮನೆಯೊಳಗೇ ಬಂದಂತೆ ಕನವರಿಸಿದೆ.

ಬೆಳಗ್ಗೆ ಯಜಮಾನರ ಬಳಿ ನನ್ನ ಆತಂಕವನ್ನು ಹೇಳಿಕೊಂಡೆ. ಅವರು ಕೂಡಾ- “ಹೌದು ಮತ್ತೆ, ಮನೆಯಲ್ಲಿ ವಯಸ್ಸಾದವರನ್ನೆಲ್ಲಾ ಇಟ್ಟುಕೊಂಡು, ಆಕೇನ ಮನೆಗೆ ಯಾಕೆ ಬರ ಹೇಳಿದೆ?’ ಅಂತ ಕೇಳಿದರು. ಈಗ ಆಕೆಗೆ ಏನು ಹೇಳುವುದು ಎಂಬ ಸಂದಿಗ್ಧತೆಯಲ್ಲಿ ತೊಳಲಾಡುತ್ತಿರುವಾಗ, ಅವಳೇ ಫೋನು ಮಾಡಿದಳು. “ಮೇಡಂ, ನಾನು ಮಗಳ ಜೊತೆ ಇಲ್ಲಿ ಕಲ್ಯಾಣ ಮಂಟಪದ ಹತ್ತಿರ ಇದೀನಿ. ಇಲ್ಲಿಂದ ನಿಮ್ಮನೆಗೆ ಹೇಗೆ ಬರಬೇಕು?’ ಅಂತ ಕೇಳಿದಳು. ತಕ್ಷಣ, “ಅಲ್ಲೆ ಇರು, ನಾನೇ ಬಂದು ನೋಡ್ತೀನಿ ನಿನ್ನ’ ಅಂತ ಹೇಳಿ, ಸರಸರನೆ ಒಂದು ಎನ್ವಲೊಪ್‌ನಲ್ಲಿ ಎರಡು ಸಾವಿರ ಹಾಕಿಕೊಂಡು, ಮಾಸ್ಕ್ ಧರಿಸಿ ಹೊರಡುವಾಗ, ಸಲೀಮುನ್ನೀಸಾ ಇನ್ನೊಮ್ಮೆ ಫೋನಾಯಿಸಿದಳು. “ಮೇಡಂ, ಬೇಗ ಬರ್ತೀರ. ಇಲ್ಲಿ ಓಡಾಡ್ತಿರೋ ಜನ, ಬುರ್ಕಾ
ಹಾಕಿರೋ ನನ್ನನ್ನೇ ದುರುದುರು ನೋಡಿಕೊಂಡು ಹೋಗ್ತಿದ್ದಾರೆ. ಯಾಕೋ ಭಯ ಆಗ್ತಿದೆ’ ಅಂದಳು.

ಛೇ, ಎಂಥ ಸ್ಥಿತಿ ತಲುಪಿಬಿಟ್ಟಿದ್ದೇವೆ. ಎಲ್ಲರನ್ನೂ ಸಂಶಯದಿಂದ ನೋಡುವ ವಿಷಮ ವಾತಾವರಣ ಸೃಷ್ಟಿಯಾಯ್ತಲ್ಲ ಎಂದು ಬೇಸರ ಪಡುತ್ತಾ, ಬೇಗ ಅವಳಿದ್ದಲ್ಲಿ ತಲುಪಿದೆ. ಎನ್ವಲೋಪಿನ ತುದಿ ಹಿಡಿದು, ಭಯದಿಂದ ನಿಂತಿದ್ದ ಅವಳ ಕೈಗೆ ಅದನ್ನು ರವಾನಿಸಿದೆ. “ಇದರಲ್ಲಿ ಹೇಗಾದರೂ ಮ್ಯಾನೇಜ್‌ ಮಾಡು’ ಅಂತ ನಾಲ್ಕು ಸಮಾಧಾನದ ಮಾತಾಡಿದರೂ, ಇವಳನ್ನ ಹೀಗೆ ಕೋವಿಡ್  ಶಂಕಿತರ ತರಹ ಮನೆಯಿಂದ ದೂರ ನಿಲ್ಲಿಸಿದೆನಲ್ಲ ಅಂತ ನನ್ನ ಮೇಲೆ ನನಗೇ ಬೇಜಾರಾಯ್ತು. ಸ್ಟಾಫ್ ರೂಮ್‌ನಲ್ಲಿ ಬಿಸಿ ಬಿಸಿ ಕಾಫಿ ಕೊಡುತ್ತಿದ್ದ ಅವಳ ನಗು ಮುಖ, ನನ್ನನ್ನು ಅಣಕಿಸಿದಂತೆನಿಸಿತು.

Advertisement

ಕುಸುಮ್‌ ಗೋಪಿನಾಥ್‌

Advertisement

Udayavani is now on Telegram. Click here to join our channel and stay updated with the latest news.

Next