Advertisement

ಬೀಚ್ ಸೆಪಕ್‌ ಟಕ್ರಾ ಕ್ರೀಡೆಯಲ್ಲಿ ಸಿಂಧುಗೆ ಕಂಚಿನ ಪದಕ

11:47 AM Jul 18, 2019 | Naveen |

ತರೀಕೆರೆ: ಇತ್ತೀಚೆಗೆ ಚೀನಾ ದೇಶದ ಕಿಂಗ್‌ಡೊನಲ್ಲಿ ನಡೆದ ಏಷಿಯನ್‌ ಬೀಚ್ ಸೆಪಕ್‌ ಟಕ್ರಾ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ್ತಿ ಸಿಂಧು ಆನಂದ್‌. ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ಪಡೆಯುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ಪದವೀಧರೆಯಾದ ಸಿಂಧು ಆನಂದ್‌, ಇದೇ ಕಾಲೇಜಿನಲ್ಲಿ ಸೆಪಕ್‌ ಟಕ್ರಾ ಕ್ರೀಡೆ ಕಲಿತಿದ್ದಾರೆ.

ರಾಷ್ಟ್ರೀಯ ಕ್ರೀಡಾಪಟುವಾಗುವ ಮುನ್ನ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಸಿಂಧು ಆನಂದ್‌, 2016ರಲ್ಲಿ ಆಂಧ್ರಪದೇಶದ ಕಡಪ ಮತ್ತು ಅದೇ ವರ್ಷ ಹೈದರಬಾದ್‌ ಮತ್ತು ಕೇರಳ ರಾಜ್ಯಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರು. 2018ರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದ ಅಂತರ ರಾಜ್ಯ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ರಾಜ್ಯ ತಂಡದ ತರಬೇತುದಾರ ಕೇಶವ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಸಿಂಧು, ಉತ್ತಮ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಏಷ್ಯ ಖಂಡದ ಟೂರ್ನಿಯಲ್ಲಿ ಭಾಗವಹಿಸಿದ ರಾಜ್ಯ ಮತ್ತು ರಾಷ್ಟ್ರದ ಮೊದಲ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕಕ್ಕೆ ಸೆಪಕ್‌ ಟಕ್ರಾ ಕ್ರೀಡೆ ಪರಿಚಯವಾದದ್ದು 1994ರಲ್ಲಿ. ಆದರೂ, ಕ್ರೀಡೆ ಕ್ರೀಡಾಸಕ್ತರ ಗಮನ ಸೆಳದಿಲ್ಲ. ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಈ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿಲ್ಲ ಎನ್ನುತ್ತಾರೆ ಸಿಂಧು ಆನಂದ್‌.

Advertisement

ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿರುವ ಅವರು ಸೆಪಕ್‌ಟಕ್ರಾ ಕ್ರೀಡೆಯನ್ನು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಆರಂಭಿಸಬೇಕು ಎನ್ನುತ್ತಾರೆ. ಕ್ರೀಡಾ ಇಲಾಖೆ, ಯುವಜನ ಮತ್ತು ಕ್ರೀಡಾ ಸಚಿವರು ಈ ಕ್ರೀಡೆಯತ್ತ ಗಮನ ಹರಿಸಬೇಕೆಂದು ಒತ್ತಾಯಿಸುವ ಸಿಂಧು, ಸರ್ಕಾರ ಅವಕಾಶ ಕಲ್ಪಿಸಿದಲ್ಲಿ ಸೆಪಕ್‌ ಟಕ್ರಾ ಕ್ರೀಡೆಯ ತರಬೇತುದಾರಳಾಗಿ ಕಾರ್ಯ ನಿರ್ವಹಿಸಲು ಸಿದ್ಧಳಿದ್ದೇನೆ ಎದು ಹೇಳಿದ್ದಾರೆ.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆಪಕ್‌ಟಕ್ರಾ ಕ್ರೀಡೆ ಆರಂಭವಾಗಿದ್ದು, 2015-16ರಲ್ಲಿ. ಕಾಲೇಜಿನ ತಂಡಕ್ಕೆ ಆಯ್ಕೆಗೊಂಡ ಸಿಂಧು ಮತ್ತೆ ಹಿಂದಿರುಗಿ ನೋಡಲಿಲ್ಲ. ಭಾಗವಹಿಸಿದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡುತ್ತ ಬಂದರು. ಕುವೆಂಪು ವಿವಿ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಭಾಗವಹಿಸಿದ ಸಿಂಧು, ಕಾಲೇಜಿಗೆ ಎರಡು ಬಂಗಾರದ ಪದಕ ತಂದುಕೊಟ್ಟಿದ್ದಾರೆ. ಚಳ್ಳಕೆರೆಯಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲೂ ಬಂಗಾರದ ಪದಕ ಸಂಪಾದಿಸಿದ್ದಾರೆ. ರಾಜ್ಯಮಟ್ಟದಿಂದ ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ತೋರುತ್ತಿರುವ ಸಿಂಧು ರಾಜ್ಯವನ್ನು ಪ್ರತಿನಿಸುತ್ತಿರುವ ಏಕೈಕ ಕ್ರೀಡಾಪಟುವಾಗಿದ್ದಾರೆ.

ಸಿಂಧು ಒಳ್ಳೆಯ ಆಟಗಾರ್ತಿ. ಕಾಲೇಜಿನಲ್ಲಿ ಮೊದಲ ಬಾರಿಗೆ ಸೆಪಕ್‌ಟಕ್ರಾ ಕ್ರೀಡೆ ಪರಿಚಯಿಸಿದಾಗ, ಈ ಆಟದ ಬಗ್ಗೆ ಆಸಕ್ತಿ ತಳೆದ ಆಕೆ ಆಟದ ಕಡೆಗೆ ಹೆಚ್ಚಿನ ಗಮನ ಹರಿಸಿ ಉತ್ತಮ ಕ್ರೀಡಾಪಟುವಾದರು. ಉತ್ತಮವಾಗಿ ಆಡುತ್ತಿರುವ ಆಕೆ ಕ್ರೀಡೆಯಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡುವ ಮೂಲಕ ಉತ್ತಮ ಸಾಧಕಿಯಾಗಲಿ. ಕೋಚ್ ಆಗಿ ಹೊರಬಂದಲ್ಲಿ ಇನ್ನಷ್ಟು ಕ್ರೀಡಾಸಕ್ತರಿಗೆ ಮಾರ್ಗದರ್ಶನ ಮಾಡಬೇಕು ಎನ್ನುತ್ತಾರೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ತರಬೇತುದಾರ ಜಯಕೀರ್ತಿ.

Advertisement

Udayavani is now on Telegram. Click here to join our channel and stay updated with the latest news.

Next