Advertisement

ಕೆರೆಗಳಿಗೆ ಭದ್ರೆ ನೀರು ಹರಿಸಲು ಪ್ರಸ್ತಾವನೆ

11:57 AM Aug 29, 2019 | Naveen |

ತರೀಕೆರೆ: ತರೀಕೆರೆ, ಕಡೂರು ಮತ್ತು ಚಿಕ್ಕಮಗಳೂರಿನ ಕೆಲವು ಭಾಗಗಳ ಕೆರೆಗಳಿಗೆ ಭದ್ರಾ ನದಿ ನೀರು ಹರಿಸಲು ಡಿಪಿಆರ್‌ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಡಿ.ಎಸ್‌.ಸುರೇಶ್‌ ತಿಳಿಸಿದರು.

Advertisement

ಲಿಂಗದಹಳ್ಳಿಯ ಸಹ್ಯಾದ್ರಿಪುರ ಮತ್ತು ಗ್ರಾಮದ ವಿವಿಧೆಡೆ 70 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾಲೂಕಿನ ಲಿಂಗದಹಳ್ಳಿ ಮತ್ತು ಕಸಬಾ, ಕಡೂರಿನ ಕೆರೆಗಳಿಗೆ ಮತ್ತು ಬರಗಾಲದ ಸುಳಿಗೆ ಸಿಲುಕುತ್ತಿರುವ ಚಿಕ್ಕಮಗಳೂರಿನ ಕೆಲವು ಕೆರೆಗಳಿಗೆ ಅಂದಾಜು 900 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು.

ಮಲೆನಾಡಿನ ಸೆರಗಿನಲ್ಲಿದ್ದರು ಸಹ ಕಸಬಾ ಮತ್ತು ಲಿಂಗದಹಳ್ಳಿ ಹೋಬಳಿ ಕೆರೆಗಳಿಗೆ ನೀರು ಹರಿದು ಬರುತ್ತಿಲ್ಲ. ಈ ಭಾಗದಲ್ಲಿ ತೋಟಗಾರಿಕಾ ಬೆಳೆಗಳು ಅಧಿಕವಾಗಿದ್ದು, ಅವುಗಳನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ. ಕಾಲಕಾಲಕ್ಕೆ ಉತ್ತಮ ಮಳೆಯಾಗದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದರು.

ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭದ್ರಾವತಿ ಬಳಿಯ ಗೊಂದಿ ಅಣೆಕಟ್ಟೆಯಿಂದ ಪೈಪ್‌ಲೈನ್‌ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು. ಭದ್ರಾ ನದಿ ನೀರು ಹರಿದು ಬಂದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿ, ನೀರಾವರಿ ಸೌಲಭ್ಯಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು.

Advertisement

ವಿರೋಧ ಪಕ್ಷದ ಶಾಸಕನಾಗಿದ್ದರೂ ಕೂಡ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇನೆ. ದೋರನಾಳು ಗ್ರಾಮದಿಂದ ಲಿಂಗದಹಳ್ಳಿ ತನಕ 9 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್‌ ನಡೆಸಲಾಗಿದೆ. ಮಳೆಗಾಲ ಮುಗಿದ ನಂತರ ಕಾಮಗಾರಿಯನ್ನು ಆರಂಭಿಸಲಾಗುವುದು. ಲಿಂಗದಹಳ್ಳಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈಗಿರುವ ಪೈಪ್‌ಲೈನ್‌ ಜೊತೆಯಲ್ಲಿಯೇ ಹೆಚ್ಚುವರಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದರು.

ಗ್ರಾಮೀಣ ಭಾಗಗಳಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಸರಕಾರ ನೀಡುವ ಹಣ ಸದುಪಯೋಗವಾಗಬೇಕು ಎಂಬುದು ನಮ್ಮ ಆಶಯ. ಇದಕ್ಕೆ ಪೂರಕವಾಗಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರವೂ ಮುಖ್ಯ. ಕಾಮಗಾರಿ ಗುಣಮಟ್ಟದಲ್ಲಿ ನಡೆಯುತ್ತಿದೆಯೇ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು ಎಂದು ಸಲಹೆ ನೀಡಿದರು.

ತಾಪಂ ಅಧ್ಯಕ್ಷೆ ಪದ್ಮಾವತಿ ಮಾತನಾಡಿ, ತಾಲೂಕಿನ ಎಲ್ಲಾ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ಗ್ರಾಮಸ್ಥರು ತರಬೇಕು. ಇದರಿಂದ, ಗ್ರಾಮಗಳ ಸಮಸ್ಯೆಗಳನ್ನು ಆದ್ಯತೆ ಮೇಲೆ ಬಗೆಹರಿಸಲು ಅವರಿಗೆ ಅನುಕೂಲವಾಗಲಿದೆ. ಅಲ್ಲದೇ, ಕೇವಲ 5 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಯಾಗಲಿ, ಸಮಸ್ಯೆ ಬಗೆಹರಿಸಲು ಅವರಿಂದ ಸಾಧ್ಯವಾಗುವುದಿಲ್ಲ. ಎರಡು ಬಾರಿ ಅಧಿಕಾರದ ಅವಕಾಶ ನೀಡಿದಲ್ಲಿ ತಾಲೂಕಿನ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷ ಎಲ್.ಎನ್‌.ಲಿಂಗರಾಜು, ಸದಸ್ಯರಾದ ಸತೀಶ್‌, ಅನಿಲ್ಕುಮಾರ್‌, ಹೇಮಾವತಿ, ಎಲ್.ಪಿ.ಲೋಕೇಶ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next