ತರೀಕೆರೆ: ಚಿಕ್ಕಮಗಳೂರಿನಲ್ಲಿ ಆರಂಭವಾಗಲಿರುವ ವೈದ್ಯಕೀಯ ಕಾಲೇಜಿಗೆ ಹಲವಾರು ಅಡೆ-ತಡೆಗಳು ಇದ್ದವು. ಅರಣ್ಯ ಇಲಾಖೆ ಅನುಮತಿ ನೀಡಿರಲಿಲ್ಲ. ಆದರೆ ಈಗ ಅರಣ್ಯ ಇಲಾಖೆ ಕೆಲವು ಷರತ್ತುಗಳೊಂದಿಗೆ ವೈದ್ಯಕೀಯ ಕಾಲೇಜಿನ ಆರಂಭಕ್ಕೆ ಅನುಮತಿ ನೀಡಿದೆ. ಕೋವಿಡ್ ಸಂಕಷ್ಟದ ಸಮಯದಲ್ಲೂ ಕ್ಯಾಬಿನೆಟ್ ಕಾಲೇಜು ಆರಂಭಿಸಲು ಅನುಮತಿ ನೀಡಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಶಾಸಕ ಡಿ.ಎಸ್. ಸುರೇಶ್ ನಡೆಸುತ್ತಿರುವ ನಿತ್ಯ ಅನ್ನ ದಾಸೋಹದಲ್ಲಿ ಅನ್ನ ವಿತರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೋವಿಡ್ ಸೋಂಕಿನಿಂದಾಗಿ ಜನಸಾಮಾನ್ಯರ ಸ್ಥಿತಿ ಅತಂತ್ರವಾಗಿದೆ, ಸಣ್ಣ, ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರು ಸಂಕಷ್ಟದಲ್ಲಿದ್ದಾರೆ. ಇದನ್ನು ಅರಿತಿರುವ ಕೇಂದ್ರ ಸರಕಾರ 1ಲಕ್ಷ 70 ಕೋಟಿ ರೂ. ನೆರವನ್ನು ನೀಡಿದೆ. ಸ್ವಾತ್ರಂತ್ರ್ಯಾ ನಂತರದಲ್ಲಿ ದೇಶದಲ್ಲಿ ಘೋಷಿಸಿರುವ ಅತಿ ಹೆಚ್ಚಿನ ನೆರವು ಇದಾಗಿದೆ. ಅತಿವೃಷ್ಟಿ, ಅನಾವೃಷ್ಟಿ, ಯುದ್ಧ ಮತ್ತು ಆರ್ಥಿಕ ಸಂಕಷ್ಟಗಳು ಎದುರಾದಾಗಲೂ ಇಂತಹ ನೆರವು ಯಾವುದೇ ಸರಕಾರ ನೀಡಿರಲಿಲ್ಲ ಎಂದರು.
ಕೋವಿಡ್ ಸೋಂಕು ವಿರುದ್ದದ ಹೋರಾಟ ಒಂದು ಯುದ್ಧವಿದ್ದಂತೆ. ಈ ಯುದ್ಧದಲ್ಲಿ ನಾವಿನ್ನೂ ಗೆಲುವು ಸಾಧಿಸಿಲ್ಲ ಮತ್ತು ಶತ್ರುವಿನ ನಾಮಾವಶೇಷವಾಗಿಲ್ಲ. ಕೋವಿಡ್ ಒಂದು ಕಾಣದ ಶತ್ರುವಿದ್ದ ಹಾಗೆ. ಅದು ನಾಶವಾಗಿಲ್ಲ ಮತ್ತು ಔಷದ ಇನ್ನೂ ಸಿದ್ಧವಾಗಿಲ್ಲ. ಜನರು ವೈಯಕ್ತಿಕ, ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಲಾಕ್‌ಡೌನ್ ಸಂಪೂರ್ಣ ತೆಗೆದು ಹಾಕಿಲ್ಲ ಎಂದರು.
ಸರಕಾರ ನೀಡಿದ ಮಾರ್ಗಸೂಚಿಯನ್ನು ಅನುಸರಿಸಿದ್ದರೆ ದೇಶ ಕೋವಿಡ್ ಮುಕ್ತವಾಗುತ್ತಿತ್ತು. ಆದರೆ ಕೆಲ ಜನರ ದುರುದ್ದೇಶ ಮತ್ತು ಅರಿವಿಲ್ಲದ ಕಾರಣ ದಿನನಿತ್ಯ ಪ್ರಕರಣಗಳು ದಾಖಲಾಗುತ್ತಿವೆ. ಜನರ ಹಿತದೃಷ್ಟಿಯಿಂದ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಜಿಲ್ಲೆ ಹಸಿರು ವಲಯದಲ್ಲಿದೆ. ಸಡಿಲಿಕೆ ಕಾರಣದಲ್ಲಿ ಸೋಂಕು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಡಿ.ಎಸ್.ಸುರೇಶ್, ಕಡೂರು ಶಾಸಕ ಬೆಳ್ಳಿಪ್ರಕಾಶ್, ಜಿಪಂ ಸದಸ್ಯ ಕೆ.ಆರ್. ಆನಂದಪ್ಪ, ರಾಜೇಶ್ವರಿ, ಬಿಜೆಪಿ ಅದ್ಯಕ್ಷ ಅಜಯಕುಮಾರ್, ಡಿ.ಎಸ್. ಗಿರೀಶ್, ಡಿವೈಎಸ್‌ಪಿ ರೇಣುಕಾಪ್ರಸಾದ್, ತಹಶೀಲ್ದಾರ್ ಸಿ.ಜಿ. ಗೀತಾ, ಇಒ ವಿಶಾಲಾಕ್ಷಮ್ಮ, ಸಿಒ ಗಿರೀಶ್ ಇನ್ನಿತರರು ಇದ್ದರು.