Advertisement

ರೈತರಿಗೆ ಸೂಕ್ತ ಪರಿಹಾರ ನೀಡಿ: ಶೋಭಾ

01:16 PM Sep 07, 2019 | Team Udayavani |

ತರೀಕೆರೆ: ತಾಲೂಕಿನಲ್ಲಿ ಹಾದು ಹೋಗಲಿರುವ ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್‌ ರಸ್ತೆಗೆ ಭೂಮಿ ಕಳೆದುಕೊಳ್ಳಲಿರುವ ರೈತರು ತಮ್ಮ ಭೂಮಿಗೆ ಸೂಕ್ತ ಪರಿಹಾರ ಸಿಗಬೇಕೆಂದು ಒತ್ತಾಯಿಸುತ್ತಿದ್ದಾರೆ. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಪರಿಹಾರ ನೀಡಬೇಕು. ವಿಶ್ವಾಸದಿಂದ ಅವರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ವಿಶೇಷ ಭೂ ಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಮತ್ತು ಸಂತ್ರಸ್ತ ರೈತರ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ರೈತರ ಹಿತ ಕಾಪಾಡುವುದೇ ನಮ್ಮ ಗುರಿ ಎಂದರು.

ನಗರ ವ್ಯಾಪ್ತಿಯಲ್ಲಿ ಒಂದು ರೀತಿಯ ಪರಿಹಾರ ನೀಡಲಾಗುತ್ತಿದೆ. 5 ಗುಂಟೆ ಜಮೀನು ಕಳೆದುಕೊಂಡವರಿಗೆ ಪರಿಹಾರ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಕಳೆದ 3 ವರ್ಷಗಳಿಂದ ರೈತರು ಭೂಮಿಯಲ್ಲಿ ಬೆಳೆ ಬೆಳೆಯುತ್ತಿಲ್ಲ. ಜಮೀನುಗಳು ಮಾರಾಟವಾಗುತ್ತಿಲ್ಲ. ಬ್ಯಾಂಕ್‌ಗಳು ಎನ್‌ಒಸಿ ನೀಡುತ್ತಿಲ್ಲ. ಇದರಿಂದಾಗಿ ರೈತರಿಗೆ ತೊಂದರೆಯಾಗುತ್ತಿದೆ. ಕೆಲವೆಡೆ ಖಾಸಗಿ ವ್ಯಕ್ತಿಗಳ ಹಿತಾಸಕ್ತಿ ಕಾಪಾಡಲು ಅಧಿಕಾರಿಗಳು ಹೆದ್ದಾರಿ ಅಲೈನ್‌ಮೆಂಟ್ ಬದಲಾವಣೆ ಮಾಡಲಾಗಿದೆ ಎಂದು ದೂರಿದ್ದಾರೆ ಮತ್ತು ಈಗಿನ ಮಾರುಕಟ್ಟೆ ದರ ಮತ್ತು 1:6 ಅನುಪಾತದಲ್ಲಿ ಪರಿಹಾರ ನೀಡುವಂತೆ ಕೇಳುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ಅಧಿಕಾರಿಗಳು ಕಾರ್ಯ ನಿರ್ವಹಿಸುವಾಗ ತಪ್ಪುಗಳಾಗಿದ್ದಲ್ಲಿ ಒಪ್ಪಿಕೊಳ್ಳಬೇಕು. ತಪ್ಪುಗಳು ಮಾನವ ಸಹಜ. ಹಿಂದಿನ ಅಧಿಕಾರಿಗಳು ತಪ್ಪು ಎಸಗಿದ್ದರೆ ಅವುಗಳನ್ನು ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ರೈತರಿಗೆ ನೀಡುವ ಪರಿಹಾರದಲ್ಲಿ ಮೋಸವಾಗಬಾರದು. ಖಾಸಗಿ ವ್ಯಕ್ತಿಗಳ ಹಿತಾಸಕ್ತಿ ಕಾಪಾಡುವ ಸಲುವಾಗಿ ರೈತರಿಗೆ ತೊಂದರೆಯಾದರೆ ಸಹಿಸುವುದಿಲ್ಲ. ಅಲೈನ್‌ಮೆಂಟ್ ನಿರ್ಧರಿಸುವ ಮೊದಲೇ ಏಕೆ ರೈತರಿಗೆ ನೋಟಿಸ್‌ ನೀಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ರೈತರಿಗೆ ಪರಿಹಾರದ ಹಣ ನೀಡುವುದು ಸರಕಾರ. ಸರ್ಕಾರದ ಮಾನದಂಡಗಳು ಮತ್ತು ಕಾನೂನಿನ ಇತಿಮಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಮ್ಮ ಜೇಬಿನಿಂದ ರೈತರಿಗೆ ಪರಿಹಾರ ನೀಡುತ್ತಿಲ್ಲ. ರೈತರ ಮನವಿ, ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು, ಜಿಲ್ಲಾಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

Advertisement

ಭೂಸ್ವಾಧೀನ ಪ್ರಕ್ರಿಯೆ ಸಮಯದಲ್ಲಿ ಹಲವಾರು ಗೊಂದಲಗಳು ಉಂಟಾಗುತ್ತಿವೆ. ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಿಂದ ಸ್ಪಷ್ಟ ನಿರ್ಧಾರಗಳನ್ನು ಮಾಡಲಾಗುತ್ತಿಲ್ಲ. ಇಡೀ ರಾಜ್ಯಕ್ಕೆ ಏಕರೂಪ ಭೂಸ್ವಾಧೀನ ಪರಿಹಾರದ ಅಗತ್ಯವಿದೆ. ಅದು ಕಾನೂನಾಗಿ ಮಾರ್ಪಾಡಾಗಬೇಕು. ಒಂದು ಭೂ ಪ್ರದೇಶಕ್ಕೆ 80 ಸಾವಿರ ರೂ. ಪರಿಹಾರ ಇನ್ನೊಂದು ಭೂಮಿಗೆ 18ಸಾವಿರ ರೂ. ಪರಿಹಾರ ನೀಡುವುದು ಅವೈಜ್ಞಾನಿಕ ಎಂದರು.

ಮ್ಯಾಮ್‌ಕೋಸ್‌ ನಿರ್ದೇಶಕ ಆರ್‌.ದೇವಾನಂದ್‌ ಮಾತನಾಡಿ, ಹೆದ್ದಾರಿ ಅಭಿವೃದ್ಧಿ ಕಾರಣದಿಂದ ರೈತರು ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಸರಕಾರ ರೈತರ ಭೂಮಿಗೆ ನೀಡುವ ಪರಿಹಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿದೆ. ರೈತರಿಗೆ 1:6 ಮಾರುಕಟ್ಟೆ ದರದ ಪರಿಹಾರವನ್ನು ನೀಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿಗಳು ನೀಡುತ್ತಿರುವ ಪರಿಹಾರ ಅವೈಜ್ಞಾನಿಕವಾಗಿದೆ. ರೈತರಿಗೆ ಸಮರ್ಪಕವಾದ ಪರಿಹಾರ ಸಿಗಬೇಕು. ಇಲ್ಲವಾದಲ್ಲಿ ರೈತರು ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಕಳೆದ 3 ವರ್ಷಗಳಿಂದ ರೈತರಿಗಾಗಿರುವ ನಷ್ಟವನ್ನು ತುಂಬಿಕೊಡಬೇಕೆಂದು ಆಗ್ರಹಿಸಿದರು.

ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ಸ್ವಾಮಿ ಮಾತನಾಡಿ, ಹೆದ್ದಾರಿ ಕಾಯಿದೆಯಲ್ಲಿ ಸ್ಪಷ್ಟ ಆದೇಶವಿದ್ದರು ಸಹ ಅಧಿಕಾರಿಗಳು ರೈತರಿಗೆ ಸೂಕ್ತ ಪರಿಹಾರ ನೀಡವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ರೈತ ಗುರುಮೂರ್ತಿ ಮಾತನಾಡಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾಪಂ ಅಧ್ಯಕ್ಷೆ ಪದ್ಮಾವತಿ, ಜಿಪಂ ಸದಸ್ಯರಾದ ಕೆ.ಆರ್‌.ಆನಂದಪ್ಪ, ಚೈತ್ರಶ್ರೀ, ಉಪವಿಭಾಗಾಧಿಕಾರಿ ಬಿ.ಆರ್‌.ರೂಪಾ, ವಿವಿಧ ಇಲಾಖೆ ಅಧಿಕಾರಿಗಳು, ರೈತ ಮುಖಂಡರಾದ ಟಿ.ಎನ್‌.ಗೋಪಿನಾಥ್‌, ಗುರುಮೂರ್ತಿ, ಆನಂದ್‌, ಟಿ.ಎಸ್‌.ರಮೇಶ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next