Advertisement

ಗ್ರಾಮ ವಾಸ್ತವ್ಯದಿಂದ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ನ್ಯಾಯ ಕೊಡಿಸಲು ಸಾಧ್ಯ:ಪುಟ್ಟರಾಜು

10:58 PM Mar 20, 2021 | Team Udayavani |

ಮೂಡುಬಿದಿರೆ: ಕಂದಾಯ ಅಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದಿಂದ ಜನರು ತಮಗೆ ಲಭಿಸಬೇಕಾದ ಸವಲತ್ತುಗಳ ಬಗ್ಗೆ ಕಚೇರಿಗಳತ್ತ ಅಲೆದಾಡುವುದು ತಪ್ಪು ವುದು. ಸಮಸ್ಯೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ಕೊಳ್ಳಲೂ ಇದು ಸಹಕಾರಿ. ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ನ್ಯಾಯ ಕೊಡಿಸಲೂ ಸಾಧ್ಯವಾಗುವುದು ಎಂದು ಮೂಡುಬಿದಿರೆ ತಹಶೀಲ್ದಾರ್‌ ಪುಟ್ಟರಾಜು ಹೇಳಿದರು.

Advertisement

ಮೂಡುಬಿದಿರೆ ತಾಲೂಕಿನ ದರೆ ಗುಡ್ಡೆ ಗ್ರಾ.ಪಂ.ನಲ್ಲಿ ಶನಿವಾರ ನಡೆದ “ತಹಶೀಲ್ದಾರರ ಗ್ರಾಮ ವಾಸ್ತವ್ಯ’ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, “ಇಂಥ ಗ್ರಾಮ ವಾಸ್ತವ್ಯದಿಂದ ನಮಗೂ ಎಷ್ಟೋ ಕಾಲದಿಂದ ನನೆಗುದಿಗೆ ಬಿದ್ದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಸೂಕ್ತ ಪರಿಹಾರ ಕ್ರಮ ಜರಗಿಸಲೂ ಸಾಧ್ಯವಾಗುತ್ತಿದೆ ಎಂದರು.

ದರೆಗುಡ್ಡೆ ಗ್ರಾ.ಪಂ. ವ್ಯಾಪ್ತಿಯ ದರೆಗುಡ್ಡೆ, ಪಣಪಿಲ, ಕೆಲ್ಲಪುತ್ತಿಗೆ ಗ್ರಾಮ ಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹಾಗೂ ಅರ್ಹ ಅರ್ಜಿಗಳ ವಿಲೇವಾರಿಗಾಗಿ ನಡೆದ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳೊಂದಿಗೆ ಜನರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಘನತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಜಾಗ ಪರಿಶೀಲನೆ :

ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ತಹಶೀಲ್ದಾರರು ದರೆಗುಡ್ಡೆಯ ಶ್ಮಶಾನಕ್ಕೆ ಭೇಟಿ ನೀಡಿ, ಘನತ್ಯಾಜ್ಯ ಘಟಕ ವಿಲೇವಾರಿ ಘಟಕವನ್ನು ಸ್ಥಾಪಿಸಲು ಸೂಕ್ತವಾದ ಜಾಗವನ್ನು ಪರಿಶೀಲಿಸಿದರು. ಶ್ಮಶಾನಕ್ಕೆ ಒದಗಿಸಲಾಗಿರುವ 2.27 ಎಕ್ರೆ ಜಾಗದಲ್ಲಿ 50 ಸೆಂಟ್ಸ್‌ ನಷ್ಟನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಮೀಸಲಿರಿಸಲು ತಹಶೀಲ್ದಾರರು ಸೂಚಿಸಿದರು.

Advertisement

ಮನೆ ನಿವೇಶನಕ್ಕೆ :

ದರೆಗುಡ್ಡೆ ಕೊಟ್ರೊಟ್ಟು ಬಳಿ ನಿವೇಶನ ರಹಿತರಿಗೆ ನೀಡಲು ಸುಮಾರು 2 ಎಕ್ರೆ ಜಾಗ ಲಭ್ಯವಿದ್ದು ಇದನ್ನು ಮನೆ ನಿವೇಶನಗಳನ್ನು ರೂಪಿಸಲು ಮೀಸಲಿರಿಸುವುದಾಗಿ ತಿಳಿಸಿದರು. ಸರಕಾರಿ ಯೋಜನೆಗಳು ಇನ್ನೂ ಹತ್ತಿರ ದರೆಗುಡ್ಡೆ ಗ್ರಾ.ಪಂ. ಅಧ್ಯಕ್ಷೆ ತುಳಸೀ ಮೂಲ್ಯ ಅವರು ಮಾತನಾಡಿ, ಮೂಡುಬಿದಿರೆ ತಾಲೂಕಿನಲ್ಲಿ ನಮ್ಮ ದರೆಗುಡ್ಡೆ ಗ್ರಾಮವನ್ನು        ವಾಸ್ತವ್ಯಕ್ಕಾಗಿ ತಹಶೀಲ್ದಾರರು ಆಯ್ಕೆ ಮಾಡಿಕೊಂಡಿರುವುದು ನನಗೆ ಬಹಳ ಖುಷಿ ಕೊಟ್ಟಿದೆ. ಇಂಥ ಗ್ರಾಮ ವಾಸ್ತವ್ಯದಿಂದ ಜನರಿಗೆ ಖಂಡಿತ ಬಹಳಷ್ಟು ಪ್ರಯೋಜನವಿದೆ. ಜನರು ಕಚೇರಿಗಳಿಗೆ ಅಲೆದಾಡುತ್ತ ಪಡುವ ಸಂಕಷ್ಟ ದೂರವಾಗಲು ಇದು ಬಹಳ ಸೂಕ್ತ ಕಾರ್ಯಕ್ರಮ. ವರ್ಷಕ್ಕೊಮ್ಮೆ ಅಲ್ಲ ಕನಿಷ್ಠ ಎರಡು ಸಲವಾದರೂ ತಹಶೀಲ್ದಾರರು ಅಧಿಕಾರಿಗಳೊಂದಿಗೆ ಇಂಥ ಗ್ರಾಮ ವಾಸ್ತವ್ಯ ಹೂಡಿದರೆ ಜನರಿಗೆ ಉಪಕಾರವಾಗಲಿದೆ. ಸರಕಾರದ ಯೋಜನೆಗಳು ಇನ್ನೂ ಜನರಿಗೆ ಹತ್ತಿರವಾಗಲು ಇಂಥ ಕಾರ್ಯಕ್ರಮ ಅಗತ್ಯ ಎಂದು ಅವರು ಹೇಳಿದರು.

5 ವರ್ಷಗಳ ಸಮಸ್ಯೆಗೆ ಪರಿಹಾರದ ದಾರಿ :

“ಮನೆ ನಿವೇಶನಕ್ಕಾಗಿ 2016ರಲ್ಲಿ ಅರ್ಜಿ ಸಲ್ಲಿಸಿದ್ದೆ. ಇನ್ನೂ ನಮಗೆ ಒದಗಿಸಿಲ್ಲ. ಇವತ್ತು ಬಂದು ವಿಚಾರಿಸಿದಾಗ ತಹಶೀ ಲ್ದಾರರ ಕಚೇರಿಯಲ್ಲಿ ಹುಡುಕಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದಕ್ಕೆ ಜಾತಿ ಆದಾಯ ಪತ್ರ ಮಾಡಿಸಲಿಕ್ಕಿದೆ. ಸೋಮ ವಾರ ತಾಲೂಕು ಕಚೇರಿಗೆ ಬರಲು ಹೇಳಿದ್ದಾರೆ’ ಎಂದು ಗ್ರಾಮಸ್ಥೆ ಹರಿಣಾಕ್ಷಿ ತಿಳಿಸಿದರು.

ಪಶುವೈದ್ಯಾಧಿಕಾರಿ ಡಾ| ರವಿಕುಮಾರ್‌, ಅರಣ್ಯ ಇಲಾಖೆಯ ಪರವಾಗಿ ಅರಣ್ಯ ರಕ್ಷಕ ರಮೇಶ ನಾಯ್ಕ, ಅಗ್ನಿಶಾಮಕದಳದ ಪ್ರವೀಣ್‌, ತೋಟಗಾರಿಕೆ ಇಲಾಖೆಯ ಪ್ರದೀಪ್‌ ಕುಮಾರ್‌ ತಂತಮ್ಮ ಇಲಾಖೆಯ ಕುರಿತು ಜನರಿಗೆ ಉಪಯುಕ್ತವಾದ ಮಾಹಿತಿ ನೀಡಿದರು.

ಉಪತಹಶೀಲ್ದಾರ್‌ ವಿಶ್ವನಾಥ್‌, ಪಂಚಾಯತ್‌ ಅಧ್ಯಕ್ಷೆ ತುಳಸೀ ಮೂಲ್ಯ, ಉಪಾಧ್ಯಕ್ಷ ಅಶೋಕ್‌ ಶೆಟ್ಟಿ, ಪಿಡಿಒ ರಮೇಶ್‌ ರಾಥೋಡ್‌, ತಾ.ಪಂ. ಸದಸ್ಯ ಪ್ರಶಾಂತ್‌ ಅಮೀನ್‌, ಸದಸ್ಯರ ಪೈಕಿ, ಮುನಿರಾಜ ಹೆಗ್ಡೆ, ನಳಿನಿ, ದೀಕ್ಷಿತ್‌ ಪಣಪಿಲ, ಶಶಿಕಲಾ, ಪ್ರಸಾದ್‌ ಬಿ. ಪೂಜಾರಿ, ದರೆಗುಡ್ಡೆಯ ಗ್ರಾಮಸ್ಥ ಸಮಿತ್‌ರಾಜ್‌, ಮೂಡುಬಿದಿರೆ ತಾಲೂಕು ಕಚೇರಿ ಸಿಬಂದಿ ಪಾಲ್ಗೊಂಡಿದ್ದರು.

ಅರ್ಜಿಗಳು ಮತ್ತು ಅಧಿಕಾರಿಗಳ ಸ್ಪಂದನೆ :

ಪೌತಿ ಖಾತೆ ಆಂದೋಲನಕ್ಕೆ ಸಂಬಂಧಿಸಿದಂತೆ 16 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮೂವರು ಅರ್ಜಿದಾರರು ತಮಗೆ ಹಣ ಬರುತ್ತಿಲ್ಲ ಎಂದು ಆಹವಾಲು ಸಲ್ಲಿಸಿದರು. ಉಳಿದಂತೆ ಪಿಂಚಣಿಗಾಗಿ 12 ಹೊಸ ಅರ್ಜಿಗಳನ್ನು ಸ್ವೀಕರಿಸಲಾಯಿತು. ಎಂಟು ಮಂದಿಗೆ ಪಿಂಚಣಿ ಮಂಜೂರಿ ಪತ್ರ ವಿತರಿಸಲಾಯಿತು. 10 ಮಂದಿ ಜಾತಿ ಮತ್ತು ಆದಾಯ ಪತ್ರಗಳಿಗೆ ಅರ್ಜಿ ಸಲ್ಲಿಸಿದರು. 94-ಸಿಯಲ್ಲಿ ಓರ್ವರು ಮರುತನಿಖೆಗೆ ಆರ್ಜಿ ಸಲ್ಲಿಸಿದರು. ವಾಸ್ತವ್ಯ ದೃಢಪತ್ರಕ್ಕಾಗಿ ಒಂದು, ಅತಿ ಸಣ್ಣ ರೈತರ ಹಿಡುವಳಿ ಕುರಿತಾದ 2 ಅರ್ಜಿಗಳು ಸಲ್ಲಿಕೆಯಾದವು. ಯಾವುದೇ ಪೂರಕ ದಾಖಲೆಗಳಿಲ್ಲದೆ ಆಧಾರ್‌ ಕಾರ್ಡ್‌ ಮಾಡಿಸಲಾಗದ ಸಮಸ್ಯೆಯ ಬಗ್ಗೆ ಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next