Advertisement

ಜ್ಞಾನ ದೇಗುಲಕ್ಕೆ ಸೌಲಭ್ಯ ಕೊರತೆ

03:44 PM Oct 21, 2019 | Team Udayavani |

„ಶೇಖರ್‌.ವಿ.ಗೌಡ
ತರೀಕೆರೆ:
ಗ್ರಂಥಾಲಯಗಳು ಓದುಗರ ಜ್ಞಾನದ ಹಸಿವು ತಣಿಸುವ ತಾಣ. ಅಲ್ಲಿ ಅಧ್ಯಯನಕ್ಕಾಗಿ ಬರುವ ಓದುಗರಿಗೆ ಪೂರಕ ವಾತಾವರಣವಿರಬೇಕು. ಆದರೆ ತರೀಕೆರೆ ಸಾರ್ವಜನಿಕ ಗ್ರಂಥಾಲಯ ಇದಕ್ಕೆ ಹೊರತಾಗಿದ್ದು, ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ.

Advertisement

ಪಟ್ಟಣದ ಹೃದಯ ಭಾಗದಲ್ಲಿ ಗ್ರಂಥಾಲಯವಿದೆ. ಬಯಲು ರಂಗಮಂದಿರ, ಅಂಬೇಡ್ಕರ್‌ ಭವನ, ಬಂಧೀಖಾನೆ ಪಕ್ಕದಲ್ಲಿದೆ. ಬಯಲು ರಂಗ ಮಂದಿರದಲ್ಲಿ ಆಗ್ಗಾಗ್ಗೆ ನಡೆಯುವ ಕಾರ್ಯಕ್ರಮಗಳಿಂದ ಓದುಗರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ನಿಶ್ಯಬ್ಧದ ವಾತಾವರಣದಲ್ಲಿ ಓದಬೇಕಾದ ಓದುಗ ಸದಾ ಗದ್ದಲ ನಡುವೆ ಪುಸ್ತಕ, ಪತ್ರಿಕೆ ದಬೇಕಾದ ಅನಿವಾರ್ಯತೆ ಉಂಟಾಗಿದೆ. ಸುತ್ತಲು ಮದ್ಯದ ಬಾಟಲುಗಳು, ಮೂತ್ರದ ದುರ್ವಾಸನೆ, ಸೋರುತ್ತಿರುವ ಕಟ್ಟಡ, ಗಾಳಿ ಬೆಳಕಿನ ಕಿರಿಕಿರಿಯ ನಡುವೆ ಓದುಗ ಜ್ಞಾನಾರ್ಜನೆ ಮಾಡಬೇಕಿದೆ. ಮೈಸೂರು ಅರಸರಾದ ಶ್ರೀಜಯಚಾಮ ರಾಜೇಂದ್ರ ಒಡೆಯರ್‌ ಅವರ ಕಾಲಘಟ್ಟದಲ್ಲಿ ಆರಂಭವಾದ ಗ್ರಂಥಾಲಯವಿದು. ಶ್ರೀಜಯಚಾಮ ರಾಜೇಂದ್ರ ಒಡೆಯರ್‌ ಅವರ 25ನೇ ವರ್ಷದ ಆಡಳಿತದ ನೆನಪಿಗಾಗಿ ತಮ್ಮ ತಂದೆ ಶ್ರೀಕೃಷ್ಣ ರಾಜೇಂದ್ರ ಒಡೆಯರ್‌ ನೆನಪಿಗಾಗಿ ಪಟ್ಟಣದಲ್ಲಿಶ್ರೀಕೃಷ್ಣರಾಜೇಂದ್ರ ಟೌನ್‌ ಹಾಲ್‌ “ಇಂದಿನ ಪುರಸಭಾ  ಕಾರ್ಯಾಲಯ’ ಶ್ರೀಕೃಷ್ಣರಾಜೇಂದ್ರ ಗ್ರಂಥಾಲಯ ಮತ್ತು ಶ್ರೀಕೃಷ್ಣರಾಜೇಂದ್ರ ಗಿರಿಧಾಮ “ಕೆಮ್ಮಣ್ಣುಗುಂಡಿ’ ನಿರ್ಮಾಣ ಮಾಡಲಾಗಿತ್ತು.

1950ರಲ್ಲಿ ರೈಲ್ವೆ ಸ್ಟೇಷನ್‌ ಮುಂಭಾಗದಲ್ಲಿದ್ದ ಕಟ್ಟಡದಲ್ಲಿ ಗ್ರಂಥಾಲಯ ಆರಂಭವಾಯಿತು. ತದನಂತರದಲ್ಲಿ ಹುಬ್ಬಳ್ಳಿಮಠ, ನಂತರ ಪಂಪ್‌ಹೌಸ್‌ಗೆ ಸ್ಥಳಾಂತರಗೊಂಡಿತ್ತು. ಮನೋರಂಜನೆ ಕಡಿಮೆ ಇದ್ದ ಕಾಲದಲ್ಲಿ ಪುಸ್ತಕ ಪ್ರಿಯರು ದಿನನಿತ್ಯ ಓದುವುದಕ್ಕೆ ಬರುತ್ತಿದ್ದರು. ನಂತರ ಅಂದಿನ ಶಾಸಕ ದಿ| ಬಿ.ಆರ್‌.ನೀಲಕಂಠಪ್ಪ 1986ರಲ್ಲಿ ಬಯಲು ರಂಗ ಮಂದಿರ ಒಂದು ಭಾಗದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿಸಿ ಗ್ರಂಥಾಲಯ ಉದ್ಘಾಟನೆ ಮಾಡಿದ್ದರು. ಸಾರ್ವಜನಿಕ ಗ್ರಂಥಾಲಯದ ಕಟ್ಟಡ ನಿರ್ಮಾಣವಾಗಿ 33 ವರ್ಷಗಳು ಕಳೆದಿವೆ. ಸ್ವಂತ ಕಟ್ಟಡವಿದ್ದರೂ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿ ಕಂಡು ಬರುತ್ತದೆ. ಮಳೆಗಾಲದಲ್ಲಿ ಕಟ್ಟಡದ ಒಳಗೆ ಸೋರುತ್ತದೆ. ಮಳೆಯಿಂದ ಪುಸ್ತಕಗಳು ಹಾಳಾಗುವ ಸ್ಥಿತಿ ಇದೆ. ದಿನನಿತ್ಯ ಬರುವ ಓದುಗರಿಗೆ ಶೌಚಾಲಯವಿಲ್ಲ. ಬೇಸಿಗೆ ಬಿಸಿಲಿನಲ್ಲಿ ಒಳಗೆ ಕುಳಿತು ಓದುವುದು ಕಷ್ಟಕರ. ಫ್ಯಾನ್‌ ಗಾಳಿ ಸೌಕರ್ಯವಿಲ್ಲ.

ಸಂಜೆಯಾಗುತ್ತಿದ್ದಂತೆ ಕುಡುಕರ ಹಾವಳಿ ಬೇರೆ. ಗ್ರಂಥಾಲಯ ಸುತ್ತಮುತ್ತ ಮದ್ಯದ ಬಾಟಲಿಗಳ ರಾಶಿ ಕಂಡು ಬರುತ್ತದೆ. ಗ್ರಂಥಾಲಯ ಅಕ್ಕಪಕ್ಕದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದರಿಂದ ಒಳಗೆ ಕುಳಿತು ಓದುವುದು ಕಷ್ಟಕರವಾಗಿದೆ. ಗ್ರಂಥಾಲಯದ ಒಳಭಾಗವೂ ಕೂಡ ಅಷ್ಟೇನೂ ವಿಶಾಲವಾಗಿಲ್ಲ, 8 ಜನ ಓದುಗರು ಕುಳಿತು ಓದಲು ಸಾಧ್ಯವಾಗುವಷ್ಟು ಸ್ಥಳವಿದೆ. ಓದುಗರರು ನಿಂತು ಓದಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಕುಳಿತು ಓದಲು ಕುರ್ಚಿಗಳ ಅಗತ್ಯವಿದೆ. ಪುಸ್ತಕಗಳನ್ನು ಓದಿಕೊಂಡು ಕೆಲವು ವಿಚಾರಗಳನ್ನು ನೋಟ್‌  ಮಾಡಿಕೊಳ್ಳುವುದಕ್ಕೆ ಸ್ಥಳಾವಕಾಶವಿಲ್ಲ. ಗ್ರಂಥಾಲಯದಲ್ಲಿ 37000 ಪುಸ್ತಕಗಳಿವೆ. 12 ದಿನಪ್ರತಿಕೆಗಳು, 8 ವಾರಪತ್ರಿಕೆ ಓದುಗರಿಗೆ ಲಭ್ಯವಿದೆ. ಪುಸ್ತಕಗಳ ಕೊರತೆ ಇಲ್ಲ, 2000 ಸದಸ್ಯರನ್ನು ಗ್ರಂಥಾಲಯ ಹೊಂದಿದೆ. ದಿನನಿತ್ಯ 200ಕ್ಕೂ ಹೆಚ್ಚು ಪುಸ್ತಕ ಪ್ರಿಯರು ಓದಲು ಬರುತ್ತಾರೆ. ನೂರಾರು ಸದಸ್ಯರು ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next