Advertisement

ವೃತ್ತಿ ಸಾರ್ಥಕ್ಯದ ಆ ದಿನ…

01:43 AM Oct 05, 2018 | |

ಸಾಯುವಾಗ ಅವ್ವ ಕೊನೆಯ ಬಾರಿಗೆ ನಮ್ಮೆಲ್ಲರೆಡೆ ಕಣ್ಣು ತಿರುಗಿಸಿ ನೋಡಿದ್ದು, ಹರಳೆಣ್ಣೆ ದೀಪದ ಮಂದ ಬೆಳಕಿನಲ್ಲಿ ಕಂಡಿತು. ಅದು ಇವತ್ತೇ ಸಂಭವಿಸಿದಷ್ಟು ಸ್ಪಷ್ಟವಾದ ಚಿತ್ರ ನನ್ನ ಕಣ್ಣ ಮುಂದಿದೆ. ಹೌದು, ನಮ್ಮೆದುರಿಗೇ ನಮ್ಮವ್ವ ತೀರಿಹೋಗಿದ್ದಳು.

Advertisement

“”ಸರ್‌, ನಿನ್ನೆ ರಾತ್ರಿ ಸಿಜೇರಿಯನ್‌ ಆದ ಪೇಶಂಟ್‌ಗೆ ಭಾಳ ಬ್ಲೀಡಿಂಗ್‌ ಆಗಾಕ ಹತ್ತೈತ್ರಿ, ಅರ್ಜಂಟ್‌ ಬರ್ರಿ…” ಸುಮಾರು ಹತ್ತೂಂಬತ್ತು ವರ್ಷಗಳ ಹಿಂದಿನ ಮಾತು. ಅದೊಂದು ದಿನ ಬೆಳಿಗ್ಗೆ ಐದು ಗಂಟೆಯ ಸಮಯ. ನಮ್ಮ ಆಸ್ಪತ್ರೆಯ ನರ್ಸ್‌ ಗಾಬರಿ ತುಂಬಿದ ಧ್ವನಿಯಲ್ಲಿ ಫೋನ್‌ ಮಾಡಿ ಹೇಳಿದಾಗ ನಾನು ಗಡಿಬಿಡಿಯಿಂದ ಹೊರಟೇಬಿಟ್ಟೆ. ನಮ್ಮ ಮನೆಗೂ ಆಸ್ಪತ್ರೆಗೂ ನಡುವಿನ ಸುಮಾರು ಒಂದು ಕಿಲೋಮೀಟರ್‌ ದೂರವನ್ನು ಒಂದೇ ನಿಮಿಷದಲ್ಲಿ ಕ್ರಮಿಸಿ, ಆಸ್ಪತ್ರೆ ತಲುಪಿದೆ.

ನಾನು ಎಂ.ಬಿ.ಬಿ.ಎಸ್‌. ಮಾತ್ರ ಮಾಡಿಕೊಂಡು ನಮ್ಮೂರಲ್ಲಿ ಖಾಸಗಿ ಪ್ರಾಕ್ಟೀಸ್‌ ಮಾಡುತ್ತಿದ್ದ ದಿನಗಳಿಂದ ಈವರೆಗೂ ಹೆರಿಗೆಗೆ ಬಂದ ರೋಗಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. (ನಾನು ಸ್ತ್ರೀರೋಗ ತಜ್ಞನಲ್ಲದೇ ಇದ್ದರೂ ಸರಕಾರೀ ವೈದ್ಯನಾಗಿ ಸೇವೆ ಸಲ್ಲಿಸಿದ್ದರಿಂದ ಎಲ್ಲೆಡೆಗೂ ಸಲ್ಲುವ ಧೈರ್ಯ ಹಾಗೂ ಪರಿಣತಿ ಬಂದುಬಿಟ್ಟಿದೆ) ಹೆರಿಗೆಯ ಪೇಶಂಟ್‌ಗಳಿದ್ದಾಗ ಎರಡು ಜೀವಗಳ ಜವಾಬ್ದಾರಿ ಇರುವುದರ ಜೊತೆಗೆ ಒಂದಿಷ್ಟೇ ಅಲಕ್ಷ್ಯಮಾಡಿದರೂ ಯಾವುದೇ ಕ್ಷಣ ಏನಾದರೂ ಅನಾಹುತಗಳಾಗುವ ಸಂದರ್ಭಗಳು ಬಹಳ. ಅಲ್ಲದೆ ನನ್ನ ಮನದಲ್ಲಿ ಅಪ್ರಯತ್ನವಾಗಿ ಅಚ್ಚಳಿಯದೆ ಮನೆಮಾಡಿದ ಬಾಲ್ಯದ ಘಟನೆಯೂ ಅದಕ್ಕೆ ಕಾರಣ. ಹಾಗೆ ನೋಡಿದರೆ ನಾನು ವೈದ್ಯನಾಗಲು ಪ್ರೇರೇಪಣೆ ನೀಡಿದ್ದೇ ಮರೆಯಲಸಾಧ್ಯವಾದ ಆ ವಿಷಾದದ ಘಟನೆ.

ನಾನು ಆಗ ಹತ್ತು ವರ್ಷದವನಿದ್ದೆ. ನಮ್ಮವ್ವ ತನ್ನ ಏಳನೆಯ ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದಳು. ಈಗಿನಂತೆ ಸಣ್ಣ ಕುಟುಂಬದ ಪದ್ಧತಿ ಆಗ ಬಹುಜನರಿಗೆ ಗೊತ್ತಿಲ್ಲದ ಕಾರಣ ಆರು, ಏಳು ಮಕ್ಕಳನ್ನು ಹೆರುವುದು ಸಾಮಾನ್ಯವಾಗಿತ್ತು. ಅಂದು ಶುಕ್ರವಾರ ಎಳ್ಳಮವಾಸ್ಯೆಯ ದಿನ, ನಾವೆಲ್ಲಾ ಚಕ್ಕಡಿಯಲ್ಲಿ ಕುಳಿತು “ಚರಗ ಚೆಲ್ಲಲು’ ಹೊಲಕ್ಕೆ ಹೊರಟಿದ್ದರೆ, ತಲೆಯ ಮೇಲೆ ದೊಡ್ಡಗಂಟಿನಲ್ಲಿ ಅರಿವೆಗಳನ್ನು ಹೊತ್ತು, ಅವುಗಳನ್ನು ತೊಳೆದುಕೊಂಡು ಬರಲು ಅವ್ವ ಬಾವಿಗೆ ಹೊರಟಿದ್ದಳು, ಚಕ್ಕಡಿಯಲ್ಲಿ ಬಂದರೆ ತುಂಬು ಗರ್ಭಿಣಿಗೆ ಕಷ್ಟವಾಗುತ್ತದೆಂದು ಆ ಸಲ ಹೊಲಕ್ಕೆ ಬರುವುದನ್ನು ಬಿಟ್ಟಿದ್ದಳು. ಗುಡ್ಡದಂಥ ಹೊಟ್ಟೆ, ತಲೆಯ ಮೇಲೆ ಒಂದು ಹೊರೆ ಅರಿವೆಗಳು, ಏರು ಹಣೆ, ಹಣೆಗೆ ಹಚ್ಚಿದ ದೊಡ್ಡದಾದ ಕುಂಕುಮ, ಅನಾಯಾಸವಾಗಿ ಅವಳು ಹೆಜ್ಜೆ ಇಡುತ್ತಿದ್ದ ರೀತಿ, ಮುಖದ ಮೇಲಿನ ಸಂತೃಪ್ತಿಯ ನಗು, ನಾವು ಕುಳಿತು ಹೊರಟಿದ್ದ ಚಕ್ಕಡಿಯ ಹಿಂದೆ ನಡೆದು ಬರುತ್ತಿದ್ದ ಅವಳ ಮುಖ ಐವತ್ತು ವರ್ಷಗಳ ನಂತರವೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ. ನಮ್ಮವ್ವನ ಮಾಸದ ಆ ನಗೆ ನನ್ನ ಮನಃಪಟಲದ ಮೇಲೆ ಹಾಗೆಯೇ ಉಳಿದುಕೊಂಡಿದೆ.

ಆ ದಿನಕ್ಕೆ ಸರಿಯಾಗಿ ಏಳು ದಿನಗಳ ನಂತರದ ಶುಕ್ರವಾರ ಬೆಳಗಿನ ನಾಲ್ಕು ಗಂಟೆಯ ಸುಮಾರಿಗೆ ನಮ್ಮ ಅಜ್ಜಿ ಗಾಢ ನಿದ್ರೆಯಲ್ಲಿದ್ದ ನಮ್ಮನ್ನೆಲ್ಲ ಎಬ್ಬಿಸಿದಳು. ಅವಳು ಸಂತೋಷದಿಂದ, “ನಿಮಗ ತಮ್ಮ ಹುಟ್ಯಾನ, ನೋಡ ಏಳ್ರಿ’ ಅಂದಾಗ ನಾವು ಆರೂ ಜನ ಎದ್ದು ಕುಳಿತು ಅದೇ ತಾನೇ ಹುಟ್ಟಿದ್ದ ತಮ್ಮನನ್ನು ನೋಡಿ ಖುಷಿಗೊಂಡೆವು. ಡಿಸೆಂಬರ್‌ ಚಳಿಯಲ್ಲಿ ಬೆಚ್ಚನೆಯ ಅರಿವೆಗಳನ್ನು ಸುತ್ತಿಸಿಕೊಂಡು ಶಾಂತವಾಗಿ ನಿದ್ದೆ ಮಾಡುತ್ತಿದ್ದ. ಆದರೆ ಪರದೆಯ ಆಚೆಗೆ ಕುಳಿತ ಅವ್ವನ ಮುಖ ಅದೇಕೋ ಸಪ್ಪಗಿತ್ತು. ಅವಳು ಸಂಕಟ ಪಡುತ್ತಿದ್ದಳು, ಅನಿಸುತ್ತಿತ್ತು. ನಿಶ್ಶಕ್ತಿಯಾದಂತೆ ಕಂಡಳು. ಎಂದಿನ ನಗೆ ಅಲ್ಲಿರಲಿಲ್ಲ. ನಮ್ಮ ಅಜ್ಜಿ ಮತ್ತು ಸೂಲಗಿತ್ತಿ ಕೂಡಿ ಏನೋ ಚರ್ಚಿಸುತ್ತಿದ್ದರು. ಅವರ ಮುಖದ ಮೇಲೆ ಗಾಬರಿಯಿತ್ತು. ನಮ್ಮಪ್ಪ ಓಡೋಡಿ ಹೋಗಿ ಅಲ್ಲಿನ ವೈದ್ಯರೊಬ್ಬರನ್ನು ಕರೆತಂದರು. ಸಣ್ಣ ಹಳ್ಳಿಯಾದ ನಮ್ಮೂರಲ್ಲಿ ಆಸ್ಪತ್ರೆಯಿರಲಿಲ್ಲ. ಇದ್ದ ಆರ್‌ಎಂಪಿಗಳೇ ಆಪತ್ಕಾಲದ ಚಿಕಿತ್ಸಕರು. 

Advertisement

ಸೂಲಗಿತ್ತಿ ತನಗೆ ತಿಳಿದದ್ದನ್ನು ತಾನು ಮಾಡುವುದು, ವೈದ್ಯರು ತಮಗೆ ತೋಚಿದ ಇಂಜೆಕ್ಷನ್‌ ತಾವು ನೀಡುವುದು ಅನ್ನುವುದರೊಳಗೆ, ನಮ್ಮವ್ವ ನಮ್ಮ ಕಣ್ಣೆದುರಿಗೆ ಕುಸಿದೇಬಿಟ್ಟಳು. (ಅದಕ್ಕೆ ಕಾರಣ ಹೆರಿಗೆ ನಂತರದ ಅತೀ ರಕ್ತಸ್ರಾವ ಎಂದು ನನಗೆ ಈಗ ಅನಿಸುತ್ತದೆ.) ಸಾಯುವಾಗ ಕೊನೆಯ ಬಾರಿಗೆ ನಮ್ಮೆಲ್ಲರೆಡೆ ಕಣ್ಣು ತಿರುಗಿಸಿ ನೋಡಿದ್ದು, ಹರಳೆಣ್ಣೆ ದೀಪದ ಮಂದ ಬೆಳಕಿನಲ್ಲಿ ಕಂಡಿತು. ಅದು ಇವತ್ತೇ ಸಂಭವಿಸಿದಷ್ಟು ಸ್ಪಷ್ಟವಾದ ಚಿತ್ರ ನನ್ನ ಕಣ್ಣ ಮುಂದಿದೆ. ಹೌದು, ನಮ್ಮೆದುರಿಗೇ ನಮ್ಮವ್ವ ತೀರಿಹೋಗಿದ್ದಳು. ದಿನವೂ ಚೆಂದ ಚೆಂದದ ಕತೆಗಳನ್ನು ಹೇಳುತ್ತ, ನಮ್ಮ ಅಭ್ಯಾಸದ ಬಗೆಗೆ ಅಪಾರ ಕಾಳಜಿ ತೋರುತ್ತ, ಗಣಿತದ ಸಮಸ್ಯೆಗಳನ್ನು ಅನಾಯಾಸವಾಗಿ ತಿಳಿಸಿಕೊಡುತ್ತಾ, ಶಿಕ್ಷಣವನ್ನೂ ಆಟವನ್ನಾಗಿಸುತ್ತಿದ್ದ ಅವ್ವ ಹೋಗಿಬಿಟ್ಟಿದ್ದಳು.

“”ನನ್ನ ಮಗ ಸಾಲ್ಯಾಗ ಭಾಳ ಶ್ಯಾಣ್ಯಾ ಅದಾನ. ಆವಾ ಡಾಕ್ಟರ್‌ ಆಗ್ತಾನ. ನಮಗೆಲ್ಲ ಅವನಾ ಔಷಧಿ ಕೊಡ್ತಾನ…” ಅಂತ ಊರೆಲ್ಲ ಅವ್ವ ನನ್ನ ಬಗೆಗೆ ಹೇಳುತ್ತಿದ್ದದ್ದು ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು. ಅವ್ವ ಅಪೇಕ್ಷಿಸಿದಂತೆ, ಅಪ್ಪ ನನ್ನನ್ನು ಡಾಕ್ಟರ್‌ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಂಬಿಬಿಎಸ್‌ ಆದ ಮೇಲೆ ನಾನು ಮಾಡಿದ ಮೊದಲ ನಿರ್ಧಾರವೆಂದರೆ “ಯಾವ ತಾಯಿಯೂ ಅವ್ವನ ಹಾಗೆ ಹೆರಿಗೆಯಿಂದಾಗಿ ಸಾಯಬಾರದು’ ಎಂಬುದು. ಅದನ್ನು ಮನಸ್ಸಿನೊಳಗೆ ಗಟ್ಟಿಯಾಗಿ ನಿರ್ಧರಿಸಿಕೊಂಡ ನಾನು, ಬರೀ ಎಂಬಿಬಿಎಸ್‌ ಮುಗಿಸಿ ನಮ್ಮ ಹಳ್ಳಿಯಲ್ಲಿ ಪ್ರಾಕ್ಟೀಸ್‌ ಮಾಡುವಾಗಲೂ ಹೆರಿಗೆಗೆ ಬಂದ ಮಹಿಳೆಯರ ಜೊತೆ ನಿಂತೆನೆಂದರೆ, ಅವರು ಸುರಕ್ಷಿತವಾಗುವ ತನಕ ಬೇರೆ ರೋಗಿಗಳನ್ನು ನೋಡುತ್ತಿರಲಿಲ್ಲ. ಪ್ರಸೂತಿಗೆ ಬಂದ ಪ್ರತಿ ಮಹಿಳೆಯಲ್ಲೂ ನಾನು ಅವ್ವನನ್ನು ಕಾಣಲು ಪ್ರಯತ್ನಿಸುತ್ತಿದ್ದೆ, ಅನಿಸುತ್ತದೆ. ಅದು ಹಾಗೆಯೇ ಮುಂದುವರಿದು ಈಗ ಎಮ್‌ಎಸ್‌ ಮಾಡಿದ ಮೇಲೂ ಅದನ್ನೇ ತಪ್ಪದೆ ಪಾಲಿಸಿಕೊಂಡು ಬಂದಿದ್ದೇನೆ. ನಮ್ಮ ಆಸ್ಪತ್ರೆ ಅಥವಾ ಬೇರೆ ಯಾವುದೇ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಬಂದ ಮಹಿಳೆಗೆ ಸ್ವಲ್ಪವೇ ಕಷ್ಟವಿದ್ದರೂ “ಇರುವುದೆಲ್ಲವ ಬಿಟ್ಟು’ ಓಡಿ ಹೋಗುತ್ತೇನೆ, ಹಗಲು ರಾತ್ರಿಗಳ ಪರಿವೆಯಿಲ್ಲದೆ.

ಇಂದೂ ಕೂಡ ಹಾಗೆಯೇ ಆಯಿತು. ಕರೆ ಬಂದ ತಕ್ಷಣ ನಾನು ಆಸ್ಪತ್ರೆ ತಲುಪಿದೆ. ಅಲ್ಲಿ ನೋಡಿದರೆ ಅವಳು ರಕ್ತದ ಮಡುವಿನಲ್ಲಿ. ಹೆರಿಗೆ ನಂತರ ಈ ರೀತಿ ರಕ್ತಸ್ರಾವ ಕೆಲವೊಮ್ಮೆ ಸಂಭವಿಸುತ್ತವೆ. ಅದೂ ಮೂರನೆಯ, ನಾಲ್ಕನೆಯ ಹೆರಿಗೆಯ ನಂತರ ಹೀಗಾಗುವುದು ಸಾಮಾನ್ಯ. ಗರ್ಭಕೋಶ ಸಂಕುಚಿತಗೊಳ್ಳುವ ಶಕ್ತಿ ಕಳೆದುಕೊಂಡಾಗ ಸಂಭವಿಸುವ ಗಂಭೀರ ಸ್ಥಿತಿ ಇದು. ಅವಳದು ನಾಲ್ಕನೆಯ ಹೆರಿಗೆ. ಮೊದಲಿನ ಮೂರು ಸಹಜ ಹೆರಿಗೆಗಳಾಗಿದ್ದರೂ ಈ ಬಾರಿ ಕೂಸು ಅಡ್ಡಲಾಗಿ ಇದ್ದುದರ ಕಾರಣ ಸಿಜೇರಿಯನ್‌ ಮಾಡಲಾಗಿತ್ತು. ರಾತ್ರಿ ಎರಡು ಗಂಟೆಗೆ ಶಸ್ತ್ರಚಿಕಿತ್ಸೆ ಮುಗಿಸಿ, ಮುಂದೆ ಅರ್ಧ ಗಂಟೆ ಅವಳೊಂದಿಗೆ ಇದ್ದು ಬಂದಿದ್ದೆ. ಆಗ ಏನೂ ಇರದ ಸಮಸ್ಯೆ ಈಗ ಪ್ರಾರಂಭವಾಗಿತ್ತು. ನಾನು ಅಲ್ಲಿ ತಲುಪುವುದರೊಳಗೆ ಡ್ನೂಟಿಯಲ್ಲಿದ್ದ ನರ್ಸ್‌ ರಕ್ತಸ್ರಾವ ನಿಲ್ಲಿಸುವ ತುರ್ತು ಇಂಜೆಕ್ಷನ್‌ಗಳನ್ನೂ ಅದಾಗಲೇ ನೀಡಿದ್ದಳು. ಅನುಭವಿ ನರ್ಸ್‌ಗಳು ಕೆಲವೊಮ್ಮೆ ವೈದ್ಯರಿಗೆ ಸರಿಸಮನಾಗಿ ಔಷಧೋಪಚಾರ ಮಾಡಬಲ್ಲವರಾಗಿರುತ್ತಾರೆ.

ಆದರೆ ತೀವ್ರ ರಕ್ತಸ್ರಾವದಿಂದ ಅವಳು ಕುಸಿಯಲು ಪ್ರಾರಂಭಿಸಿದ್ದಳು. ನಾವು ನೀಡಿದ ಸಲೈನ್‌ ಒಂದಿಷ್ಟು ಸಮಯ ಮಾತ್ರ ರಕ್ತದೊತ್ತಡವನ್ನು ಸಹಜ ಸ್ಥಿತಿಯಲ್ಲಿ ಹಿಡಿದಿಡಲು ಸಾಧ್ಯ. “ರಕ್ತಕ್ಕೆ ರಕ್ತ ಮಾತ್ರ ಸಾಟಿ.’ ಈಗ ತುರ್ತಾಗಿ ರಕ್ತ ಹಾಕುವುದು ಮತ್ತು ಶಸ್ತ್ರಚಿಕಿತ್ಸೆ ಮಾಡಿ ರಕ್ತಸ್ರಾವ ನಿಲ್ಲಿಸುವುದು ಅವಶ್ಯವಾಗಿತ್ತು. ಅಂದರೆ ಮಾತ್ರ ಅವಳನ್ನು ಬದುಕಿಸುವುದು ಸಾಧ್ಯವಿತ್ತು. ಅಲ್ಲಿ ನೋಡಿದರೆ ರೋಗಿಯ ಸಂಬಂಧಿಕರಾರೂ ಇಲ್ಲ. ಕೂಸನ್ನು ನೋಡಿಕೊಳ್ಳಲು ಒಬ್ಬ ಮುದುಕಿಯನ್ನು ಬಿಟ್ಟು ಎಲ್ಲರೂ ತಮ್ಮೂರಿಗೆ ಹೊರಟು ಹೋಗಿದ್ದರು. ಆಗಿನ್ನೂ ಮೊಬೈಲ್‌ ಫೋನ್‌ಗಳಿರಲಿಲ್ಲ. ಮತ್ತೆ ಆ ಹಳ್ಳಿಗೆ ಫೋನ್‌ ಕೂಡ ಇಲ್ಲ. ನಮಗೆ ದಿಕ್ಕು ತೋಚದಂತಾಯಿತು. ಕ್ಷಣ ಕ್ಷಣಕ್ಕೆ ಅವಳ ಸ್ಥಿತಿ ಗಂಭೀರವಾಗತೊಡಗಿತ್ತು. ಅವಳ ಚಡಪಡಿಕೆ ಸಂಕಟ ನೋಡಲಾಗುತ್ತಿಲ್ಲ. ಸಮೀಪದಲ್ಲಿ ಬ್ಲಿಡ್‌ ಬ್ಯಾಂಕ್‌ ಇಲ್ಲ. ರಕ್ತ ಸಿಗಬೇಕಾದರೆ ಕನಿಷ್ಠ 60 ಕಿ.ಮೀ. ದೂರ ಹೋಗಬೇಕು. ಅದೂ ಅಲ್ಲಿ ಇವಳ ಗ್ರುಪ್‌ನ ರಕ್ತ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಧರ್ಮ ಸಂಕಟ ಅಂದರೆ ಇದೇ ಇರಬೇಕು. ಅವಳ ರಕ್ತದ ಗ್ರುಪ್‌ ನೋಡಿದೆ. ಇನ್ನು ಸಮಯ ವ್ಯರ್ಥ ಕಳೆಯುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬಂದು, ರಕ್ತಸ್ರಾವವನ್ನು ಸಾಧ್ಯವಿದ್ದಷ್ಟು ಹತೋಟಿಯಲ್ಲಿಡುವಂಥ ಇಂಜೆಕ್ಷನ್‌ಗಳನ್ನೂ, ದ್ರಾವಣಗಳನ್ನೂ ನೀಡಲು ನಮ್ಮ ಸಿಬ್ಬಂದಿಗೆ ತಿಳಿಸಿ, ಅರಿವಳಿಕೆ ತಜ್ಞರನ್ನು ಕರೆತರಲು ಕಾರು ತೆಗೆದುಕೊಂಡು ಹೊರಟೆ. ತಮ್ಮ ಮನೆಯಲ್ಲಿದ್ದ ಅವರನ್ನು ಅರ್ಜೆಂಟ್‌ ಆಗಿ ನನ್ನ ಜೊತೆ ಬರುವಂತೆ ವಿನಂತಿಸಿದೆ. ಒಂದೇ ಮಾತಿಗೆ ನನ್ನ ಕಾರಿನಲ್ಲಿ ಕುಳಿತ ಅವರಿಗೆ ದಾರಿಗುಂಟ ವಸ್ತುಸ್ಥಿತಿ ವಿವರಿಸಿದೆ. ಆಸ್ಪತ್ರೆಗೆ ಬಂದವನೇ ನನ್ನ ಹಾಗೂ ರೋಗಿಯ ರಕ್ತ ಹೊಂದುತ್ತದೆಯೇನೋ ಎಂಬುವುದನ್ನು ಪರೀಕ್ಷಿಸಲು ನಮ್ಮ ಟೆಕ್ನಿಷಿಯನ್‌ಗೆ ಹೇಳಿದೆ. ಯಾಕೆಂದರೆ ನನ್ನ ಹಾಗೂ ರೋಗಿಯ ರಕ್ತದ ಗುಂಪು ಒಂದೇ ಇದೆ ಎಂದು ನನಗೆ ಗೊತ್ತಿತ್ತು. ಸುದೈವವಶಾತ್‌ ನನ್ನ ರಕ್ತ ಅವಳದರೊಂದಿಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ನಮ್ಮ ಟೆಕ್ನಿಷಿಯನ್‌ ಹೇಳಿದಾಗ ನಮ್ಮ ಸಂತೋಷಕ್ಕೆ ಪಾರವೇ ಇಲ್ಲ. ಆ ದಿನಗಳಲ್ಲಿ ಎಮರ್ಜೆನ್ಸಿಗಾಗಿ ರಕ್ತದ ಬ್ಯಾಗ್‌ಗಳನ್ನು ನಾವು ಇಟ್ಟುಕೊಂಡಿರುತ್ತಿ¨ªೆವು. ಮತ್ತೆ ಆಗ ರಕ್ತ ಸಂಗ್ರಹಣೆ ಹಾಗೂ ವಿತರಣೆಯ ಕಾಯಿದೆ ಕೂಡ ಈಗಿನಂತೆ ಇರಲಿಲ್ಲ. ಅದೀಗ ಉಪಯೋಗಕ್ಕೆ ಬಂತು. ನನ್ನ ಒಂದು ಬಾಟಲಿ ರಕ್ತ ತೆಗೆದು ಅವಳಿಗೆ ನೀಡಲು ಪ್ರಾರಂಭಿಸಿ, ಅರಿವಳಿಕೆ ತಜ್ಞರು ಅರಿವಳಿಕೆ ನೀಡಿದ ನಂತರ, ಮನದಲ್ಲಿಯೇ ನಮ್ಮವ್ವನನ್ನು ನೆನೆದು ಶಸ್ತ್ರಚಿಕಿತ್ಸೆ ಪ್ರಾರಂಭಿಸಿದೆ.

ಆ ಶಸ್ತ್ರಚಿಕಿತ್ಸೆ ನನ್ನ ಜೀವನದಲ್ಲಿಯೇ ಮರೆಯಲಾರದಂತಹುದು. ಯಾಕೆಂದರೆ ರೋಗಿಯ ಜವಾಬ್ದಾರಿಯುತ ಸಂಬಂಧಿಕರಿಲ್ಲ. ಏನಾದರೂ ಹೆಚ್ಚು ಕಡಿಮೆಯಾದರೆ, ಆಮೇಲೆ ಬಂದ ಅವರನ್ನು ಸಮಾಧಾನಪಡಿಸುವುದು ಕಷ್ಟದ ಕೆಲಸ. ಅಲ್ಲದೆ ಇಷ್ಟೆಲ್ಲ ಮಾಡಿಯೂ ಅವಳು ಬದುಕುವ ಬಗ್ಗೆ ಭರವಸೆ ಇಲ್ಲ. ಆದರೂ ಧೈರ್ಯ ಮಾಡಲೇಬೇಕಾಯ್ತು. ಆಗ ನಮ್ಮ ಗುರಿ ಎಂದರೆ ಪ್ರಾಮಾಣಿಕ ಪ್ರಯತ್ನ ಮಾತ್ರ. ಅಷ್ಟೊತ್ತಿಗೆ ನನ್ನ ಅಸಿಸ್ಟಂಟ್‌ ಡಾಕ್ಟರ್‌ ಒಬ್ಬರ ರಕ್ತ ಕೂಡ ಹೊಂದಾಣಿಕೆಯಾಯಿತು. ಅವನದನ್ನೂ ಒಂದು ಬಾಟಲಿ ರಕ್ತ ಹಾಕಿ, ಮುಂದಿನ ಒಂದು ಗಂಟೆ ತಪಸ್ಸಿನಂತಹ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಿದೆವು. ಅವಳು ಗುಣಮುಖ…! ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಜೀವ ಉಳಿದದ್ದು ಅವಳದು, ಆದರೆ ಗೆದ್ದವರು ನಾವು..!!

ನನ್ನ ವೈದ್ಯ ವೃತ್ತಿಯಲ್ಲಿಯೇ ಅತ್ಯಂತ ಸಾರ್ಥಕ ದಿನ ಅದು..

ಈಗ ಕೆಲವು ದಿನಗಳ ಹಿಂದೆ ಎಸ್‌ಎಸ್‌ಎಲ್‌ಸಿ ಕಲಿಯುತ್ತಿದ್ದ ಮಗಳನ್ನು ತನ್ನೊಂದಿಗೆ ಕರೆದುಕೊಂಡು ಒಬ್ಬ ತಾಯಿ ಬಂದಿದ್ದಳು. ಬಂದವಳೇ ಮಗಳಿಗೆ “ಸಾಹೇಬರ, ಕಾಲು ಮುಟ್ಟಿ ನಮಸ್ಕಾರ ಮಾಡು’ ಅಂದಳು. ನನಗೆ ಯಾಕೆಂದು ಗೊತ್ತಾಗಲಿಲ್ಲ. ಯಾಕೆಂದು ಕೇಳಿದರೆ ‘ಅವತ್ತ ಸಿಜೇರಿಯನ್‌ದಿಂದ ಹುಟ್ಟಿದ ಮಗಳು ಇವಳರೀ, ಸಾಹೇಬ್ರ…ನಿಮ್ಮನ್ನ ನಾವು ದಿನಾ ನೆನೆಸಿ ಊಟ ಮಾಡ್ತೀವಿ’ ಅಂದಳು.

ನನ್ನ ಕಣ್ಣಲ್ಲಿ ಆನಂದ ಬಾಷ್ಪಗಳು. 
ಅಲ್ಲಿ, ದೂರದಲ್ಲೆಲ್ಲೋ ನಮ್ಮವ್ವ ಕೂಡ ತೃಪ್ತಿಯ, ಅಭಿಮಾನದ, ಹೆಮ್ಮೆಯ, ಸಂತಸದ ನೋಟ ಬೀರುತ್ತಿರಬಹುದೇ….?

ಡಾ. ಶಿವಾನಂದ ಕುಬಸದ

Advertisement

Udayavani is now on Telegram. Click here to join our channel and stay updated with the latest news.

Next